ಉಡುಪಿ(ಅ.12): ಕೃಷ್ಣಮಠದ ಆನೆಯನ್ನು ಮತ್ತೆ ಕಾಡಿಗೆ ಸೇರಿಸಲಾಗಿದೆ. ಆದರೆ ಈ ಬಾರಿ ಕಾಡಿಗೆ ಸೇರಿಸಿದ್ದು ಮದ ಏರಿದ್ದಕ್ಕೆ ಅಲ್ಲ. ಬದಲಿಗೆ ಆಕೆಗೆ ಪ್ರಕೃತಿ ಸಹಜವಾದ ಗರ್ಭಧಾರಣೆಯಾಗಲಿ ಎನ್ನುವ ಕಾರಣಕ್ಕೆ.

ಸುಮಾರು 23 ವರ್ಷಗಳ ಹಿಂದೆ ಉಡುಪಿ ಕೃಷ್ಣ ಮಠಕ್ಕೆ ಸೇರಿದ ಸುಭದ್ರೆಗೆ ಈಗ 26 ವರ್ಷ ಕಾಡಿನಲ್ಲಿದ್ದಿದ್ದರೆ ಇದುವರೆಗೆ ಕನಿಷ್ಠ 2 ಬಾರಿಯಾದರೂ ಗರ್ಭಧರಿಸುತ್ತಿತ್ತು. ಆದರೆ ಸುಭದ್ರೆ ಇದುವರೆಗೆ ಒಮ್ಮೆಯೂ ಗರ್ಭಧರಿಸಿಲ್ಲ. ಅರ್ಥಾತ್‌ ಅದಕ್ಕೆ ಬೇಕಾದ ಗಂಡಾನೆಯ ವ್ಯವಸ್ಥೆ ಉಡುಪಿಯಲ್ಲಿ ಇರಲಿಲ್ಲ.

ಉಡುಪಿ ಕೃಷ್ಣಮಠದ ಮುಖ್ಯಪ್ರಾಣ ಗುಡಿಗೆ ಚಿನ್ನದ ಹೊದಿಕೆ

ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳ ಆದೇಶದಂತೆ ಸುಭದ್ರೆಯನ್ನು ಅದರ ಸಹಜ ಸಂತಾನಾಭಿವೃದ್ಧಿಗಾಗಿ ಇತ್ತೀಚೆಗೆ ದಾವಣಗೆರೆ ಜಿಲ್ಲೆಯ ಹಿರೇಕಲ್‌ ಮಠದ ಅರಣ್ಯಕ್ಕೆ ಸೇರಿಸಲಾಗಿದೆ. ಇಲ್ಲಿನ ತುಂಗ ನದಿ ತೀರದಲ್ಲಿರುವ ಹಿರೇಕಲ್‌ ಮಠ ಅರಣ್ಯ ಪ್ರದೇಶದಲ್ಲಿ ಸಾಕಷ್ಟುಆನೆಗಳಿರುವುದರಿಂದ, ಅಲ್ಲಿ ಸುಭದ್ರೆಯ ಸಂತಾನೋತ್ಪತ್ತಿಗೆ ಸೂಕ್ತ ಸ್ಥಳವಾಗಿದೆ ಎಂದು ಅರಣ್ಯಾಧಿಕಾರಿಗಳು ಸೂಚಿಸಿದ್ದು, ಅದರಂತೆ ದಾವಣಗೆರೆ ಅರಣ್ಯಾಧಿಕಾರಿ ರೇವಣ್ಣ ನೇತೃತ್ವದಲ್ಲಿ ಸುಭದ್ರೆಯನ್ನು ಕಳುಹಿಸಲಾಗಿದೆ ಎಂದು ಉಡುಪಿಯ ಕೃಷ್ಣ ಮಠದ ಆಡಳಿತಾಧಿಕಾರಿ ಪ್ರಹ್ಲಾದ್‌ ಆಚಾರ್ಯ ತಿಳಿಸಿದ್ದಾರೆ.

'ಉಡುಪಿಗೆ ಕೋಟ ಉಸ್ತುವಾರಿಯಾಗಿದ್ದರೆ ಚೆನ್ನಾಗಿತ್ತು'..!

ಈ ಹಿಂದೆ 2015ರಲ್ಲಿ ಸುಭದ್ರೆಯ ಕಾಲಿಗೆ ಗಾಯವಾಗಿ ನಡೆಯಲು ಸಾಧ್ಯವಾಗದಿದ್ದಾಗ ಅದರ ಚಿಕಿತ್ಸೆಗೆ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಶಿಬಿರಕ್ಕೆ ಕಳುಹಿಸಲಾಗಿತ್ತು. ನಂತರ 2017ರಲ್ಲಿ ಅದನ್ನು ಪುನಃ ಉಡುಪಿಗೆ ಕರೆ ತರಲಾಯಿತು. ಆದರೆ ಮತ್ತೆ ಕಾಲು ನೋವು, ಸಕ್ಕರೆ ಕಾಯಿಲೆ ಹೆಚ್ಚಾದಾಗ ಅದನ್ನು ಮತ್ತೆ ಸಕ್ರೆಬೈಲಿಗೆ ಕಳುಹಿಸಲಾಗಿತ್ತು. ಮಾರ್ಚ್‌ ತಿಂಗಳಲ್ಲಿ ಮತ್ತೆ ಅದನ್ನು ಉಡುಪಿಗೆ ಕರೆಸಲಾಗಿತ್ತು. ನಂತರ ಉಡುಪಿ ಕೃಷ್ಣಮಠದ ಉತ್ಸವಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿತ್ತು.

ಆದರೆ ಅದಕ್ಕೆ ಸಂತಾನೋತ್ಪತ್ತಿಗೆ ಉಡುಪಿಯಲ್ಲಿ ಅವಕಾಶ ಇಲ್ಲ. ಈ ಹಿನ್ನೆಲೆಯಲ್ಲಿ ಗರ್ಭ ಧರಿಸುವ ಅದರ ಪ್ರಕೃತಿದತ್ತ ಹಕ್ಕಿನಿಂದ ವಂಚನೆಯಾಗದಂತೆ ಅದನ್ನು ಇದೀಗ ಹಿರೇಕಲ್‌ ಮಠ ಅರಣ್ಯಕ್ಕೆ ಸೇರಿಸಲಾಗಿದೆ.

ದೀಪಾವಳಿಗೂ ಬೆಂಗಳೂರು-ಕಾರವಾರ ಮಧ್ಯೆ ಸುವಿಧ ವಿಶೇಷ ರೈಲು

ಸುಭದ್ರೆ ಶ್ರೀಕೃಷ್ಣಮಠದ ಆನೆಯಾಗಿರುವುದರಿಂದ ಅಗತ್ಯವಿದ್ದಾಗ ಹಿಂದಕ್ಕೆ ಕರೆಸಲಾಗುತ್ತದೆ ಎಂದು ಮಠದ ಅಧಿಕಾರಿಗಳು ಹೇಳುತ್ತಿದ್ದಾರೆ. ಆನೆಗಳು ಒಮ್ಮೆ ಗರ್ಭ ಧರಿಸಿದರೆ ನಂತರ 20 - 22 ತಿಂಗಳು ಮರಿ ಗರ್ಭದಲ್ಲಿರುತ್ತದೆ. ಸುಭದ್ರೆ ಕಾಡಿನ ಮಧ್ಯೆ ಗರ್ಭ ಧರಿಸಿದರೆ ಸದ್ಯಕ್ಕಂತೂ ಉಡುಪಿಗೆ ಬರುವ ಸಾಧ್ಯತೆಗಳಿಲ್ಲ.