ಕಾರ್ಕಳದ ಉಮಿಕಲ್ ಬೆಟ್ಟದ ಪರಶುರಾಮ ಪ್ರತಿಮೆ ನಿರ್ಮಾಣದಲ್ಲಿ ಅಕ್ರಮದ ಆರೋಪದಡಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಪ್ರತಿಮೆಯನ್ನು ಹಿತ್ತಾಳೆಯಿಂದ ನಿರ್ಮಿಸಲಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.
ಕಾರ್ಕಳ (ಜು.14): ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಪ್ರಮುಖ ವಿಚಾರವಾಗಿದ್ದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಉಮಿಕಲ್ ಬೆಟ್ಟದಲ್ಲಿ ಪರಶುರಾಮನ ಕಂಚಿನ ಪ್ರತಿಮೆ ರಚನೆಯಲ್ಲಿನ ಅಕ್ರಮದ ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ. ಪರಶುರಾಮ ಪ್ರತಿಮೆಯನ್ನು ಪೈಬರ್ ನಿಂದ ನಿರ್ಮಿಸಲಾಗಿದೆ ಎಂದು ಕಾಂಗ್ರೆಸಿಗರು ನಡೆಸುತ್ತಿದ್ದ ಆರೋಪಕ್ಕೆ ಭಾರೀ ಹಿನ್ನಡೆ ಉಂಟಾಗಿದೆ.ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಪ್ರತಿಮೆಯನ್ನು ಹಿತ್ತಾಳೆಯಿಂದ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.
1231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ತಯಾರಿಸಿ ಕಾರ್ಕಳದ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಅದರಲ್ಲಿ ಶಿಲ್ಪಿ ಕೃಷ್ಣ ನಾಯ್ಕ ಕಂಚಿನ ಲೋಹದಿಂದ ಪರಶುರಾಮ ಮೂರ್ತಿಯನ್ನು ನಿರ್ಮಾಣ ಮಾಡದೇ, ಹಿತ್ತಾಳೆ ಲೋಹದಿಂದ ಪರಶುರಾಮ ಮೂರ್ತಿಯನ್ನು ನಿರ್ಮಾಣ ಮಾಡಿರುವುದು ತಜ್ಜರ ಪರಿಶೀಲನಾ ವರದಿಯಿಂದ ಹಾಗೂ ತನಿಖೆಯಿಂದ ಸಾಬೀತಾಗಿರುತ್ತದೆ ಎಂದು ಉಲ್ಲೇಖಿಸಲಾಗಿದೆ. ಅದರೊಂದಿಗೆ ಕಾಂಗ್ರೆಸಿಗರು ಮಾಡಿದ್ದ ಪೈಬರ್ ಪ್ರತಿಮೆ ವಾದಕ್ಕೆ ತೀವ್ರ ಹಿನ್ನಡೆ ಆಗಿದೆ.
ಒಪ್ಪಂದದ ಪ್ರಕಾರ ಪ್ರತಿಮೆಯನ್ನು ಕಂಚಿನಿಂದ ನಿರ್ಮಿಸಬೇಕೆಂದಿದೆ. ಆದರೆ ಪ್ರತಿಮೆ ಹಿತ್ತಾಳೆಯದ್ದಾಗಿದ್ದು ಕಾರ್ಕಳದಲ್ಲಿ ನಿರ್ಮಿಸಿರುವ ಪರಶುರಾಮನ ಪ್ರತಿಮೆ ಪೈಬರ್ ನದ್ದು ಎಂಬ ವಾದ ಮುರಿದು ಬಿದ್ದಂತಾಗಿದೆ.
ಮೂವರ ವಿರುದ್ಧ ಕೇಸ್: ಆರೋಪಿಗಳಾದ ಶಿಲ್ಪಿ ಕೃಷ್ಣ ನಾಯ್ಕ ಉಡುಪಿ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ ಡೈರೆಕ್ಟರ್ ಅರುಣ ಕುಮಾರ್ ಹಾಗೂ ಇಂಜಿನಿಯರ್ ಸಚಿನ್ ವೈ ಕುಮಾರ್ ಇವರುಗಳು ಅಪರಾಧಿಕ ಒಳಸಂಚು ಮತ್ತು ನಂಬಿಕೆ ದ್ರೋಹ ಮತ್ತು ವಂಚನೆ ಎಸಗಿ, ಸಾಕ್ಷಿ ನಾಶ ಮಾಡಿರುತ್ತಾರೆ. ಅವರ ವಿರುದ್ದ ಕಲಂ. 420, 409, 201, 120 (ಬಿ) ಜೊತೆಗೆ 34 ಐಪಿಸಿ ಯಂತೆ 1231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ತಯಾರಿಸಿ ಮಾನ್ಯ ಕಾರ್ಕಳದ ನ್ಯಾಯಾಲಯಕ್ಕೆ ನೀಡಲಾಗಿದೆ.
2024ರ ಜೂನ್ 21 ರಂದು ಕೃಷ್ಣ ಶೆಟ್ಟಿ ಇವರು, ಕೃಷ್ಣ ನಾಯಕ್ Krish Art World ಎಂಬ ಸಂಸ್ಥೆಯ ಮುಖಾಂತರ ಕಾರ್ಕಳ ತಾಲೂಕಿನ ಪರಶುರಾಮ್ ಥೀಮ್ ಪಾರ್ಕ ನಲ್ಲಿ ಕಂಚಿನ ಪರಶುರಾಮ್ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ ಹಣ ಪಡೆದುಕೊಂಡು ಕಾಮಗಾರಿ ನಡೆಸುತ್ತಿದ್ದರು. ಕಂಚಿನ ಮೂರ್ತಿಯನ್ನು ಮಾಡದೇ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚನೆಯನ್ನು ಮಾಡಿರುತ್ತಾರೆ ಎಂದು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 120/2024 ಕಲಂ 420.409 ಐಪಿಸಿ ರಂತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗಿತ್ತು.
ಪ್ರಕರಣದ ತನಿಖಾ ಕಾಲದಲ್ಲಿ ಪರಶುರಾಮ ಮೂರ್ತಿಯ ಶಿಲ್ಪಿ ಕೃಷ್ಣ ನಾಯ್ಕ ಕಂಚಿನ ಲೋಹದಿಂದ ಪರಶುರಾಮ ಮೂರ್ತಿಯನ್ನು ನಿರ್ಮಾಣ ಮಾಡದೇ, ಹಿತ್ತಾಳೆ ಲೋಹದಿಂದ ಪರಶುರಾಮ ಮೂರ್ತಿಯನ್ನು ನಿರ್ಮಾಣ ಮಾಡಿರುವುದು ತಜ್ಜರ ಪರಿಶೀಲನಾ ವರದಿಯಿಂದ ಹಾಗೂ ತನಿಖೆಯಿಂದ ಸಾಬೀತಾಗಿದೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾರ್ಕಳ ಶಾಸಕ ಸುನೀಲ್ ಕುಮಾರ್, 'ಪರಶುರಾಮ ಥೀಂ ಪಾರ್ಕ್ ಹಾಗೂ ಪ್ರತಿಮೆಯ ಬಗ್ಗೆ ಕಾಂಗ್ರೆಸಿಗರು ನಡೆಸುತ್ತಿದ್ದ ನಿರಂತರ ಅಪಮಾನಕ್ಕೆ ಸೋಲಾಗಿದೆ. ಪ್ರತಿಮೆ ಫೈಬರ್‌ನದ್ದು ಎಂದು ನಡೆಸುತ್ತಿದ್ದ ಟೂಲ್ ಕಿಟ್ ಅಪಪ್ರಚಾರ ಸುಳ್ಳು ಎಂಬುದು ಪೊಲೀಸ್ ತನಿಖೆಯಿಂದಲೇ ಸಾಬೀತಾಗಿದೆ. ಪ್ರತಿಮೆಯನ್ನು ಹಿತ್ತಾಳೆಯಿಂದ ನಿರ್ಮಿಸಲಾಗಿದೆ ಎಂದು ಕಾರ್ಕಳ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ಪರಶುರಾಮನ ಪ್ರತಿಮೆಯ ಸೊಂಟದ ಮೇಲ್ಭಾಗವನ್ನು ಮರು ವಿನ್ಯಾಸ ಉದ್ದೇಶದಿಂದ ತೆಗೆದಿದ್ದು ಎಂಬುದನ್ನೂ ನ್ಯಾಯಲಯಕ್ಕೆ ಸ್ಪಷ್ಟಪಡಿಸಿದ್ದಾರೆ. ಇನ್ನಾದರೂ ರಾಜ್ಯ ಸರ್ಕಾರ ಪರಶುರಾಮ ಥೀಂ ಪಾರ್ಕ್ ಗೆ ನಿಗದಿ ಮಾಡಿದ್ದ ಅನುದಾನವನ್ನು ಬಿಡುಗಡೆ ಮಾಡುವ ಜತೆಗೆ ಈ ತಾಣವನ್ನು ಪ್ರವಾಸೋದ್ಯಮಕ್ಕೆ ಮತ್ತೆ ತೆರೆಯಬೇಕು. ಅಭಿವೃದ್ಧಿ ವಿಚಾರದಲ್ಲಿ ನಡೆಸುವ ದ್ವೇಷದ ರಾಜಕಾರಣಕ್ಕೆ ತೆರೆ ಬೀಳಬೇಕೆಂದು ಒತ್ತಾಯಿಸುತ್ತೇನೆ' ಎಂದು ಬರೆದಿದ್ದಾರೆ.
