ರಾಮಾಯಣ ಧಾರಾವಾಹಿಯಲ್ಲಿ ರಾವಣನ ಪಾತ್ರಧಾರಿಗೆ ಅಯೋಧ್ಯೆ ಅರ್ಚಕ ಪ್ರವೇಶ ನಿರಾಕರಿಸಿದ್ದರು. ಏಕದು?
ತಮ್ಮ ಕೆಲವು ಪಾತ್ರಗಳಿಂದಾಗಿ ಕೆಲವು ನಟರು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದುಬಿಡುತ್ತಾರೆ. ಸಾರ್ವಜನಿಕರು ನಿಜವಾಗಿಯೂ ನಟರು ನಟಿಸಿರುವುದು ಕೇವಲ ಪಾತ್ರ ಎನ್ನುವುದನ್ನು ಮರೆತು ಬಿಡುತ್ತಾರೆ. ಚಿತ್ರರಂಗದ ಅನೇಕ ಖಳನಾಯಕರು ಆಗಾಗ ಜನರ ಅಸಮಾಧಾನವನ್ನು ಎದುರಿಸಬೇಕಾಗುತ್ತದೆ. ಅಂಥದ್ದರಲ್ಲಿ ಒಂದು 1987- 88ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಪ್ರಸಿದ್ಧ ಧಾರಾವಾಹಿ ‘ರಾಮಾಯಣ’ (Ramayana). ಬಹುತೇಕ ಮನೆಗಳಲ್ಲಿ, ಈ ಧಾರಾವಾಹಿ ಶುರುವಾಗುವ ಪೂರ್ವದಲ್ಲಿ ಟಿ.ವಿಗೆ ಹಾರ ಹಾಕಿ ಪೂಜೆ ಮಾಡಿದವರೂ ಇದ್ದಾರೆ. ಇಲ್ಲಿಯ ಪಾತ್ರಧಾರಿಗಳನ್ನು ನಿಜವಾಗಿ ದೇವತೆಗಳು ಎಂದು ನಂಬಿದವರೂ ಹಲವರಿದ್ದರು ರಾಮ, ಲಕ್ಷ್ಮಣ, (Lakshmana) ಸೀತೆ, ಹನುಮಂತನ ಪಾತ್ರಧಾರಿಗಳಿಗೆ ಆಗ ವಿಶೇಷ ಮಾನ್ಯತೆ ನೀಡಲಾಗುತ್ತಿತ್ತು. ರಾಮನ ಪಾತ್ರಧಾರಿಯಾಗಿದ್ದ ಅರುಣ್ ಗೋವಿಲ್, ಸೀತೆಯ ಪಾತ್ರಧಾರಿ ದೀಪಿಕಾ ಚಿಖಲಿಯಾ(Deepika Chikhalia) , ಲಕ್ಷ್ಮಣನಾಗಿದ್ದ ಸುನಿಲ್ ಲಹರಿ, ಹನುಮಂತನಾಗಿದ್ದ ಧಾರಾ ಸಿಂಗ್ (Dhara singh) ಅವರನ್ನು ಖುದ್ದು ದೇವರೆಂದು ಪೂಜಿಸಿದ್ದಾರೆ. ವೀಕ್ಷಕರು ಮನರಂಜನೆಗಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ಇಂತಹ ಧಾರಾವಾಹಿಗಳೊಂದಿಗೆ ಸಂಪರ್ಕ ಹೊಂದಿದ್ದರು.
ಇವೆಲ್ಲರ ಪಾತ್ರ ಪರಿಚಯವಾದ ಮೇಲೆ ಇನ್ನು ಖಳನಾಯಕ ರಾವಣನ ಬಗ್ಗೆ ಹೇಳದೇ ಹೋದರೆ ಹೇಗೆ? ರಾಮಾಯಣದ ರಾವಣನ ಪಾತ್ರಧಾರಿಯಾಗಿದ್ದ ಅರವಿಂದ್ ತ್ರಿವೇದಿಯವರ ಪಾಡು ಮಾತ್ರ ಯಾರಿಗೂ ಬೇಡ. ಇವರನ್ನು ನಿಜ ಜೀವನದಲ್ಲಿಯೂ ಕೆಟ್ಟವರೆಂದು ಬಿಂಬಿಸಿದವರೂ ಇದ್ದಾರೆ. ಅರವಿಂದ್ ತ್ರಿವೇದಿ ಸಾಕಷ್ಟು ಅವಮಾನವನ್ನು ಎದುರಿಸಬೇಕಾಯಿತು. ಅದರಲ್ಲಿ ಒಂದು ದೊಡ್ಡ ಅವಮಾನ ಎಂದರೆ ಅಯೋಧ್ಯೆಯಲ್ಲಿ ಅವರಿಗಾದ ಘಟನೆ. 1994ರಲ್ಲಿ ಅಯೋಧ್ಯೆ (Ayodhya) ತಲುಪಿದಾಗ ಅರವಿಂದ್ ತ್ರಿವೇದಿ ಅವರಿಗೆ ಭಾರಿ ಅವಮಾನ ಎದುರಿಸಬೇಕಾಗಿತ್ತು.
'ಶ್ರೀರಾಮ'ನೇ ಸ್ಮೋಕ್ ಮಾಡಿದಾಗ... ಕಹಿ ಘಟನೆ ನೆನಪಿಸಿಕೊಂಡ ನಟ Arun Govil
ಅದು ಎಷ್ಟರಮಟ್ಟಿಗೆ ಎಂದರೆ, ಅವರಿಗೆ ಅಲ್ಲಿದ್ದಮುಖ್ಯ ಅರ್ಚಕರು ಒಳಗೆ ಬಿಡಲಿಲ್ಲವಂತೆ! ರಾಮನಿಗೆ ನಷ್ಟ ಉಂಟು ಮಾಡುವ ರಾವಣನಿಗೆ ರಾಮನನ್ನು ನೋಡಲು ಬಿಡುವುದು ಹೇಗೆ ಎನ್ನುವುದು ಅವರ ಪ್ರಶ್ನೆಯಾಗಿತ್ತು! ಅಯೋಧ್ಯೆಯಲ್ಲಿದ್ದ ಸಂಕತ್ಮೋಚನ ಹನುಮಂಜಿಯವರನ್ನು (Hanumantha) ಭೇಟಿ ಮಾಡಲು ಅರವಿಂದ ತ್ರಿವೇದಿಯವರು ಅಯೋಧ್ಯೆಯ ಹನುಮಾನ್‌ಗರ್ಹಿಯನ್ನು ತಲುಪಿದಾಗ, ಆಗ ಹಾಜರಿದ್ದ ಮುಖ್ಯ ಅರ್ಚಕರು ಹೋಗಲು ನಿರಾಕರಿಸಿದ್ದರು. ಧಾರಾವಾಹಿಯಲ್ಲಿ ರಾವಣ, ರಾಮ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಾತುಗಳಿಂದ ಸಿಟ್ಟಿಗೆದ್ದ ಅವರು ಕೇವಲ ತಮ್ಮ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದನ್ನು ಮರೆತುಬಿಟ್ಟಿದ್ದರು. ಅರವಿಂದ್ ದರ್ಶನಕ್ಕಾಗಿ ಸಾಕಷ್ಟು ಪ್ರಾರ್ಥಿಸಿದರು, ವಿವರಿಸಿದರು ಆದರೆ ಅರ್ಚಕರು ಅಚಲವಾಗಿ ಉಳಿದರು ಮತ್ತು ಅರವಿಂದರು ದರ್ಶನವಿಲ್ಲದೆ ಹಿಂತಿರುಗಬೇಕಾಯಿತು. ಇದನ್ನು ಖುದ್ದು ಅರವಿಂದ ತ್ರಿವೇದಿ ನೆನಪಿಸಿಕೊಂಡಿದ್ದರು.
ಅರವಿಂದ್ ತ್ರಿವೇದಿ ಅವರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ರಾಮನಿಗೆ ಕೆಟ್ಟ ಶಬ್ದದಲ್ಲಿ ಧಾರಾವಾಹಿಯಲ್ಲಿ ಬೈದುದಕ್ಕೆ ಅವರು ನಿಜ ಜೀವನದಲ್ಲಿಯೂ ಸಿಕ್ಕಾಪಟ್ಟೆ ನೋವು ಅನುಭವಿಸಿದ್ದರಂತೆ. ತಮ್ಮ ರಾವಣನ ಪಾತ್ರಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ನಿರ್ಧರಿಸಿದ್ದ ಅವರು ಮನೆಯ ಗೋಡೆಗಳ ಮೇಲೆ ರಾಮಾಯಣದ ದ್ವಿಪದಿಗಳನ್ನು ಬರೆಯುತ್ತಿದ್ದರು. ಅರವಿಂದ್ ತೆರೆಯ ಮೇಲೆ ರಾವಣನ ಪಾತ್ರ ಮಾಡುತ್ತಿದ್ದರೂ ನಿಜ ಜೀವನದಲ್ಲಿ ರಾಮನ ಭಕ್ತ. ಆಗಾಗ ತಮ್ಮ ಮನೆಯಲ್ಲಿ ರಾಮಾಯಣ ಪಾರಾಯಣ ಮಾಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
Nitish Bhardwaj: ಶ್ರೀಕೃಷ್ಣನ ಪಾತ್ರಕ್ಕೆ ಒಪ್ಪಿಸಿತ್ತು ಸಮೋಸಾ, ಒಂದು ಕಪ್ ಟೀ!
ಮೂಲತಃ ಮಧ್ಯಪ್ರದೇಶದ ಇಂದೋರ್‌ನವರಾದ ಅರವಿಂದ್ ತ್ರಿವೇದಿ (Aravinda Trivedi) ಅವರು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ನ ಮುಖ್ಯಸ್ಥರೂ ಆಗಿದ್ದರು. ನಟ 6 ಅಕ್ಟೋಬರ್ 2021 ರಂದು 82 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.
ರಾಮನ ಪಾತ್ರಧಾರಿಯಾಗಿದ್ದ ಅರುಣ್ ಗೋವಿಲ್ ಒಮ್ಮೆ ಸ್ಮೋಕ್ ಮಾಡಿದಾಗ ಅವರ ಅಭಿಮಾನಿಯೊಬ್ಬ ನೋಡಿ ಬೈದಿದ್ದ. ’ನಾವು ನಿಮ್ಮನ್ನು ದೇವರೆಂದು ಪರಿಗಣಿಸುತ್ತೇವೆ ಮತ್ತು ನೀವು ನೋಡಿದರೆ ಇಲ್ಲಿ ಕುಳಿತು ಧೂಮಪಾನ ಮಾಡುತ್ತಿದ್ದೀರಿ ಎಂದು ಆವೇಷ ಭರಿತನಾಗಿ ಆ ವ್ಯಕ್ತಿ ನನಗೆ ಬೈದದ್ದು ಎಂದು ತಿಳಿದಾಗ ತಲೆ ತಗ್ಗಿಸಿಬಿಟ್ಟೆ. ಆ ಮಾತು ನನ್ನ ಮೇಲೆ ಅದೆಷ್ಟು ಪ್ರಭಾವ ಬೀರಿತು ಎಂದರೆ ಮತ್ತೆ ಜೀವನದಲ್ಲಿ ನಾನು ಸಿಗರೇಟನ್ನು ಮುಟ್ಟಲಿಲ್ಲ' ಎಂದು ಅರುಣ್ ಗೋವಿಲ್ ಹೇಳಿದ್ದರು.
