ಜೀ ಕನ್ನಡ ವಾಹಿನಿಯ ಹೊಸ ಧಾರಾವಾಹಿ ‘ಸತ್ಯ’ ಡಿ.7 ರಿಂದ ರಾತ್ರಿ 9 ಗಂಟೆಗೆ ಸೋಮವಾರದಿಂದ ಶುಕ್ರವಾರ ತನಕ ಪ್ರಸಾರವಾಗಲಿದೆ. 

ಸವಾಲುಗಳನ್ನು ಎದುರಿಸಿ ನಿಲ್ಲುವ ಹುಡುಗಿಯ ಕತೆ ಇದಾಗಿದೆ. ಸತ್ಯ ಯಾವುದಕ್ಕೂ ಕೇರ್‌ ಮಾಡದ ಯುವತಿ. ಯಾವುದೇ ಪರಿಸ್ಥಿತಿಯಲ್ಲೂ ತಲೆ ಬಾಗದ ದಿಟ್ಟೆ. ಪ್ರತಿ ತಾಯಿಯೂ ತನ್ನ ಮಗಳು ಹೀಗಿರಬೇಕೆಂದು ಬಯಸುವ ವಿಶಿಷ್ಟಪಾತ್ರ ಸತ್ಯಳದ್ದು.

ಟಾಮ್‌ ಬಾಯ್‌ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿರುವ ಯುವತಿ ಹಲವರಿಗೆ ಸ್ಫೂರ್ತಿಯೂ ಹೌದು. ತನ್ನ ತಂದೆ ನಿಧನರಾದ ಮೇಲೆ ಯಾವುದೇ ಭಯವಿಲ್ಲದೆ ಕುಟುಂಬವನ್ನು ನಿಭಾಯಿಸುವ ಸತ್ಯ, ವಿಶೇಷವಾಗಿ ಪ್ರೇಕ್ಷಕರನ್ನು ಆಕರ್ಷಿಸುತ್ತಾಳೆ. ಸನ್ನಿವೇಶಗಳು ಅವಳನ್ನು ಶ್ರೀಮಂತ ಯುವಕ ಕಾರ್ತಿಕ್‌ ಪ್ರಭುವಿಗೆ ಪರಿಚಯಿಸುತ್ತದೆ. ಇಬ್ಬರಲ್ಲೂ ಸ್ನೇಹ, ಬಾಂಧವ್ಯ ಬೆಳೆಯುತ್ತದೆ. ಆದರೆ ಕಾರ್ತಿಕ್‌, ಸತ್ಯಾಳ ಅಕ್ಕನನ್ನು ಮದುವೆಯಾಗಲು ಬಯಸುತ್ತಾನೆ. ಈಕೆ ಶ್ರೀಮಂತ ಎಂದು ತಾನು ಪ್ರೀತಿಸಿದ ಹುಡುಗನನ್ನು ತಿರಸ್ಕರಿಸುತ್ತಾಳೆ. ಸತ್ಯಾ ಈ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತಾಳೆ ಮತ್ತು ಆಕೆ ಹಾಗೂ ಕಾರ್ತಿಕ್‌ ನಡುವೆ ಹೇಗೆ ಸಂಬಂಧ ಬೆಳೆಯುತ್ತದೆ ಎನ್ನುವುದು ತೆರೆ ಮೇಲೆ ನೋಡಬಹುದು. ಆರ್‌ಆರ್‌ಆರ್‌ ಕ್ರಿಯೇಷನ್‌ನಲ್ಲಿ ಕೃಷ್ಣ ನಿರ್ಮಿಸುತ್ತಿರುವ ಈ ಧಾರಾವಾಹಿಯನ್ನು ಸ್ವಪ್ನಾ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ.

'ಸತ್ಯಾ' ಧಾರಾವಾಹಿಯಲ್ಲಿರುವ ಆ ನಟಿ ಯಾರು ಗೊತ್ತಾ? ಇವರೇ ಅವರು! 

ಸತ್ಯ ಪಾತ್ರಧಾರಿ ಹೆಸರು ಗೌತಮಿ ಜಾಧವ್‌, ಕಾರ್ತಿಕ್‌ ಪ್ರಭು ಪಾತ್ರಧಾರಿಯಾಗಿ ಸಾಗರ್‌ ನಟಿಸಿದ್ದಾರೆ. ನಾಯಕನ ತಂದೆಯ ಪಾತ್ರದಲ್ಲಿ ಹಿರಿಯ ನಟ ಶ್ರೀನಿವಾಸಮೂರ್ತಿ, ನಾಯಕನ ಚಿಕ್ಕಪ್ಪನಾಗಿ ಅಭಿಜಿತ್‌, ನಾಯಕನ ತಾಯಿಯಾಗಿ ತ್ರಿವೇಣಿ ನಟಿಸಿದ್ದಾರೆ.