‘ಟಿಕ್‌ಟಾಕ್‌’ ಸೇರಿದಂತೆ ಹಲವು ಸೋಷಿಯಲ್‌ ಮೀಡಿಯಾಗಳಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ‘ರಣಧೀರ’ ಚಿತ್ರದ ‘ತಾಳಕ್ಕೆ ನಾವೆಲ್ಲ ಕುಣಿಯುತಿರೆ...’ ಎನ್ನುವ ಹಾಡಿಗೆ ಇಡೀ ಕುಟುಂಬ ಸೇರಿ ಡ್ಯಾನ್ಸ್‌ ಮಾಡಿದ ವಿಡಿಯೋ ನೀವೆಲ್ಲ ನೋಡಿರುತ್ತೀರಿ. ಚಿಕ್ಕವರು, ದೊಡ್ಡವರು ಎನ್ನದೆ ಒಂದೇ ಕುಟುಂಬದವರು ಸೇರಿ ಈ ಹಾಡಿಗೆ ಹೆಜ್ಜೆ ಹಾಕಿದ್ದು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿತ್ತು. 10 ಮಿಲಿಯನ್‌ ವೀಕ್ಷಣೆ ಪಡೆದುಕೊಂಡ ಈ ಹಾಡಿಗೆ ನೃತ್ಯ ಸಂಯೋಜಿಸಿದ್ದು ಇದೇ ದಿಲೀಪ್‌ ಗೌಡ. ಡ್ಯಾನ್ಸ್‌ ಗೊತ್ತಿಲ್ಲದೇ ಇದ್ದರೂ ಮೊಬೈಲ್‌ ಕ್ಯಾಮೆರಾ ಮುಂದೆ ಹೆಜ್ಜೆ ಹಾಕಿದ್ದು ದಿಲೀಪ್‌ ಸ್ನೇಹಿತ ಮಧುಸೂದನ್‌ ಕುಟುಂಬದ ಸದಸ್ಯರು.

'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಮಾಸ್ಟರ್‌ ಪ್ಲ್ಯಾನ್‌ ಮಾಡೋ ವಿಲನ್ ಪಿಂಕಿ ಇವ್ರೇ ನೋಡಿ!

ಲಾಕ್‌ಡೌನ್‌ ಸಮಯದಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದ ಈ ಹಾಡನ್ನು ನಿರ್ಮಾಪಕಿ ಶ್ರುತಿ ನಾಯ್ಡು ಅವರೂ ನೋಡಿದ್ದಾರೆ. ಅವರಿಗದು ಇಂಟರೆಸ್ಟಿಂಗ್‌ ಅನಿಸಿದೆ. ಕೂಡಲೇ ದಿಲೀಪ್‌ ಗೌಡ ಅವರನ್ನು ಹುಡುಕಿಸಿ ಕರೆತಂದು ತಮ್ಮ ನಿರ್ಮಾಣದ ಜೀ ವಾಹಿನಿಯಲ್ಲಿ ಪ್ರಸಾರ ಆಗುವ ‘ಬ್ರಹ್ಮಗಂಟು’ ಹಾಗೂ ‘ಯಾರೇ ನೀ ಮೋಹಿನಿ’ ಧಾರಾವಾಹಿಗಳ ಗೌರಿ ಗಣೇಶ ಹಬ್ಬದ ವಿಶೇಷ ಎಪಿಸೋಡ್‌ನಲ್ಲಿ ಬರುವ ಫ್ಯಾಮಿಲಿ ಹಾಡಿಗೆ ಡ್ಯಾನ್ಸ್‌ ಮಾಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್‌ ಆಗಿ, ನೃತ್ಯದಲ್ಲಿ ಪ್ರತಿಭಾವಂತ ಎನಿಸಿಕೊಂಡಿದ್ದರೂ ಯಾವುದೇ ಅವಕಾಶ ಇಲ್ಲದೆ ಹಳ್ಳಿಯಲ್ಲೇ ಇದ್ದ ದಿಲೀಪ್‌ ಗೌಡ ಹೀಗೆ ಕಿರುತೆರೆಯಲ್ಲಿ ನೃತ್ಯ ಸಂಯೋಜನೆ ಮಾಡುವ ಅವಕಾಶಕ್ಕೆ ಪಾತ್ರರಾಗಿದ್ದಾರೆ. ಇದಕ್ಕೆ ಅವರು ಮೊದಲು ಕೃತಜ್ಞತೆ ಸಲ್ಲಿಸುವುದು ನಿರ್ಮಾಪಕಿ ಶ್ರುತಿ ನಾಯ್ಡು ಅವರಿಗೆ.

ದಿಲೀಪ್‌ ಬಗ್ಗೆ ಶ್ರುತಿ ಅವರು ಹೇಳೋದು ಹೀಗೆ- ‘ಸಣ್ಣ ಪುಟ್ಟಕಾರ್ಯಕ್ರಮಗಳಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದ ಹುಡುಗ. ಲಾಕ್‌ಡೌನ್‌ ವೇಳೆ ಈತನ ಪ್ರತಿಭೆ ಕಣ್ಣಿಗೆ ಬಿತ್ತು. ಈ ಪ್ರತಿಭೆಗೆ ಅವಕಾಶ ಕೊಡಬೇಕೆಂದು ನಿರ್ಧರಿಸಿದ್ದೆ. ನಮ್ಮ ಧಾರಾವಾಹಿಯ ಗೌರಿ ಗಣೇಶ ವಿಶೇಷ ಸಂಚಿಕೆಯಲ್ಲಿ ಒಂದು ಸಂಭ್ರಮಾಚರಣೆಯ ಹಾಡಿಗೆ ನೃತ್ಯ ಸಂಯೋಜನೆ ಮಾಡಿಸಿದ್ದೇನೆ. ಈ ಸಂಚಿಕೆ ಗಣೇಶ ಹಬ್ಬದಂದು ಪ್ರಸಾರವಾಗುತ್ತದೆ. ಚಿತ್ರರಂಗದಲ್ಲಿ ಈತ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾನೆಂಬ ಭರವಸೆ ಇದೆ. ಒಬ್ಬ ಪ್ರತಿಭಾವಂತನನ್ನು ನಮ್ಮ ಸಂಸ್ಥೆ ಮೂಲಕ ಪರಿಚಯಿಸುತ್ತಿರುವುದಕ್ಕೆ ಖುಷಿ ಇದೆ.’

ದಿಲೀಪ್‌ ಗೌಡ ಹಿನ್ನೆಲೆ

ಮಂಡ್ಯ ಜಿಲ್ಲೆಯ ಕೆರಗೋಡು ತಾಲೂಕಿನ ಅನಸೋಸಲು ಗ್ರಾಮದ ಯುವಕ. ಚಿಕ್ಕಂದಿನಿಂದಲೂ ಡ್ಯಾನ್ಸ್‌ ಅಂದರೆ ಪ್ರಾಣಕ್ಕಿಂತ ಹೆಚ್ಚು ಪ್ರೀತಿ. ಮುಂದೆ ಕೈ ತುಂಬಾ ಸಂಬಳ ಬರುವ ಉದ್ಯೋಗವನ್ನೂ ಬಿಟ್ಟು ಹೆಜ್ಜೆ ಹಾಕುವುದನ್ನು ಕಲಿತರು ದಿಲೀಪ್‌. ಅನಸೋಸಲು ಹಾಗೂ ಅಜ್ಜಿ ಊರಾದ ಮೆಣಸಿಕ್ಯಾತನಹಳ್ಳಿಯಲ್ಲಿ ಏನೇ ಕಾರ್ಯಕ್ರಮಗಳು ನಡೆದರೂ ದಿಲೀಪ್‌ ಅಲ್ಲಿ ತಮ್ಮ ನೃತ್ಯ ಪ್ರತಿಭೆ ತೋರಿಸುತ್ತಿದ್ದರು.

ಕನ್ನಡದ ಹಲವು ಹಾಡುಗಳಿಗೆ ಡ್ಯಾನ್ಸ್‌ ಮಾಡಿಕೊಂಡಿದ್ದ ದಿಲೀಪ್‌, ಡ್ಯಾನ್ಸ್‌ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕೆ ಬೆಂಗಳೂರಿಗೆ ಬಂದು ಹಲವು ಸ್ಟುಡಿಯೋಗಳ ಬಾಗಿಲು ತಟ್ಟಿದರೂ ಪ್ರಯೋಜನ ಆಗಲಿಲ್ಲ. ಮುಂಬಯಿ, ಹೈದರಾಬಾದ್‌ ಮುಂತಾದ ಕಡೆ ಸ್ಟೇಜ್‌ ಶೋಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಅನಾರೋಗ್ಯದಿಂದ ತಂದೆ ತೀರಿಕೊಂಡ ಮೇಲೆ ಉದ್ಯೋಗ ಬಿಟ್ಟು ಬೆಂಗಳೂರಿಗೆ ಬಂದು ನೃತ್ಯ ನಿರ್ದೇಶಕನಾಗುವ ಕನಸು ಕಂಡವರಿಗೆ ಅಡ್ಡಿಯಾಗಿದ್ದು ಕೊರೋನಾ, ಲಾಕ್‌ಡೌನ್‌ ಸಂಕಷ್ಟ. ಈ ಸಮಯದಲ್ಲೇ ತಮ್ಮ ಸ್ನೇಹಿತನ ಕುಟುಂಬದ ಜತೆಗೆ ಸೇರಿಕೊಂಡು ‘ರಣಧೀರ’ ಚಿತ್ರದ ಹಾಡಿಗೆ ನೃತ್ಯ ಸಂಯೋಜಿಸಿ ಟಿಕ್‌ಟಾಕ್‌ನಲ್ಲಿ ಹಾಕಿ ಪ್ರಸಿದ್ಧಿಗೆ ಬರುತ್ತಾರೆ. ಈ ಫ್ಯಾಮಿಲಿ ಹಾಡು ನೋಡಿ ಕರೆದು ಅವಕಾಶ ಕೊಟ್ಟಿದ್ದು ನಿರ್ಮಾಪಕಿ ಶ್ರುತಿ ನಾಯ್ಡು.

ಕಿರುತೆರೆಯಲ್ಲಿ ನಾಯಕಿ, ಸಿನಿಮಾಗಳಲ್ಲಿ ಅಮ್ಮ: ಸ್ವಾತಿ

‘ನನ್ನ ನೃತ್ಯ ನೋಡಿದವರು ಚಪ್ಪಾಳೆ ತಟ್ಟುತ್ತಿದ್ದರು. ಆದರೆ, ನನಗೆ ಅವಕಾಶಗಳು ಸಿಗಲಿಲ್ಲ. ಆದರೂ ನನ್ನಿಷ್ಟದ ನೃತ್ಯವನ್ನು ನಾನು ದೂರ ಮಾಡಿಕೊಳ್ಳಲಿಲ್ಲ. ಇನ್‌ಸ್ಟಾಲ್‌ಮೆಂಟ್‌ನಲ್ಲಿ ತೆಗೆದುಕೊಂಡಿದ್ದ ಮೊಬೈಲ್‌ನಲ್ಲಿ ನಾನು ಶೂಟ್‌ ಮಾಡಿದ ಫ್ಯಾಮಿಲಿ ಹಾಡು ಟಿಕ್‌ಟಾಕ್‌ನಲ್ಲಿ ಫೇಮಸ್‌ ಆಗಿ ನಾನು ಶ್ರುತಿ ನಾಯ್ಡು ಅವರಿಗೆ ಪರಿಚಯ ಆಗುವಂತೆ ಮಾಡಿತು. ಗಾಡ್‌ಫಾದರ್‌ ಇಲ್ಲದೆ ಬೆಳೆಯುತ್ತಿದ್ದ ನನ್ನ ಗುರುತಿಸಿ ತಮ್ಮ ಧಾರಾವಾಹಿಯ ವಿಶೇಷ ಹಾಡಿಗೆ ನೃತ್ಯ ಸಂಯೋಜನೆ ಮಾಡಿಸಿದ್ದಾರೆ. ಚಿತ್ರರಂಗದಲ್ಲೂ ಅವಕಾಶಗಳು ಸಿಗುತ್ತವೆಂದು ಕಾಯುತ್ತಿದ್ದೇನೆ’ ಎನ್ನುತ್ತಾರೆ ದಿಲೀಪ್‌ ಕೆ ಗೌಡ.