‘ಅಪಾಯವಿದೆ ಎಚ್ಚರಿಕೆ’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಅಣ್ಣಯ್ಯ ಶಿವು, ನಾಯಕಿ ಅಮೃತಧಾರೆಯ ಮಲ್ಲಿ
ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಮಾರಿಗುಡಿಯ ಮುದ್ದಿನ ಅಣ್ಣಯ್ಯ ಶಿವು ಹಾಗೂ ಅಮೃತಧಾರೆಯ ಮಲ್ಲಿ ಇದೀಗ ಬೆಳ್ಳಿ ತೆರೆಯಲ್ಲಿ ಜೊತೆಯಾಗಿ ನಟಿಸುತ್ತಿದ್ದು, ಸಿನಿಮಾ ಜನವರಿಯಲ್ಲಿ ಬಿಡುಗಡೆಯಾಗಲು ರೆಡಿಯಾಗಿದೆ.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಎರಡು ಜನಪ್ರಿಯ ಧಾರಾವಾಹಿಯ ನಟ ಮತ್ತು ನಟಿ ಇದೀಗ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದ್ದು, ಜೊತೆಯಾಗಿ ನಟಿಸಲಿದ್ದಾರೆ. ಕಿರುತೆರೆಯಲ್ಲಿ ಮೋಡಿ ಮಾಡಿದ ಈ ನಟರು, ಇನ್ನು ಮುಂದೆ ಬೆಳ್ಳಿ ತೆರೆಯಲ್ಲಿ ಮೋಡಿ ಮಾಡಲಿದ್ದಾರೆ. ಆ ನಟ -ನಟಿಯರು ಯಾರು ಅನ್ನೋದು ಗೊತ್ತಾಯ್ತಲ್ವಾ?
ಅಣ್ಣಯ್ಯ ಧಾರಾವಾಹಿ ಮಾರಿಗುಡಿಯ ನಾಲ್ವರು ತಂಗಿಯರ ಮುದ್ದಿನ ಅಣ್ಣಯ್ಯ ಶಿವು ಪಾತ್ರದಲ್ಲಿ ನಟಿಸುತ್ತಿರುವ ವಿಕಾಶ್ ಉತ್ತಯ್ಯ ಹಾಗೂ ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಪಾತ್ರದಲ್ಲಿ ನಟಿಸುತ್ತಿರುವ ರಾಧಾ ಭಗವತಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ‘ಅಪಾಯವಿದೆ ಎಚ್ಚರಿಕೆ’ ಸಿನಿಮಾದಲ್ಲಿ ಇವರು ನಟಿಸಲಿದ್ದಾರೆ. ರಾಧಾ ಭಗವತಿ ಈಗಾಗಲೇ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದು, ವಿಕಾಶ್ ಉತ್ತಯ್ಯರಿಗೆ ಇದು ಚೊಚ್ಚಲ ಸಿನಿಮಾ. ಹಾಗಾಗಿ ಸಿನಿಮಾ ಬಿಡುಗಡೆಯ ಬಗ್ಗೆ ಭಾರಿ ನಿರೀಕ್ಷೆ ಹೊತ್ತಿದ್ದಾರೆ ವಿಕಾಶ್.
ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ‘ಅಪಾಯವಿದೆ ಎಚ್ಚರಿಕೆ’ ಸಿನಿಮಾವನ್ನು ವಿ.ಜಿ.ಮಂಜುನಾಥ್ ಹಾಗೂ ಪೂರ್ಣಿಮಾ ಎಂ.ಗೌಡ ನಿರ್ಮಾಣ ಮಾಡಿದ್ದಾರೆ. ಇತ್ತೀಚಿಗೆ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಯಿತು. ಪಂಚಭೂತಗಳ ಆಧಾರದ ಮೇಲೆ ಈ ಚಿತ್ರದ ಕಥೆಯನ್ನು ಮಾಡಲಾಗಿದೆ. ವಿಕಾಶ್ ಉತ್ತಯ್ಯ ‘ಸೂರಿ’ ಎಂಬ ಪಾತ್ರದಲ್ಲಿ, ರಾಘವ್ ಕೊಡಚಾದ್ರಿ ಹಾಗೂ ಮಿಥುನ್ ತೀರ್ಥಹಳ್ಳಿ ವಿಕಾಶ್ ಅವರ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಸಸ್ಪೆನ್ಸ್ ಹಾರಾರ್ ಥ್ರಿಲ್ಲರ್ ಸಿನಿಮಾ ಇದಾಗಿದೆ.
ಸಿನಿಮಾ ಕಥೆಯು ಥ್ರಿಲ್ ಆಗಿದೆ. ಈ ಚಿತ್ರದಲ್ಲಿ ನಾನು ಸೂರಿ ಎಂಬ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತೇನೆ ಎಂದು ವಿಕಾಶ್ ಉತ್ತಯ್ಯ ತಿಳಿಸಿದ್ದಾರೆ. ಕಿರುತೆರೆಯ ನಟರು ಹಿರಿತೆರೆಯಲ್ಲಿ ಮೋಡಿ ಮಾಡಲು ಹೊರಟಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಸಿನಿಮಾದ ಪೋಸ್ಟರ್ ಹಾಗೂ ವಿಕಾಶ್ - ರಾಧಾ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನಾನು ಮತ್ತು ಮಲ್ಲಿ ನಾಯಕ ನಾಯಕಿಯಾಗಿ ನಟಿಸಿರುವ “ಅಪಾಯವಿದೆ ಎಚ್ಚರಿಕೆ” ಸಿನಿಮಾ ಶೀಘ್ರದಲ್ಲಿ ಬಿಡುಗಡೆಗೊಳ್ಳಲಿದೆ ನಿಮ್ಮ ಪ್ರೀತಿ, ನಮ್ಮ ಮತ್ತು ನಮ್ಮ ಚಿತ್ರತಂಡದ ಮೇಲೆ ಸದಾ ಇರಲಿ ಎಂದು ಅಭಿಮಾನಿಗಳಿಗೆ ಪ್ರೀತಿಯಿಂದ ತಿಳಿಸಿದ್ದಾರೆ ಅಣ್ಣಯ್ಯ ಖ್ಯಾತಿಯ ವಿಕಾಶ್.
ಸುನಾದ್ ಗೌತಮ್ ಛಾಯಾಗ್ರಹಣ ಮತ್ತು ಸಂಗೀತ ಸಂಯೋಜನೆ ಎರಡನ್ನೂ ನಿರ್ವಹಿಸಿದ್ದಾರೆ. ಆನಂದ್ ಆಡಿಯೊ ಸಂಗೀತ ಹಕ್ಕುಗಳನ್ನು ಪಡೆದುಕೊಂಡಿದೆ, ಹರ್ಷಿತ್ ಪ್ರಭು ಸಂಕಲನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅಪಾಯವಿದೆ ಎಚ್ಚರಿಕೆ ಸಿನಿಮಾ 2025ರ ಜನವರಿಯಲ್ಲಿ ರಿಲೀಸ್ ಆಗಲಿದೆ.