ಉಡುಪಿ(ನ.11): ಉತ್ಥಾನ ದ್ವಾದಶಿಯಂದು ಶನಿವಾರ ಕೃಷ್ಣ ಮಠದ ರಥಬೀದಿಯಲ್ಲಿ ವೈಭವದ ರಥೋತ್ಸವ ನಡೆಯಿತು. ಮಳೆಗಾಲದ 4 ತಿಂಗಳು ಕೃಷ್ಣನಿಗೆ ಯಾವುದೇ ಉತ್ಸವಾದಿಗಳು ನಡೆಯುವುದಿಲ್ಲ. ಇದೇ ಸಂದರ್ಭದಲ್ಲಿ ಶ್ರೀಗಳ ಚಾತುರ್ಮಾಸ್ಯ ವ್ರತವೂ ನಡೆಯುತ್ತದೆ.

ಉತ್ಥಾನ ದ್ವಾದಶಿಯ ನಂತರ ದೇವರನ್ನು ಹೊರಗೆ ತಂದು ಮತ್ತೆ ನಿತ್ಯವೂ ಉತ್ಸವಗಳನ್ನು ನಡೆಸಲಾಗುತ್ತದೆ. ಅದಮಾರು ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಉತ್ಸವ ಮೂರ್ತಿಯನ್ನು ಹೊರಗೆ ತಂದಾಗ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶರು ಸಂಪ್ರದಾಯದಂತೆ ದೇವರಿಗೆ ಓಕುಳಿ ನೀರು ನಿವಾಳಿಸಿ ಹೊರಗೆ ಬರಮಾಡಿಕೊಂಡು ರಥಾರೋಹಣ ನಡೆಸಲಾಯಿತು. ಇದೇ ಸಂದರ್ಭದಲ್ಲಿ ರಥಬೀದಿಯಲ್ಲಿ ಲಕ್ಷದೀಪೋತ್ಸವ ಮತ್ತು ಮಧ್ವಸರೋವರದಲ್ಲಿ ತೆಪ್ಪೋತ್ಸವ ನಡೆಯಿತು.

ರಾಮ ಮಂದಿರ ಸಂಕಲ್ಪದ ಮಹಾಯಜ್ಞ: ವರ್ಷ ಕಳೆದು ಅದೇ ದಿನ ಪ್ರಕಟವಾಯ್ತು ತೀರ್ಪು

ಇದರಲ್ಲಿ ಸಾವಿರಾರು ಮಂದಿ ಭಕ್ತರು ಸಂಭ್ರಮ ಭಕ್ತಿಯಿಂದ ಭಾಗವಹಿಸಿದರು. ಉತ್ಸವದಲ್ಲಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥರು, ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥರು, ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥರು, ಪೇಜಾವರ ಕಿರಿಯ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥರು, ಪಲಿಮಾರು ಕಿರಿಯ ಮಠಾಧೀಶ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.

ಮಠಾಧೀಶರಿಂದ ಹರಿವಾಣ ನೃತ್ಯ ಸೇವೆ:

ಶ್ರೀ ಕೃಷ್ಣ ಮಠದಲ್ಲಿ ಚಾತುರ್ಮಾಸ್ಯ ಸಮಾಪ್ತಿಯ ದೇವಪ್ರಬೋಧಿನೀ ಏಕಾದಶಿಯಂದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಭೀಮನಕಟ್ಟೆ ಮಠಾಧೀಶರಾದ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಯತಿಗಳಾದ ಶ್ರೀ ವಿದ್ಯಾರಾಜೇಶ್ವರ ತೀರ್ಥರು ತುಳಸಿಭರಿತ ಹರಿವಾಣವನ್ನು ತಲೆಯ ಮೇಲಿಟ್ಟು ಡಂಗುರಾವ ಸಾರಿ ಹರಿಯ ದಾಸರಪದಕ್ಕೆ ನೃತ್ಯ ಮಾಡಿದ್ದಾರೆ.

ಪೇಜಾವರ ಶ್ರೀ ಅಭಿನಂದಿಸಿದ ಮುಸ್ಲಿಂ ಯುವಕರು

ಶ್ರೀ ಕೃಷ್ಣ ದೇವರಿಗೆ ರಾತ್ರಿ ಪೂಜೆ, ತುಳಸಿ ಪೂಜೆ, ಸಂಕೀರ್ತನೆ ಆದ ನಂತರ ಸೂರ್ಯವಾದ್ಯ, ನಾದಸ್ವರ, ಸಂಗೀತ, ಭಾಗವತ ಪುರಾಣಗಳು ಚಂದ್ರಶಾಲೆಯಲ್ಲಿ ನಡೆಯಿತು. ನಂತರ ದೇವರ ಎದುರಿನ ಮಂಟಪದಲ್ಲಿ ಸ್ವಾಮೀಜಿಯವರು ದೇವರಿಗೆ ಮಂಗಳಾರತಿ ಮಾಡಿ ತುಳಸಿ ಹರಿವಾಣವನ್ನು ತಲೆಯಲಿಟ್ಟು ನೃತ್ಯ ನಡೆಸಿ ಪ್ರದಕ್ಷಿಣೆ ಮಾಡಿದ್ದಾರೆ.