ಫಿಕ್ಸಿಂಗ್ ಎಂದ ಆರ್ಯವರ್ಧನ್‌ಗೆ ಉಗ್ರರೂಪ ತೋರಿದ್ದ ಸುದೀಪ್, ಮೋಸ ಮಾಡಿದ ವಿನಯ್ ವಿಚಾರದಲ್ಲಿ ಸುಮ್ಮನಾಗಿದ್ದೇಕೆ?
ಹಿಂದೊಮ್ಮೆ ಬಿಗ್ ಬಾಸ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಬಹುದು ಎಂದಷ್ಟೇ ಮಾತನಾಡಿದ್ದ ಆರ್ಯವರ್ಧನ್ ಗುರೂಜಿಗೆ ತರಾಟೆಗೆ ತೆಗೆದುಕೊಂಡಿದ್ದ ಕಿಚ್ಚ ಸುದೀಪ್ ಈ ಬಾರಿ ವಿನಯ್ ವಿಚಾರವಾಗಿ ಈ ರೀತಿಯ ಯಾಕೆ ನಡೆದುಕೊಂಡಿಲ್ಲ ಎನ್ನುವ ಪ್ರಶ್ನೆ ಎದ್ದಿದೆ.
ಬೆಂಗಳೂರು (ಡಿ.10): ಒಂದಷ್ಟು ಸಂಖ್ಯಾಶಾಸ್ತ್ರ ಹೇಳಿಕೊಂಡು ಜನಪ್ರಿಯತೆ ಗಳಿಸಿಕೊಂಡಿದ್ದ ಆರ್ಯವರ್ಧನ್ ಗುರೂಜಿ (Aryavardhan Guruji) ಅವರಿಗೆ ದೊಡ್ಡ ಮಟ್ಟದ ಬ್ರೇಕ್ ನೀಡಿದ್ದು ಬಿಗ್ ಬಾಸ್. ಅದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ, ಮಾತನಾಡುವ ಭರದಲ್ಲಿ ಏನೇನೋ ಮಾತನಾಡಿ ಸಿಕ್ಕಿ ಹಾಕಿಕೊಳ್ಳುತ್ತಿದ್ದ ಆರ್ಯವರ್ಧನ್ ಕಳೆದ ಸೀಸನ್‌ನಲ್ಲಿ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿಯೇ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದರು. ಆದರೆ, ಇದಕ್ಕೆ ವೇದಿಕೆಯಲ್ಲಿಯೇ ಸಿಟ್ಟಾಗಿದ್ದ ಕಿಚ್ಚ ಸುದೀಪ್ ಭರ್ಜರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು. ಆದರೆ, ಈ ಬಾರಿಯ ಸೀಸನ್‌ನಲ್ಲಿ ಕ್ಯಾಪ್ಟನ್‌ಶಿಪ್ ಟಾಸ್ಕ್‌ಅನ್ನೇ ಮೋಸ ಮಾಡಲಿ ಗೆಲ್ಲಲಾಗಿದೆ. ಮೋಸ ಮಾಡಿ ಗೆದ್ದ ವರ್ತೂರ್ ಸಂತೋಷ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಅವರಿಗೆ ಇದ್ದ ಇಮ್ಯೂನಿಟಿಯನ್ನೂ ಹಿಂಪಡೆಯಲಾಗಿದೆ. ಆದರೆ, ಈ ಮೋಸಕ್ಕೆ ಕಾರಣರಾದ ವಿನಯ್ ವಿಚಾರವಾಗಿ ಕಿಚ್ಚ ಸುದೀಪ್ ಮಾತನಾಡದೇ ಇರುವುದು ಬಿಗ್ ಬಾಸ್ ಅಭಿಮಾನಿಗಳನ್ನು ಕೆರಳಿಸಿದೆ. ಅಂದು ಫಿಕ್ಸಿಂಗ್ ಎಂದು ಬಾಯಿ ಮಾತಿನಲ್ಲಿ ಹೇಳಿದ ಆರ್ಯವರ್ಧನ್‌ರನ್ನು ತರಾಟೆಗೆ ತೆಗೆದುಕೊಂಡಿದ್ದ ಸುದೀಪ್, ಈ ಬಾರಿ ಕ್ಯಾಪ್ಟನ್‌ಶಿಪ್ ಟಾಸ್ಕ್‌ನಲ್ಲಿ ಫಿಕ್ಸಿಂಗ್ ಕಂಡು ಬಂದಿದ್ದರೂ ಇದಕ್ಕೆ ಕಾರಣರಾದ ವಿನಯ್‌ಗೆ ಏನನ್ನೂ ಹೇಳದೇ ಇರುವುದು ಸರಿಯಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಈ ಬಾರಿಯ ಕ್ಯಾಪ್ಟನ್‌ಶಿಪ್ ಟಾಸ್ಕ್‌ನಲ್ಲಿ ವರ್ತೂರ್ ಸಂತೋಷ್ ಗೆಲುವು ಸಾಧಿಸಿದ್ದರು. ಟೈಮ್ ಲೆಕ್ಕಾಚಾರ ಹಿಡಿದುಕೊಳ್ಳುವುದೇ ಮುಖ್ಯವಾಗಿದ್ದ ಗೇಮ್‌ನಲ್ಲಿ ವರ್ತೂರ್ ಹಾಗೂ ಮೈಕೆಲ್ ಅಜಯ್ ಪರವಾಗಿ ವಿನಯ್ ಗೌಡ ಲೆಕ್ಕಾ ಇರಿಸಿಕೊಂಡಿದ್ದರು. ಒಮ್ಮೆ ನಿಗದಿತ ಸಮಯ ಆಗುತ್ತಿದ್ದಂತೆ ಮೈಕೆಲ್ ಹಾಗೂ ವರ್ತೂರ್ ಸಂತೋಷ್ ಅವರಿಗೆ ವಿನಯ್ ಸಿಗ್ನಲ್ ನೀಡಿದ್ದರು. ಇದರ ಬೆನ್ನಲ್ಲಿಯೇ ಅವರಿಬ್ಬರೂ ಗಂಟೆ ಬಾರಿಸಿ ತಮ್ಮ ಟಾಸ್ಕ್ ಮುಗಿಸಿದ್ದರು. ಇದರಿಂದಾಗಿಯೇ ಇವರಿಬ್ಬರ ಸಮಯ ನಿಗದಿ ಮಾಡಿದ್ದ 13 ನಿಮಿಷದ ಸಮೀಪ ಬಂದಿತ್ತು. ವಿನಯ್ ಇಬ್ಬರಿಗೂ ಸಹಾಯ ಮಾಡುವ ನಿಟ್ಟಿನಲ್ಲಿ ಹೇಳಿದ ಮಾತುಗಳನ್ನೂ ಕೂಡ ಎಪಿಸೋಡ್‌ನಲ್ಲಿ ಪ್ರಸಾರವಾಗಿದೆ. ಕ್ಯಾಪ್ಟನ್‌ಶಿಪ್ ಟಾಸ್ಕ್‌ನಲ್ಲಿ ನೇರಾನೇರವಾಗಿ ಫಿಕ್ಸಿಂಗ್ ನಡೆದಿದ್ದು, ಗೊತ್ತಾಗಿದ್ದರೂ ಬಿಗ್ ಬಾಸ್ ಕೂಡ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕೊನೆಗೆ ಕಿಚ್ಚ ಸುದೀಪ್ ಶನಿವಾರ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದ ಪಂಚಾಯ್ತಿಯಲ್ಲಿ ಈ ವಿವರ ತಿಳಿಸಿದಾಗ ಬಿಗ್ ಬಾಸ್ ಅಭಿಮಾನಿಗಳಿಗೆ ಅಲ್ಲೊಂದು ಫಿಕ್ಸಿಂಗ್ ನಡೆದಿತ್ತು ಅನ್ನೋದು ಗೊತ್ತಾಗಿದೆ.
ಫಿಕ್ಸಿಂಗ್ ಮಾಡಿ ಗೆದ್ದ ವರ್ತೂರ್ ಸಂತೋಷ್ ಅವರಿಗೆ ಶಿಕ್ಷೆಯಾಗಿದೆ. ಆದರೆ, ಫಿಕ್ಸಿಂಗ್ ಮಾಡಲು ಮೂಲ ಕಾರಣರಾದ ವಿನಯ್ ಗೌಡ ಕುರಿತಾಗಿ ಒಂದು ಮಾತನ್ನೂ, ಕನಿಷ್ಠ ಮುಂದೆ ಹೀಗೆ ಮಾಡಬೇಡಿ ಎನ್ನುವ ಎಚ್ಚರಿಕೆಯನ್ನೂ ಅವರಿಗೆ ನೀಡಿಲ್ಲ ಎನ್ನುವ ಬೇಸರ ವ್ಯಕ್ತವಾಗಿದೆ.
ಕಳೆದ ಸೀಸನ್‌ನಲ್ಲಿ ಆರ್ಯವರ್ಧನ್ ಗುರೂಜಿ ಕೂಡ ಬಿಗ್‌ಬಾಸ್ ಕುರಿತಾಗಿ ಫಿಕ್ಸಿಂಗ್ ಆರೋಪ ಮಾಡಿದ್ದರು. 'ಅನುಪಮಾ ಗೌಡ ಒಳಗೆ ಬರಲಿ ಅಂತಾ ಬಿಗ್‌ಬಾಸ್‌ಗೇ ಆಸೆ ಎನ್ನುವಂತಿತ್ತು. ಇದು ಮ್ಯಾಚ್ ಫಿಕ್ಸಿಂಗ್ ಇದ್ದಂಗೆ ಇರುತ್ತದೆ' ಎಂದು ಹೇಳಿದ್ದ ಮಾತಿಗೆ ಸುದೀಪ್ ಕೆಂಡಾಮಂಡಲರಾಗಿದ್ದರು. 'ಮಾತಿನ ಮೇಲೆ ನಿಗಾ ಇರಲಿ. ಏನದು ಮ್ಯಾಚ್ ಫಿಕ್ಸಿಂಗ್. ಅಲ್ಲಿ ಕುಳಿತುಕೊಂಡು ಆಡುತ್ತಿರುವವರೆಲ್ಲ ಏನು ಹಾಗಾದ್ರೆ? ಯಾರಿಗೂ ಯೋಗ್ಯತೆ ಇಲ್ಲವಾ? ಎಲ್ಲರೂ ಮೋಸ ಮಾಡಿ ಗೆಲ್ಲುತ್ತಿದ್ದಾರಾ? ಈ ವೇದಿಕೆಗೆ ಏನಾದ್ರೂ ಮರ್ಯಾದೆ ತೆಗೆದರೆ.. ಸತ್ಯವಾಗಿ ಹೇಳುತ್ತೇನೆ, ನಮಗೂ ನಿಮಗೂ ಬೀಳುತ್ತದೆ’ ಎಂದು ಭರ್ಜರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಹುಲಿ ಉಗುರು ಕೇಸ್‌ನಲ್ಲಿ ತಲೆ ತಗ್ಗಿಸದ ವರ್ತೂರ್, ವಿನಯ್ ಜೊತೆ ಸೇರಿ ಮೋಸದ ಆಟವಾಡಿ ತಲೆ ತಗ್ಗಿಸಿದ್ರು!
ಆದರೆ, ಈಗ ಕ್ಯಾಪ್ಟನ್‌ಶಿಪ್ ಟಾಸ್ಕ್‌ಅನ್ನೇ ಮೋಸ ಮಾಡಿ ಗೆದ್ದಿದ್ದಾರೆ. ಇದು ಸುದೀಪ್ ಅವರ ಗಮನಕ್ಕೂ ಬಂದಿದೆ. ಆದರೆ, ವಿನಯ್ ಗೌಡ ಅವರ ಮೇಲೆ ತರಾಟೆಗೆ ತೆಗೆದುಕೊಂಡ ಯಾವುದೇ ಅಂಶಗಳು ಕಾಣಿಸಿಲ್ಲ. ಇನ್ನು ವಿನಯ್ ಗೌಡ ಬಿಗ್ ಬಾಸ್‌ನಲ್ಲಿ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಿದ್ದರೂ, ಅದು ವೀಕೆಂಡ್ ಎಪಿಸೋಡ್‌ನಲ್ಲಿ ಟ್ರೀಟ್‌ಮೆಂಟ್‌ಗೆ ಒಳಗಾಗುತ್ತಲೇ ಇಲ್ಲ. ಇದನ್ನೇ ತುಕಾಲಿ, ತನಿಷಾ ಅಥವಾ ಸ್ನೇಹಿತ್ ಮಾಡಿದ್ದರೆ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಸುದೀಪ್, ವಿನಯ್ ಗೌಡ ವಿಚಾರವಾಗಿ ಸುಮ್ಮನಾಗಿರುವುದೇಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಮೋಸದಿಂದ ಕ್ಯಾಪ್ಟನ್ ಆದ ವರ್ತೂರ್ ಸಂತೋಷ್, ಕ್ಯಾಪ್ಟನ್ ರೂಮ್‌ಗೆ ಬಿತ್ತು ಬೀಗ!