ಉಡುಪಿ(ಅ.25): ಜಿಲ್ಲೆಯಲ್ಲಿ ಗುರುವಾರ ದಿನವಿಡೀ ಮಳೆಯಾಗಿದೆ. ಇದರಿಂದ ಜನಜೀವನದ ಮೇಲೆ ಭಾರಿ ಪರಿಣಾಮವಾಗಿದೆ. ಸಮುದ್ರದಲ್ಲಿ ಗಾಳಿಯೊಂದಿಗೆ ಅಲೆಗಳ ಅಬ್ಬರ ಹೆಚ್ಚಾಗಿದೆ. ನಗರ ಪ್ರದೇಶದಲ್ಲಿ ರಸ್ತೆಗಳೆಲ್ಲ ಹೊಂಡಮಯವಾಗಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಬತ್ತ ಕಟಾವಿಗೆ ಸಿದ್ಧರಾಗಿದ್ದ ಕೃಷಿಕರಂತೂ ಕಂಗಾಲಾಗಿದ್ದಾರೆ.

ಬುಧವಾರ ರಾತ್ರಿಯಿಂದಲೇ ಶುರವಾಗಿದ್ದ ಜಿಟಿಜಿಟಿ ಮಳೆ ಗುರುವಾರ ದಿನವಿಡಿ ಅದೇ ಲಯದಲ್ಲಿ ಸುರಿದಿದೆ. ಗಾಳಿ ಇಲ್ಲದಿದ್ದರೂ ವಾತಾವರಣ ತಂಪಾಗಿದ್ದು, ಚಳಿಯ ಅನುಭವವಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಸಮುದ್ರ ತೀವ್ರ ಪ್ರಕ್ಷುಬ್ಧವಾಗಿದೆ ಎಂದು ಮೀನುಗಾರಿಕೆಗೆ ತೆರಳಿ ಹಿಂದಕ್ಕೆ ಬಂದಿರುವ ಮೀನುಗಾರರು ತಿಳಿಸಿದ್ದಾರೆ. ಸಮುದ್ರದಲ್ಲಿ ಭಾರೀ ಗಾಳಿ ಮಳೆಯಾಗುತ್ತಿದೆ. ಎತ್ತರ ಅಲೆಗಳಿಂದ ಮೀನುಗಾರಿಕೆ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ ಮೀನುಗಾರರು.

ತುಳುವಿನಲ್ಲಿ ಸಿನಿಮಾ ನಿರ್ಮಿಸ್ತಾರಾ ಅರ್ಜುನ್ ಸರ್ಜಾ..?

ಮಲ್ಪೆ ಬಂದರಿನಿಂದ ವಾರದ ಹಿಂದೆ ತೆರಳಿದ್ದ ನೂರಾರು ಮೀನುಗಾರಿಕಾ ಬೋಟುಗಳು ಅರ್ಧಕ್ಕೆ ವಾಪಸ್‌ ಬಂದಿವೆ. ಇದರಿಂದ ಬಂದರಿನಲ್ಲಿ ಲಂಗರು ಹಾಕುವುದಕ್ಕೂ ಸ್ಥಳಾವಕಾಶದ ಕೊರತೆಯಾಗಿದೆ.

ಮರವಂತೆ ಸಮುದ್ರ ತೀರದಲ್ಲಿ ನೀರು ಸಾಕಷ್ಟುಮೇಲಕ್ಕೆ ಬಂದಿದ್ದು, ಮತ್ತೆ ಕಡಲು ಕೊರೆತ ಸಂಭವಿಸುವ ಆತಂಕ ಎದುರಾಗಿದೆ. ಶಿರೂರು ಸಮೀಪದ ದೊಂಬೆ ಎಂಬಲ್ಲಿ ಮೀನುಗಾರಿಕೆ ತೆರಳಿದ್ದ ನಾಡದೋಣಿಯೊಂದು ಅಲೆಗಳ ಹೊಡೆತಕ್ಕೆ ಮಗುಚಿ ಬಿದ್ದು ಸುಮಾರು 15 ಸಾವಿರ ರುಪಾಯಿಗೂ ಅಧಿಕ ಬೆಲೆಯ ಬಲೆ ಸಮುದ್ರ ಪಾಲಾಗಿದೆ. ದೋಣಿಗೆ ಹಾನಿಯಾಗಿದೆ.

‘ಈ ದೇವಿಯ ಕೃಪೆಯಿಂದಲೇ ಡಿಕೆಶಿ ಬಿಡುಗಡೆ’

ಜಿಲ್ಲೆಯಲ್ಲಿ ಮುಖ್ಯವಾಗಿ ಬೈಂದೂರು, ಕುಂದಾಪುರ ಮತ್ತು ಬ್ರಹ್ಮಾವರ ಭಾಗದಲ್ಲಿ ಬತ್ತದ ಫಸಲು ಮಾಗಿದ್ದು, ಕಟಾವು ಮಾಡಿದ ರೈತರು ಬತ್ತದ ಪೈರನ್ನು ಅಂಗಳಕ್ಕೆ ತರುವುದಕ್ಕೆ ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಕಟಾವು ಮಾಡದ ರೈತರು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ.

ಉಡುಪಿಯಿಂದ ಆತ್ರಾಡಿವರೆಗೆ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಕಾಮಗಾರಿ ಪೂರ್ಣವಾಗದೆ, ಮಳೆಯಿಂದ ವಾಹನ ಸಂಚಾರ ನರಕಸದೃಶವಾಗಿದೆ. ಇತರ ರಸ್ತೆಗಳೂ ಅಕಾಲ ಮಳೆಯಿಂದ ಸಂಪೂರ್ಣ ಹೊಂಡಮಯವಾಗಿವೆ.

ವಾಡಿಕೆಗಿಂತ ಹೆಚ್ಚು ಮಳೆ:

ಗುರುವಾರ ಮುಂಜಾನೆವರೆಗೆ ಜಿಲ್ಲೆಯಲ್ಲಿ ವಾಡಿಕೆಯ 4.20 ಮಿ.ಮೀ.ಗಿಂತಲೂ ಬಹಳ ಹೆಚ್ಚು 81.20 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 97.10 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 86.40 ಮಿ.ಮೀ. ಮತ್ತು ಕಾರ್ಕಳ ತಾಲೂಕಿನಲ್ಲಿ 59.70 ಮಿ..ಮೀ. ಮಳೆಯಾಗಿದೆ.