Asianet Suvarna News Asianet Suvarna News

ದುರಿತಕಾಲದಲ್ಲಿ ದುಡಿವ ಸ್ವಾತಂತ್ರ್ಯ; ರಂಗ ನಟನೊಬ್ಬನ ಹೊಸ ಹಾದಿ, ಹೊಸ ಹಾಡು!

ರಂಗಭೂಮಿಯನ್ನೇ ಬದುಕಾಗಿಸಿಕೊಂಡಿದ್ದ ತರುಣ ನಟ, ದುರಿತ ಕಾಲದಲ್ಲಿ ಜೊಮ್ಯಾಟೋ ಫುಡ್ ಡೆಲಿವರಿ ರೈಡರ್ ಆಗಿ ಲೋಕ ಸುತ್ತಿದ ಭಿನ್ನ ಅನುಭವಗಳನ್ನಿಲ್ಲಿ ಹಂಚಿಕೊಂಡಿದ್ದಾರೆ.

Theater artist Tarun shares working experience as Zomato delivery guy vcs
Author
Bangalore, First Published Jun 20, 2021, 4:29 PM IST

-ನಂದಕುಮಾರ ಜಿ ಕೆ

ಕೊರೋನಾದಿಂದಾಗಿ ಲಾಕ್‌ಡೌನ್ ಘೋಷಣೆಯಾಯಿತು. ಅದಾದಂದಿನಿಂದಲೂ ಶ್ರಮಿಕ ವರ್ಗಕ್ಕೆ ಬಹಳ ದೊಡ್ಡ ತೊಂದರೆಯೇ ಆಗುತ್ತಿದೆ. ಈ ತೊಂದರೆ ನನ್ನಂತಹ ಕಲಾವಿದರನ್ನೂ ಬಿಟ್ಟಿಲ್ಲ. ಎಷ್ಟು ದಿನವೆಂದು ಮನೆಯಲ್ಲೇ ಸರ್ಕಾರ ಕೊಡುವ ಅಕ್ಕಿಯನ್ನ ಬೇಯಿಸುತ್ತ ಕೂರುವುದು ಅಂತ ಏನೂ ತೋಚದ ಸಮಯದಲ್ಲಿ ಮಂಜು ಸಿರಿಗೆರೆ ಅವರೊಂದಿಗೆ ಮಾತನಾಡುತ್ತಿದ್ದಾಗ ಅವರಿಂದ ಸಿಕ್ಕ ಸಲಹೆ ಚೆನ್ನಾಗಿತ್ತು.

‘ಹೇಗೂ ಸ್ವಂತ ಬೈಕ್ ಮತ್ತು ಲೈಸೆನ್‌ಸ್ ಇದೆ. ಜೊಮ್ಯಾಟೋ ಫುಡ್ ಡೆಲಿವರಿ ರೈಡರ್ ಕೆಲಸ ಸಿಗುತ್ತದೆ ಮಾಡು’.

ಮೊದಲು ಬದುಕಬೇಕೆಂಬ ಹಠ ಈ ಕೆಲಸಕ್ಕೆ ಸೇರಲು ಧೈರ್ಯ ನೀಡಿತು. ಕಲಾವಿದ ಬದುಕಿದ್ದರೆ ಅವನ ಕಲೆಯೂ ಬದುಕುತ್ತೆ. ಆದ ಕಾರಣ ಕಲಾವಿದ ತನ್ನ ಕಲೆಯನ್ನು ಗೌರವಿಸುವಂತೆ ಯಾವುದೇ ಕ್ಷೇತ್ರಗಳಲ್ಲಿ ದುಡಿದು ಬದುಕಲು ಹಿಂಜರಿಯಬಾರದು. ಪ್ರತಿ ಅನುಭವವು ಹೊಸ ಹೊತ್ತಿಗೆಯ ಬುತ್ತಿಯಂತೆ.

ಚಿಕ್ಕಂದಿನಿಂದಲೂ ಖಾಲಿಯಿದ್ದಾಗಲೆಲ್ಲ ಶಾಮಿಯಾನ ಹೊಟೇಲುಗಳಲ್ಲಿ ದುಡಿಯುತ್ತ ಬೆಳೆದ ನನಗೆ ಈ ಕೆಲಸದ ಉಪಾಯ ಖುಷಿಯನ್ನೇ ಕೊಟ್ಟಿತು. ಒಂದೆಡೆ ನಿಲ್ಲದ ಸ್ವಭಾವದ ನನಗೆ ಮುಚ್ಚಿದ ಬೀದಿಗಳಲ್ಲಿ ತಿರುಗಾಡುವ ಸ್ವಾತಂತ್ರ್ಯ ಸಿಕ್ಕಿದ್ದು ದೊಡ್ಡ ಪದವಿಯೇ ಸಿಕ್ಕಂತಾಯಿತು.

Theater artist Tarun shares working experience as Zomato delivery guy vcs

ನನ್ನ ರಂಗ ಗೆಳೆಯ ಇನ್ಸಾಫ್ ಕಳೆದ ಲಾಕ್‌ಡೌನಿನಲ್ಲಿ ಇದೇ ಕ್ಷೇತ್ರದಲ್ಲಿ ದುಡಿದಿದ್ದ. ಅವನ ಸಲಹೆಯಂತೆ ಆನ್‌ಲೈನಿನಲ್ಲಿ ಇಂಟರ್‌ವ್ಯೂ ಮತ್ತು ಟ್ರೈನಿಂಗ್ ಮುಗಿಸಿ ಐಡಿ ಪಡೆದು ಹೊಸಪೇಟೆಯ (ಈಗಿನ ವಿಜಯನಗರ)ದ ಕಡೆಗೆ ಬಟ್ಟೆ ಹಾಸಿಗೆ ಪುಸ್ತಕಗಳ ಸಮೇತ ಮೇ ತಿಂಗಳ 19ರ ಮುಂಜಾನೆ ಲಡಾಕ್ ಟ್ರಿಪ್ಪಿಗೆ ಹೊರಟವನಂತೆ ಲಗೇಜು ಕಟ್ಟಿಕೊಂಡು, ಗೆಳೆಯನಿಂದ ಪಡೆದ ಕೈಗಡದಲ್ಲಿ ಪೆಟೊ್ರೀಲ್ ಹಾಕಿಸಿ ಹೊರಟೇಬಿಟ್ಟೆ. ಹೊಸಪೇಟೆ ತಲುಪಿದ್ದೇ ಇನ್ಸಾಫ್ ನನಗಾಗಿ ನೋಡಿಟ್ಟಿದ್ದ ರಾಣಿಪೇಟೆಯ ರೂಮಿಗೆ ಹೋಗಿ ಬಾಡಿಗೆ ಮಾತಾಡಿ, ಲಗೇಜಿಟ್ಟು, ಡಿಸ್ಟ್ರಿಬ್ಯೂಟರ್ ಬಳಿ ಟೀ ಶರ್ಟ್ ಬ್ಯಾಗ್ ಪಡೆದು, ಕೆಲಸಕ್ಕಿಳಿದೇ ಬಿಟ್ಟೆ.

ಇನ್ಸಾಫ್ ಹೊಸಪೇಟೆಯ ಹೊಟೇಲುಗಳೊಂದಿಗೆ ಗಲ್ಲಿಗಳನ್ನ ಪರಿಚಯಿಸುತ್ತ ಕೆಲಸ ಮಾಡುವ ವಿಧಾನವನ್ನ ಬಹಳ ಅಚ್ಚುಕಟ್ಟಾಗಿ ಹೇಳಿಕೊಟ್ಟ. 2018ರಲ್ಲಿ ಹೊಸಪೇಟೆಗೆ ಜೊಮ್ಯಾಟೊ ಕಾಲಿಟ್ಟಾಗಿನಿಂದಲೂ ಖಾಯಂ ಕೆಲಸ ಮಾಡುವ ಹಳೆ ರೈಡರುಗಳನ್ನ ಮಾತಾಡಿಸಿದಾಗ ಆದರದಿಂದ ಸ್ವಾಗತಿಸಿ ಕೆಲಸದ ಕುರಿತು ಮತ್ತಷ್ಟು ಮಾಹಿತಿಯನ್ನು ಕೊಟ್ಟರು.

ಪ್ರತಿಯೊಬ್ಬ ರೈಡರ್ ಪ್ರತಿದಿನ ಪೆಟೊ್ರೀಲ್ ಖರ್ಚು ತೆಗೆದು ಸಾವಿರ ರೂಪಾಯಿಗಳನ್ನು ಈ ಲಾಕ್‌ಡೌನ್ ಸಮಯದಲ್ಲಿ ದುಡಿಯಬಹುದು. ಅಲ್ಲದೆ ಹೊಸತಾಗಿ ಸೇರಿದವರಿಗೆ ಇಂತಿಷ್ಟು ಆರ್ಡರುಗಳನ್ನು ಪೂರೈಸಿದ ನಂತರ ಬೋನಸ್ ಕೂಡ ಸಿಗುತ್ತದೆ. ರೈಡಿಂಗ್ ಸಮಯದಲ್ಲೇನಾದರೂ ಹೆಚ್ಚುಕಮ್ಮಿ ಆದರೆ ಆಸ್ಪತ್ರೆಯ ಖರ್ಚನ್ನು ಜೊಮ್ಯಾಟೋ ಭರಿಸುತ್ತದೆ. ಇಷ್ಟೆಲ್ಲ ಧೈರ್ಯ ತುಂಬುವುದರಿಂದಲೇ ಲಗಾಮು ಹಿಡಿದು ಕೆಂಪು ಪೋಷಾಕಿನ ಸವಾರರು ಮನೆ ಮನೆಗೆ ಇಷ್ಟದ ಆಹಾರಗಳನ್ನ ತಲುಪಿಸಿ ಆನ್‌ಲೈನ್ ಫುಡ್ ಡೆಲಿವರಿ ಕೆಲಸವನ್ನೇ ನಂಬಿ ಬದುಕುತ್ತಿದ್ದಾರೆ.

ಪ್ರತಿ ದಿನ ಬೆಳಿಗ್ಗೆ 10ಕ್ಕೆ ನಾಷ್ಟಾ ಮುಗಿಸಿ ಲಾಗಿನ್ ಆದವನು ಸಂಜೆ 4ರ ತನಕ ನಾನಾ ಕಡೆ ತಿರುಗಿ ಉಡುಪಿ ಹೊಟೇಲಿನಲ್ಲಿ ಅನ್ನ ಸಾಂಬಾರ್ ಮಿರ್ಚಿ ಕಟ್ಟಿಸಿಕೊಂಡು ರೈಡರ್ ಗೆಳೆಯರ ಜೊತೆ ವಿಎನ್‌ಸಿ ಕಾಲೇಜಿನ ಎದುರಿಗಿರುವ ಗ್ರೌಂಡಿನಲ್ಲಿ ಕುಳಿತು ಊಟ ಮುಗಿಸಿ, ಮತ್ತೆ ಲಾಗಿನ್ ಆದರೆ ರಾತ್ರಿ ಹತ್ತರ ತನಕ ಮನೆ ಮನೆಗಳಿಗೆ ಊಟ ತಿಂಡಿ ಪಿಜ್ಜಾಗಳನ್ನು ತಲುಪಿಸಿ ಲಾಗೌಟಾಗುತ್ತಿದ್ದೆ.

ಕಾರಣಾಂತರಗಳಿಂದ ನಾ ಬಾಡಿಗೆ ಇದ್ದ ರೂಮನ್ನ ಬಿಡಬೇಕಾಗಿ ಬಂತು. ಆಗ ನನಗೆ ವಾಸ್ತವ್ಯ ಕಲ್ಪಿಸಿಕೊಟ್ಟಿದ್ದೆ ಕರ್ನಾಟಕದ ಬಾದಲ್ ಸರ್ಕಾರ್ ಎಂದೇ ಖ್ಯಾತರಾದ ಪಿಂಜಾರ್ ಅಬ್ದುಲ್ ಸಾಬರ ಭಾವೈಕ್ಯತಾ ವೇದಿಕೆಯ ರಂಗಮಂದಿರ. ಮುಂದಿನ ಹದಿಮೂರು ದಿನಗಳ ವಾಸ್ತವ್ಯವನ್ನ ಈ ಭವ್ಯ ರಂಗಮಂದಿರದಲ್ಲೆ ಕಳೆದೆ. ಅಲ್ಲದೆ ಅಬ್ದುಲ್ ಸಾಬ್ ಅವರ ರಂಗಪ್ರೀತಿ, ಬಿಡುವಿದ್ದಾಗ ಅವರೊಡನೆ ನಡೆಸುತ್ತಿದ್ದ ಚರ್ಚೆ ರಂಗಭೂಮಿಯನ್ನ ಬಿಟ್ಟು ಬೇರೆ ಕ್ಷೇತ್ರದಲ್ಲಿ ದುಡಿಯುತ್ತಿದ್ದೇನೆ ಎಂಬ ನನ್ನ ಬೇಸರವನ್ನು ದೂರಗೊಳಿಸಿತು. ಬೆಳಿಗ್ಗೆ ಗೆಳೆಯ ಇನ್ಸಾಫ್‌ನ ಹಿಂದೂಸ್ತಾನಿ ಸಂಗೀತದ ರಿಯಾಜನ್ನ ಕೇಳುತ್ತಾ ಕಪ್ ಚಹಾ ಹೀರಿ ಮತ್ತೆ ಖುಷಿಯಿಂದ ಕೆಲಸಕ್ಕೆ ಹಾಜರಾಗುತ್ತಿದ್ದೆ.

ನಿಮಿಷಕ್ಕೆ 4100 ಫುಡ್ ಆರ್ಡರ್: ಝೊಮೆಟೋ CEO ಶಾಕ್ 

ಈ ದಿನಗಳಲ್ಲಿ ನನಗೆ ಸಿಕ್ಕ ಅನುಭವ ಮರೆಯಲಾಗದ್ದು. ಸುಮಾರು ಆರು ವರ್ಷಗಳ ರಂಗ ಬದುಕಿನ ನಂತರ ಇದೇ ಮೊದಲು ವ್ಯಾವಹಾರಿಕ ಪ್ರಪಂಚಕ್ಕೆ ಕಾಲಿಟ್ಟಿದ್ದು. ತಾಲೀಮು, ತರಬೇತಿ, ರಂಗ ಪ್ರದರ್ಶನಗಳಲ್ಲೆ ಇದ್ದ ನನಗೆ ಇದೊಂದು ಉತ್ತಮ ಅನುಭವವನ್ನು ನೀಡಿತು. ಈ ಸಮಯದಲ್ಲಿ ಪರಿಚಯವಾದ ಹೊಟೇಲ್ ಮಾಲೀಕರು, ಸಿಕ್ಕ ಹೊಸ ಗೆಳೆಯರ ಸ್ನೇಹ ಹೊಸತಾಗಿ ನೋಡಿದ ಹೊಸಪೇಟೆ ದುರಿತಕಾಲವನ್ನೇ ಮರೆಸಿತು.

ಲಾಕ್‌ಡೌನ್ ದೆಸೆಯಿಂದ ನನ್ನಂತೆ ದುಡಿವ ಇನ್ನೂ ಹಲವರಿದ್ದರು. ಖಾಸಗಿ ಕಂಪೆನಿಯಲ್ಲಿ ದುಡಿಯುತ್ತಿದ್ದ ಅಕೌಂಟೆಂಟ್ ಪವನ್ ಪತ್ತಾರ್, ಚಾಲಕ ವೃತ್ತಿಯಿಂದ ಬಂದ ರಾಕೇಶ್ ಮತ್ತು ಅರವಿಂದ್, ಮೊಬೈಲ್ ಅಂಗಡಿ ನಡೆಸುತ್ತಿದ್ದ ಹರೀಶ್ ಮತ್ತು ಮೋಹನ್, ಸ್ಕೇಟಿಂಗ್ ಟೀಚರ್ ಶ್ರವಣ ಕುಮಾರ್, ಉನ್ನತ ಕನಸನ್ನು ಹೊತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಬಸವಪ್ರಭು ಮತ್ತು ಸಾದಿಕ್, ಖಾಯಂ ರೈಡರುಗಳಾದ ಹನುಮೇಶಣ್ಣ, ನಾಗರಾಜ್ ನಾಯಕ್, ಗೌಸ್ ಭಾಯ್, ಶಂಕರ್ ಸಿಂಗ್, ಕೇರಳದಿಂದ ಬಂದು ಜೊಮ್ಯಾಟೋದಲ್ಲೆ ಬದುಕು ಕಟ್ಟಿಕೊಂಡ ಪ್ರಶಾಂತ್ ಚೇಟ. ಇವರೆಲ್ಲರ ಜತೆಗೆ ಬೇರೆ ಆನ್‌ಲೈನ್ ಡೆಲಿವರಿ ಕೆಲಸ ಮಾಡುತ್ತಿದ್ದ ನಟರಾಜ್, ವಿನಯ್ ಇನ್ನೂ ಹಲವರು ಪರಿಚಯವಾದರು. ಹೊಸಬರ ಪರಿಚಯ, ಇವರೆಲ್ಲರ ಜೀವನ ಪ್ರೀತಿ ಬಲು ಹಿಡಿಸಿತು.

ಈ ಅವಕಾಶವನ್ನು ಕಲ್ಪಿಸಿಕೊಟ್ಟ ಜೊಮ್ಯಾಟೋ ಕಂಪನಿಗೆ ಮತ್ತು ಆರ್ಡರ್ ಮಾಡಿ ಹೊಟ್ಟೆ ತುಂಬಿಸುತ್ತಿದ್ದ ಕಸ್ಟಮರ್‌ಗಳಿಗೆ ಆಭಾರಿ. ಜೊಮ್ಯಾಟೊಗಳಂತಹ ಕಂಪನಿಗಳಿಗೆ ಒಂದು ಸಣ್ಣ ಮನವಿ. ಬ್ಯಾಟರಿ ಬ್ಯಾಕಪ್ಪಿಗೆ ಪವರ್ ಬ್ಯಾಂಕ್, ಮೊಬೈಲ್ ಹೋಲ್ಡರ್, ಹೆಲ್ಮೆಟ್ ಮತ್ತು ಮಳೆಯಲ್ಲಿ ನೆನೆಯದಂತಹ ಮೊಬೈಲ್ ಸೇಫ್ಟಿ ಕವರ್‌ಗಳನ್ನ ನೀಡಿದರೆ ಇನ್ನು ಉತ್ತಮ ಸೇವೆ ನೀಡಬಹುದು ಅಂತ ಅನಿಸಿತು.

ಮೊಬೈಲ್ ಇಲ್ಲದಿದ್ದರೆ ಈ ಕೆಲಸವೇ ನಡೆಯಲ್ಲ. ನನ್ನ ಮೊಬೈಲ್ ಡಿಸ್‌ಪ್ಲೇ ಒಡೆದಾಗ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಂತರ ಬಸವ ಪ್ರಭು ತನ್ನ ಬಳಿ ಇದ್ದ ಇನ್ನೊಂದು ಮೊಬೈಲ್ ನೀಡಿ ನಾ ಸುಮ್ಮನೆ ನಿಲ್ಲದಂತೆ ಕಾಪಾಡಿದ. ಕಾರ್ತಿಕ್ ಎಂಬಾತ ಮ್ಯಾಪ್ ನೋಡಲು ಮೊಬೈಲ್ ಹೋಲ್ಡರ್ ನೀಡಿದ. ಇವರ ಸಹಾಯವನ್ನ ಮರೆಯಲಾರೆ.

ದುರಿತ ಕಾಲದಲ್ಲಿ ರಂಗಮಂದಿರಗಳು ಮತ್ತೆ ತೆರೆದು ಜನ ನಾಟಕ ನೋಡಲು ಬರುವ ತನಕ, ಕಲಾವಿದರು ಪ್ರೇಕ್ಷಕ ಮಹಾಶಯರಿಂದ ಬದುಕುವ ತನಕ, ಬದುಕಲು ಪರ್ಯಾಯ ಮಾರ್ಗಗಳನ್ನು ಹುಡುಕಲೇಬೇಕು. ಕಲಾವಿದರು ದುರಿತಕಾಲದಲ್ಲಿ ಬದುಕಬೇಕು, ನಂತರ ದುರಿತಕಾಲದ ಕುರಿತು ಕಥೆ ಹೇಳಬಹುದು, ಹಾಡಬಹುದು.

ಜೊಮ್ಯಾಟೊದಲ್ಲಿ ದುಡಿಯುತ್ತಿರುವೆನೆಂದು ತಿಳಿದ ಚಿಕ್ಕಮಗಳೂರಿನ ಗೆಳೆಯ ವಿಶಾಲ್ ಸಿಕೆಪಿ ‘ಸುಮುಖ ಎಸ್ಟೇಟ್’ಗಳಿಗೆ ಮ್ಯಾನೇಜರ್ ಆಗುವ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾನೆ. ಜೊಮ್ಯಾಟೋಗೆ ಹೋಗದಿದ್ದರೆ ಈ ಅವಕಾಶ ದೊರೆಯುತ್ತಿದ್ದಿಲ್ಲ. ಕೆಲಸಾ ಮಾಡುತ್ತಾ ಹೋಗಬೇಕಷ್ಟೇ, ಪ್ರತಿಫಲ ಕಾವ್ಯವೇ ಆಗುತ್ತದೆ.

ಇನ್ನು ಹೊಸ ಊರು ಹೊಸ ಅನುಭವ, ಹೊಸ ಕತೆ, ಹೊಸ ಹಾಡು. ಎಲ್ಲರಿಗೂ ಜೈ.

Follow Us:
Download App:
  • android
  • ios