ಉಡುಪಿ(ನ.10): ಕುಂದಾಪುರ ವರ್ಷದ ಹಿಂದೆ ಇಲ್ಲಿನ ಬೀಜಾಡಿ-ಗೋಪಾಡಿಯ ಶ್ರೀ ರಾಮ ಭಜನಾ ಮಂದಿರದ ಅಮೃತ ಮಹೋತ್ಸವದ ಅಂಗವಾಗಿ ನಡೆದ ಶ್ರೀರಾಮ ತಾರಕಮಂತ್ರ ಕೋಟಿ ಲೇಖನ ಮಹಾಯಜ್ಞದಂದು ರಾಮಮಂದಿರ ನಿರ್ಮಾಣ ಸಂಕಲ್ಪ ಮಾಡಲಾಗಿದ್ದು, ಶನಿವಾರಕ್ಕೆ ಒಂದು ವರ್ಷ ಕಳೆದಿದೆ.

ಕಾಕತಾಳೀಯವೂ ಎಂಬಂತೆ ಇದೇ ದಿನ ಅಯೋಧ್ಯೆ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥಗೊಂಡಿದೆ. 2018ರ ನ. 9ರಂದು ಕುಂದಾಪುರ ತಾಲೂಕಿನ ಸದ್ಯ ಗೋಪಾಡಿ- ಬೀಜಾಡಿ ಭಜನಾ ಮಂದಿರದಲ್ಲಿ ನಡೆದ ಶ್ರೀರಾಮ ತಾರಕಮಂತ್ರ ಕೋಟಿ ಲೇಖನ ಮಹಾಯಜ್ಞದ ವೇಳೆ ಧಾರ್ಮಿಕ ವಿಧಾನ ನಡೆಸಿದ ವಿದ್ವಾಂಸರು ಹೇಳಿದ ಮಾತಿನ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೀಗ ಯಜ್ಞ ಫಲ ದೊರಕಿದೆ ಎಂದು ನೆಟ್ಟಿಗರು ಸಂಭ್ರಮದಿಂದ ಶೇರ್ ಮಾಡುತ್ತಿದ್ದಾರೆ.

ಅಯೋಧ್ಯಾ ತೀರ್ಪು ಸ್ವಾಗತ:

ಬಹಳಷ್ಟು ಕಾಲದಿಂದ ನೆನೆಗುದಿಗೆ ಬಿದ್ದಿರುವ ಅಯೋಧ್ಯಾ ವಿವಾದಕ್ಕೆ ಸರ್ವೋಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪನ್ನು ನೀಡಿ ವಿವಾದಕ್ಕೆ ತೆರೆ ಎಳೆದಿರುವುದು ಸ್ವಾಗತಾರ್ಹ. ಈ ತೀರ್ಪಿನಿಂದ ಯಾವುದೇ ಸಮುದಾಯಕ್ಕೆ ಸೋಲು ಗೆಲುವಿನ ಪ್ರಶ್ನೆ ಉದ್ಭವವಾಗುವುದಿಲ್ಲ. ದೇಶದಲ್ಲಿ ಸಮಾಜದಲ್ಲಿ ಸೌಹಾರ್ದಯುತವಾದ ವಾತಾವರಣ ನಿರ್ಮಾಣವಾಗಲು ದಾರಿ ದೀಪವಾಗಿದೆ.

ಕಳೆದ ವರ್ಷ ನ. 9ರಂದು ಬೀಜಾಡಿ ಗೋಪಾಡಿಯಲ್ಲಿ ನಡೆದ ಶ್ರೀರಾಮ ಭಜನಾ ಮಂಡಳಿಯ ಅಮೃತ ಮಹೋತ್ಸವ ಸಂದರ್ಭ ಜರುಗಿದ ಶ್ರೀರಾಮ ತಾರಕ ಮಂತ್ರ ಕೋಟಿ ಲೇಖನ ಯಜ್ಞದಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣದ ಬಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿರುವುದು ಉಲ್ಲೇಖನೀಯ ಹಾಗೂ ಸ್ಮರಣೀಯ ಎಂದು ಅಮೃತ ಮಹೋತ್ಸವ ಸಮಿತಿ ಪ್ರಮುಖರಾದ ಗಣೇಶ್ ಪುತ್ರನ್ ತಿಳಿಸಿದ್ದಾರೆ.