Kipi keerthi V/s Black Cobra Muttu: ಸದ್ಯ ಕನ್ನಡ ಸೋಶಿಯಲ್‌ ಮೀಡಿಯಾ ಬಳಕೆದಾರರಲ್ಲಿ ಅನೇಕರಿಗೆ ಕಿಪಿ ಕೀರ್ತಿ ಹೆಸರು ಗೊತ್ತಿರುತ್ತದೆ. ರೀಲ್ಸ್‌ ಮೂಲಕ ಫೇಮಸ್‌ ಆಗಿರೋ ಇವರನ್ನು ಪ್ರೀತಿಸಲು ಇಬ್ಬರು ಮುಗಿಬಿದ್ದಿದ್ದಾರೆ. ಅದೀಗ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. 

ತುಮಕೂರು: ಮನಬಂದಂತೆ ಮಾತನಾಡುತ್ತ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿರೋ ಕಿಪ್ಪಿ ಕೀರ್ತಿ, ತನ್ನ ಲವ್‌ಸ್ಟೋರಿಯನ್ನು, ಬ್ರೇಕಪ್‌ ಕಥೆಯನ್ನು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡರು. ದಚ್ಚು ಇದು ನ್ಯಾಯಾನಾ? ಅಂತ ಕಿಪ್ಪಿ ಕೀರ್ತಿ ಹೇಳಿರೋ ಮಾತುಗಳು ಎಷ್ಟು ವೈರಲ್‌ ಆಗಿವೆ ಎನ್ನೋದು ಸೋಶಿಯಲ್‌ ಮೀಡಿಯಾ ಬಳಕೆದಾರರಿಗೆ ಗೊತ್ತಿದೆ. ಈಗ ಇವರಿಗೋಸ್ಕರ ಕಪ್ಪೆ, ಕೋಬ್ರಾ ಜಗಳ ಆಡ್ಕೊಂಡು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದೂ ಆಯ್ತು!

ಬ್ಲ್ಯಾಕ್‌ ಕೋಬ್ರಾ ಯಾರು?

9ನೇ ಕ್ಲಾಸ್‌ ಓದಿದ್ದ ಬ್ಲ್ಯಾಕ್‌ ಕೋಬ್ರಾ ಕಡಲೆಕಾಯಿ ವ್ಯಾಪಾರ ಮಾಡುತ್ತಿದ್ದರು. ಕಳೆದ ಆರು ತಿಂಗಳಿನಿಂದ ಬ್ಲ್ಯಾಕ್‌ ಕೋಬ್ರಾ ಅವರು ಜನರನ್ನು ರಂಜಿಸಬೇಕು ಅಂತ ರೀಲ್ಸ್‌ ಮಾಡುತ್ತಿದ್ದರು. ಜನರ ಮುಖದಲ್ಲಿ ನಗು ತರಿಸಲು ಇವರು ರೀಲ್ಸ್‌ ಮಾಡುತ್ತಿದ್ದರಂತೆ. ಆದರೆ ಈ ರೀಲ್ಸ್‌ ಹುಚ್ಚಾಟ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರುವ ಹಾಗೆ ಮಾಡಿದೆ. ಈ ಬಗ್ಗೆ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ.

ನನ್ನ ಹೆಸರು ಬಳಸ್ಕೊಂಡು ಯಾಕೆ ಬೆಳಿತೀರಾ?

ಬ್ಲ್ಯಾಕ್‌ ಕೋಬ್ರಾ ಮಾತನಾಡಿದ್ದು, “ಕಿಪಿ ಕೀರ್ತಿ ಹಾಗೂ ದಚ್ಚು ಬ್ರೇಕಪ್‌ ಆದಾಗ ನನ್ನ ಮನಸ್ಸು ಚುರ್‌ ಅಂತಾಯ್ತು. ಕಿಪಿ ಕೀರ್ತಿ ಕಣ್ಣೀರು ಹಾಕಿಕೊಂಡು ರೀಲ್ಸ್‌ ಮಾಡುತ್ತಿದ್ದರು. ಆ ಹುಡುಗಿ ರೂಪ ಏನೇ ಇರಲಿ, ಅವಳಿಗೆ ಭಾವನೆಗಳು ಇರುತ್ತವೆ. ಅವಳು ಅಳೋದು ನೋಡಿ, ನಗಬೇಕು, ಸಮಾಧಾನ ಆಗಬೇಕು ಅಂತ ನಾನು ಲವ್‌ ಮಾಡ್ತೀನಿ ಅಂತ ರೀಲ್ಸ್‌ ಮಾಡಿದೆ. ಇದನ್ನು ನೋಡಿ ಕಿಪಿ ಕೀರ್ತಿ ಕೂಡ ನಂಗೆ ವಾಯ್ಸ್‌ ಮೆಸೇಜ್‌ ಕಳಿಸಿದ್ದಾರೆ. ನನ್ನ ಹೆಸರು ಹೇಳಿಕೊಂಡು ಯಾಕೆ ಹೆಸರು ಮಾಡ್ತೀರಾ ಅಂತ ಕಿಪಿ ಕೀರ್ತಿ ಹತ್ತರಿಂದ ಹನ್ನೆರಡು ವಾಯ್ಸ್‌ ನೋಟ್‌ ಕಳಿಸಿದ್ದಾಳೆ. ನಾನು ಅವಳಿಗೆ ಒಂದು ವಾಯ್ಸ್‌ ಕಳಿಸಿ ಸುಮ್ಮನಾದೆ” ಎಂದು ಹೇಳಿದ್ದಾರೆ.

ಚಾಕು ತೋರಿಸಿ ವಿಡಿಯೋ!

“ಕಪ್ಪೆ ಸುನೀಲ್ ಅವರು ನನ್ನ ಹುಡುಗಿ, ಮರೆತುಬಿಡು ಅಂತ ಅವಾಜ್‌ ಹಾಕಿದರು. ನಾನು ಕೂಡ ನನ್ನ ಹುಡುಗಿ ಅಂತ ಅವಾಜ್‌ ಹಾಕಿದೆ. ಆಗ ಕಪ್ಪೆ, ಕತ್ತರಿಸಿ ಕಾರ್‌ನಲ್ಲಿ ತುಂಬ್ತೀನಿ ಅಂತ ಹೇಳಿದ್ರು. ಹೀಗಾಗಿ ನಾನು ಚಾಕು ತೋರಿಸಿ ಕಪ್ಪೆಗೆ ಟಾಂಗ್‌ ಕೊಡೋ ಥರ ತಮಾಷೆಗೆ ವಿಡಿಯೋ ಮಾಡಿದೆ. ಆದರೆ ಆ ವಿಡಿಯೋ ಸಮಾಜಕ್ಕೆ‌ ಒಳ್ಳೆಯ ಸಂದೇಶ ಕೊಡೋದಿಲ್ಲ ಅಂತ ಪೊಲೀಸರು ಹೇಳಿದ್ದಾರೆ. ನನಗೂ ಕೂಡ ಈಗ ವಿಡಿಯೋ ಮಾಡಿದಾಗ ಅದು ಗಂಭೀರವಾಗಿದೆ ಅಂತ ಅರ್ಥ ಆಯ್ತು. ಈ ರೀತಿ ಮತ್ತೆ ವಿಡಿಯೋ ಮಾಡೋದಿಲ್ಲ. ಜನರು ಕೂಡ ಈ ಮಾರ್ಗ ಅನುಸರಿಸಬೇಡಿ” ಎಂದು ಬ್ಲ್ಯಾಕ್‌ ಕೋಬ್ರಾ ಹೇಳಿದ್ದಾರೆ.