‘ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಅನರ್ಹ ಶಾಸಕ’
ಮುಂಡಗೋಡು ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಅಡಿದ ಮಾತು ಅವರ ನಾಯಕತ್ವಕ್ಕೆ ಗೌರವ ತರುವಂತಿಲ್ಲ| ಸರಕಾರದ ಪ್ರತಿನಿಧಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಹಣ ತಂದಿದ್ದೆ ಹೊರತು ಮಂತ್ರಿ ಸ್ಥಾನಕ್ಕಾಗಿ ಲಾಭಿ ಮಾಡಿಲ್ಲ ಎಂದ ಅನರ್ಹ ಶಾಸಕ ಶಿವರಾಮ ಹೆಬ್ಬಾರ| ಜನಪ್ರತಿನಿಧಿಯೆಂಬ ಹಕ್ಕಿನಿಂದ ಹಿಂದಿನ ಸರಕಾರದಿಂದ ಹಣ ತಂದಿರುವ ಹೆಬ್ಬಾರ್‌ಗೆ ಬಹಳ ಉಪಕಾರ ಮಾಡಿರುವೆನೆಂದು ಸಿದ್ದರಾಮಯ್ಯ ಹೇಳುವುದು ಸರಿಯಲ್ಲ|
ಶಿರಸಿ[ನ.10]: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನನ್ನ ಕ್ಷೇತ್ರಕ್ಕೆ ಕಾಡಿ-ಬೇಡಿ ಹಣ ತಂದಿದ್ದೆ. ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಬಿಟ್ಟು ಬರುವಾಗ ಏನು ಮಾಡಿದ್ರು ? ಅವರು ಕೂಡಾ ಪಕ್ಷ ಬಿಟ್ಟು ಬಂದಿಲ್ವೆ ? ನಾನು ರಾಜೀನಾಮೆ ಕೊಟ್ಟು ಹೊರ ಬಂದಿದ್ದೇನೆ, ಹೊರತು ಮೋಸ ಮಾಡಿ ಬಂದಿಲ್ಲ ಎಂದು ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಅವರು ಮಾಜಿ ಸಿಎಂ ಸಿದ್ದಾರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂಡಗೋಡು ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯರು ಅಡಿದ ಮಾತು ಅವರ ನಾಯಕತ್ವಕ್ಕೆ ಗೌರವ ತರುವಂತಿಲ್ಲ. ಸರಕಾರದ ಪ್ರತಿನಿಧಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಹಣ ತಂದಿದ್ದೆ ಹೊರತು ಮಂತ್ರಿ ಸ್ಥಾನಕ್ಕಾಗಿ ಲಾಭಿ ಮಾಡಿಲ್ಲ. ಜನಪ್ರತಿನಿಧಿಯೆಂಬ ಹಕ್ಕಿನಿಂದ ಹಿಂದಿನ ಸರಕಾರದಿಂದ ಹಣ ತಂದಿರುವ ಹೆಬ್ಬಾರ್‌ಗೆ ಬಹಳ ಉಪಕಾರ ಮಾಡಿರುವೆನೆಂದು ಸಿದ್ದರಾಮಯ್ಯ ಹೇಳುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದೇ 13 ರಂದು ಸರ್ವೋಚ್ಛ ನ್ಯಾಯಾಲಯ ಅನರ್ಹ ಶಾಸಕರ ಕುರಿತು ತೀರ್ಪು ನೀಡಲಿದೆ. ತೀರ್ಪಿನ ನಂತರ ನಾವೆಲ್ಲರೂ ಸೇರಿ ರಾಜಕೀಯ ನಿರ್ಧಾರ ಕೈಗೊಳ್ಳಲಿದ್ದೇವೆ. ನ್ಯಾಯಾಲಯದಲ್ಲಿ ಪ್ರಕರಣ ಇರೋದ್ರಿಂದ ಯಾವುದೇ ತೀರ್ಮಾನ ಕೈಗೊಳ್ಳೊಲ್ಲ. ಈಗಾಗಲೇ ಮಧ್ಯಂತರ ಚುನಾವಣೆ ಮುಂದೂಡಲು ಅರ್ಜಿ ಸಲ್ಲಿಕೆ ಮಾಡಿದ್ದೇವೆ. ನಮಗೆ ನ್ಯಾಯದ ಪರ ತೀರ್ಪು ಬರುತ್ತದೆಯೆಂಬ ವಿಶ್ವಾಸ ಇದೆ. ನಾನು ಮತ್ತೊಮ್ಮೆ ಚುನಾವಣೆ ಎದುರಿಸುವೆ, ಗೆದ್ದು ಬರಲಿದ್ದೇನೆ ಎಂದಿದ್ದಾರೆ.
ಚುನಾವಣೆ ಮುಂದೂಡಲು ಅರ್ಜಿ ಸಲ್ಲಿಸಿದ್ದರಿಂದ ಚುನಾವಣಾ ದಿನಾಂಕ ಮುಂದೆ ಹೋಗಬಹುದು. ಸಿಎಂ ಬಿಎಸ್‌ವೈ ಪಕ್ಷದ ಸಭೆಯಲ್ಲಾಡಿದ ಆಡಿಯೋದಿಂದ ನ್ಯಾಯಾಲಯದ ತೀರ್ಪಿಗೆ ಹಿನ್ನಡೆ ಆಗಿಲ್ಲ. ಅನರ್ಹರಿಗೂ ಬಿಎಸ್‌ವೈ ಆಡಿಯೋದಿಂದ ತೊಂದರೆ ಆಗೋಲ್ಲ. ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆ ಜಾತಿ ಮತ್ತು ನೀತಿ ಆಧಾರದಲ್ಲಿ ನಡೆಯಲಿದೆ. ನಾನು ಮತ ಕೇಳುವುದು ಅಭಿವೃದ್ಧಿ ವಿಚಾರವಾಗಿ ಆದರೆ, ಅಭಿವೃದ್ಧಿ ಟೀಕೆ ಮಾಡುವವರು ಜಾತಿ ಆಧಾರದಲ್ಲಿ ಮತ ಕೇಳ್ತಾರೆ. ರಾಜೀನಾಮೆ ಬಳಿಕವೂ 300 ಕೋಟಿ ಗೂ ಅಧಿಕ ಯೋಜನೆಗಳನ್ನು ಬಿಜೆಪಿ ಸರ್ಕಾರದಿಂದ ಕ್ಷೇತ್ರಕ್ಕೆ ತಂದಿದ್ದೇನೆ ಎಂದು ತಿಳಿಸಿದ್ದಾರೆ.