'ಅಪ್ಪಾ' ಶಬ್ದ ಕೇಳುತ್ತಲೇ ಮೈಮರೆತು ಪತ್ನಿಗೆ ಸ್ವೀಟ್ ಕಿಸ್ ಕೊಟ್ಟ ಮಾಧವ! ನಾಚಿ ನೀರಾದ ತುಳಸಿ
ಅವಿ ಮಾಧವನಿಗೆ ಕೊನೆಗೂ ಅಪ್ಪ ಎಂದಿದ್ದಾನೆ. ಇದನ್ನು ಕೇಳುತ್ತಲೇ ಮಾಧವ ಮೈಮರೆತಿದ್ದಾನೆ. ಅದೇ ಖುಷಿಯಲ್ಲಿ ಪಕ್ಕದಲ್ಲಿದ್ದ ತುಳಸಿಗೆ ಕಿಸ್ ಕೊಟ್ಟು ಐ ಲವ್ ಯು ಎಂದಿದ್ದಾನೆ.
ಮಾಧವ ಮತ್ತು ತುಳಸಿಯ ಜೋಡಿಯೆಂದರೆ ಅದು ಎಲ್ಲರಿಗೂ ಏನೋ ಒಂದು ರೀತಿಯಲ್ಲಿ ಇಷ್ಟ. ಇವರಿಬ್ಬರ ನವೀರಾದ ಪ್ರೇಮಕಥೆಗೆ ಮನಸೋತವರೇ ಸೀರಿಯಲ್ ಪ್ರೇಮಿಗಳು. ಮಕ್ಕಳ ಮದುವೆಯಾದ ಮೇಲೆ ತಾವು ಮದುವೆಯಾಗಿರುವ ಈ ಜೋಡಿಯ ಬಗ್ಗೆ ಆರಂಭದಲ್ಲಿ ಟೀಕಿಸಿದವರೂ ಇದೀಗ ಈ ಜೋಡಿಯನ್ನು ಒಪ್ಪಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ ಮದ್ವೆಯಾಕೆ ಎಂದು ಟೀಕಿಸಿದವರಿಗೂ ಜೋಡಿ ಎಂದರೆ ಅಚ್ಚುಮೆಚ್ಚು. ಇವರಿಬ್ಬರ ಪ್ರೇಮಕ್ಕೆ ಸಾಟಿ ಯಾವುದೂ ಇಲ್ಲ. ಪ್ರೀತಿ ಎಂಬುದು ಕೇವಲ ದೈಹಿಕ ಕಾಮನೆಯಲ್ಲ, ಅದು ಮನಸ್ಸಿನ ಭಾವನೆ ಎನ್ನುವುದನ್ನು ತೋರಿಸಿಕೊಡುತ್ತಿದೆ ಈ ಜೋಡಿ.
ಇದೀಗ ಸೀರಿಯಲ್ ತುಂಬಾ ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ. ವಿಲನ್ ಶಾರ್ವರಿಯ ಕುತಂತ್ರದಿಂದ ಮಾಧವ್ನ ಪತ್ನಿ ಅಪಘಾತದಲ್ಲಿ ಸಾವಿಗೀಡಾಗಿದ್ದಳು. ಆದರೆ ಈಕೆಯ ಕುತಂತ್ರವನ್ನು ಅರಿಯದ ಮಾಧವ್ನ ಮಕ್ಕಳಾದ ಅವಿ ಮತ್ತು ಅಭಿ ಅಪ್ಪನ ಮೇಲೆ ಕಿಡಿ ಕಾರುತ್ತಲೇ ಬಂದಿದ್ದಾರೆ. ತಮ್ಮ ತಂದೆಯಿಂದಲೇ ತಾಯಿ ಸಾವನ್ನಪ್ಪಿದ್ದು ಎನ್ನುವುದು ಅವರ ಈ ಸೇಡಿಗೆ ಕಾರಣ. ಹಲವಾರು ವರ್ಷಗಳಿಂದ ಅಪ್ಪನ ಬಳಿ ಅವರ ಮಾತುಕತೆ ಇಲ್ಲ. ಕೊನೆಯ ಪಕ್ಷ ಅಪ್ಪ ಎಂದೂ ಕರೆಯಲಿಲ್ಲ. ಇದೇ ನೋವಿನಲ್ಲಿದ್ದ ಮಾಧವ್ನನ್ನು ಸಮಾಧಾನ ಪಡಿಸುತ್ತಲೇ ಬಂದವಳು ಎರಡನೆಯ ಪತ್ನಿ ತುಳಸಿ. ಆಕೆಗೆ ಹೇಗಾದರೂ ಮಾಡಿ ಅಪ್ಪ-ಮಕ್ಕಳನ್ನು ಒಂದು ಮಾಡಬೇಕು ಎನ್ನುವ ಆಸೆ. ಆ ಆಸೆ ನೆರವೇರಿದೆ.
ಮುಗುತಿಯಾಗಿದ್ರೆ ಇವ್ಳ ಮೂಗಲ್ಲೇ ಇರ್ತಿದ್ದೆ ಎಂದ ಗಾಯಕ! ಹುಷಾರಪ್ಪಾ, ಬಾಯ್ಫ್ರೆಂಡ್ ಇದ್ದಾನೆ ಅಂತಿದ್ದಾರೆ ಫ್ಯಾನ್ಸ್
ಮಗ ಅಪ್ಪ ಎಂದು ಕರೆಯುತ್ತಲೇ ಮಾಧವ್ ಈ ಲೋಕವನ್ನೇ ಮರೆತುಬಿಟ್ಟಿದ್ದಾನೆ. ಎಷ್ಟೋ ವರ್ಷಗಳ ಬಳಿಕ ಮಗನ ಬಾಯಲ್ಲಿ ಅಪ್ಪ ಎನ್ನುವ ಮಾತು ಕೇಳುವುದಕ್ಕಾಗಿ ಪ್ರತಿ ಕ್ಷಣವೂ ಕಾತರಿಸುತ್ತಿದ್ದ ಜೀವ ಅದು. ತನ್ನದೇ ಅಲ್ಲದ ತಪ್ಪಿಗೆ ಮಕ್ಕಳಿಂದ ಈ ರೀತಿ ನಿಂದನೆ ಮಾಡಿಸಿಕೊಳ್ಳುವುದು ಯಾವ ಅಪ್ಪನಿಗೂ ಬೇಡ. ಆದರೆ ಇದೀಗ ಅವನ ಆಸೆ ಈಡೇರಿದೆ. ಇದಕ್ಕೆ ತುಳಸಿಯೇ ಕಾರಣ ಎಂದು ಖುಷಿಯಿಂದ ಕುಣಿದಾಡಿದ್ದಾನೆ ಮಾಧವ್. ತುಳಸಿ ಹತ್ತಿರ ಬರುತ್ತಿದ್ದಂತೆಯೇ ತನಗೆ ಅರಿವೇ ಇಲ್ಲದೇ ತುಳಸಿಯೇ ಐ ಲವ್ ಯು ಹೇಳಿ ಸಿಹಿ ಮುತ್ತು ಕೊಟ್ಟು ಬಿಟ್ಟಿದ್ದಾನೆ. ತುಳಸಿಯೋ ಮದುಮಗಳಂತೆ ನಾಚಿ ನೀರಾಗಿದ್ದಾಳೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಸೋ ಕ್ಯೂಟ್ ಎನ್ನುವ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ನಿಮ್ಮ ಪ್ರೀತಿಗೆ ಯಾರ ಕಣ್ಣೂ ಬೀಳದಿರಲಿ ಎನ್ನುತ್ತಿದ್ದಾರೆ ಅಭಿಮಾನಿಗಳು.
ಅಷ್ಟಕ್ಕೂ, ಅಪ್ಪ ಮತ್ತು ಮಗನನ್ನು ಒಂದು ಮಾಡಲು ತುಳಸಿ ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ತಮಾಷೆ ಮಾಡುತ್ತಿದ್ದ ಸಂದರ್ಭದಲ್ಲಿ ತುಳಸಿಯನ್ನು ಅವಿ ತಳ್ಳಿಬಿಡುತ್ತಾನೆ. ಆಕೆ ಮೆಟ್ಟಿಲ ಮೇಲಿನಿಂದ ಬೀಳುತ್ತಾಳೆ. ಅವಳ ತಲೆಗೆ ಪೆಟ್ಟಾಗುತ್ತದೆ. ತನ್ನ ಈ ಗಾಯಕ್ಕೆ ಅವಿಯೇ ಕಾರಣ ಎಂದು ಆರೋಪ ಮಾಡುತ್ತಾಳೆ. ಅವಿ ಅವಳನ್ನು ಸಂತೈಸಲು ಎಷ್ಟೇ ಪ್ರಯತ್ನ ಪಟ್ಟರೂ ಅದು ಸಾಧ್ಯವಾಗುವುದಿಲ್ಲ. ಕೊನೆಗೆ ಅವನು ಇದರಲ್ಲಿ ನನ್ನ ತಪ್ಪು ಇಲ್ಲ, ಅಕಸ್ಮಾತ್ತಾಗಿದ್ದು ಎಂದು ತುಳಸಿಗೆ ಮನವರಿಕೆ ಮಾಡಿಕೊಡುತ್ತಾನೆ. ತಾನು ಅವನ ಬಳಿ ಮಾತನಾಡದಿದ್ದ ಕಾರಣ ನೊಂದುಕೊಂಡಿದ್ದ ಅವಿಯನ್ನು ಉದ್ದೇಶಿಸಿ ತುಳಸಿ, ನನಗೆ ಹೀಗೆ ಆಗುವುದರಲ್ಲಿ ನಿನ್ನ ತಪ್ಪಿಲ್ಲ ಎನ್ನುವುದು ನನಗೆ ಗೊತ್ತು. ನಿನಗೆ ಇದರ ಅರಿವು ಆಗಲಿ ಎಂದೇ ನಾನು ನಿನ್ನ ಬಳಿ ಮಾತು ಬಿಟ್ಟಿದ್ದು. ಒಂದೆರಡು ದಿನ ಮಾತನಾಡದೇ ಇದ್ದುದಕ್ಕೆ ಇಷ್ಟು ನೋವು ಪಟ್ಟುಕೊಂಡಿಯಲ್ಲ. 15 ವರ್ಷಗಳಿಂದ ನೀನು ಅಪ್ಪನ ಬಳಿ ಅವರದ್ದಲ್ಲದ ತಪ್ಪಿಗೆ ಮಾತನಾಡುತ್ತಿಲ್ಲ. ಅವರಿಗೆ ಹೇಗೆ ಅನ್ನಿಸಬೇಡ ಎಂದಾಗ ಅವಿಗೆ ಅವನ ತಪ್ಪು ಅರ್ಥವಾಗುತ್ತದೆ. ಅಪ್ಪನನ್ನು ಅಪ್ಪಾ ಎನ್ನುತ್ತಲೇ ತನ್ನ ತಪ್ಪನ್ನು ಕ್ಷಮಿಸುವಂತೆ ಕೇಳಿಕೊಳ್ಳುತ್ತಾನೆ.