ಕಿರುತೆರೆಯಲ್ಲಿ ನಾಯಕಿ, ಸಿನಿಮಾಗಳಲ್ಲಿ ಅಮ್ಮ: ಸ್ವಾತಿ
ಹೆಸರಿಗೆ ಇದು ಕಿರುತೆರೆ. ಆದರೆ, ಇಲ್ಲಿ ಪಾತ್ರ ಮಾಡುವವರು ಯಾರಿಗೂ ಕಮ್ಮಿ ಇಲ್ಲದಂತೆ ದೊಡ್ಡ ತಾರೆಗಳಾಗಿ ಮಿಂಚುತ್ತಿದ್ದಾರೆ. ಮನೆ ಮನೆಗೆ ತಲುಪುತ್ತಿರುವ ಈ ಬಿಗ್ ಸ್ಟಾರ್‌ಗಳಿಗೆ ಈ ಪುಟ್ಟಪರದೆಯೇ ಭರವಸೆಯ ಬೆಳಕು. ಹೀಗೆ ಪ್ರೇಕ್ಷಕರ ಮನೆ ಮನದಲ್ಲೂ ಮಿಂಚುತ್ತಿರುವ ಕಿರುತೆರೆಯ ತಾರೆಗಳ ಪುಟ್ಟಪರಿಚಯವನ್ನು ಅವರ ಮಾತುಗಳಲ್ಲೇ ಕೇಳಿ.
ನಾಯಕಿಯಾಗಿಯೇ 450ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವೆ. ಮೇಗಾ ಧಾರಾವಾಹಿಗಳನ್ನು ನೋಡದಿರುವ ಕಾಲದಲ್ಲೇ ಕಿರುತೆರೆಯಲ್ಲಿ ಬಣ್ಣ ಹಚ್ಚಿದವಳು. ಹಾಗಂತ ನನ್ನ ಆ ಕಾಲದ ನಟಿ ಎಂದು ನೋಡಬೇಡಿ. ಈಗಲೂ ಬೇಡಿಕೆಯಲ್ಲಿರುವೆ. ಸಿನಿಮಾ, ಧಾರಾವಾಹಿ ಈ ಎರಡರಲ್ಲೂ ನನ್ನದೇ ಆದ ದಾರಿ ರೂಪಿಸಿಕೊಂಡು ಮುಂದುವರೆಯುತ್ತಿರುವ ನನ್ನ ಹೆಸರು ಸ್ವಾತಿ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ‘ನೀ ಬರೆದ ಪಾತ್ರ ನಾನಲ್ಲ’ ಎಂಬುದು ನನ್ನ ಮೊದಲ ಧಾರಾವಾಹಿ. ನಿರ್ದೇಶಕ, ನಟ ಕಂ ನಿರ್ಮಾಪಕ ಸುನೀಲ… ಪುರಾಣಿಕ್ ಅವರು ನನ್ನ ಬಣ್ಣ ಜಗತ್ತಿಗೆ ಕರೆದುಕೊಂಡು ಬಂದವರು. ಅವರೇ ನನ್ನ ಗುರುಗಳು. ನಾನು ಕಿರುತೆರೆಗೆ ಬಂದಾಗ 10 ಅಥವಾ 20 ಎಪಿಸೋಡ್‌ಗಳಿಗೆ ಮಾತ್ರ ಧಾರಾವಾಹಿಗಳು ಸೀಮಿತವಾಗಿತ್ತು. ಹಾಗೆ ನಾನು ನಾಯಕಿಯಾಗಿ 450ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದೆ.
`ನನ್ನ ರೀತಿ ನೀತಿಯೇ ವಿಭಿನ್ನ' ಎನ್ನುತ್ತಾರೆ ಸ್ವಾತಿ..!
ಹೀಗೆ ಕಿರುತೆರೆಯಲ್ಲಿ ಬೇಡಿಕೆಯಲ್ಲಿದ್ದಾಗಲೇ ನಟನೆಯಿಂದ ದೂರವಾದೆ. ಮದುವೆ, ಸಂಸಾರ ಅಂತ ಹತ್ತು ವರ್ಷ ಮತ್ತೆ ನಟನೆ ಕಡೆ ಮುಖ ಮಾಡಲಿಲ್ಲ. 2014ರಲ್ಲಿ ಮತ್ತೆ ರೀ ಎಂಟ್ರಿ ಆಗಿದ್ದು ಜೀ ವಾಹಿನಿಯಲ್ಲಿ ಬರುತ್ತಿದ್ದ ‘ಸಾಗರ ಸಂಗಮ’ ಧಾರಾವಾಹಿ ಮೂಲಕ. ಆ ನಂತರ ಒಂದೊಂದಾಗಿ ಧಾರಾವಾಹಿಗಳನ್ನು ಒಪ್ಪುತ್ತಾ ಹೋದೆ. ‘ಸದ್ಯ ಬ್ರಹ್ಮಗಂಟು’, ‘ನಮ್ಮನೆ ಯುವರಾಣಿ’ ಹಾಗೂ ‘ಮನಸಾರೆ’ ಧಾರಾವಾಹಿಗಳಲ್ಲಿ ನಟಿಸುತ್ತಿದ್ದೇನೆ. ಸುಮತಿ, ಆತ್ಮ ಹಾಗೂ ದೇವಕಿ ಪಾತ್ರಗಳು ನನ್ನದು. ‘ಮನಸಾರೆ’ ಧಾರಾವಾಹಿಯಲ್ಲಿ ಸುನೀಲ… ಪುರಾಣಿಕ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಬಣ್ಣದ ಜಗತ್ತಿಗೆ ನನ್ನ ಪರಿಚಯಿಸಿದ ಗುರುಗಳ ಜತೆಗೆ ನಟಿಸುವ ಅವಕಾಶ ಸಿಕ್ಕಿದೆ. ಅಪ್ಪನಿಂದಲೇ ತಿರಸ್ಕೃತಗೊಂಡ ಮಗಳನ್ನು ಜೋಪಾನವಾಗಿ ಸಾಕುವ ಮಲತಾಯಿ ಪಾತ್ರ ನನ್ನದು. ‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ನಾಯಕನಿಗೆ ಅಮ್ಮನ ಪಾತ್ರ ಮಾಡಿರುವೆ. ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ಆತ್ಮದ ರೂಪದಲ್ಲಿ ಕಾಣಿಸಿಕೊಳ್ಳುವ ಪಾತ್ರ. ತುಂಬಾ ಥ್ರಿಲ್ಲಿಂಗ್ ಅನುಭವ ಇದೆ. ಈ ಮೂರೂ ಧಾರಾವಾಹಿಗಳು ಒಳ್ಳೆಯ ಹೆಸರು ಕೊಡುತ್ತಿವೆ.
ಮನೆದೇವ್ರು ಕಥೆಯ ಅನು ಅಂದ್ರೆ ನಾನೇ ಅಂತಿದ್ದಾರೆ ನಟಿ ವರ್ಷಿತಾ!
ನನ್ನ ಮುಖದಲ್ಲಿ ಸದಾ ನಗು ಇರುತ್ತದೆ. ಜತೆಗೆ ಸರಳತೆ... ಅದೇ ನನ್ನ ಶಕ್ತಿ. ಈ ಕಾರಣಕ್ಕೆ ನನಗೆ ಸಾಫ್ಟ್ ಪಾತ್ರಗಳೇ ಹೆಚ್ಚು ಬರುತ್ತವೆ. ನೀವು ನೆಗೆಟೀವ್ ಪಾತ್ರ ಮಾಡಬೇಡಿ. ನಿಮಗೆ ಅಂಥ ಪಾತ್ರಗಳು ಒಗ್ಗಲ್ಲ ಅಂತ ನನಗೆ ತುಂಬಾ ಜನ ಹೇಳುತ್ತಾರೆ. ಅಂದರೆ ಅವರ ಈ ಮಾತುಗಳ ಮೂಲಕ ನನ್ನ ಪ್ರೇಕ್ಷಕರು ಯಾವ ಮಟ್ಟಿಗೆ ನೋಡಿ ಇಷ್ಟಪಡುತ್ತಿದ್ದಾರೆ ಎಂಬುದು ತಿಳಿಯಿತು. ನನ್ನ ಅದೃಷ್ಟಕ್ಕೆ ಕಿರುತೆರೆಯಲ್ಲಿ ಹೇಗೆ ಬೇಡಿಕೆಯಲ್ಲಿದ್ದೀನೋ ಅದೇ ರೀತಿ ಸಿನಿಮಾಗಳಲ್ಲೂ ಬೇಡಿಕೆ ಉಳಿಸಿಕೊಂಡಿರುವೆ. ಚಕ್ರವ್ಯೂಹ, ಹರಿಶ್ಚಚಂದ್ರ, ರಾಜ್ ವಿಷ್ಣು, ಪಡ್ಡೆಹುಲಿ, ತಾರಾಕ್, ಗೀತಾ, ಯುವರತ್ನ, ರಾಮಾರ್ಜುನ... ಹೀಗೆ ಹಲವು ಚಿತ್ರಗಳಲ್ಲಿ ನಾಯಕ ಅಥವಾ ನಾಯಕಿಗೆ ಅಮ್ಮನ ಪಾತ್ರ ಮಾಡಿದ್ದೇನೆ. ಕಿರುತೆರೆಯಲ್ಲಿ ನಾಯಕಿ, ಹಿರಿತೆರೆಯಲ್ಲಿ ಅಮ್ಮನಾಗಿ ಕಾಣಿಸಿಕೊಳ್ಳುತ್ತಿರುವ ಭಾಗ್ಯ ನನ್ನದು. ಮುಖ್ಯವಾಗಿ ಈಗ ಚಿತ್ರರಂಗ ಅಥವಾ ಕಿರುತೆರೆ ಸಾಕಷ್ಟುಬದಲಾಗಿದೆ. ಬದಲಾಗಿರುವ ಈ ದಿನಗಳಲ್ಲೂ ನನಗೂ ಪಾತ್ರ ಸಿಗುತ್ತಿದೆ ಎಂದರೆ ಅದು ನನ್ನ ಶ್ರಮ ಹಾಗೂ ಪ್ರತಿಭೆಗೆ ಸಲ್ಲುತ್ತಿರುವ ಗೌರವ ಎಂದೇ ಭಾವಿಸುವೆ.