ಸೀತಾರಾಮ ಪ್ರಿಯಾ ಮದ್ವೆ ಖುಷಿಯಲ್ಲಿ ಹೀಗೆಲ್ಲಾ ನಡೆಯಿತು ನೋಡಿ ಬ್ಯಾಚುಲರ್ ಪಾರ್ಟಿ! ವಿಡಿಯೋ ವೈರಲ್
ಹಸೆಮಣೆ ಏರಲು ಸಿದ್ಧಳಾಗಿರೋ ಸೀತಾರಾಮ ಪ್ರಿಯಾ ಭರ್ಜರಿ ಬ್ಯಾಚುಲರ್ ಪಾರ್ಟಿ ಚಿಕ್ಕಮಗಳೂರಿನಲ್ಲಿ ನಡೆದಿದೆ. ಇದರ ವಿಡಿಯೋ ಶೇರ್ ಆಗಿದೆ.
ಸೀತಾರಾಮದ ಪ್ರಿಯಾ ಇದಾಗಲೇ ಸೀರಿಯಲ್‌ನಲ್ಲಿ ತನ್ನ ಮನಮೆಚ್ಚಿದ ಪ್ರಿಯಕರ ಅಶೋಕ್‌ನನ್ನು ಮದುವೆಯಾಗಿದ್ದಾಳೆ. ಆದರೆ ರಿಯಲ್ ಲೈಫ್‌ನ ಪ್ರಿಯಾ ಅಂದ್ರೆ ಮೇಘನಾ ಶಂಕರಪ್ಪ ನಿಜ ಜೀವನದಲ್ಲಿ ಹಸೆಮಣೆಯೇರಲು ಸಜ್ಜಾಗಿದ್ದಾರೆ. ಈ ಬಗ್ಗೆ ನಟಿ ಈ ಹಿಂದೆಯೇ ಕ್ಲೂ ಕೊಟ್ಟಿದ್ದರೂ ಪತಿಯ ಮುಖವನ್ನು ಪರಿಚಯಿಸಿರಲಿಲ್ಲ. ಅದನ್ನು ಗುಟ್ಟಾಗಿ ಇಟ್ಟಿದ್ದರು. ತಮ್ಮ ಬಾಯ್‌ಫ್ರೆಂಡ್ ಬರ್ತಡೇ ವಿಶ್ ಮಾಡಿದ ಫೋಟೋವೊಂದನ್ನು ಹಂಚಿಕೊಂಡಿದ್ದರಷ್ಟೆ. ಇಬ್ಬರೂ ಒಂದೇ ತರಹದ ಉಂಗುರ ಧರಿಸಿ ಕೈಮೇಲೆ ಕೈ ಇಟ್ಟು ಫೋಟೋ ತೆಗೆದುಕೊಂದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡು ವಿಶ್ ಮಾಡಿದ್ದರು. ಕೊನೆಗೆ, ವಿಶೇಷ ವಿಡಿಯೋ ಮಾಡುವ ಮೂಲಕ ಭಾವಿ ಪತಿಯ ಮುಖ ಪರಿಚಯವನ್ನು ಮಾಡಿಸಿದ್ದರು. ಹೆಸರು ಜಯಂತ್ ಎನ್ನುವುದನ್ನು ಕ್ಯಾಪ್ಷನ್ ಮೂಲಕ ತಿಳಿಸಿದ್ದಾರೆ. One step closer to Forever, Meet Jayanth ಎಂದು ಬರೆದುಕೊಂಡಿದ್ದಾರೆ. ಆದರೆ ಅವರ ಬಗ್ಗೆ ಯಾವುದೇ ಮಾಹಿತಿಯನ್ನು ಶೇರ್ ಮಾಡಲಿಲ್ಲ. ಅದಕ್ಕಾಗಿ ಇನ್ನೊಂದು ವಿಡಿಯೋ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
ಇದರ ನಡುವೆಯೇ ಸೀತಾರಾಮ ಸ್ನೇಹಿತೆಯರು ಬ್ಯಾಚುಲರ್ ಪಾರ್ಟಿ ಮಾಡಲು ಚಿಕ್ಕಮಗಳೂರಿಗೆ ಹೋಗಿದ್ದು, ಅದರ ವಿಡಿಯೋ ಅನ್ನು ಸೀತಾ ಅರ್ಥಾತ್ ವೈಷ್ಣವಿ ಗೌಡ ಶೇರ್ ಮಾಡಿಕೊಂಡಿದ್ದಾರೆ. ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಜೊತೆ ಮೇಘನಾ ಶಂಕರಪ್ಪ, ವಿಲನ್ ಭಾರ್ಗವಿ ಪಾತ್ರಧಾರಿ ಪೂಜಾ ಲೋಕೇಶ್ ಹಾಗೂ ರಾಮ್ ಚಿಕ್ಕಮ್ಮನ ಪಾತ್ರದಲ್ಲಿ ನಟಿಸುತ್ತಿರುವ ಸಿಂಧು ರಾವ್ ಹೋಗಿದ್ದಾರೆ. ಅಲ್ಲಿ ರೆಸಾರ್ಟ್ನಲ್ಲಿ ಪಾರ್ಟಿ ಮಾಡಿದ್ದಾರೆ. ವೈಷ್ಣವಿ ಗೌಡ ಅವರು ಈ ಟ್ರಿಪ್ ಆಯೋಜನೆ ಮಾಡಿದ್ದರು. ಅಲ್ಲಿ ಭರ್ಜರಿ ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಎಲ್ಲರೂ ಸಕತ್ ಎಂಜಾಯ್ ಮಾಡಿದ್ದಾರೆ. ಫೈರ್ ಕ್ಯಾಂಪ್ ಮಾಡಿದ್ದಾರೆ. ಮುಂಗಾರು ಮಳೆ ಸೇರಿದಂತೆ ವಿವಿಧ ಸಿನಿಮಾಗಳ ಶೂಟಿಂಗ್ ಮಾಡಿರೋ ಸ್ಪಾಟ್ಗೆ ಹೋಗಿರುವ ಈ ಸ್ನೇಹಿತೆಯರು ಅಲ್ಲಿ ಆಟವಾಡಿ, ಮೋಜು ಮಾಡಿ ಕುಣಿದು ಕುಪ್ಪಳಿಸಿದ್ದಾರೆ. ಇದೇ ವೇಳೆ ಮೇಘನಾ ಅವರು ಎಲ್ಲಾ ಸ್ನೇಹಿತೆಯರಿಗೆ ವಿಶೇಷ ಗಿಫ್ಟ್ ಕೊಟ್ಟಿದ್ದಾರೆ. ಎಲ್ಲರ ಹೆಸರು ಬರೆದು ಝಗಮಗಿಸುತ್ತಿರುವ ಈ ಗಿಫ್ಟ್ ಪ್ಯಾಕ್ನಲ್ಲಿ ಎಲ್ಲರಿಗೂ ದುಬಾರಿ ಬೆಲೆ ಬಾಳುವ ಮೇಕಪ್ ಸಾಮಗ್ರಿಗಳನ್ನು ಕೊಟ್ಟಿರುವುದನ್ನು ನೋಡಬಹುದು.
ಪತ್ನಿ- ಮಗ ದೂರದಲ್ಲಿ ವಾಸಿಸ್ತಿರೋದಕ್ಕೆ ಕಾರಣ... ಮೊದಲ ಬಾರಿ ಮೌನ ಮುರಿದ ನಟ ವಿನೋದ್ ರಾಜ್
ವೈಷ್ಣವಿ ಗೌಡ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್‌ನ ಸನ್ನಿಧಿ ಮೂಲಕ ಸಕತ್ ಫೇಮಸ್ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ. ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ, ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಿಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ. `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ ನಿರೂಪಣೆ ಕೂಡ ಮಾಡಿದ್ದಾರೆ. `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್ಬಾಸ್ ಸೀಸನ್ 8ನಲ್ಲಿ ಭಾಗವಹಿಸಿದ್ದಾರೆ.
ಇನ್ನು ಮೇಘನಾ ಶಂಕರಪ್ಪ ಅವರ ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್ಗೂ ಮುನ್ನ ಅವರು, ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ. ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.
ಇವ್ರು ನನ್ನ ಒಳ್ಳೆಯ ಗಂಡ ಅಲ್ಲ... ಆದ್ರೆ... ನಟಿ ಮೇಘನಾ ರಾಜ್ ಹಳೆಯ ವಿಡಿಯೋ ವೈರಲ್