ಮಸೀದಿ ಮೈಕ್ ನಿಷೇಧಕ್ಕೆ ಕಲಬುರಗಿಯಲ್ಲಿ ಶ್ರೀರಾಮ ಸೇನೆಯಿಂದ ಮತ್ತೊಂದು ಅಭಿಯಾನ
ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷರೂ ಆಗಿರುವ ಆಂದೋಲಾ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಸೀದಿ ಮೈಕ್ ನಿಷೇಧಕ್ಕೆ ಅಭಿಯಾನ ಆರಂಭಿಸಿದ್ದಾರೆ.
ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣನ್ಯೂಸ್
ಕಲಬುರಗಿ (ಏ.4): ಹಿಜಾಬ್ (Hijab) ಆಯ್ತು, ಹಲಾಲ್ (Halal) ಆಯ್ತು ಇದೀಗ ಮುಸ್ಲಿಂರ (Muslim) ಮತ್ತೊಂದು ಆಚರಣೆ ವಿರುದ್ಧ ಶ್ರೀರಾಮಸೇನೆ (Sriram Sena ) ಧ್ವನಿ ಎತ್ತಿದೆ. ಮಸೀದಿಗಳ ಮೇಲಿನ ಮೈಕ್ ಗಳನ್ನು ಬ್ಯಾನ್ ಮಾಡಬೇಕೆನ್ನುವ ಕೂಗು ಈ ಬಾರಿ ಬಿಸಿಲೂರಿನಿಂದ ಶುರುವಾಗಿದೆ. ಶಾಲೆಯಲ್ಲಿ ಮಕ್ಕಳು ಹಿಜಾಬ್ ಧರಿಸುವುದನ್ನು ಪ್ರಶ್ನಿಸಿ ರಾಜ್ಯದಲ್ಲಿ ಹಿಂದೂ ಸಂಘಟನೆಗಳು ದೊಡ್ಡ ಮಟ್ಟದ ಅಭಿಯಾನವನ್ನೇ ನಡೆಸಿವೆ. ಅಷ್ಟೇ ಅಲ್ಲ, ಶಾಲಾ ಕೋಣೆಯಲ್ಲಿ ಹಿಜಾಬ್ ಧರಿಸದಂತೆ ನ್ಯಾಯಾಲಯದಿಂದ ಆದೇಶ ಸಹ ಹೊರಬಿದ್ದಿದೆ.
ಇದರ ಯಶಸ್ಸಿನಿಂದ ಅತ್ಯುತ್ಸಾಹದಲ್ಲಿರುವ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮುಸ್ಲಿಂ ಧರ್ಮದಲ್ಲಿನ ಕೆಲ ಆಚರಣೆಗಳ ಬಗ್ಗೆ ಮತ್ತಷ್ಟು ಗಟ್ಟಿಯಾಗಿ ಧ್ವನಿ ಎತ್ತಲಾರಂಬಿಸಿದ್ದಾರೆ. ಇತ್ತಿಚಿಗೆ ತೀವ್ರ ಸ್ವರೂಪ ಪಡೆದುಕೊಂಡಿದ್ದ ಹಲಾಲ್ ವರ್ಚಸ್ ಜಟ್ಕಾ ಕಟ್ ಮಾಂಸ ವ್ಯಾಪಾರವೇ ಇದಕ್ಕೊಂದು ತಾಜಾ ಉದಾಹರಣೆ.
ಈಗ ಇದೇ ಸಾಲಿಗೆ ಮಸೀದಿ ಮೇಲಿನ ಧ್ವನಿವರ್ಧಕಗಳ ನಿಷೇಧದ ಅಭಿಯಾನ ಹೊಸ ಸೇರ್ಪಡೆಯಾಗಿದೆ. ಹಾಗೆ ನೋಡಿದ್ರೆ ಹಿಂದೂ ಸಂಘಟನೆಗಳ ಈ ಬೇಡಿಕೆ ಹೊಸದೇನೂ ಅಲ್ಲ. ಶ್ರೀರಾಮ ಸೇನೆ ಕಾರ್ಯಕರ್ತರು ಕಳೆದ ಡಿಸೆಂಬರನಲ್ಲಿಯೇ ಈ ಅಭಿಯಾನ ಶುರು ಮಾಡಿದ್ದರು. ಇದಕ್ಕೆ ಈಗ ಅದೇ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷರೂ ಆಗಿರುವ ಆಂದೋಲಾ ಕರುಣೇಶ್ವರ ಮಠದ (Karuneshwar Mutt) ಶ್ರೀ ಸಿದ್ದಲಿಂಗ ಸ್ವಾಮೀಜಿ ಮರು ಜೀವ ನೀಡಿದ್ದಾರೆ.
ಧ್ಚನಿವರ್ಧಕ ಮಸೀದಿಯೊಳಗೆ ಮಾತ್ರ ಕೇಳುವಂತೆ ಮಾಡಿದ್ರೆ ಸೂಕ್ತ: ಸಚಿವ ಈಶ್ವರಪ್ಪ
ಮಸೀದಿಗಳ ಮೇಲೆ ಧ್ವನಿವರ್ದಕ ಅಳವಡಿಸುವುದಕ್ಕೆ ನಿಷೇಧ ಹೇರಬೇಕು ಎಂದು ಆಂದೋಲಾದ ಶ್ರೀ ಸಿದ್ದಲಿಂಗ ಸ್ವಾಮಿಜಿ ( Siddalinga Swami) ಆಗ್ರಹಿಸಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಸೀದಿಗಳ ಮೇಲಿನ ಧ್ವನಿವರ್ದಕಗಳಿಂದ ಜನರಿಗೆ ಕಿರಿಕಿರಿ ಆಗುತ್ತಿದೆ. ಹಾಗಾಗಿ ಈ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಂಜಾನ್ ನಿಮಿತ್ಯ, ದಿನದಲ್ಲಿ ಹಲವು ಬಾರಿ ಧ್ವನಿವರ್ಧಕ ಜೊತೆಗೆ ಸೈರನ್ ಕೂಡ ಹಾಕುತ್ತಾರೆ. ಇದರಿಂದ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ವಯಸ್ಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ ಮಸೀದಿಗಳ ಮೇಲಿನ ಧ್ವನಿವರ್ಧಕಕ್ಕೆ ನಿಷೇಧ ವಿಧಿಸಬೇಕು ಎಂದು ಅವರು ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಮಸೀದಿಗಳ ಮೇಲೆ ಮೈಕ್ ನಿಷೇಧಿಸಬೇಕು ಎಂದು ಮಹಾರಾಷ್ಟ್ರದ ಎಮ್.ಎನ್.ಎಸ್ ಪಕ್ಷದ ಮುಖಂಡ ರಾಜ್ ಠಾಕ್ರೆ ಅವರು ಅಲ್ಲಿನ ಸರಕಾರಕ್ಕೆ ಒತ್ತಾಯ ಮಾಡಿದ್ದು, ಇದಕ್ಕೆ ಸಿದ್ದಲಿಂಗ ಸ್ವಾಮಿಜಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದನ್ನು ಕರ್ನಾಟಕದಲ್ಲೂ ಅನುಷ್ಠಾನಕ್ಕೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ರಾಜ್ಯದಲ್ಲಿ ಈ ದಿಕ್ಕಿನಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದೂ ಅವರು ಕರ್ನಾಟಕ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಚಿಲ್ಲರೆ ಹಣಕ್ಕಾಗಿ ಬಾರ್ ಕ್ಯಾಶಿಯರ್ ಕೊಲೆ
ನನ್ನ ವಾದ ಕೇವಲ ಮಸಿದಿಗಳಿಗೆ ಸೀಮಿತವಾಗಿಲ್ಲ. ಜನಸಾಮಾನ್ಯರಿಗೆ ತೊಂದರೆಯಾಗುವಂತಿದ್ದರೆ, ನಮ್ಮ ಮಠದಲ್ಲಿನ ದ್ವನಿವರ್ದಕ ನಿಲ್ಲಿಸಲು ನಾನು ಸಿದ್ದನಿದ್ದೇನೆ. ನೀವು ಮಸಿದಿ ಮೇಲಿನ ಧ್ವನಿವರ್ದಕ ತೆಗೆಯಲು ರೆಡಿ ಇದ್ದಿರಾ ? ಎಂದು ಸಿದ್ದಲಿಂಗ ಸ್ವಾಮಿಜಿ ಮುಸ್ಲಿಂ ಮುಖಂಡರಿಗೆ ನೇರ ಸವಾಲು ಹಾಕಿದ್ದಾರೆ.
ಒಟ್ಟಾರೆ ಹಿಜಾಬ್, ಹಲಾಲ್ ನಂತರ ಇದೀಗ ಮುಸ್ಲಿಂ ಆಚರಣೆಯ ವಿರುದ್ಧ ಹಿಂದೂ ಸಂಘಟನೆಗಳು ಮಸೀದಿ ಮೇಲಿನ ಮೈಕ್ ನಿಷೇಧದ ಅಭಿಯಾನ ಆರಂಭಿಸಿದೆ. ಇದಕ್ಕೆ ಸರಕಾರ ಹೇಗೆ ಪ್ರತಿಕ್ರಿಯಿಸುತ್ತದೆ ? ಅಲ್ಪಸಂಖ್ಯಾತ ಸಮುದಾಯದ ಧರ್ಮಗುರುಗಳು, ಮುಖಂಡರು ಹೇಗೆ ಪ್ರತಿಕ್ರಿಯಿಸುತ್ತಾರೆ. ಮತ್ತು ಈ ವಿಚಾರ ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎನ್ನುವುದು ಕಾದು ನೋಡಬೇಕಿದೆ.