Asianet Suvarna News Asianet Suvarna News

Udupi ಚಿನ್ನ ಕದ್ದ 24ಗಂಟೆಯೊಳಗೆ ಕಂಬಿಯೊಳಗೆ ಕಪಿಸೂರ್ಯ!

ಕಳ್ಳನ ಅಂಗಿಯ ಬಣ್ಣದ ಜಾಡು ಹಿಡಿದು ಕೇವಲ 24 ಗಂಟೆಯೊಳಗೆ, ಚಿನ್ನ ಕದ್ದ ಚೋರನನ್ನು ಕಂಬಿ ಎಣಿಸುವಂತೆ ಮಾಡುವಲ್ಲಿ ಬ್ರಹ್ಮಾವರ ಪೊಲೀಸರು ಯಶಸ್ವಿಯಾಗಿದ್ದಾರೆ.

Udupi district Brahmavara police arrested a gold thief within 24 hours  gow
Author
Bengaluru, First Published Apr 4, 2022, 5:43 PM IST

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್  

ಉಡುಪಿ(ಎ.4): ತಂತ್ರಜ್ಞಾನ (Technology) ಅಭಿವೃದ್ಧಿಯಾದ ನಂತರ ಪೊಲೀಸರ ಕೆಲಸ ಬಹಳ ಸುಲಭ ಅನ್ನೋ ಮಾತಿದೆ. ಮೊಬೈಲ್ ಲೊಕೇಶನ್ ಟ್ರೇಸ್ ಮಾಡುವ ಮೂಲಕವೇ ಬಹುತೇಕ ಪ್ರಕರಣಗಳಲ್ಲಿ ಪೊಲೀಸರು ಯಶಸ್ವಿಯಾಗುತ್ತಿದ್ದಾರೆ ನಿಜ. ಆದರೆ ಹಳೆಯ ಸಾಂಪ್ರದಾಯಿಕ ಪದ್ಧತಿಯನ್ನು ಇನ್ನೂ ನಾವು ಮರೆತಿಲ್ಲ ಎಂಬುದನ್ನು ಉಡುಪಿ (Udupi) ಪೊಲೀಸರು ಸಾಬೀತು ಮಾಡಿದ್ದಾರೆ. ಕಳ್ಳನ ಅಂಗಿಯ (Shirt) ಬಣ್ಣದ ಜಾಡು ಹಿಡಿದು ಕೇವಲ 24 ಗಂಟೆಯೊಳಗೆ, ಚಿನ್ನ ಕದ್ದ ಚೋರನನ್ನು ಕಂಬಿ ಎಣಿಸುವಂತೆ ಮಾಡುವಲ್ಲಿ ಬ್ರಹ್ಮಾವರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳ್ಳತನ ಎಲ್ಲಾಯ್ತು? ಹೇಗಾಯ್ತು?
ಅದು ಏಪ್ರಿಲ್ 1ನೇ ತಾರೀಕು, ಮಧ್ಯಾಹ್ನ ಸುಮಾರು 1ಗಂಟೆಯ ಸಮಯ. ಬ್ರಹ್ಮಾವರ (brahmavara) ಚೇರ್ಕಾಡಿ ಗ್ರಾಮದ ಕನ್ನಾರು ಎಂಬಲ್ಲಿ ವಾಸು ಪೂಜಾರಿ ಎಂಬವರ ಮನೆಯಲ್ಲಿ ಅವರ ಪತ್ನಿ ಪ್ರೇಮಾ ಒಂಟಿಯಾಗಿದ್ದರು. ಮನೆ ಹೊರಗಡೆ ಪಾತ್ರೆ ತೊಳೆಯುವಾಗ, ಹಿಂಬದಿ ಬಾಗಿಲ ಚಿಲಕ ಮುರಿದ ಶಬ್ದವಾಗಿದೆ. ಮರೆಯಲ್ಲಿ ನಿಂತು ನೋಡಿದಾಗ, ಕಳ್ಳನೊಬ್ಬ ಒಳಪ್ರವೇಶಿಸಿ ಮನೆಯನ್ನು ಸಂಪೂರ್ಣ ಜಾಲಾಡಿ ಸುಮಾರು 10 ಗ್ರಾಂ ತೂಕದ ಚಿನ್ನದ ನಕ್ಲೇಸ್ ಕಳ್ಳತನ ಮಾಡಿಕೊಂಡು ಹೋಗಿರುವುದು ಗಮನಕ್ಕೆ ಬಂದಿದೆ. ಕಣ್ಣಾರೆ ಘಟನೆಯನ್ನು ಕಂಡರೂ ಪ್ರೇಮ ಅವರು ಏನು ಮಾಡಲು ಸಾಧ್ಯವಾಗಿಲ್ಲ. ತಕ್ಷಣವೇ ತನ್ನ ಪತಿಗೆ ಫೋನ್ ಕರೆ ಮಾಡಿ ಕರೆಸಿಕೊಂಡು ಬ್ರಹ್ಮಾವರ ಠಾಣೆಯಲ್ಲಿ ಹಗಲು ಕಳ್ಳತನ ಪ್ರಕರಣ ದಾಖಲಿಸಿದ್ದರು.

ಮಸೀದಿ ಮೈಕ್ ನಿಷೇಧಕ್ಕೆ ಕಲಬುರಗಿಯಲ್ಲಿ ಶ್ರೀರಾಮ ಸೇನೆಯಿಂದ ಮತ್ತೊಂದು

ತಾಂತ್ರಿಕ ಸಹಾಯವಿಲ್ಲದೆ ಸಾಂಪ್ರದಾಯಿಕವಾಗಿ ಬಲೆಗೆ ಬಿದ್ದ ಕಳ್ಳ : ಪ್ರಕರಣದ ಬೆನ್ನು ಹತ್ತಿದ ಬ್ರಹ್ಮಾವರ ಪೊಲೀಸರು,  ಸರ್ಕಲ್ ಇನ್ಸ್ಪೆಕ್ಟರ್ ಅನಂತಪದ್ಮನಾಭ ಹಾಗೂ ಎಸ್ಐ ಗುರುನಾಥ ಬಿ ಹಾದಿಮನಿ ಅವರ ಮಾರ್ಗದರ್ಶನದಲ್ಲಿ ತಂಡ ರಚಿಸುತ್ತಾರೆ. ಯಾವುದೇ ತಾಂತ್ರಿಕ ಮಾಹಿತಿ ಇಲ್ಲದಿರುವುದರಿಂದ ಕಳ್ಳ ನನ್ನ ಪತ್ತೆಹಚ್ಚುವುದು ಸವಾಲಾಗುತ್ತದೆ. ಎಷ್ಟು ಬೇಗ ಕಾರ್ಯಚರಣೆ ಆರಂಭಿಸುತ್ತೇವೋ ಅಷ್ಟು ಬೇಗ ಕಳ್ಳನನ್ನ ಹಿಡಿಯಬಹುದು ಅನ್ನೋದು ಅರಿವಿಗೆ ಬಂದದ್ದರಿಂದ, ಸಾಂಪ್ರದಾಯಿಕ ವಿಧಾನದ ಮೊರೆ ಹೋಗುತ್ತಾರೆ.

ಸಾರ್ವಜನಿಕರಿಂದ ತಳಮಟ್ಟದ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಕಳ್ಳತನ ನಡೆಸುವ ವೇಳೆ ಆತ ಧರಿಸಿದ ಬಟ್ಟೆಯ ಮಾಹಿತಿಯನ್ನು ಪ್ರೇಮ ಅವರಿಂದ ಪಡೆಯುತ್ತಾರೆ. ಕೇವಲ ಅಂಗಿಯ ಬಣ್ಣದ ಆಧಾರದಲ್ಲಿ, ಕೆಲವೇ ಗಂಟೆಯೊಳಗೆ ಆರೋಪಿಯನ್ನು ಪತ್ತೆ ಮಾಡುತ್ತಾರೆ. ಆತನಿಂದ ಸುಮಾರು 50 ಸಾವಿರ ಮೌಲ್ಯದ ಚಿನ್ನದ ನಕ್ಲೇಸ್ ಅನ್ನು ವಶಪಡಿಸಿಕೊಳ್ಳುತ್ತಾರೆ. ಕಳ್ಳತನದಂತಹ ಪ್ರಕರಣಗಳಲ್ಲಿ ಇಲಾಖೆಯ ಮೇಲೆ ಜನರು ವಿಶ್ವಾಸವನ್ನೇ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ, ಕೇವಲ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗುತ್ತಾರೆ.

ಧ್ಚನಿವರ್ಧಕ ಮಸೀದಿಯೊಳಗೆ ಮಾತ್ರ ಕೇಳುವಂತೆ ಮಾಡಿದ್ರೆ ಸೂಕ್ತ: ಸಚಿವ ಈಶ್ವರಪ್ಪ

ಇಷ್ಟಕ್ಕೂ ಆರೋಪಿ ಯಾರು ಗೊತ್ತಾ?
ಇಷ್ಟಕ್ಕೂ ಪೊಲೀಸರು ಕಾರ್ಯಚರಣೆಯಲ್ಲಿ ವಶಪಡಿಸಿಕೊಂಡ ಆರೋಪಿ ಯಾರು ಗೊತ್ತಾ? ಕಪಿ ಸೂರ್ಯ! ಅರೆ ಇದೆಂತ ಹೆಸರು ಅಂದ್ರಾ? ಹೌದು ಈತನ ಹೆಸರು ಕಪಿ ಸೂರ್ಯ, ಇವನ ಮುಖಚರ್ಯೆ ಯಿಂದಲೇ ಈ ಹೆಸರು ಬಂದಿದೆ ಅಂತಾರೆ ಪೊಲೀಸರು. ಆತನನ್ನು ಪತ್ತೆ ಮಾಡುವುದರಲ್ಲಿ‌ಮುಖಚರ್ಯೆಯೂ ನೆರವಿಗೆ ಬಂದಿದೆ. ಈತನ ಹೆಸರು ಸುರೇಶ್ ಯಾನೆ ಸೂರ್ಯ. ಆದರೆ ಕಪಿ ಸೂರ್ಯ ಅಂತಾನೆ ಇವನಿಗೆ ಕುಖ್ಯಾತಿ ಇದೆ. ಸದ್ಯ ಈತ ಬೆಂಗಳೂರು ನಿವಾಸಿಯಾಗಿದ್ದು ಮೂಲತಃ ಪೆಜಮಂಗೂರು ಗ್ರಾಮದ ಪ್ರಗತಿನಗರ ಇವನ ಊರು.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಎರಡು ಕಳ್ಳತನ ಪ್ರಕರಣ ಇತ್ತು. ತಾಮ್ರ, ಚಿನ್ನದ ಕಿವಿಯೋಲೆ ಉಂಗುರ ಕಳ್ಳತನ ಮಾಡಿದ್ದ. ಈತನು ಕಾನೂನು ಸಂಘರ್ಷ ಕ್ಕೊಳಗಾದ ಬಾಲಕ ಎಂಬ ಕಾರಣಕ್ಕೆ ಏಳು ವರ್ಷಗಳ ಕಾಲ ರಿಮಾಂಡ್ ಹೋಮ್ ನಲ್ಲೂ ಶಿಕ್ಷೆ ಅನುಭವಿಸಿದ್ದು ಪೊಲೀಸರ ಗಮನಕ್ಕೆ ಬಂದಿದೆ. ಸದ್ಯ ಬೆಂಗಳೂರಿನ ಬಿಬಿಎಂಪಿಯಲ್ಲಿ ಈತ ಕಸಗುಡಿಸುವ ಕೆಲಸ ಮಾಡಿಕೊಂಡಿರುತ್ತಾನೆ. ಸಂಬಂಧಿಕರ ಮನೆಯ ಜಾತ್ರೆ ಎಂಬ ಕಾರಣಕ್ಕೆ ಬ್ರಹ್ಮಾವರ ಕಡೆಗೆ ಬಂದಿದ್ದ ಕಪಿ ಸೂರ್ಯ, ಕಪಿಚೇಷ್ಟೆ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. 

ಕಳ್ಳತನ ಪ್ರಕರಣಗಳು ನಿರಂತರವಾಗಿ ನಡೆಯುತ್ತವೆ ನಿಜ, ಆದರೆ ಆರೋಪಿಯನ್ನು 24 ತಾಸಿನೊಳಗೆ ಬಂಧಿಸುವುದು ತೀರಾ ಅಪರೂಪ. ಸಾಂಪ್ರದಾಯಿಕ ಪದ್ಧತಿಯಲ್ಲೇ ಕಳ್ಳನನ್ನು ಹಿಡಿದು ಬ್ರಹ್ಮಾವರ ಪೊಲೀಸರು ಈ ಕೆಲಸ ಮಾಡಿ ತೋರಿಸಿದ್ದಾರೆ.

Follow Us:
Download App:
  • android
  • ios