ಯೂಟ್ಯೂಬರ್ ನಿಖಿಲ್ ಗೌಡ ವಿರುದ್ಧ ಮೈಸೂರಿನಲ್ಲಿ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಅವರ ಪತ್ನಿ ಮಧು ಗೌಡ ಕಬಿನಿ ಹಿನ್ನೀರಿನಲ್ಲಿ ಕಾರು ಚಲಾಯಿಸಿದ್ದ ಹಳೆಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಕಾರನ್ನು ಜಪ್ತಿ ಮಾಡಿ ತನಿಖೆ ಮುಂದುವರಿಸಿದ್ದಾರೆ.
ಮೈಸೂರು (ನ.01): ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಪ್ರಸಿದ್ಧ ಯೂಟ್ಯೂಬರ್ ದಂಪತಿಗಳಾದ ನಿಖಿಲ್ ಗೌಡ ಹಾಗೂ ಮಧು ಗೌಡ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮೈಸೂರಿನಲ್ಲಿ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ/ಯೂಟ್ಯೂಬರ್ ನಿಖಿಲ್ ಗೌಡ ವಿರುದ್ಧ ಹಿಟ್ ಅಂಡ್ ರನ್ (Hit and Run) ಕೇಸ್ ದಾಖಲಾಗುತ್ತಿದ್ದಂತೆ, ಅವರ ಪತ್ನಿ ಮಧು ಗೌಡ ಕಬಿನಿ ಹಿನ್ನೀರಿನ ಸೂಕ್ಷ್ಮ ವಲಯದಲ್ಲಿ ಕಾನೂನು ಬಾಹಿರವಾಗಿ ಕಾರು ಚಲಾಯಿಸಿದ್ದ ಹಳೆಯ ಪ್ರಕರಣ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿಖಿಲ್ ಗೌಡ ವಿರುದ್ಧ FIR ಹಾಗೂ ಕಾರು ಜಪ್ತಿ
ಮೈಸೂರಿನ ವಿ.ವಿ. ಪುರಂ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಸವಾರ ಅಭಿಷೇಕ್ ಎಂಬುವರಿಗೆ ಕಾರಿನಿಂದ ಡಿಕ್ಕಿ ಹೊಡೆದು, ಗಾಯಾಳುವಿನ ಯೋಗಕ್ಷೇಮ ವಿಚಾರಿಸದೆ ಕಾರನ್ನು ನಿಲ್ಲಿಸದೇ ಪರಾರಿಯಾದ ಆರೋಪ ನಿಖಿಲ್ ರವೀಂದ್ರ (ನಿಖಿಲ್ ಗೌಡ) ಅವರ ಮೇಲಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರನ ಕೈ ಮತ್ತು ಕಾಲುಗಳ ಮೂಳೆ ಮುರಿತಕ್ಕೊಳಗಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು, ಅಪಘಾತ ಎಸಗಿದ ಕಾರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಪತ್ನಿ ಮಧು ಗೌಡ ಕಬಿನಿ ವಿಡಿಯೋ ಮುನ್ನೆಲೆಗೆ!
ಗಂಡನ ವಿರುದ್ಧ ಹಿಟ್ ಅಂಡ್ ರನ್ ಕೇಸ್ ದಾಖಲಾಗುತ್ತಿದ್ದಂತೆಯೇ, ನೆಟ್ಟಿಗರು ಪತ್ನಿ ಮಧು ಗೌಡ ತಮ್ಮ ಸ್ನೇಹಿತರೊಂದಿಗೆ ಕಬಿನಿ ಹಿನ್ನೀರಿನಲ್ಲಿ ಥಾರ್ (Thar) ಕಾರು ಚಲಾಯಿಸಿ ಮೋಜು-ಮಸ್ತಿ ಮಾಡಿದ್ದ ಹಳೆಯ ವೀಡಿಯೋವನ್ನು 'X' (ಟ್ವಿಟರ್) ನಲ್ಲಿ ಹಂಚಿಕೊಂಡು ಮೈಸೂರು ಜಿಲ್ಲಾ ಪೊಲೀಸರಿಗೆ (@SPmysuru) ಟ್ಯಾಗ್ ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 'ಕಬಿನಿ ಹಿನ್ನೀರು ನಿಮ್ಮ ಖಾಸಗಿ ಆಟದ ಮೈದಾನವಲ್ಲ! ಜಲಮೂಲ ಹಾಗೂ ಪ್ರಕೃತಿ ಸೂಕ್ಷ್ಮ ವಲಯಕ್ಕೆ ಕಾರುಗಳನ್ನು ತೆಗೆದುಕೊಂಡು ಹೋಗುವುದು ಬೇಜವಾಬ್ದಾರಿತನದ ಪರಮಾವಧಿ" ಎಂದು ನೆಟ್ಟಿಗರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಮೈಸೂರು ಜಿಲ್ಲಾ ಪೊಲೀಸರ ಸ್ಪಷ್ಟನೆ:
ವೈರಲ್ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾ ಪೊಲೀಸರು (Mysuru District Police), ಈ ಘಟನೆಯ ಕುರಿತು ಸಂಪೂರ್ಣ ಮಾಹಿತಿ ನೀಡಿ ಸ್ಪಷ್ಟನೆ ನೀಡಿದ್ದಾರೆ. 'ಈ ವೀಡಿಯೋ ಘಟನೆಯು 2025ರಲ್ಲಿ ಅಂತರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದಾಗಿದ್ದು, ಕಬಿನಿ ಹಿನ್ನೀರಿನ ಸೂಕ್ಷ್ಮ ವಲಯದಲ್ಲಿ ಅಪಾಯಕಾರಿಯಾಗಿ ವಾಹನ ಚಲಾಯಿಸಿದ ಸಂಬಂಧ ಆಗಲೇ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ.
ನೆಟ್ಟಿಗರ ಆಕ್ರೋಶ ಹಾಗೂ ಕಠಿಣ ಶಿಕ್ಷೆಗೆ ಆಗ್ರಹ:
ಪೋಲಿಸರ ಸ್ಪಷ್ಟನೆಯ ಹೊರತಾಗಿಯೂ ನೆಟ್ಟಿಗರ ಆಕ್ರೋಶ ತಣ್ಣಗಾಗಿಲ್ಲ. ಕಾಮೆಂಟ್ ಮಾಡಿರುವ ನೆಟ್ಟಿಗರೊಬ್ಬರು, 'ಎಷ್ಟೇ ಖರ್ಚು ಆದರೂ ಪರವಾಗಿಲ್ಲ, ಪರಿಸರಕ್ಕೆ ಧಕ್ಕೆ ತರುವ ಇಂತಹ ಚಪ್ರಿಗಳಿಗೆ ತಕ್ಕ ಶಾಸ್ತಿ ಮಾಡಿ ಒಳಗೆ ಹಾಕಿ. ಇಲ್ಲವಾದರೆ ಎಲ್ಲರೂ ಕಬಿನಿ ಹಿನ್ನೀರಿಗೆ ಹೀಗೆಯೇ ಕಾರುಗಳನ್ನು ಹೊಡೆದುಕೊಂಡು ಲಗ್ಗೆ ಇಡುತ್ತಾರೆ. ಇನ್ಯಾವತ್ತೂ ರೀಲ್ಸ್ ಮಾಡಬಾರದು ಎನ್ನುವಂತೆ ಬುದ್ಧಿ ಕಲಿಸಿ,' ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ, ಮೈಸೂರಿನಲ್ಲಿ ಸರಣಿ ನಿಯಮ ಉಲ್ಲಂಘನೆ ಹಾಗೂ ಅಪಘಾತದ ಆರೋಪಗಳಿಗೆ ಸಿಲುಕಿರುವ ಯೂಟ್ಯೂಬರ್ ದಂಪತಿಗಳ ನಡೆಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಸೂಕ್ತ ತನಿಖೆಯ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂಬ ಕೂಗು ಬಲವಾಗಿದೆ.





