Asianet Suvarna News Asianet Suvarna News

Udupi ಕೆಳ ಪರ್ಕಳದಲ್ಲಿ ಸುರಂಗ ಪತ್ತೆ! ಏನಿದರ ರಹಸ್ಯ?

ಉಡುಪಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ  ಐತಿಹಾಸಿಕ ಮಹತ್ವದ ಹಲವು ಸಾಕ್ಷಿಗಳಿಗೆ ಕಾರಣವಾಗಿರುವ ಸುರಂಗವೊಂದು ಪತ್ತೆಯಾಗಿದೆ. 

A Secret Tunnel found in Udupi near Manipal gow
Author
Bengaluru, First Published Apr 27, 2022, 2:41 PM IST

ವರದಿ: ಶಶಿಧರ ಮಾಸ್ತಿಬೈಲು ಏಷಿಯಾನೆಟ್ ಸುವರ್ಣ ನ್ಯೂಸ್

ಉಡುಪಿ(ಎ.27): ಐತಿಹಾಸಿಕ ಮಹತ್ವದ ಹಲವು ಸಾಕ್ಷಿಗಳಿಗೆ ಕಾರಣವಾಗಿರುವ ಉಡುಪಿ (Udupi) ಜಿಲ್ಲೆಯ ಪರ್ಕಳದಲ್ಲಿ ಸುರಂಗವೊಂದು ( Tunnel ) ಪತ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ಈ ಪರಿಸರದಲ್ಲಿ ಇದ್ದಕ್ಕಿದ್ದಂತೆ ಸುಮಾರು ಐದು ಅಡಿ ಉದ್ದದ ಸುರಂಗ ಕಂಡುಬಂದಿದೆ.

ಮಣಿಪಾಲ ಸಮೀಪದ ಕೆಳ ಪರ್ಕಳದಲ್ಲಿ ಈಗಾಗಲೇ ಹಲವು ಐತಿಹಾಸಿಕ ರಚನೆಗಳು ಪತ್ತೆಯಾಗಿವೆ. ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನ ಪರಿಸರದಲ್ಲಿ ಈಗಾಗಲೇ ಕೆಲವೇ ಎಕರೆ ಪ್ರದೇಶದಲ್ಲಿ ನೂರಾರು ಬಾವಿಗಳು ಕಂಡುಬಂದಿತ್ತು. ಪಾಳುಬಿದ್ದ ಗುಡ್ಡೆ ಪರಿಸರದ ಗಿಡಗಂಟಿಗಳ ನಡುವೆ ಒಂದು ಸುತ್ತು ಬಂದಾಗ ಅಕ್ಕಪಕ್ಕದಲ್ಲೇ ಸುಮಾರು 36 ಬಾವಿಗಳು ಪತ್ತೆಯಾಗಿದ್ದವು. ಇದೇ ಪರಿಸರದಲ್ಲಿ ನೂರಕ್ಕೂ ಅಧಿಕ ಬಾವಿಗಳಿವೆ ಎಂದು ಸ್ಥಳೀಯರು ಹೇಳುತ್ತಾ ಬಂದಿದ್ದರು. ಇದೀಗ ಮತ್ತೆ ಪರ್ಕಳ ಮತ್ತೊಂದು ಐತಿಹಾಸಿಕ ಸಾಕ್ಷಿಯನ್ನು ಬಿಚ್ಚಿಟ್ಟಿದೆ.

ಸದ್ಯ ಪರ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ನಡೆಸುವ ವೇಳೆ ಇಲ್ಲಿನ ಕೃಷಿ ಗದ್ದೆ ಪರಿಸರದಲ್ಲಿ ದೊಡ್ಡಗಾತ್ರದ ಸುರಂಗ ಪತ್ತೆಯಾಗಿದೆ.‌ ಸುಮಾರು ಐದು ಅಡಿಗಳಷ್ಟು ಉದ್ದವಿರುವ ಸುರಂಗದೊಳಗೆ ವ್ಯಕ್ತಿಯೊಬ್ಬ ಆರಾಮವಾಗಿ ಓಡಾಡಬಹುದು. ಈ ಸುರಂಗದ ಒಂದು ಭಾಗ ಮುಚ್ಚಿದ್ದು ಕಾಮಗಾರಿಯಿಂದಾಗಿ ಮತ್ತೊಂದು ಭಾಗ ತೆರೆದುಕೊಂಡಿದೆ.

International Yoga Day ಹಂಪಿ ಸ್ಮಾರಕಗಳ ಮುಂದೆ ನಡೆಸಲು ಚಿಂತನೆ

ಕೃಷಿ ಕಾರ್ಯ ನಡೆಯುತ್ತಿದ್ದ ಈ ಗದ್ದೆ ಪರಿಸರವನ್ನು ತುಳುವಿನಲ್ಲಿ ಪೆರ್ಮರಿ ಖಂಡ ಎಂದು ಕರೆಯುತ್ತಾರೆ. ಅಂದರೆ ಹೆಬ್ಬಾವಿನ ಗದ್ದೆ ಎಂದರ್ಥ!
ಈ ಪರಿಸರದಲ್ಲಿ ಹೆಬ್ಬಾವಿನ ಸಂಚಾರ ಅತಿ ಹೆಚ್ಚು ಎಂದು ಹೇಳಲಾಗುತ್ತದೆ. ವ್ಯಕ್ತಿಯೊಬ್ಬರು ಇದೇ ಪರಿಸರದಲ್ಲಿ ಏಕಕಾಲದಲ್ಲಿ ಸುಮಾರು ಏಳು ಹೆಬ್ಬಾವುಗಳನ್ನು ಕೂಡ ಈ ಹಿಂದೆ ಕಂಡಿದ್ದರಂತೆ. ಸದ್ಯ ಇದೇ ಗದ್ದೆಯಲ್ಲಿ ಈ ಸುರಂಗ ಕೂಡ ಪತ್ತೆಯಾಗಿದೆ.

ಕರಾವಳಿ ಭಾಗದಲ್ಲಿ ಈ ತೆರನಾದ ಸುರಂಗಗಳು ಆಗ್ಗಾಗ್ಗೆ ಕಾಣಿಸಿಕೊಳ್ಳುವುದುಂಟು. ಹೆಚ್ಚಾಗಿ ಗುಹಾ ಸಮಾಧಿ ಎಂದು ಇಂತಹ ಸುರಂಗಗಳನ್ನು ಕರೆಯಲಾಗುತ್ತದೆ. ಆದರೆ ಈ ಸುರಂಗದಲ್ಲಿ ಗುಹಾ ಸಮಾಧಿಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಇತಿಹಾಸಜ್ಞ ಮುರುಗೇಶಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸುರಂಗದ ರಚನೆಯನ್ನು ಅಧ್ಯಯನ ಮಾಡಿದ್ದಾರೆ. ಸದ್ಯ ಅವರಿಗೂ ಕೂಡ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.

KPSC RECRUITMENT SCAM ಎಸಿ, ತಹಶೀಲ್ದಾರ್, ಡಿವೈಎಸ್ಪಿ ಹುದ್ದೆ ಕೋಟಿ ಕೋಟಿಗೆ ಸೇಲ್!

ಈ ಸುರಂಗದ ರಚನೆ ಗಟ್ಟಿಮುಟ್ಟಾಗಿದೆ. ಇದರ ಮೇಲ್ಭಾಗದಲ್ಲಿ ಇಬ್ಬರು ವ್ಯಕ್ತಿಗಳು ನಿಂತರೂ ಕುಸಿದಿಲ್ಲ. ದಿನಗಳೆದಂತೆ ಈ ಸುರಂಗದ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಿದೆ. ಯಾವ ಉದ್ದೇಶಕ್ಕೆ ಈ ಸುರಂಗ ರಚನೆಯಾಗಿರಬಹುದು ಎಂದು ಜನರು ಚರ್ಚಿಸುತ್ತಿದ್ದಾರೆ. ಪರ್ಕಳ ಎನ್ನುವ ಹೆಸರು ಪೋರ್ಕಳ ಎಂಬ ಶಬ್ದದಿಂದ ಬಂದಿದೆಯಂತೆ. ಪೋರ್ಕಳ ಎಂದರೆ ಯುದ್ಧಭೂಮಿ ಎಂದರ್ಥ. ಈ ಪರಿಸರಕ್ಕೆ ಐತಿಹಾಸಿಕ ಮಹತ್ವ ಇದ್ದು, ಈ ಸುರಂಗ ಕೂಡ ಯಾವುದೋ ಇತಿಹಾಸದ ಕಥೆ ಹೇಳುತ್ತಿರಬಹುದು. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ.

Follow Us:
Download App:
  • android
  • ios