ಅಮೃತಧಾರೆ ಸೀರಿಯಲ್‌ನಲ್ಲಿ (Amruthadhaare Serial) ಸದ್ಯ ಗೌತಮ್‌ ತಂಗಿ ಸುಧಾ ಚಾಪ್ಟರ್‌ ಕಣ್ಮರೆಯಾಗಿದೆ. ಅವರ ಮಗಳು ಲಚ್ಚಿಯ ಮುದ್ದು ಮಾತುಗಳೂ ಕೇಳಿಸುತ್ತಿಲ್ಲ. ಆದರೆ ಲಚ್ಚಿ ಪಾತ್ರದ ಪುಟಾಣಿ ಈಗ ಮತ್ತೊಂದು ಕಡೆ ಕಾಣಿಸಿಕೊಂಡಿದ್ದಾಳೆ. ಆ ಲುಕ್‌ಗೆ ಸಖತ್‌ ಶ್ಲಾಘನೆ ಸಿಕ್ಕಿದೆ.

ಅಮೃತಧಾರೆ ಸೀರಿಯಲ್‌ನಲ್ಲಿ (Amruthadhaare Serial) ಲಚ್ಚಿ ಅನ್ನೋ ಪಾತ್ರ ಸಖತ್ ಫೇಮಸ್ ಆಗಿತ್ತು. ಗೌತಮ್‌ ದಿವಾನ್ ತಂಗಿ ಸುಧಾಳ ಮಗಳ ಪಾತ್ರದಲ್ಲಿ ಪುಟ್ ಹುಡುಗಿಯೊಂದು ಕ್ಯೂಟ್ ಕ್ಯೂಟ್ ಆಗಿ ಈ ಪಾತ್ರದಲ್ಲಿ ನಟಿಸಿ ಮನೆಮಾತಾಗಿದ್ದಳು. ಆಮೇಲೆ ಕಥೆಯಲ್ಲಿ ಟ್ವಿಸ್ಟ್ ಮತ್ತು ಟರ್ನ್ ಬಂದು ಈಗ ಗೌತಮ್‌ ತಂಗಿ ಸುಧಾ ಪಾತ್ರವೇ ಜನರ ಮನಸ್ಸಿಂದ ಮರೆಯಾಗಿದೆ. ಅವಳಿಗೆ ಸೃಜನ್‌ ಜೊತೆಗೆ ಮದುವೆ ಮಾಡಿಸಿ ಸೀರಿಯಲ್‌ ಟೀಮ್‌ ಕಥೆಯಿಂದ ಆಚೆ ಇಟ್ಟುಬಿಟ್ಟಿದೆ. ಜೊತೆಗೆ ಸುಧಾ ಪಾತ್ರಧಾರಿ ನಿಜಜೀವನದಲ್ಲಿ ಮದುವೆ ಆಗಿ ಲೈಫಲ್ಲಿ ಸೆಟಲ್‌ ಆಗಿ ಬಿಟ್ಟಿರಬೇಕು. ಪಾಪ ಸೃಜನ್‌ ಪಾತ್ರಧಾರಿಯೂ ಸದ್ಯ ಎಲ್ಲೂ ಕಾಣ್ತಿಲ್ಲ. ಪುಟ್‌ ಹುಡುಗಿ ಲಚ್ಚಿ ಪಾತ್ರಧಾರಿ ಮಾತ್ರ ಒಂದಿಲ್ಲೊಂದು ಪಾತ್ರಗಳಲ್ಲಿ ಕಾಣಿಸಿಕೊಳ್ತನೇ ಇದ್ದಾಳೆ. 'ಕಾಂತಾರ ಚಾಪ್ಟರ್‌ ೧' ನಲ್ಲಿ ಈ ಪುಟಾಣಿ ರಾಜಕುಮಾರಿಯಾಗಿ ಮಿಂಚಿದ್ದಳು. ಕೆಲವೊಂದು ಸಿನಿಮಾಗಳಲ್ಲೂ ಕಾಣಿಸಿಕೊಂಡಳು. ಸದ್ಯ ಬಾಲ ಕಲಾವಿದರಿಗೆ ಸಿನಿಮಾದಲ್ಲಿ, ಸೀರಿಯಲ್‌ಗಳಲ್ಲಿ ಭರ್ಜರಿ ಡಿಮ್ಯಾಂಡ್‌ ಇದೆ. ಮಕ್ಕಳ ಪಾತ್ರವನ್ನು ಜನ ಇಷ್ಟ ಪಟ್ಟು ನೋಡ್ತಾರೆ ಅನ್ನೋದು ಇಂಡಸ್ಟ್ರಿ ಮಂದಿಗೂ ಗೊತ್ತಾಗಿದೆ. ಹೀಗಾಗಿ ಅವರು ಒಂದಿಲ್ಲೊಂದು ಕಡೆ ಮಕ್ಕಳ ಪಾತ್ರವನ್ನು ತರುತ್ತಲೇ ಹೋಗುತ್ತಿದ್ದಾರೆ.

ಈಗ ಲಚ್ಚಿ ಅಂದರೆ ಪ್ರಾಣ್ವಿ ಅಕ್ಷಯ್‌ ಹೊಸ ಆಲ್ಬಂನಲ್ಲಿ ಮಿಂಚುತ್ತಿದ್ದಾಳೆ. ತುಳಸಿ ಎಂಬ ವೀಡಿಯೋ ಆಲ್ಬಂ. ಇದಕ್ಕೆ ಸಂಗೀತ ಸಂಯೋಜನೆ ಮಾಡಿರೋದು ಸು ಫ್ರಮ್‌ ಸೋ ಸಂಗೀತ ನಿರ್ದೇಶಕ ಸುಮೇಧ್. ಪುರಂದರ ದಾಸರ ದಾಸಪದಗಳನ್ನು ಆಧರಿಸಿದ ಈ ಹಾಡು, ಉತ್ತಮ ಸಂಗೀತ ಮತ್ತು ಛಾಯಾಗ್ರಹಣದಿಂದ ಗಮನ ಸೆಳೆದಿದೆ. ಕನ್ನಡದಲ್ಲಿ ಆಲ್ಬಂ ಹಾಡುಗಳ ಕೊರತೆಯನ್ನು ನೀಗಿಸಲು ಸುಮೇಧ್ ಅವರ ಪ್ರಯತ್ನಕ್ಕೆ ಮೆಚ್ಚುಗೆ ಸಿಗುತ್ತಿದೆ. ‘ತುಳಸಿ’ ಹಾಡನ್ನು ನಿರ್ದೇಶನ ಮಾಡಿದ್ದು ವಿಷ್ಣುರಾವ್. ಪುರಂದರ ದಾಸರ ಸಾಲುಗಳಿಗೆ ಸೊಗಸಾಗಿ ಜೀವ ತುಂಬಿದ್ದಾರೆ. ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ , ಹಾಡಿನ ಇಂಪು, ಪ್ರಕೃತಿಯ ತಂಪು ಎಲ್ಲವೂ ಚಂದವೋ ಚಂದ. ಹಾಡಿನ ಬಗ್ಗೆ ಮಾತನಾಡಿದ ಸುಮೇಧ್, ‘ರೆಕ್ಟ್ಯಾಂಗಲ್ ತಂಡ ಹಾಡಿನ ಛಾಯಾಗ್ರಹಣ ಮಾಡಿದೆ. ಕನ್ನಡದಲ್ಲಿ ಮ್ಯೂಸಿಕ್ ಆಲ್ಬಂಗಳು ಕಡಿಮೆ. ಅದು ನಮ್ಮ ದುರಾದೃಷ್ಟ. ನಮ್ಮವರು ಯಾವುದಕ್ಕೂ ಕಡಿಮೆ ಇಲ್ಲ. ಒಳ್ಳೆಯ ಸಾಹಿತ್ಯ ಬರೆಯುವವರು ಇದ್ದಾರೆ. ಹೆಚ್ಚೆಚ್ಚು ಆಲ್ಬಂಗಳು ಬರಬೇಕು' ಎಂದಿದ್ದಾರೆ.

ಪುಟಾಣಿ ಪ್ರಾಣ್ವಿಯ ಹೊಸ ಆಕ್ಷನ್‌

ಇದರಲ್ಲಿ ಪುಟಾಣಿ ಪ್ರಾಣ್ವಿ ಕೃಷ್ಣನ ಜೊತೆಗೆ ಕಾಣಿಸಿಕೊಂಡಿದ್ದಾಳೆ. ಸುಷ್ಮಿತಾ ಭಟ್‌ ನಾಯಕಿಯಾಗಿ ಸೊಗಸಾಗಿ ಅಭಿನಯಿಸಿದ್ದಾರೆ. ಮಳೆಯ ಹಿನ್ನೆಲೆಯಲ್ಲಿ ಪುರಾತನ ಮನೆಯ ಮುಂದೆ ವೀಣೆ ಹಿಡಿದು ಕೂರುವ ಅವರ ಭಾವ ಭಂಗಿಯೇ ಎವೆ ಕಾವ್ಯಾತ್ಮಕವಾಗಿದೆ. ಜೊತೆಗೆ ಪುಣಾಣಿ ಪ್ರಾಣ್ವಿಯ ಹಾವ, ಭಾವವನ್ನು ಸೊಗಸಾಗಿ ಸೆರೆ ಹಿಡಿದಿದ್ದಾರೆ. ಜರಿ ಲಂಗ, ಉದ್ದ ಜಡೆಯಲ್ಲಿ ಈ ಪುಟ್‌ ಮಲ್ಲಿಯ ಚಂದವನ್ನೂ ಆಕೆಯ ಪ್ರತಿಭೆಯನ್ನೂ ಬಹಳ ಮಂದಿ ಕೊಂಡಾಡಿದ್ದಾರೆ. ಬಹುಭಾಷಾ ನಟಿ ರುಕ್ಮಿಣಿ ವಸಂತ್ ಸೇರಿದಂತೆ ಅನೇಕರು ಈ ಆಲ್ಬಂ ಅನ್ನು ಮೆಚ್ಚಿಕೊಂಡಿದ್ದಾರೆ. ಇನ್ನೊಂದು ವಿಶೇಷ ಅಂದರೆ ಈ ಪುಟ್ ಪೋರಿ ಈ ಹಾಡಿನ ಚಿತ್ರೀಕರಣದ ವೇಳೆ ಮಾಡಿದ ತರಲೆ, ತುಂಟಾಟಗಳ ಬಿಟಿಎಸ್‌ ಸಖತ್ ಸೌಂಡ್ ಮಾಡಿದೆ. ಕೆಲವೇ ದಿನಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಇದನ್ನು ವೀಕ್ಷಿಸಿ ನಸು ನಕ್ಕಿದ್ದಾರೆ.

ಒಟ್ಟಿನಲ್ಲಿ ಅಮೃತಧಾರೆಯಿಂದ ತತ್ಕಾಲಕ್ಕೆ ದೂರವಿದ್ದರೂ ಮತ್ತೊಂದು ಕಡೆ ಈ ಪುಟ್ಟ ಲಕ್ಷ್ಮೀ ಕಾಣಿಸಿಕೊಂಡಿದ್ದು ಆಕೆಯ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

View post on Instagram