ನಾಯಕಿಯನ್ನು ಅಟ್ಟಿಸಿಕೊಂಡು ಬಂದ ಆನೆ: ಭಯಾನಕ ದೃಶ್ಯಗಳ ಶೂಟಿಂಗ್ ಮಾಡುವುದು ಹೀಗೆ ನೋಡಿ..!
ಕಾಡು ಪ್ರಾಣಿಗಳು ಅಟ್ಟಿಸಿಕೊಂಡು ಬರುವ ದೃಶ್ಯಗಳ ಶೂಟಿಂಗ್ ಹೇಗೆ ಮಾಡಲಾಗುತ್ತದೆ? ಇಲ್ಲೊಂದು ಅಂಥದ್ದೇ ಸೀರಿಯಲ್ ವಿಡಿಯೋ ವೈರಲ್ ಆಗಿದೆ ನೋಡಿ...

ಇಂದು ಸೀರಿಯಲ್ಗಳು ಎಂದರೆ ಅವು ಕೇವಲ ಸೀರಿಯಲ್ಗಳಾಗಿರಲ್ಲ. ಸೀರಿಯಲ್ಗಳು ನಿಜ ಜೀವನದ ಕಥೆಯಂತೆ ಇಂದು ಮನೆಮನಗಳನ್ನು ತುಂಬಿಕೊಂಡಿವೆ. ಸೀರಿಯಲ್ನಲ್ಲಿ ಇರುವ ಪಾತ್ರಧಾರಿಗಳೆಲ್ಲರೂ ತಮ್ಮ ಮನೆಯದ್ದೋ ಇಲ್ಲವೇ ನೆರೆಮನೆಯ ಸದಸ್ಯರಂತೆ ಕಾಣುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಸೀರಿಯಲ್ಗಳು ಕೂಡ ವೀಕ್ಷಕರನ್ನು ಸೆರೆ ಹಿಡಿಯಲು ದೊಡ್ಡ ತಂತ್ರವನ್ನೇ ರೂಪಿಸುತ್ತಾರೆ. ಇದೀಗ ಅಂಥದ್ದೇ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ಸೀರಿಯಲ್ ಇರಲಿ, ಸಿನಿಮಾ ಇರಲಿ ಕಾಡು ಪ್ರಾಣಿಗಳು ಅಟ್ಟಿಸಿಕೊಂಡು ಬರುವ ದೃಶ್ಯ ಇದ್ದಾಗ, ಅಬ್ಬಾ ಇದನ್ನೆಲ್ಲಾ ಹೇಗೆ ಮಾಡುತ್ತಾರೆ ಎಂದು ಅನ್ನಿಸುವುದು ಉಂಟು. ನಿಜವಾಗಿ ಪಳಗಿಸಿದ ಪ್ರಾಣಿಗಳನ್ನು ತಂದು ಶೂಟ್ ಮಾಡ್ತಾರಾ? ಅಥ್ವಾ ಇನ್ನೇನು ಮಾಡ್ತಾರೆ ಎಂದೆಲ್ಲಾ ಎನ್ನಿಸುವುದು ಉಂಟು. ಆದರೆ ಅಸಲಿಗೆ ಅಲ್ಲಿ ಪ್ರಾಣಿಗಳೇ ಇರುವುದಿಲ್ಲ ಎನ್ನುವುದು ನಿಮಗೆ ಗೊತ್ತಾ?
ಇದನ್ನು ಗ್ರೀನ್ ಬ್ಯಾಕ್ಗ್ರೌಂಡ್ ಟೆಕ್ನಾಲಾಜಿ ಎನ್ನುತ್ತಾರೆ. ಯಾವುದೇ ಶೂಟಿಂಗ್ ಮಾಡುವ ಸಮಯದಲ್ಲಿ ಹಿಂದೆ ಹಸಿರು ಅಥವಾ ನೀಲಿಯ ಬಣ್ಣದ ಬ್ಯಾಕ್ಗ್ರೌಂಡ್ ಪರದೆ ಹಾಕಿರಲಾಗುತ್ತದೆ. ಅದರ ಎದುರು ಶೂಟಿಂಗ್ ಮಾಡಲಾಗುತ್ತದೆ. ಬಳಿಕ ಆ ಪರದೆಯ ಜಾಗದಲ್ಲಿ ಬೇಕಾಗಿರುವ ದೃಶ್ಯಗಳನ್ನು ಸೇರಿಸಲಾಗುತ್ತದೆ. ಹೀಗೆ ಮಾಡುವ ಸಂದರ್ಭದಲ್ಲಿ ಅಂತಿಮವಾಗಿ ವೀಕ್ಷಕರಿಗೆ ಆ ಬ್ಯಾಕ್ಗ್ರೌಂಡ್ ಪರದೆಯ ಜಾಗದಲ್ಲಿ ಜೋಡಿಸಲಾಗಿರುವ ದೃಶ್ಯಗಳು ಕಾಣಿಸುತ್ತವೆ. ಇದನ್ನು ಶಬ್ದಗಳಲ್ಲಿ ವರ್ಣಿಸುವುದು ತುಸು ಕಷ್ಟವೇ. ಆದರೆ ಇಲ್ಲೊಂದು ವೈರಲ್ ವಿಡಿಯೋ ನೋಡಿದರೆ ಒಂಟಿ ಸಲಗವೊಂದು ನಾಯಕಿಯನ್ನು ಅಟ್ಟಿಸಿಕೊಂಡು ಬರುವ ದೃಶ್ಯವನ್ನು ಹೇಗೆ ಶೂಟಿಂಗ್ ಮಾಡಲಾಗಿದೆ ಎನ್ನುವುದನ್ನು ನೋಡಬಹುದು.
ಮೊದಲಿಗೆ ಆನೆಯ ಸೊಂಡಲಿನ ರೀತಿಯಲ್ಲಿ ಡಿಸೈನ್ ಮಾಡಿ ಅದನ್ನು ಕ್ಯಾಮೆರಾದ ಮುಂದುಗಡೆ ಸಿಕ್ಕಿಸಿಕೊಳ್ಳಲಾಗುತ್ತದೆ. ಅದೇ ಆನೆ ಎಂದುಕೊಂಡು ಎದುರಿಗೆ ಇದ್ದವರು ಗಾಬರಿಯಿಂದ ಓಡಬೇಕು. ಆ ಸಮಯದಲ್ಲಿ ಅಂತಿಮವಾಗಿ ವೀಕ್ಷಕರಿಗೆ ಆನೆಯೊಂದು ಅಟ್ಟಿಸಿಕೊಂಡು ಬರುತ್ತಿದೆ ಎನ್ನುವಾಗ ಆ ಸೊಂಡಿಲು ಮತ್ತು ಎದುರಿಗೆ ಓಡುತ್ತಿರುವವರು ಕಾಣಿಸುತ್ತಾರೆ. ಆ ಬಳಿಕ ಎಡಿಟಿಂಗ್ನಲ್ಲಿ ರಿಯಲ್ ಆನೆಯೊಂದು ಓಡಿ ಬರುವ ದೃಶ್ಯವನ್ನು ಗ್ರೀನ್ ಬ್ಯಾಕ್ಗ್ರೌಂಡ್ ಟೆಕ್ನಾಲಾಜಿ ಉಪಯೋಗಿಸಿ ಮಿಕ್ಸ್ ಮಾಡಲಾಗುತ್ತದೆ. ಅವೆರಡನ್ನೂ ಒಟ್ಟಿಗೇ ನೋಡಿದಾಗ ಈ ಕೃತಕ ಸೊಂಡಿಲು ಕೂಡ ಆನೆಯಂತೆಯೇ ಕಾಣಿಸುತ್ತದೆ. ಆನೆ ಮಾತ್ರವಲ್ಲದೇ ಈ ರೀತಿಯ ಎಲ್ಲಾ ದೃಶ್ಯಗಳಿಗೂ ಇಂಥದ್ದೇ ತಂತ್ರವನ್ನು ಉಪಯೋಗಿಸಲಾಗುತ್ತದೆ.
ಅಂದಹಾಗೆ ಈಗ ವೈರಲ್ ಆಗಿರುವ ವಿಡಿಯೋ ಚಿನ್ನಮರುಮಗಳ್ ಎನ್ನುವ ತಮಿಳು ಸೀರಿಯಲ್ನದ್ದು. ಚಿಕ್ಕಮಗಳು ಎನ್ನುವ ಅರ್ಥ ಇದರದ್ದು. ಇದರಲ್ಲಿ ನಾಯಕಿಯನ್ನು ಆನೆಯೊಂದು ಓಡಿಸಿಕೊಂಡು ಬರುವ ಸನ್ನಿವೇಶ ಬರುತ್ತದೆ. ಬಹುಶಃ ಇಲ್ಲಿ ನಾಯಕಿ ಗರ್ಭಿಣಿಯಾಗಿರುತ್ತಾಳೆ ಎನ್ನುವುದು ವಿಡಿಯೋದಲ್ಲಿ ನೋಡಬಹುದಾಗಿದೆ. ಆನೆಗೆ ಏನೂ ಮಾಡಬೇಡ ಎಂದು ನಾಯಕಿ ಬೇಡಿಕೊಳ್ಳುತ್ತಾಳೆ. ಆ ಸಮಯದಲ್ಲಿ ಶೂಟಿಂಗ್ನಲ್ಲಿ ಇರುವುದು ಕೃತಕ ಸೊಂಡಿಲು ಮತ್ತು ಎದುರಿಗೆ ನಾಯಕಿ. ಆ ಬಳಿಕ ರಿಯಲ್ ಆನೆಯನ್ನು ಮಿಕ್ಸ್ ಮಾಡಲಾಗುತ್ತದೆ. ಹೀಗೆ ಹಲವು ರೀತಿಯ ಮಿಕ್ಸಿಂಗ್ ಬಳಿಕ ವೀಕ್ಷಕರಿಗೆ ಎಲ್ಲವೂ ರಿಯಲ್ ಎನ್ನಿಸುತ್ತದೆ. ಅದರ ವಿಡಿಯೋ ಕೆಳಗಿದೆ ನೋಡಿ...