'ಪುಟ್ಟಕ್ಕನ ಮಕ್ಕಳು' ಸೀರಿಯಲ್ ಸ್ನೇಹಾಳ ಆ್ಯಕ್ಸಿಂಡೆಟ್ ಆಗಿದ್ದು ಹೇಗೆ? ತೆರೆ ಮರೆಯ ವಿಡಿಯೋ ವೈರಲ್
'ಪುಟ್ಟಕ್ಕನ ಮಕ್ಕಳು' ಸೀರಿಯಲ್‌ನಲ್ಲಿ ನಡೆದ ಸ್ನೇಹಾ ಮತ್ತು ಬಂಗಾರಮ್ಮನ ಅಪಘಾತದ ಶೂಟಿಂಗ್ ಹೇಗೆ ಮಾಡಲಾಯಿತು ಎನ್ನುವ ತೆರೆ ಮರೆಯ ವಿಡಿಯೋ ವೈರಲ್ ಆಗಿದೆ.
ಒಂದು ಸೀರಿಯಲ್ ಶೂಟಿಂಗ್ ಮಾಡಬೇಕಾದರೆ, ಅದು ಅಂದುಕೊಂಡಷ್ಟು ಸುಲಭವಲ್ಲ. ಅದರ ಹಿಂದೆ ಅದೆಷ್ಟೋ ತಂತ್ರಜ್ಞರ ಶ್ರಮವಿರುತ್ತದೆ. ನಮಗೆ ನಟ-ನಟಿಯರು ಮಾತ್ರ ತೆರೆಯ ಮೇಲೆ ಕಾಣಿಸುತ್ತಾರೆ. ಆದರೆ ಅವರಿಂದ ಒಂದೊಂದು ಡೈಲಾಗ್ ಹೇಳಿಸಲು, ಒಂದೊಂದು ದೃಶ್ಯವನ್ನು ಶೂಟ್ ಮಾಡಲು ತೆರೆಮರೆಯ ಹಿಂದಿನ ಹಲವಾರು ಕೈಗಳು ಇರುತ್ತವೆ. ಆ್ಯಕ್ಸಿಡೆಂಟ್ನಂಥ ಸಾಹಸ ದೃಶ್ಯಗಳು ಬಂದಾಗ ಯಾವ ಸಿನಿಮಾಕ್ಕಿಂತಲೂ ಕಡಿಮೆ ಇಲ್ಲದಂತೆ ದೃಶ್ಯಗಳನ್ನು ಶೂಟಿಂಗ್ ಮಾಡಬೇಕಾಗುತ್ತದೆ. ಇದೇ ಕಾರಣಕ್ಕೆ ನಿರ್ದೇಶನ ಸುಲಭವಲ್ಲ. ತುಂಬಾ ಪಳಗಿರುವ ನಟರಿಗೆ ಡೈಲಾಗ್ ಆಗಲೀ, ಆ ಸನ್ನಿವೇಶಕ್ಕೆ ತಕ್ಕಂತೆ ಹೇಗೆ ಆಕ್ಟ್ ಮಾಡಬೇಕು ಎನ್ನುವುದಾಗಲೀ ಹೇಳಿಕೊಡಬೇಕೆಂದೇನೂ ಇಲ್ಲ. ಆದರೆ ಸೀರಿಯಲ್‌ಗಳಲ್ಲಿ ಸಾಮಾನ್ಯವಾಗಿ ಹೊಸ ಹೊಸ ಮುಖಗಳೇ ಬರುತ್ತವೆ. ಅದರಲ್ಲಿಯೂ ಚಿಕ್ಕಪುಟ್ಟ ರೋಲ್‌ಗಳಲ್ಲಿ ಕಾಣಿಸಿಕೊಳ್ಳುವವರು ಹೊಸಬರೇ ಆಗಿರುತ್ತಾರೆ. ಅವರಿಗೆ ದೃಶ್ಯಕ್ಕೆ ತಕ್ಕಂತೆ ನಟನೆ ಹೇಳಿಕೊಡುವುದು, ಡೈಲಾಗ್ ಹೇಳಿಕೊಡುವುದು ಕೆಲವೊಮ್ಮೆ ಹರಸಾಹಸವೇ ಆಗಿರುತ್ತದೆ.
ಇದೀಗ ಸ್ನೇಹಾ ಮತ್ತು ಬಂಗಾರಮ್ಮ ಅವರಿಗೆ ಉದ್ದೇಶಪೂರ್ವಕವಾಗಿ ಮಾಡಿದ ಅಪಘಾತದ ಶೂಟಿಂಗ್ ವಿಡಿಯೋ ವೈರಲ್ ಆಗಿದೆ. ಆ್ಯಕ್ಸಿಡೆಂಟ್ನಂಥ ಶೂಟಿಂಗ್ ಮಾಡುವಾಗ ಕಾರು, ಬೈಕು ಇತ್ಯಾದಿಗಳನ್ನು ನುಜ್ಜುಗುಜ್ಜು ಮಾಡಬೇಕಾಗುತ್ತದೆ. ಅದು ಸಿನಿಮಾ ಆಗಿರಲಿ, ಸೀರಿಯಲ್ ಆಗಿರಲಿ... ಆದ್ದರಿಂದ ಪದೇ ಪದೇ ಈ ದೃಶ್ಯಗಳನ್ನು ರೀಟೇಕ್ ಮಾಡಲು ಆಗುವುದಿಲ್ಲ. ಇದಕ್ಕಾಗಿ ನುರಿತವರನ್ನೇ ಅಪಘಾತದ ದೃಶ್ಯಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ನಾಯಕ, ನಾಯಕಿ ಕಾರು ಚಾಲನೆ ಮಾಡಿದಂತೆ ತೋರಿಸಿದರೂ ಶೂಟಿಂಗ್ ಸಮಯದಲ್ಲಿ ಇರುವುದು ಅವರ ಡ್ಯೂಪ್ ಆಗಿರುತ್ತಾರೆ.
ಬಿಲ್ಡಿಂಗ್ ಮೇಲೆ ಹಗ್ಗ ಹಿಡಿದು ನೇತಾಡಿದ ಲಕ್ಷ್ಮೀ ಬಾರಮ್ಮ ಕಾವೇರಿ! ಮೈ ಝುಂ ಎನ್ನುವ ಶೂಟಿಂಗ್ ದೃಶ್ಯ
ಅದೇ ರೀತಿ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಅಪಘಾತ ಸಂಭವಿಸಿದಾಗ, ಸ್ನೇಹಾ- ಬಂಗಾರಮ್ಮ ರಸ್ತೆಯ ಮೇಲೆ ಬಿದ್ದಿರುತ್ತಾರೆ. ಕಂಠಿ ಗೋಳೋ ಎನ್ನುತ್ತಿರುತ್ತಾನೆ. ಜೋರಾಗಿ ಮಳೆ ಬೇರೆ ಸುರಿಯುತ್ತಿರುತ್ತದೆ. ಅದನ್ನೆಲ್ಲಾ ಹೇಗೆ ಸೃಷ್ಟಿ ಮಾಡುತ್ತಾರೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಡಿವಿ ಡ್ರೀಮ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಈ ತೆರೆಮರೆಯ ಹಿಂದಿನ ವಿಡಿಯೋ ಶೇರ್ ಮಾಡಲಾಗಿದೆ. ಇದರಲ್ಲಿ ಮಳೆ ಬರುವ ದೃಶ್ಯ ತೋರಿಸುವ ಸಲುವಾಗಿ ಪೈಪ್ನಲ್ಲಿ ನೀರು ಬಿಡುವುದನ್ನು ನೋಡಬಹುದಾಗಿದೆ. ಆದರೆ ನಿಜವಾದ ಮಳೆಯಲ್ಲದಿದ್ದರೂ ಸೀರಿಯಲ್ ನಟರು ಆ ನೀರಿನಲ್ಲಿ ತೊಯ್ಯಲೇಬೇಕು.
ಇದೇ ವಿಡಿಯೋದಲ್ಲಿ, ಹೇಗೆ ಶೂಟಿಂಗ್ ಮಾಡಲಾಗಿದೆ, ಡೈಲಾಗ್ ಹೇಗೆ ಹೇಳಿಕೊಡಲಾಗಿದೆ ಎಂಬಿತ್ಯಾದಿಗಳನ್ನು ನೋಡಬಹುದಾಗಿದೆ. ಸದ್ಯ ಅಪಘಾತದಲ್ಲಿ ಸ್ನೇಹಾ ಸತ್ತಿದ್ದಾಳೆ. ಬಂಗಾರಮ್ಮ ಆಸ್ಪತ್ರೆಯಲ್ಲಿ ಈಗ ತಾನೇ ಚೇತರಿಸಿಕೊಳ್ಳುತ್ತಿದ್ದಾಳೆ. ಸ್ನೇಹಾಳ ಹೃದಯವನ್ನು ಇನ್ನೋರ್ವ ಸ್ನೇಹಾಳಿಗೆ ನೀಡಲಾಗಿದೆ. ಬಂಗಾರಮ್ಮನಿಗೆ ತನ್ನ ಸೊಸೆ ಸ್ನೇಹಾ ಸತ್ತಿರುವ ವಿಷಯ ಗೊತ್ತಿಲ್ಲ. ಹೇಳದಂತೆ ವೈದ್ಯರು ತಾಕೀತು ಮಾಡಿದ್ದಾರೆ. ಆ ಸ್ನೇಹಾಳ ಹೃದಯ ಈ ಸ್ನೇಹಾಳಿಗೆ ಅಳವಡಿಕೆ ಆಗಿದ್ದರೂ, ಈ ಸ್ನೇಹಾಳನ್ನು ಕಂಡರೆ ಕಂಠಿ ಗುರ್ ಗುರ್ ಎನ್ನುತ್ತಿದ್ದಾರೆ. ಇವರಿಬ್ಬರ ಪ್ರೀತಿ ಯಾವಾಗ ಶುರುವಾಗುತ್ತೆ, ಬಂಗಾರಮ್ಮನಿಗೆ ನಿಜ ಯಾವಾಗ ತಿಳಿಯುತ್ತೆ, ಅಪಘಾತ ಮಾಡಿಸಿದ್ದು ಸಿಂಗಾರಮ್ಮ ಎನ್ನುವ ಸತ್ಯ ತಿಳಿದಿರುವ ಕಂಠಿಯ ಮುಂದಿನ ನಡೆ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಲಕ್ಷ್ಮಿನಿವಾಸ ಶೂಟಿಂಗ್ ಸೆಟ್ನಲ್ಲಿ ಮೊಲ ತಂದಾಗ ಏನಾಗಿತ್ತು? ತೆರೆಮರೆಯ ಸ್ಟೋರಿ ಇಲ್ಲಿದೆ...