Wedding Anniversary: ಮಹಾಲಕ್ಷ್ಮಿ ಕೊಂಚ ದುರಹಂಕಾರಿ, ಆ್ಯಟಿಟ್ಯುಡ್ ಜಾಸ್ತಿ... ರವೀಂದರ್ 'ಲವ್ ಲೆಟರ್' ವೈರಲ್
ನಿರ್ಮಾಪಕ ರವೀಂದರ್ ಚಂದ್ರಶೇಖರ್ ಹಾಗೂ ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು, ರವೀಂದರ್ ಬರೆದಿರುವ ಪತ್ರ ವೈರಲ್ ಆಗಿದೆ.
ಅತಿ ಹೆಚ್ಚು ಟ್ರೋಲ್ಗೆ ಒಳಗಾಗಿರುವ ದಂಪತಿ ಎಂದರೆ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravindra Chandrasekaran) ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ (Mahalakshmi). ಕಳೆದ ಸೆಪ್ಟೆಂಬರ್ 1ರಂದು ತಿರುಪತಿಯಲ್ಲಿ (Tirupati) ವೈವಾಹಿಕ ಜೀವನಕ್ಕೆ ಕಾಲಿಟ್ಟಾಗಿನಿಂದಲೂ ಇವರ ಮದುವೆ ವಿಚಾರಕ್ಕೆ ಬಹಳಷ್ಟು ಟ್ರೋಲ್ ಆಗುತ್ತಲೇ ಇದ್ದಾರೆ. ಎಲ್ಲಿ ನೋಡಿದರೂ ಇವರದ್ದೇ ವಿಷಯ. ಈ ಜೋಡಿ ಏನೇ ಮಾಡಲಿ ಅದರ ಚರ್ಚೆ ಭಾರಿ ಜೋರಾಗಿ ನಡೆಯುತ್ತದೆ. ಇದಕ್ಕೆ ಕಾರಣ ಈ ಜೋಡಿಯ ಲುಕ್. ಅತ್ಯಂತ ಸುಂದರಿಯಾಗಿರುವ ಮಹಾಲಕ್ಷ್ಮಿ ಅವರು, ತೀರಾ ದಪ್ಪ ಇರುವ ರವೀಂದರ್ ಜೊತೆ ಮದುವೆಯಾಗಿದ್ದಾರೆ ಎನ್ನುವ ಕಾರಣಕ್ಕೆ ಬಾಹ್ಯ ರೂಪ ನೋಡಿ ಟ್ರೋಲ್ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿಯೂ ಮದುವೆಯಾಗದ ಹುಡುಗರು ಈ ಜೋಡಿಯನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದರೆ, ಹುಡುಗಿಯರು ಈಕೆ ಹಣಕ್ಕಾಗಿಯೇ ಮದುವೆಯಾಗಿದ್ದಾರೆ ಎನ್ನುತ್ತಿದ್ದಾರೆ. ರವೀಂದರ್ ಅವರ ಆಸ್ತಿ ನೋಡಿ ಮದುವೆಯಾಗಿದ್ದಾರೆ, ಈ ಜೋಡಿ ಒಟ್ಟಾಗಿ ಇರುವ ಚಾನ್ಸೇ ಇಲ್ಲ ಎಂದವರೇ ಹೆಚ್ಚು.
ರವೀಂದರ್ ಅವರು ಆಗರ್ಭ ಶ್ರೀಮಂತರೆಂದು ಮಹಾಲಕ್ಷ್ಮಿ ಮದುವೆಯಾಗಿದ್ದಾರೆ ಎಂದು ಹಲವರು ಅಂದುಕೊಳ್ಳುತ್ತಲೇ ಇದ್ದರೂ, ಅದಕ್ಕೆ ತಡೆ ಕೆಡಿಸಿಕೊಳ್ಳದ ಈ ಜೋಡಿ ಹಾಯಾಗಿ ಇದೆ. ಪತ್ನಿಗಾಗಿ ರವೀಂದರ್ ಇದಾಗಲೇ ಚಿನ್ನದ ಮಂಚದಿಂದ (golden cot) ಹಿಡಿದು ಕೆಜಿಗಟ್ಟಲೆ ಚಿನ್ನ, ವಜ್ರ, ವೈಢೂರ್ಯಗಳನ್ನು ನೀಡಿದ್ದು, ಅದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ತಮ್ಮನ್ನು ಕಂಡು ಹೊಟ್ಟೆ ಉರಿದುಕೊಳ್ಳುವವರ ಹೊಟ್ಟೆಗೆ ಇನ್ನಷ್ಟು ಕಿಚ್ಚು ಹೊತ್ತಿಸುತ್ತಲೇ ಇದ್ದಾರೆ. ಪ್ರೀತಿಗೆ ಅಂದ, ರೂಪ, ಬಣ್ಣ ಮುಖ್ಯವಲ್ಲ, ನಿಷ್ಕಲ್ಮಶ ಹೃದಯ ಮುಖ್ಯ ಎಂಬುದು ಮಹಾಲಕ್ಷ್ಮಿ ಅವರ ಮಾತು. ಇದೀಗ ಈ ಜೋಡಿ ಮದುವೆಯಾಗಿ ಒಂದು ವರ್ಷವಾಗಿದೆ. ಮೊನ್ನೆ ಸೆಪ್ಟೆಂಬರ್ 1ರಂದು ಇವರ ಮೊದಲ ವಿವಾಹ ವಾರ್ಷಿಕೋತ್ಸವ.
ಈ ಸಂದರ್ಭದಲ್ಲಿ ರವೀಂದರ್ ಪತ್ನಿಗೆ ವಿಶೇಷ ಪತ್ರದ ಮೂಲಕ ಶುಭಾಶಯ ಕೋರಿದ್ದಾರೆ. ಅವರು ಬರೆದಿರುವ ಪತ್ರ ಈಗ ವೈರಲ್ ಆಗಿದೆ. ಅವರ ಮಾತಿನಲ್ಲಿಯೇ ಹೇಳುವುದಾದರೆ, 'ನಾನು ನಿಜವಾಗಿಯೂ ಮಹಾಲಕ್ಷ್ಮಿಯ ಪ್ರೀತಿ ಮತ್ತು ಪ್ರಾಮಾಣಿಕತೆಗೆ ಅರ್ಹನಲ್ಲ. ಆದರೂ ಪರವಾಗಿಲ್ಲ ನಮ್ಮ ಜೀವನ ತುಂಬ ಸುಂದರವಾಗಿದೆ. ಸಂತೋಷದಲ್ಲಿ ನಮ್ಮನ್ನು ನಗಿಸುವ ಹುಡುಗಿ ಮತ್ತು ಸಂತೋಷದಲ್ಲಿ ನಮ್ಮನ್ನು ಅಳುವಂತೆ ಮಾಡುವ ಹುಡುಗಿ ಮಾತ್ರ ನಮಗೆ ಅತ್ಯುತ್ತಮವಾದ ಜೀವನವನ್ನು ನೀಡಬಲ್ಲಳು. ನನ್ನ ಬಂಗಾರ ಈಕೆ ನನ್ನ ಪತ್ನಿ ಮಹಾಲಕ್ಷ್ಮೀ. ಒಳ್ಳೆಯ ಹೆಂಡತಿ ಆಗುವುದು ಅದು ದೇವರ ವರ ಎಂದು ಸುದೀರ್ಘವಾದ ಪತ್ರ ಬರೆದುಕೊಂಡಿದ್ದಾರೆ.
ಮಹಾಲಕ್ಷ್ಮಿ-ರವೀಂದರ್ ಡಿವೋರ್ಸ್ ಕೊಡ್ತಿದ್ದಾರಾ? ಇನ್ಸ್ಟಾಗ್ರಾಮ್ನಲ್ಲಿ ನಟಿ ಹೇಳಿದ್ದೇನು?
ಮದುವೆಯಾದ ಹೊಸತರದಲ್ಲಿ ಆಕೆಯ ಕೆಲವು ವಿಷಯಗಳು ನನಗೂ ಅಚ್ಚರಿ ತಂದಿದ್ದವು ಎಂದು ರವೀಂದರ್ ಹೇಳಿದ್ದಾರೆ. ಆಕೆಯನ್ನು ಮದುವೆಯಾದಾಗ, ನನ್ನ ಮನೆಕೆಲಸ, ಕಾಫಿ, ಅಡುಗೆ ಎಲ್ಲವನ್ನು ಮನೆ ಕೆಲಸದವರೇ ಮಾಡಬೇಕು ಎಂದುಕೊಂಡಿದ್ದೆ. ಆದರೆ ಆದದ್ದೇ ಬೇರೆ. ಬೆಳಗ್ಗೆ ಬೇಗ ಎದ್ದು ಮನೆಯಂಗಳ ಶುಚಿಗೊಳಿಸಿ, ರಂಗೋಲಿ ಹಾಕಿ, ಕಾಫಿ ಮಾಡಿ ಕೊಡುತ್ತಾಳೆ. ಒಮ್ಮೊಮ್ಮೆ ಕೆಟ್ಟದಾದ ಅಡುಗೆ ಮಾಡಿದ್ದೂ ಇದೆ. ಆಗ ಆನ್ಲೈನ್ ಮೂಲಕ ತಿನಿಸು ತರಿಸಿಕೊಂಡಿದ್ದೂ ಇದೆ. ಟಿವಿಯಲ್ಲಿ ಕಾಣುವಂತೆ ಆಕೆ ಇಲ್ಲ. ಸ್ವಭಾವ ಬದಲಿದೆ. ಅವಳಿಗೆ ಕೊಂಚ ಆಟಿಟ್ಯೂಡ್ ಇದೆ. ಅವಳ ಪ್ರೀತಿ ಕೊಂಚ ಒರಟು. ದುರಂಹಕಾರಿಯೂ ಹೌದು. ಆದರೆ, ನನ್ನ ಮೇಲೆ ಅತಿಯಾದ ಪ್ರೀತಿ ಬಂದಾಗ, ಆಕೆ ನೇರವಾಗಿ ಅಡುಗೆ ಮನೆಗೆ ಹೋಗುತ್ತಾಳೆ. ನನಗಾಗಿ ಏನಾದರೂ ಮಾಡಿ ತರುತ್ತಾಳೆ. ನಾವು ಬೇರ್ಪಟ್ಟಿದ್ದೇವೆ, ದೂರವಾಗಿದ್ದೇವೆ ಎಂದು ಯೂಟ್ಯೂಬ್‌ಗಳಲ್ಲಿ ಸುದ್ದಿಗಳು ಬಂದಾಗ, ನಾವು ಅವರೆಲ್ಲರ ಮುಂದೆ ಬಾಳಿ ಬದುಕಬೇಕು ಎಂದು ಹೇಳುತ್ತಾಳೆ. ಅದನ್ನು ನಾವು ಸಾಬೀತುಪಡಿಸಬೇಕು ಎನ್ನುತ್ತಾಳೆ ಎಂದು ರವೀಂದರ್ ಹೇಳಿದ್ದಾರೆ.