Kannada Youtuber Veekshitha Gowda: ಯುಟ್ಯೂಬರ್, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವೀಕ್ಷಿತಾ ಗೌಡ ಅವರು ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿಂದೆ ದುಡ್ಡಿಗೋಸ್ಕರ ಮದುವೆ ಆದೆ ಎಂದು ಅವರಿಗೆ ಕೆಲವರು ನೆಗೆಟಿವ್ ಮಾತನಾಡಿದ್ದರಂತೆ.
ಪಟಪಟ ಅಂತ ಮಾತನಾಡುತ್ತಿದ್ದ ವೀಕ್ಷಿತಾ ಗೌಡ ಅವರು ( Youtuber Veekshitha Gowda ) ಇಂದು ತಾಯಿಯಾಗುತ್ತಿದ್ದಾರೆ. ಡಾಕ್ಟರ್ ದೀಪಕ್ ಅವರನ್ನು ಮದುವೆಯಾಗಿದ್ದ ವೀಕ್ಷಿತಾಗೆ, “ನೀನು ದುಡ್ಡಿಗಾಗಿ ದೀಪಕ್‌ನನ್ನು ಮದುವೆಯಾದೆ” ಎಂದು ಹೇಳಿದ್ದರಂತೆ. ಮದುವೆಯಾಗಿ ಐದು ವರ್ಷಗಳ ಬಳಿಕ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಜೋಶ್ ಟಾಕ್ ಎನ್ನುವ ಯುಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿತಾ ಅವರು ತಮ್ಮ ಯುಟ್ಯೂಬ್ ಜರ್ನಿ ಜೊತೆಗೆ ಮದುವೆ ಕಥೆ ಹೇಳಿಕೊಂಡಿದ್ದಾರೆ.
ಯಾಕೆ ಈ ಹುಡುಗಿ ಮದುವೆಯಾದೆ ಅಂತ ಪ್ರಶ್ನೆ ಬಂತು!
“ನಾನು ನಿರೂಪಣೆ ಮಾಡುತ್ತಿದ್ದೆ, ನನಗೆ ಒಂದಿಷ್ಟು ಕಮಿಟ್‌ಮೆಂಟ್ಸ್ ಇತ್ತು. ಹೀಗಾಗಿ ನಾನು ಮನರಂಜನಾ ಕ್ಷೇತ್ರದ ಬದಲಿಗೆ ಕಾರ್ಪೊರೇಟ್ ಕ್ಷೇತ್ರವನ್ನು ಆಯ್ಕೆ ಮಾಡಿದೆ. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಆದರೆ 2018ರಲ್ಲಿ, ನಾನು ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿಯಾದೆ. ಅವರೇ ನನ್ನ ಗಂಡ ಡಾಕ್ಟರ್ ದೀಪಕ್. 2019 ಮತ್ತು 2020ರಲ್ಲಿ ಮತ್ತೆ ಕೆಲವು ಬದಲಾವಣೆಗಳಾದವು. ನಾನು ನನ್ನ ಕೆಲಸವನ್ನು ಬಿಟ್ಟು, ವಿದೇಶದಿಂದ ನನ್ನ ಗಂಡನೊಂದಿಗೆ ಮೈಸೂರಿಗೆ ಬಂದೆ. ಆಗ ಜನರು ನನ್ನ ಗಂಡನಿಗೆ "ನೀನು ಡಾಕ್ಟರ್, ಚೆನ್ನಾಗಿ ಸಂಪಾದಿಸುತ್ತಿದ್ದೀಯ, ಇಂಜಿನಿಯರ್‌ಗಳು, ಡಾಕ್ಟರ್‌ಗಳಿಂದ ಪ್ರಪೋಸಲ್‌ಗಳು ಬಂದಿದ್ದರೂ ಯಾಕೆ ಈ ಹುಡುಗಿ ಮದುವೆಯಾದೆ?" ಅಂತ ದೀಪಕ್‌ನನ್ನು ಕೇಳಿದರು, ನೆಗೆಟಿವ್ ಕಾಮೆಂಟ್‌ಗಳು ಬಂದವು. ಆದರೆ ನಾವು ಅವುಗಳ ಬಗ್ಗೆ ಗಮನ ಕೊಡಲಿಲ್ಲ. ಈ ಎಲ್ಲ ಟೀಕೆಗಳು ನಮ್ಮನ್ನು ಇನ್ನಷ್ಟು ಬಲಿಷ್ಠರನ್ನಾಗಿ ಮಾಡಿದವು, ಉತ್ತಮ ವ್ಯಕ್ತಿಗಳನ್ನಾಗಿ ಮಾಡಿದವು” ಎಂದು ವೀಕ್ಷಿತಾ ಹೇಳಿದ್ದಾರೆ.
ನಾನು ಕೂಡ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದೇನೆ!
“ನೀನು ಯಾಕೆ ಅಡಿಗೆ ಮಾಡುವುದಿಲ್ಲ? ನಿನ್ನ ಗಂಡ ಚೆನ್ನಾಗಿ ಸಂಪಾದಿಸುತ್ತಿದ್ದಾನೆ, ಎಲ್ಲವನ್ನೂ ನೀನು ಏಕೆ ಬ್ಯಾಲೆನ್ಸ್ ಮಾಡೋದಿಲ್ಲ ಅಂತ ಜನರು ಕೇಳುತ್ತಿದ್ದರು. ಆಮೇಲೆ ನಾನು ಯುಟ್ಯೂಬ್ ಆರಂಭಿಸಿದೆ. ಜನರಿಗೆ ನಾನು ಹೇಗೆ ಅಂತ ಮೊದಲು ಗೊತ್ತಾಯ್ತು. 2023ರಲ್ಲಿ, ನನ್ನ ಯುಟ್ಯೂಬ್ ವೀಕ್ಷಣೆ ಅದ್ಭುತವಾಗಿದೆ, ನಾನು ತುಂಬಾ ಸಂತೋಷವಾಗಿದ್ದೇನೆ. ನನ್ನ ಗಂಡ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ. ನಾನು ಈಗ ನನ್ನ ಗಂಡನಷ್ಟೇ ಸಂಪಾದಿಸುತ್ತಿದ್ದೇನೆ. ಈಗ ಜನರು "ದೀಪು ನೀನು ಲಕ್ಕಿ. ಅಂಥ ಹುಡುಗಿ ಪಡೆಯೋಕೆ" ಎಂದು ಹೇಳುತ್ತಿದ್ದಾರೆ.
ಬ್ರ್ಯಾಂಡ್‌ಗಳ ಜೊತೆ ಕೆಲಸ ಮಾಡ್ತಿದ್ದೇನೆ!
“ಈಗ ನಾನು ತಿಂಗಳಿಗೆ ಕನಿಷ್ಠ 15 ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ. ಜನರು ಈಗ ನನ್ನ ಬಳಿಗೆ ಬಂದು ನನ್ನ ಜೊತೆ ಕೆಲಸ ಮಾಡಲು ಬಯಸುತ್ತಾರೆ. ನನ್ನ ಗಂಡ ಯಾವಾಗಲೂ ನನ್ನೊಂದಿಗಿದ್ದ, ಇಂದು ನಾವು ಇನ್ನಷ್ಟು ಬಲಿಷ್ಠರಾಗಿದ್ದೇವೆ. ಕಳೆದ ಮೂರು ವರ್ಷಗಳಿಂದ ನನ್ನ ಗಂಡ ನನ್ನನ್ನು ಅರ್ಥಮಾಡಿಕೊಂಡು, ನನ್ನನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ” ಎಂದು ವೀಕ್ಷಿತಾ ಹೇಳಿದ್ದಾರೆ.
“ನನ್ನೊಂದಿಗೆ ಒಂದು ತಂಡವಿದೆ, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಯೂಟ್ಯೂಬ್‌ನಲ್ಲಿ ನನ್ನ ಮೊದಲ ಸಂಬಳ 7,000 ರೂಪಾಯಿಯಾಗಿತ್ತು, ಆದರೆ ಇಂದು ನನ್ನ ಸಂಬಳ ಲಕ್ಷಗಳಲ್ಲಿ ತಿರುಗುತ್ತಿದೆ. ಈ ಪಯಣದಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ” ಎಂದು ವೀಕ್ಷಿತಾ ಹೇಳಿದ್ದಾರೆ.
