ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಒನೀಲ್, ಮಸ್ತಾನಿಗೆ ಅಸಭ್ಯವಾಗಿ ಸ್ಪರ್ಶಿಸಿದ ಆರೋಪ ಎದುರಿಸುತ್ತಿದ್ದಾರೆ. ಈ ಘಟನೆ ಲಕ್ಷ್ಮಿ ಪ್ರಶ್ನೆ ಮಾಡುವುದರ ಮೂಲಕ ವಿವಾದದ ಸ್ವರೂಪ ಪಡೆದುಕೊಂಡಿದೆ. ಒನೀಲ್ ಆಕಸ್ಮಿಕ ಎಂದರೆ, ಲಕ್ಷ್ಮಿ ಉದ್ದೇಶಪೂರ್ವಕ ಎಂದು ಆರೋಪಿಸಿದ್ದಾರೆ.
ದೇಶದಾದ್ಯಂತ ಬಿಗ್ ಬಾಸ್ ರಿಯಾಲಿಟಿ ಶೋಗಳು ಭರ್ಜರಿಯಾಗಿ ಸಾಗುತ್ತಿದ್ದು, ಮಲೆಯಾಳಂ ಬಿಗ್ ಬಾಸ್ ಮನೆಯಲ್ಲೀಗ ಅಸಭ್ಯ ವರ್ತನೆಯ ಆರೋಪ ಸದ್ದು ಮಾಡುತ್ತಿದೆ. ಮನೆಯಲ್ಲಿ ಸ್ಪಾನ್ಸರ್ಡ್ ಟಾಸ್ಕ್ ವೇಳೆ ನಟಿ ಮಸ್ತಾನಿಗೆ ಸಹಪ್ರತಿಭಾಗಿ ಒನೀಲ್ ಅಸಭ್ಯವಾಗಿ ಮುಟ್ಟಿದ್ದಾರೆ ಎಂದು ಮತ್ತೊಬ್ಬ ಸ್ಪರ್ಧಿ ನಟಿ ಲಕ್ಷ್ಮಿ ಬಿಗ್ ಬಾಸ್ ಮನೆಯಲ್ಲಿ ಬಾಯ್ಬಿಟ್ಟಿದ್ದಾರೆ. ಈ ಘಟನೆಯಿಂದ ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ಭದ್ರತೆ ಕುರಿತಾಗಿ ಚರ್ಚೆಗಳು ಜೋರಾಗಿವೆ.
ಘಟನೆಯ ಹಿನ್ನೆಲೆ:
ಬಿಗ್ ಬಾಸ್ ಮನೆಯಲ್ಲಿನ ಒಂದು ಸ್ಪಾನ್ಸರ್ಡ್ ಟಾಸ್ಕ್ ಮುಗಿದ ಬಳಿಕ, ಮಸ್ತಾನಿ ತಮ್ಮ ಸಹಸ್ಪರ್ಧಿ ಲಕ್ಷ್ಮಿಗೆ ಒನೀಲ್ ತಮಗೆ ಅಸಭ್ಯವಾಗಿ ಸ್ಪರ್ಶಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ವಿಚಾರ ಕೇಳಿದ ಲಕ್ಷ್ಮಿ, ತಕ್ಷಣವೇ ಮೈಕ್ ತಂದು ಎಲ್ಲರ ಮುಂದೆಯೇ ಪ್ರಶ್ನೆ ಮಾಡಿದ್ದಾರೆ. ಬಾತ್‌ರೂಮ್‌ನಿಂದ ಹೊರಬಂದ ಒನೀಲ್ ಗೊಂದಲಕ್ಕೀಡಾಗಿದ್ದು, ‘ಟಾಸ್ಕ್ ಗೆದ್ದ ಖುಷಿಯಲ್ಲಿ ಜನಜಂಗುಳಿಯಲ್ಲಿ ಆಕಸ್ಮಿಕವಾಗಿ ತಾಗಿಬಿಟ್ಟೆ, ತಕ್ಷಣವೇ ಕ್ಷಮೆ ಕೇಳಿದ್ದೆ’ ಎಂದು ತಮ್ಮ ಪಾಳು ವಿವರಿಸಿದ್ದಾರೆ.
ಲಕ್ಷ್ಮಿ ವಿವಾದ ಮಾಡುತ್ತಿದ್ದಾರೆ ಎಂದು ಆರೋಪ:
ಲೈವ್ ಪ್ರಸಾರದಲ್ಲಿಯೇ ಲಕ್ಷ್ಮಿ ಈ ವಿಷಯವನ್ನು ವಿವಾದವನ್ನಾಗಿ ಮಾಡುತ್ತಿದ್ದಾರೆ ಎಂದು ಒನೀಲ್ ದೂರು ನೀಡಿದ್ದಾರೆ. ‘ನಾಮಿನೇಷನ್‌ನಲ್ಲಿ ಇದ್ದ ಕಾರಣಲೇ ಲಕ್ಷ್ಮಿ ಈ ವಿಷಯವನ್ನು ಉದ್ದೇಶಪೂರ್ವಕವಾಗಿ ಎತ್ತಿಕೊಂಡಿದ್ದಾರೆ’ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ. ಲಕ್ಷ್ಮಿ ತಮ್ಮ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪವನ್ನೂ ಒನೀಲ್ ಮಾಡಿದ್ದಾರೆ.
ಮನೆಯ ಇತರ ಸ್ಪರ್ಧಿಗಳು ಕೂಡಾ 'ನೇರವಾಗಿ ನೋಡದ ವಿಷಯಕ್ಕೆ ಲಕ್ಷ್ಮಿ ಯಾಕೆ ಕೋಪಗೊಂಡಿದ್ದಾರೆ?' ಎಂದು ಪ್ರಶ್ನೆ ಎತ್ತಿದ್ದಾರೆ. ‘ಕ್ಯಾಮೆರಾ ಇದೆ, ನನಗೆ ಭಯವಿಲ್ಲ. ಲಾಲೇಟ್ಟನ್ (ಮೋಹನ್‌ಲಾಲ್) ಬಂದಾಗ ಇದನ್ನು ಚರ್ಚಿಸಬೇಕು’ ಎಂದು ಒನೀಲ್ ಬಿಗ್ ಬಾಸ್‌ಗೆ ತಿಳಿಸಿದ್ದಾರೆ.
ಮಸ್ತಾನಿ ಸ್ಪಷ್ಟನೆ:
ಇಷ್ಟೊಂದು ದೊಡ್ಡ ವಿಷಯವಾಗುತ್ತದೆ ಎಂದು ತಾವು ಊಹಿಸಿರಲಿಲ್ಲ ಎಂದು ಮಸ್ತಾನಿ ಬಿಗ್ ಬಾಸ್‌ಗೆ ಸ್ಪಷ್ಟನೆ ನೀಡಿದ್ದಾರೆ. 'ನಾನು ಲಕ್ಷ್ಮಿಗೆ ಮಾತ್ರ ಹೇಳಿದ್ದನ್ನು ಈ ರೀತಿಯಾಗಿ ದೊಡ್ಡ ವಿಷಯ ಮಾಡಬೇಕಾಗಿರಲಿಲ್ಲ' ಎಂದು ಹೇಳಿದ್ದಾರೆ.
ಪ್ರೇಕ್ಷಕರು ಸಹ ಸಾಮಾಜಿಕ ಜಾಲತಾಣಗಳಲ್ಲಿ 'ಮಸ್ತಾನಿ ಖಾಸಗಿವಾಗಿ ಹೇಳಿದ್ದನ್ನು ಲಕ್ಷ್ಮಿ ಯಾಕೆ ಸಾರ್ವಜನಿಕವಾಗಿ ಬಿರುಗಾಳಿ ಮಾಡಿದರು?' ಎಂದು ಪ್ರಶ್ನಿಸುತ್ತಿದ್ದಾರೆ. ಸಹಸ್ಪರ್ಧಿ ಅಕ್ಬರ್ ಕೂಡಾ 'ಲಕ್ಷ್ಮಿ ಒಂದು ಸಣ್ಣ ವಿಷಯವನ್ನೇ ದೊಡ್ಡದಾಗಿ ಮಾಡುತ್ತಾರೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿವಾದ ತೀವ್ರಗೊಳ್ಳುವ ಲಕ್ಷಣ:
ಮಸ್ತಾನಿಗೆ ಅದು ಅಸಭ್ಯ ಸ್ಪರ್ಶವಂತೆ ಅನಿಸಿದರೆ ತಾವು ಮತ್ತೊಮ್ಮೆ ಕ್ಷಮೆ ಕೇಳಲು ಸಿದ್ಧರಿದ್ದಾರೆ ಎಂದು ಒನೀಲ್ ಹಲವಾರು ಬಾರಿ ತಿಳಿಸಿದ್ದಾರೆ. ಆದರೆ ಈ ವಿಷಯವನ್ನು ತಮ್ಮ ವ್ಯಕ್ತಿತ್ವ ಹನನ ಮಾಡಲು ಮತ್ತು ಮಾನಸಿಕ ಆರೋಗ್ಯ ಹಾಳು ಮಾಡಲು ಬಳಕೆ ಮಾಡಲಾಗುತ್ತಿದೆ ಎಂದು ಒನೀಲ್ ದೂರಿದ್ದಾರೆ.
ಈ ವಿವಾದದ ಮೇಲೆ ಬಿಗ್ ಬಾಸ್ ನಿರೂಪಕ ಮೋಹನ್‌ಲಾಲ್ ಅವರ ಮುಂದಿನ ವಾರದ ಪ್ರವೇಶದ ವೇಳೆ ಸ್ಪಷ್ಟನೆ ಬರುವ ನಿರೀಕ್ಷೆಯಿದೆ. ಈ ನಡುವೆ ಪ್ರೇಕ್ಷಕರ ಗಮನ ಸಂಪೂರ್ಣವಾಗಿ ಈ ವಿವಾದದ ಕಡೆ ಸೆಳೆಯಲ್ಪಟ್ಟಿದ್ದು, ಮುಂದಿನ ಎಪಿಸೋಡ್‌ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಭಾರೀ ಬಿರುಕು ಮೂಡುವ ಲಕ್ಷಣಗಳು ಕಂಡುಬರುತ್ತಿವೆ.


