ಸ್ಟಾಂಡ್ ಅಪ್ ಕಾಮಿಡಿ ಮಾಡೊ ಗಣೇಶ್ ಕಾರಂತ್ 'ಮದುವೆಯಲ್ಲಿ ಅಂಕಲ್ ಗಾಸಿಪ್' ಅನ್ನೋ ರೀಲ್ಸ್ ಮಾಡಿದ್ದಾರೆ. ಇಷ್ಟು ಗ್ರ್ಯಾಂಡ್ ಮದುವೆ ಮಾಡಿ ಟೊಮೊಟೊ ಸಾರೇ ಮಾಡ್ಲಿಲ್ಲ ಅನ್ನೋ ಅವರ ಪಂಚ್‌ಲೈನ್‌ಗೆ ನೆಟ್ಟಿಗರು ಬಿದ್ದೂ ಬಿದ್ದೂ ನಗ್ತಿದ್ದಾರೆ.
ಗಣೇಶ್ ಕಾರಂತ್ ಅನ್ನೋದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಪಾಪ್ಯುಲರ್ ಆಗ್ತಿರೋ ಹೆಸರು. ಇವರ ಜನಾರ್ಧನ ಸರ್, ಬಿಯರ್ಡ್ ಬಾಲಕ ಅನ್ನೋ ಡಿಫರೆಂಟ್ ಕಾಂಸೆಪ್ಟ್‌ನ ಕಾಮಿಡಿಗೆ ಮರುಳಾಗದವರಿಲ್ಲ. ಮೊನ್ನೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಟ್ರೇಲರ್ ರಿಲೀಸ್ ಟೈಮಲ್ಲಿ ಈ ಬಿಯರ್ಡ್ ಬಾಲಕನ ಕಾಮಿಡಿ ಸಖತ್ ಹೈಪ್ ಕ್ರಿಯೇಟ್ ಮಾಡಿತು. ಪಕ್ಕಾ ದಕ್ಷಿಣ ಕನ್ನಡ, ಉಡುಪಿ ಭಾಗದ ಭಾಷೆ ಈ ಕಾಮಿಡಿ ಮತ್ತಷ್ಟು ಜೋಶ್‌ಫುಲ್ ಆಗಿರೋದಕ್ಕೆ ಕಾರಣ. ಇದು ಹೇಳಿ ಕೇಳಿ ಕಾಮಿಡಿ. ಆ ಪಂಚಿಂಗ್ ಲೈನ್, ಬಾಡಿ ಲ್ಯಾಂಗ್ವೇಜ್, ಎಕ್ಸ್‌ಪ್ರೆಶನ್ ಜೊತೆ ನೋಡಿದ್ರೇ ಮಜಾ. ಕಾಮಿಡಿಯನ್ನು ಎಕ್ಸ್‌ಪ್ಲೇನ್ ಮಾಡುವವರು ಮೂರ್ಖರು ಅಂತ ದೊಡ್ಡೋರು ಹೇಳ್ತಾರೆ. ಅವರು ಎಕ್ಸ್‌ಪ್ಲೇನ್ ಮಾಡಿದ್ದನ್ನು ಕೇಳುವವರು ಶತಮೂರ್ಖರು ಅಂತಲೂ ಅದೇ ದೊಡ್ಡೋರು ಹೇಳಿದ ಕಾರಣ ಇಲ್ಲಿ ಗಣೇಶ್ ಕಾರಂತರ ಕಾಮಿಡಿ ಎಕ್ಸ್‌ಪ್ಲೇನ್ ಮಾಡೋ ಸಾಹಸಕ್ಕೆ ಹೋಗಲ್ಲ. ಆದರೆ ಸದ್ಯಕ್ಕೀಗ ಅವರ ಮದುವೆಯಲ್ಲಿ ಅಂಕಲ್ ಗಾಸಿಪ್ ಅನ್ನೋ ರೀಲ್ಸ್ ಸಖತ್ ಲೈಕ್ಸ್ ಪಡೀತಿದೆ. ಅದರ ಬಗ್ಗೆ ಒಂಚೂರು ಹೇಳಲೇ ಬೇಕು.
ಮದುವೆ ಬ್ಯೌಗ್ರೌಂಡಲ್ಲಿ ಅಂಕಲ್ ಮೂಲೆಯಲ್ಲಿ ನಿಂತು ಮಾತಾಡ್ತಿದ್ದಾರೆ, ಐ ಮೀನ್ ಗಾಸಿಪ್ ಮಾಡ್ತಿದ್ದಾರೆ. ಮದುವೆ, ಮಂಟಪ, ಹುಡುಗ ಹುಡುಗಿ ಬಗ್ಗೆ ಹುಳಿ ಹುಳಿ ಮಾತಾಡೋ ಅಂಕಲ್ ಆಮೇಲೆ ಲವ್ ಮ್ಯಾರೇಜ್ ಬಗ್ಗೆ ಅಸಮಾಧಾನ ಹೊರ ಹಾಕ್ತಾರೆ. ಅದೆಲ್ಲ ಒಂದು ರೀತಿ ಆದ್ರೆ ಈ ಅಂಕಲ್ ಊಟದ ಬಗ್ಗೆ ಮಾಡೋ ಕಮೆಂಟೇ ಸಖತ್ ಪಂಚಿಂಗ್. 'ಇಷ್ಟು ಗ್ರ್ಯಾಂಡ್ ಮದುವೆ ಮಾಡಿ ಟೊಮೆಟೊ ಸಾರೇ ಮಾಡಿಲ್ಲ, ಎಂತಾ ಪಿಟ್ಟಾಶಿ ಮಾರ್ರೆ..' ಅನ್ನೋ ಡೈಲಾಗ್ ಮಾತ್ರ ಚಿಂದಿ. 'ಜಿಲೇಜಿಗೆ ಸ್ವೀಟ್ ಜಾಸ್ತಿ, ತಾಂಬೂಲದ ಕಾಯಿ ಇಷ್ಟು ಚಿಕ್ಕ ಉಂಟು..' ಅಂತ ಅನ್ನೋದು ಪಕ್ಕಾ ಊರಿನ ಗಂಡಸರ ಪಿಸ ಪಿಸ ಗಾಸಿಪ್‌ಗೆ ಕನ್ನಡಿ ಹಿಡಿದ ಹಾಗಿದೆ. ಕೊನೆಯಲ್ಲಿ 'ಉಪ್ಪು ಸ್ವಲ್ಪ ಉಪ್ಪಿಂತಾತ ಅಲ್ವಾ' ಅನ್ನೋದು ಕಿಕ್ ಕೊಡೋ ಥರ ಇದೆ.
ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ಕೀರ್ತಿ ಪಾತ್ರದಿಂದ ತನ್ವಿ ಔಟಾ?
ಇಷ್ಟು ಚಂದ ಕಾಮಿಡಿ ಮಾಡುವ ಗಣೇಶ್ ಊರು ಉಡುಪಿ. ಇವರು ಕಂಪ್ಯೂಟರ್ ಸೈನ್ಸ್ ಇಂಜಿನಿಯರ್. ೮ ವರ್ಷದಿಂದ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡ್ತಾರೆ. ಕಾಮಿಡಿ ಅನ್ನೋದು ಎಲ್ಲೆಲ್ಲೋ ಇರಲ್ಲ. ನಮ್ ನಡುವೆಯೇ ಇರುತ್ತೆ. ಅಕ್ಕಪಕ್ಕ ಒಂಚೂರು ಸೂಕ್ಷ್ಮವಾಗಿ ಗಮನಿಸಿದರೆ ಜನರ ಮಾತಿನಲ್ಲೇ ಹಾಸ್ಯಕ್ಕೆ ಬೇಕಾದ ಸಾಮಗ್ರಿ ಸಿಗುತ್ತೆ ಅನ್ನೋದು ಇವರ ಕಾಮಿಡಿ ನೋಡಿದ್ರೆ ತಿಳಿಯುತ್ತೆ. ಗಣೇಶ್ ಕಾರಂತ್ ಕಾಮಿಡಿಯ ಮತ್ತೊಂದು ವಿಶೇಷ ಎಂತ ಗೊತ್ತಾ.. ಇವರ ಕಾಮಿಡಿಯಲ್ಲಿ ಮನೆ ಮಂದಿಯೂ ಕಾಣಿಸಿಕೊಳ್ತಾರೆ. ಅಮ್ಮ, ಹೆಂಡತಿ ಎಲ್ಲ ಸಹಜವಾಗಿ ಕಾಣಿಸಿಕೊಳ್ತಾರೆ. ಲಕ್ಷಾಂತರ ವ್ಯೂಸ್ ದಾಖಲಿಸೋ ಈ ವೀಡಿಯೋಗಳಲ್ಲಿ ಸಹಜತೆಯೇ ಹೆಚ್ಚು ಇಷ್ಟವಾಗುತ್ತೆ. ಅವರದೇ ಮನೆ, ರೂಮು, ಟಿವಿ, ವಾರ್ಡ್‌ರೋಬ್ ನಡುವೆ ಮನೆಯವರ ಮಾತು. ನೋಡುವವರಿಗೆ ತಮ್ಮ ಮನೆಯಲ್ಲೋ, ಪಕ್ಕದ ಮನೆಯಲ್ಲೋ ನಡೆಯೋ ಸಂಭಾಷಣೆ ಥರ ಫೀಲು.
ಇದನ್ನ ನೋಡಿ ಜನ ತುಂಬಾನೆ ಮೆಚ್ಚಿಕೊಂಡಿದ್ದಾರೆ. 'ಚಿಂದಿ ಮಗಾ' ಅಂತ ಕಮೆಂಟ್ ಮಾಡಿದ್ದಾರೆ.
ಅಂದ ಹಾಗೆ ಗಣೇಶ್ ಕಾರಂತ್ ಪ್ರತಿಭೆ ಕೇವಲ ಇಂಥಾ ಕಾಮಿಡಿಗೆ ಮಾತ್ರ ಸೀಮಿತ ಅಲ್ಲ. ಅವರು ಸಖತ್ತಾಗಿ ಹಾಡ್ತಾರೆ. ಯೂಟ್ಯೂಬರ್ ಆಗಿಯೂ ಫೇಮಸ್. ಕ್ರಿಕೆಟ್ ಪ್ರೇಮಿ. ಕ್ರಿಕೆಟ್ ಮ್ಯಾಚ್ ಆಗ್ತಿರುವಾಗ ರನ್ನಿಂಗ್ ಕಮೆಂಟ್ರಿ ಕೊಡ್ತಾರೆ. ಪುರುಸೊತ್ತಿದ್ದಾಗ ಸಿನಿಮಾ ರಿವ್ಯೂನೂ ಮಾಡ್ತಾರಂತೆ. ಇವರ ಕೈ ಹಿಡಿದ ಹುಡುಗಿ ಶ್ರೀವಿದ್ಯಾ. ಇವರೂ ಸಾಫ್ಟ್‌ವೇರ್ ಇಂಜಿನಿಯರ್. ಇವರದು ಅರೇಂಜ್ಡ್ ಮ್ಯಾರೇಜ್ ಅಂತೆ. ಮದುವೆ ಆಗೋ ಮೊದಲು ಗಣೇಶ್ ಹೀಗೆ ರೀಲ್ಸ್ ಮಾಡ್ತಾರೆ, ಹಾಡ್ತಾರೆ ಅನ್ನೋದೆಲ್ಲ ವಿದ್ಯಾ ಅವರಿಗೆ ಗೊತ್ತೇ ಇರಲಿಲ್ಲವಂತೆ. ಆದರೆ ಈಗ ಇವರೂ ಗಣೇಶ್ ಕಾಮಿಡಿ ರೀಲ್ಸ್‌ನಲ್ಲಿ ಅವರೂ ಸಮಭಾಗಿ. ಹೀಗಾಗಿ ಗಣೇಶ್ ರೀಲ್ಸ್ ನೋಡೋರಿಗೆ ಸದಾ ಕಿಂಡಲ್ ಮಾಡೋ, ಗಂಡನನ್ನು ಮಂಗ ಮಾಡುವ ಶ್ರೀವಿದ್ಯಾ ಕೂಡ ಪರಿಚಿತ.
ಸೋ ಗಣೇಶ್ ಕಾರಂತ್ ಅವರ ಹೆಸರಲ್ಲೇ ಇನ್‌ಸ್ಟಾ ಗ್ರಾಂನಲ್ಲಿ ಸಿಕ್ತಾರೆ. ತಲೆಬಿಸಿ ಆದಾಗ ಅಲ್ಲಿಗೊಂದು ವಿಸಿಟ್ ಮಾಡಿದ್ರೆ ಹೊಟ್ಟೆ ತುಂಬ ನಕ್ಕು ತಲೆಬಿಸಿ ಕಡಿಮೆ ಮಾಡ್ಕೋಬಹುದು.
ಮೂರು ತಿಂಗಳಿನಲ್ಲಿ 45 ಕೆಜಿ ಲಾಸ್; ಅವಕಾಶ ಗಿಟ್ಟಿಸಿಕೊಂಡಿದ್ದು ಹೇಗೆಂದು ಸತ್ಯ ಬಿಚ್ಚಿಟ್ಟ ರಾಮಾಚಾರಿ ರಿತ್ವಿಕ್!
