ನಿದ್ದೆಯಲ್ಲೇ ನಗುವ ಮಗುವಿನ ಜೊತೆ ನಿತ್ಯ ಯುಗಾದಿ : ಮಯೂರಿ ಕ್ಯಾತರಿ

ನಟಿ ಮಯೂರಿ ಕ್ಯಾತರಿಗೆ ಈ ಯುಗಾದಿ ತುಂಬಾನೇ ಸ್ಪೆಷಲ್. ಕಾರಣ ಇವರ ಮನೆಗೆ ಬಂದಿರುವ ಹೊಸ ಅತಿಥಿ.

Sandalwood actress Mayuri Kyatari celebrates Yugadi with her new born baby

- ಬಾನಿ

ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಜನಪ್ರಿಯರಾದ, 'ಕೃಷ್ಣಲೀಲಾ' ದಂಥಾ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಮಯೂರಿ ಕ್ಯಾತರಿಗೆ ಈ ಯುಗಾದಿ ತುಂಬಾನೇ ಸ್ಪೆಷಲ್. ಕಾರಣ ಇವರ ಮನೆಗೆ ಬಂದಿರುವ ಹೊಸ ಅತಿಥಿ. ಹೌದು, ನಟಿ ಮಯೂರಿ ಈಗಷ್ಟೇ ಮುದ್ದು ಕಂದನ ತಾಯಿಯಾಗಿದ್ದಾರೆ. ಕೇವಲ ೨೨ ದಿನಗಳ ಮಗುವಿನ ಜೊತೆಗೆ ಲೈಫು ರೋಲರ್ ಕೋಸ್ಟರ್ ನಂತಾಗಿದೆಯಂತೆ. ಆದರೂ ಮಗನ ನಗು ಎಲ್ಲವನ್ನೂ ಮರೆಸುತ್ತೆ. ಬದುಕಿನಲ್ಲಿ ಹೊಸ ಚೈತ್ರದ ಆಗಮನದ ಮಯೂರಿ ಸಂಭ್ರಮದಿಂದ ಹೇಳಿಕೊಂಡಿದ್ದಾರೆ.

- ಈ ಬಾರಿಯ ಯುಗಾದಿ ಬಹಳ ಸ್ಪೆಷಲ್ ಇರಬೇಕಲ್ವಾ?
ಖಂಡಿತಾ. ನನ್ನ ಇಷ್ಟೂ ವರ್ಷಗಳ ಯುಗಾದಿ ಆಚರಣೆಗೆ ಹೋಲಿಸಿದರೆ ಈ ಬಾರಿಯ ಹಬ್ಬಕ್ಕೆ ವಿಶೇಷ ರಂಗ ತಂದಿರೋದು ನನ್ನ ಮಗ. ಈಗ ಅವನ ಜಗತ್ತೇ ನನ್ನದೂ. ಅವನ ಆರೈಕೆಯಲ್ಲಿ ಸಂಪೂರ್ಣ ಕಳೆದು ಹೋಗಿದ್ದೇನೆ. ಅವನು ಬಂದು ಇನ್ನೂ ಇಪ್ಪತ್ತು ದಿನಗಳು ಕಳೆದಿವೆ ಅಷ್ಟೇ. ಅವನ ಆಗಮನ ನನ್ನ ಹಾಗೂ ಅರುಣ್ ಮನೆಗಳ ಖುಷಿ, ನಲಿವು ಹೆಚ್ಚಿಸಿದೆ. ಈ ಬಾರಿ ಭರ್ಜರಿ ಹಬ್ಬ.

Sandalwood actress Mayuri Kyatari celebrates Yugadi with her new born baby

- ಅಂದ್ರೆ ಸೆಲೆಬ್ರೇಶನ್ ಜೋರಾ? ಹೇಗೆ ಆಚರಣೆ ಮಾಡ್ತೀರಿ?
ಇಷ್ಟು ಚಿಕ್ಕ ಮಗುವನ್ನಿಟ್ಟು ಹಬ್ಬವನ್ನು ಜೋರಾಗಿ ಸೆಲೆಬ್ರೇಟ್ ಮಾಡೋದು ದೂರದ ಮಾತು. ನಾನು ಹೇಳಿದ್ದು ನಮ್ಮೆಲ್ಲರ ಮನಸ್ಸಿಗೆ ಸಂಬಂಧಿಸಿದ ವಿಚಾರ. ಯುಗಾದಿ ಅಂದರೆ ಹೊಸ ಚಿಗುರು, ಹೊಸ ಖುಷಿಯ ಹರಿವು ಅಂತೆಲ್ಲ ಹೇಳ್ತಾರಲ್ಲ, ಆ ಹಿನ್ನೆಲೆಯಲ್ಲಿ ನಮ್ಮ ಪ್ರೇಮದ ಕುಡಿ ಮಗನ ಆಗಮನದಿಂದ ನಮ್ಮ ಬದುಕೇ ಹೊಸ ದಿಕ್ಕಿಗೆ ಮುಖ ಮಾಡಿದ ಹಾಗಾಗಿದೆ. ಈ ಸಲ ಎಲ್ಲ ಕೆಲಸ ಅಮ್ಮನ ಹೆಗಲ ಮೇಲೆ ಬಿದ್ದಿದೆ. ಹಿಂದಿನ ವರ್ಷಗಳಲ್ಲಾದರೆ ಬೇವು, ಬೆಲ್ಲ ರೆಡಿ ಮಾಡೋದು, ಮನೆಯ ಅಲಂಕಾರ, ಅಡುಗೆ, ದೇವರ ಪೂಜೆ ಎಲ್ಲದರಲ್ಲೂ ಅಮ್ಮನಿಗೆ ನೆರವಾಗ್ತಿದ್ದೆ. ಈ ಬಾರಿ ಅಮ್ಮ ಒಬ್ಬರೇ ಓಡಾಡ್ತಿದ್ದಾರೆ. ಮಗ ಒಂಚೂರು ಟೈಮ್‌ ಕೊಟ್ರೆ ಮಾಡ್ಬಹುದೇನೋ. ಆದರೆ ಅವ್ನು ಟೈಮ್ ಕೊಡೋ ಯಾವ ಲಕ್ಷಣವೂ ಕಾಣ್ತಿಲ್ಲ. ನಮ್ಮೂರಲ್ಲಂತೂ ಯುಗಾದಿ ಬಂದರೆ ಜೋರಾಗಿಯೇ ಹಬ್ಬದ ಆಚರಣೆ ಇರುತ್ತೆ. ಏನೇನೋ ತಿಂಡಿ ಮಾಡ್ತಾರೆ. ಕೊನೆಯಲ್ಲಿ ಒಬ್ಬಟ್ಟಿನ ಊಟ.

ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ನಟಿ ಈಕೆ! ...

- ಇನ್ನೂ ತಿಂಗಳೂ ತುಂಬದ ಬಾಣಂತಿ ನೀವು. ಹೇಗಿದೆ ಅನುಭವ?
ನಾನು ಹುಬ್ಬಳ್ಳಿಯವಳು. ನಮ್ಮೂರ ಕಡೆ ಬಾಣಂತನ ಜೋರು. ಈ ಸಮಯದಲ್ಲಿ ಮೈಯನ್ನು ಬೆಚ್ಚಗಿಡೋದು ಬಹಳ ಮುಖ್ಯ. ಬೆಳಗ್ಗೆ ನನಗೂ ಮಗನಿಗೂ ಎಣ್ಣೆ ಅಭ್ಯಂಜನ. ಕೆಂಡದ ಬಿಸಿಯಲ್ಲಿ ಮೈ ಕಾಯಿಸಿಕೊಳ್ಳೋ ಖುಷಿ. ಮಗನಿಗೆ ಹಾಲೂಡಿಸೋದು, ರಾತ್ರಿಯಿಡೀ ನಿದ್ದೆಗೆಟ್ಟು ಅವನನ್ನು ನೋಡಿಕೊಳ್ಳೋದು, ಆಗ್ಲೇ ಹೇಳಿದ್ನಲ್ಲಾ, ನಾನು ಕಳೆದೇ ಹೋಗ್ಬಿಟ್ಟಿದ್ದೀನಿ.

- ನಿದ್ದೆ ಕಥೆ?
ಅದನ್ನ ಕೇಳಲೇಬೇಡಿ. ನಾನು ಗರ್ಭಿಣಿಯಾಗಿದ್ದಾಗಲೇ ಚೆನ್ನಾಗಿ ನಿದ್ದೆ ಮಾಡ್ಬೇಕಿತ್ತು ಅಂತ ಬಹಳ ಬಹಳ ಸಲ ಅನಿಸುತ್ತೆ. ರಾತ್ರಿಯಿಡೀ ನಿದ್ದೆ ಬಿಟ್ಟು ಅವನನ್ನು ನೋಡಿಕೊಳ್ಳೋದು, ಆಗಾಗ ಫೀಡ್ ಮಾಡೋದು, ಅವನು ಮಲಗಿದಾಗ ನಾನೂ ಮಲಗೋದು, ಇನ್ನೇನು ಕಣ್ಣಿಗೆ ನಿದ್ದೆ ಹತ್ತಿತು ಅಂದಾಕ್ಷಣ ಅವನ ಅಳು ಶುರುವಾಗುತ್ತೆ. ನಿಜಕ್ಕೂ ಮನುಷ್ಯ ಊಟ ಇಲ್ದೇ ಬೇಕಾದ್ರೂ ಬದುಕಬಹುದೇನೋ, ಆದ್ರೆ ನಿದ್ದೆಯಿಲ್ಲದ ಜೀವನ ಯಾರಿಗೂ ಬೇಡ. ನನ್ನ ಹಸ್ಬೆಂಡ್‌ ಸಹ ನನ್ನ ಅನುಭವಕ್ಕೆ ಜೊತೆಗಾರರಾಗಿದ್ದಾರೆ. ಈ ಸಮಯದಲ್ಲಿ ನಾನು ಬಹಳ ಬಹಳ ಮಿಸ್ ಮಾಡೋದು ನಿದ್ದೆಯನ್ನು. ಹಿಂದೆಲ್ಲ ಅಷ್ಟು ಚೆನ್ನಾಗಿ ನಿದ್ದೆ ಮಾಡ್ತಿದ್ದಾಗ ನಿದ್ದೆಯ ಬೆಲೆಯೇ ಗೊತ್ತಾಗ್ತಿರಲಿಲ್ಲ. ಈಗ ಎಲ್ಲ ತಿಳೀತಿದೆ.

ಶ್ರೀದೇವಿಯ ಕಣ್ಣುಗಳನ್ನು ಹೊಗಳಿದ ಪ್ರಿಯಾಂಕ..! ಹೇಳಿದ್ದಿಷ್ಟು ...

- ಮಗ ಹುಟ್ಟಿದ ಮರುದಿನವೇ ಇನ್‌ಸ್ಟಾ ಪೇಜ್ ಶುರು ಮಾಡಿದ್ರಿ?
ಹೌದು. ಅವನಿಗೆ ಈಗಲೇ ಸಾಕಷ್ಟು ಫ್ಯಾನ್ ಫಾಲೊವಿಂಗ್ ಇದೆ. ಜನ ಅವನ ಫೋಟೋ ಹಾಕಿ ಅಂತ ಫೋರ್ಸ್ ಮಾಡ್ತನೇ ಇರ್ತಾರೆ. ಆದರೆ ಒಂದು ತಿಂಗಳವರೆಗೂ ಮಗುವಿನ ಫೋಟೋ ಹಾಕೋ ಹಾಗಿಲ್ಲ ಅಂತ ದೊಡ್ಡೋರು ತಾಕೀತು ಮಾಡಿದ್ದಾರೆ.

- ಮಗನಿಗೆ ಏನು ಹೆಸರಿಡೋದು ಅಂತ ಏನಾದ್ರೂ ಯೋಚ್ನೆ ಮಾಡಿದ್ರಾ?
ಇನ್ನೂ ಇಲ್ಲ. ಒಂದಿಷ್ಟು ಹೆಸರುಗಳು ಮನಸ್ಸಲ್ಲಿವೆ. ನೋಡೋಣ, ಇನ್ನು ಸ್ವಲ್ಪ ದಿನದಲ್ಲಿ ಫೈನಲ್‌ ಮಾಡ್ತೀವಿ.

ಎಲಿಮಿನೇಟ್‌ ಆಗಿದ್ದು ಶಮಂತ್, ಹೊರ ಬರೋದು ವೈಜಯಂತಿ ಅಡಿಗ; ಏನಿದೆ ಗೇಮ್ ಪ್ಲಾನ್? ...

- ಯುಗಾದಿ ಹಬ್ಬ ಸ್ಪೆಷಲ್ ಅಂದ್ರಿ, ಯಾವ ಥರ ಡ್ರೆಸ್ ಮಾಡ್ತೀರಿ?
ನಿಜ ಹೇಳ್ತೀನಿ. ನಾನು ನನ್ನ ಮುಖ ಹೇಗಿದೆ ಅಂತ ಕನ್ನಡಿ ನೋಡಿಯೇ ಎಷ್ಟೋ ದಿನ ಆಗಿದೆ. ಇನ್ನು ಡ್ರೆಸ್‌ ವಿಷ್ಯ ಏನು ಹೇಳಲಿ? ಒಂದು ನೈಟಿ, ಮೇಲೊಂದು ದುಪ್ಪಟ್ಟಾ ಹಾಕ್ಕೊಂಡ್ರೆ ಸಾಕು ಅನ್ನೋ ಹಾಗಾಗಿದೆ. ನೋಡೋಣ, ಮಗ ಕೃಪೆ ಮಾಡಿದರೆ ಚಂದದ ಸೀರೆ ಉಟ್ಟು ಸಿಂಗಾರ ಮಾಡಬಹುದೇನೋ. ನನ್ನ ಫೇವರೆಟ್ ತಿಂಡಿ ಒಬ್ಬಟ್ಟು. ಅದನ್ನಾದ್ರೂ ಭರ್ಜರಿಯಾಗಿ ತಿಂದು ಹಬ್ಬದ ಖುಷಿ ಎನ್ ಜಾಯ್ ಮಾಡ್ತೀನಿ.

Latest Videos
Follow Us:
Download App:
  • android
  • ios