ಭಟ್ಕಳದ ಆಸರಕೇರಿಯಲ್ಲಿರುವ ಐತಿಹಾಸಿಕ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟ್ರಮಣ ದೇವಸ್ಥಾನದ 18 ಕೂಟದ ಅಭಿವೃದ್ಧಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ಅಧ್ಯಕ್ಷರಾಗಿ ಹಾಗೂ ವಿನಾಯಕ್ ಎನ್. ನಾಯ್ಕ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಭಟ್ಕಳ (ಅ.29): ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಆಸರಕೇರಿಯಲ್ಲಿರುವ ಐತಿಹಾಸಿಕ ಹಾಗೂ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ 'ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟ್ರಮಣ ದೇವಸ್ಥಾನ'ದ 18 ಕೂಟದ ಅಭಿವೃದ್ಧಿ ಸಮಿತಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಬುಧವಾರ ದೇವಸ್ಥಾನದ ನಿಚ್ಚಲಮಕ್ಕಿ ಸಭಾಭವನದಲ್ಲಿ ಅತ್ಯಂತ ಸೌಹಾರ್ದಯುತವಾಗಿ ನಡೆಯಿತು. ಹೈಕೋರ್ಟ್‌ನ ಹಿರಿಯ ವಕೀಲ ನಾಗೇಂದ್ರ ನಾಯ್ಕ ಅವರು ಅಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಂತೆಯೇ, ಉಪಾಧ್ಯಕ್ಷರಾಗಿ ಯುವ ಉದ್ಯಮಿ, ಪಳ್ಳಿಹಿತ್ತಲ್ ಕುಟುಂಬದ ವಿನಾಯಕ್ ಎನ್. ನಾಯ್ಕ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವೆಂಕಟೇಶ ನಾಯ್ಕ ಆಸರಕೇರಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಮೂರು ವರ್ಷಕ್ಕೊಮ್ಮೆ ನಡೆಯುವ ಪ್ರಜಾಸತ್ತಾತ್ಮಕ ಆಯ್ಕೆ

ಭಟ್ಕಳದ ಬಹುಸಂಖ್ಯಾತ ನಾಮಧಾರಿ ಸಮಾಜದ 18 ಕೂಟಗಳಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆಯಾದ ಪ್ರತಿನಿಧಿಗಳು ಪ್ರತಿ ಮೂರು ವರ್ಷಕ್ಕೊಮ್ಮೆ ಸಮಾಜ ಹಾಗೂ ದೇವಸ್ಥಾನದ ಆಡಳಿತದ ನೇತೃತ್ವವನ್ನು ವಹಿಸಿಕೊಳ್ಳುತ್ತಾರೆ. ಪಟ್ಟಣದ ವಿ.ಟಿ. ರಸ್ತೆಯ ಆಸರಕೇರಿಯಲ್ಲಿರುವ ನಿಚ್ಚಲಮಕ್ಕಿ ವೆಂಕಟ್ರಮಣ ದೇವಸ್ಥಾನದ ಪ್ರಸಿದ್ದ ಪಲ್ಲಕ್ಕಿ ಉತ್ಸವ, ವಾರ್ಷಿಕ ಕಾರ್ತಿಕ ಉತ್ಸವ ಹಾಗೂ ವೈಕುಂಠ ಏಕಾದಶಿ ಸೇರಿದಂತೆ ಸಮಾಜದ ಸಕಲ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಈ ನೂತನ ಆಡಳಿತ ಸಮಿತಿಯ ನೇತೃತ್ವದಲ್ಲೇ ಜರುಗಲಿವೆ.

ಈ ಬಾರಿಯ ಆಯ್ಕೆ ಪ್ರಕ್ರಿಯೆಯ ವಿಶೇಷ ವೀಕ್ಷಕರಾಗಿ ನಿವೃತ್ತ ನ್ಯಾಯಾಧೀಶ ರವಿ ನಾಯ್ಕ ಹಾಗೂ ಪಿಯು ಕಾಲೇಜಿನ ನಿವೃತ್ತ ಪ್ರಾಚಾರ್ಯ ಗಜಾನನ ನಾಯ್ಕ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಾಜದ ಹಾಲಿ ಅಧ್ಯಕ್ಷ ಅರುಣ ನಾಯ್ಕ, ಕಾರ್ಯದರ್ಶಿ ಡಿ.ಎಲ್. ನಾಯ್ಕ, ಉಪಾಧ್ಯಕ್ಷ ಎಂ.ಕೆ. ನಾಯ್ಕ ಹಾಗೂ ಸಮಿತಿ ಸದಸ್ಯ ಆರ್‌.ಜಿ. ನಾಯ್ಕ ಉಪಸ್ಥಿತರಿದ್ದರು.

ನಾಮಧಾರಿ ಸಮಾಜದ ಗುರುಮಠ - 'ನಿಚ್ಚಲಮಕ್ಕಿ ಕ್ಷೇತ್ರ'ದ ಮಹಿಮೆ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಆಸರಕೇರಿಯಲ್ಲಿರುವ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನವು ಕೇವಲ ಪೂಜಾ ಸ್ಥಳವಲ್ಲದೇ, ಈ ಭಾಗದ ನಾಮಧಾರಿ ಸಮಾಜದ ಪ್ರಮುಖ 'ಗುರುಮಠ' ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಈ ಕ್ಷೇತ್ರದಲ್ಲಿ ನಿರಂತರ ಧಾರ್ಮಿಕ ಚಟುವಟಿಕೆಗಳು ನಡೆಯುತ್ತವೆ. ಈ ದೇವಸ್ಥಾನವು ಭಟ್ಕಳ ನಗರದ ಮುಖ್ಯ ಭಾಗವಾದ ವಿ.ಟಿ. ರಸ್ತೆ, ಆಸರಕೇರಿಯಲ್ಲಿದೆ.

ಪ್ರತಿವರ್ಷ ಇಲ್ಲಿ 'ವೈಕುಂಠ ಏಕಾದಶಿ'ಯನ್ನು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇವರಿಗೆ ವಿಶೇಷ ಪೂಜೆ-ಪುನಸ್ಕಾರಗಳು ಜರುಗುತ್ತವೆ. ಈ ಕ್ಷೇತ್ರದಲ್ಲಿ ವಾರ್ಷಿಕವಾಗಿ ಜರುಗುವ ಶ್ರೀ ದೇವರ ವೈಭವಯುತ 'ಪಲ್ಲಕ್ಕಿ ಉತ್ಸವ'ವು ಅತ್ಯಂತ ಪ್ರಸಿದ್ಧವಾಗಿದ್ದು, ಕರಾವಳಿ ಭಾಗದ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುತ್ತಾರೆ.

ದೇವಸ್ಥಾನದ ಆವರಣದಲ್ಲಿ ಬೃಹತ್ 'ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ಸಭಾಭವನ' (ಕಲ್ಯಾಣ ಮಂಟಪ) ಇದ್ದು, ಇಲ್ಲಿ ಸಮಾಜದ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಶುಭ ಸಮಾರಂಭಗಳು ಸದಾ ಜರುಗುತ್ತಿರುತ್ತವೆ. ನೂತನವಾಗಿ ಆಯ್ಕೆಯಾದ ಅಧ್ಯಕ್ಷ ನಾಗೇಂದ್ರ ನಾಯ್ಕ ಹಾಗೂ ಸಮಿತಿಯು ದೇವಸ್ಥಾನದ ಅಭಿವೃದ್ಧಿ ಹಾಗೂ ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.