ಉಡು​ಪಿ(ನ.13): ಸಾರ್ವಜನಿಕ ಸ್ಥಳದಲ್ಲಿ ಯುವತಿಯೊಂದಿಗೆ ಅನಪೇಕ್ಷಿತ ರೀತಿಯಲ್ಲಿ ಸಿಕ್ಕಿ ಬಿದ್ದ ಯುವಕನ ಮೇಲೆ ಕೆಲವು ಯುವಕರು ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆಯ ಎಸ್‌ಐ ಅನಂತಪದ್ಮನಾಭ ಮತ್ತು ಹೆಡ್‌ ಕಾನ್‌ಸ್ಟೇ​ಬಲ್‌ ಜೀವನ್‌ ಅವರನ್ನು ಎಸ್ಪಿ ನಿಷಾ ಜೇಮ್ಸ್‌ ಸೋಮವಾರ ಅಮಾನತುಗೊಳಿಸಿದ್ದಾರೆ. ಇದಕ್ಕೆ ಸಾರ್ವಜನಿಕರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ವಾರದ ಹಿಂದೆ ನಗರದ ಭುಜಂಗ ಪಾರ್ಕಿನಲ್ಲಿ ಆಶೀಶ್‌ ಅಲಿ ಎಂಬಾತ ಯುವತಿಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿದ್ದ ಎಂಬ ಆರೋಪದ ಮೇಲೆ ಕೆಲವು ಯುವಕರು ಹಿಡಿದ ಥಳಿಸಿದ್ದರು. ಪ್ರಕರಣ ನಗರ ಠಾಣೆಯ ಮೆಟ್ಟಿಲೇರಿತ್ತು. ಪೊಲೀಸರು ಯುವತಿಯ ಮನೆಯವರನ್ನು ಕರೆಸಿದ್ದರು. ಈ ಸಂದರ್ಭ ಯುವಕ ಕ್ಷಮೆ ಕೇಳಿದ್ದ. ಎರಡೂ ಕಡೆಯವರು ಯಾವುದೇ ದೂರು ದಾಖಲಿಸದೆ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿತ್ತು.

BJPಯ ಬಹುಕಾಲ ಮಿತ್ರ ಶಿವಸೇನೆ ಅಧಿಕಾರಕ್ಕಾಗಿ ನಾಟಕ ಮಾಡ್ತಿದೆ ಎಂದ ಸಂಸದ

ನಂತರ ಏಟು ತಿಂದ ಯುವಕ ಎಸ್ಪಿಗೆ ದೂರು ನೀಡಿದ್ದ, ಈ ಹಿನ್ನೆಲೆಯಲ್ಲಿ ಎಸ್ಪಿ ಅವರು ಪ್ರಕರಣದ ಎಫ್‌ಐ​ಆರ್‌ ದಾಖಲಿಸದ ಮತ್ತು ತಮ್ಮ ಗಮನಕ್ಕೆ ತಾರದ ಆರೋ​ಪ​ದಲ್ಲಿ ಎಸೈ ಅನಂತಪದ್ಮನಾಭ ಮತ್ತು ಸಿಬ್ಬಂದಿ ಜೀವನ್‌ ಅವರನ್ನು ಅಮಾನತುಗೊಳಿಸಿದ್ದಾರೆ.

ಇದೀಗ ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದು, ಹಿಂದೂ ಪರ ಸಂಘಟನೆಗಳಿಂದ ಎಸ್‌​ಐ ಅನಂತಪದ್ಮನಾಭ ಅವರಿಗೆ ಬೆಂಬಲವಾಗುತ್ತಿದ್ದರೆ, ಪ್ರಗತಿಪರರ ಸಂಘಟನೆಗಳಿಂದ ಎಸ್ಪಿ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಎಸ್‌ಐ ತಪ್ಪೇ ಮಾಡಿ​ಲ್ಲ: ಶಾಸಕ ಭಟ್‌

ಅಮಾನತು ಬಗ್ಗೆ ಉಡುಪಿ ಶಾಸಕ ಕೆ.ರಘುಪತಿ ಭಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏಟು ತಿಂದ ಯುವಕ ಅದೇ ದಿನ ದೂರು ನೀಡದೆ ಕ್ಷಮೆ ಕೇಳಿದ್ದರಿಂದ ಎಸೈ ಅವರು ಎಫ್‌ಐ​ಆ​ರ್‌ ದಾಖಲಿಸಿಲ್ಲ. ಅಲ್ಲದೆ ಅದೇ ವಾರದಲ್ಲಿ ಅಯೋಧ್ಯೆ ತೀರ್ಪು ಬರುವುದಿತ್ತು, ಆ ಸಂದರ್ಭದಲ್ಲಿ ಅನಗತ್ಯವಾಗಿ ಎರಡು ಕೋಮಿನ ನಡು​ವಿನ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದರೆ ಅನಗತ್ಯ ಸಮಸ್ಯೆಗೆ ಕಾರಣವಾಗುತ್ತಿತ್ತು. ಆದ್ದರಿಂದ ಎಸೈ ಮತ್ತು ಸಿಬ್ಬಂದಿ ಅಮಾನತು ಸರಿಯಲ್ಲ. ತಕ್ಷಣ ಅಮಾನತು ಆದೇಶವನ್ನು ಹಿಂದಕ್ಕೆ ಪಡೆದು, ಎಸೈ ಅವರನ್ನು ಉಡುಪಿಯಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.

ಮತೀಯ ಕಾರಣವಿಲ್ಲ: ಎಸ್ಪಿ

ಎಸೈ ಅನಂತಪದ್ಮನಾಭ ಮತ್ತು ಠಾಣಾ ಸಿಬ್ಬಂದಿ ಜೀವನ್‌ ಕುಮಾರ್‌ ಅವರನ್ನು ತಮ್ಮ ಕರ್ತವ್ಯ ಲೋಪದ ಮೇಲೆ ಪ್ರಾಥಮಿಕ ವಿಚಾರಣಾ ವರದಿಯ ಆಧಾರದಲ್ಲಿ ಅಮಾನತು ಮಾಡಲಾಗಿದೆ. ಇದು ಸಂಪೂರ್ಣವಾಗಿ ಇಲಾಖೆಯ ಶಿಸ್ತು ನಡಾವಳಿ, ಶಿಸ್ತುಪ್ರಾಧಿಕಾರಕ್ಕೆ ಒಳಪಟ್ಟಿರುತ್ತದೆ. ಮತ್ತು ಇದು ಯಾವುದೇ ರಾಜಕೀಯ, ಮತೀಯ ಪ್ರೇರಿತವಾಗಿಲ್ಲ. ಮುಂದಿನ ಕ್ರಮಗಳನ್ನು ಇಲಾಖಾ ಶಿಸ್ತು ನಿಯಮಾವಳಿಯಂತೆ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ನಿಷಾ ಜೇಮ್ಸ್‌ ಹೇಳಿದ್ದಾರೆ.

ಪ್ರತಿಭಟನೆ: ಶ್ರೀರಾಮ ಸೇನೆ ಎಚ್ಚ​ರಿ​ಕೆ

ದಕ್ಷ ಹಾಗೂ ಪ್ರಾಮಾಣಿಕ ಪೋಲಿಸ್‌ ಅಧಿಕಾರಿ ಅನಂತಪದ್ಮನಾಭ ಅವರನ್ನು ಕೆಲವರ ಕುಮ್ಮಕ್ಕಿನಿಂದ ಕರ್ತವ್ಯಲೋಪದ ಆರೋಪ ಹೊರಿಸಿ ಅಮಾನತು ಮಾಡಿರುವುದು ಖಂಡನೀಯ. ಪೊಲೀಸ್‌ ವರಿಷ್ಠಾಧಿಕಾರಿ ಕ್ರಮವನ್ನು ಉಡುಪಿ ಜಿಲ್ಲಾ ಶ್ರೀ ರಾಮಸೇನೆಯು ತೀವ್ರವಾಗಿ ಖಂಡಿಸುತ್ತದೆ. ಅಮಾನತು ಆದೇಶವನ್ನು 48 ಗಂಟೆಗಳಲ್ಲಿ ಹಿಂಪಡೆಯದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು ಎಚ್ಚರಿಕೆ ನೀಡಿದ್ದಾರೆ.

ಉಪವಾಸ ಸತ್ಯಾಗ್ರಹ: ಕರವೇ ಎಚ್ಚ​ರಿ​ಕೆ

ಒಂದು ಘಟನೆಗೆ ಸಂಬಂಧಿಸಿದಂತೆ ದಕ್ಷ ಅಧಿಕಾರಿ ಅನಂತಪದ್ಮನಾಭ ಅವರನ್ನು ಕರ್ತವ್ಯಲೋಪದ ಆರೋಪ ಹೊರಿಸಿ ಅಮಾನತು ಮಾಡಿರುವುದು ಖಂಡನೀಯ. ಇಲಾಖೆಯ ಈ ಅಮಾನವೀಯ ಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ. ಅವರ ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳದಿದ್ದಲ್ಲಿ ವೇದಿಕೆ ವತಿಯಿಂದ ನಗರ ಠಾಣೆಯ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ವೇದಿಕೆಯ ಜಿಲ್ಲಾಧ್ಯಕ್ಷ ಅನ್ಸರ್‌ ಅಹಮದ್‌ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿಗೆ ಬಂದ ಎರಡನೇ ಪ್ರವಾಸಿ ನೌಕೆ, ಕರಾವಳಿಯ ಸೊಬಗು ಸವಿದ ವಿದೇಶಿಗರು