ಈಕೆ ಫೋಟೋ ನೋಡಿದಾಗ ಮದ್ವೆಯಾಗಲ್ಲ ಅಂದೆ: ಗುಟ್ಟೊಂದು ರಟ್ಟು ಮಾಡಿದ 'ಚಿನ್ನುಮರಿ' ರಿಯಲ್ ಪತಿ!
ಲಕ್ಷ್ಮೀ ನಿವಾಸ ಸೀರಿಯಲ್ ಚಿನ್ನುಮರಿ, ನಟಿ ಚಂದನಾ ಮತ್ತು ಪತಿ ಪ್ರತ್ಯಕ್ಷ್ ಮದುವೆಯ ಇಂಟರೆಸ್ಟಿಂಗ್ ವಿಷ್ಯ ಶೇರ್ ಮಾಡಿಕೊಂಡಿದ್ದಾರೆ. ಅವರು ಹೇಳಿದ್ದೇನು?
ಚಿನ್ನುಮರಿ ಎಂದರೆ ಸಾಕು... ಸೀರಿಯಲ್ ಪ್ರಿಯರ ಕಣ್ಮುಂದೆ ಬರುವುದು ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್‌ನ ಸೈಕೋ ಜಯಂತ್ ಪತ್ನಿ ಜಾಹ್ನವಿ. ಗಂಡ ತನ್ನನ್ನು ಜೀವಕ್ಕಿಂತ ಹೆಚ್ಚಾಗಿ ಹುಚ್ಚನಂತೆ ಪ್ರೀತಿಸುತ್ತಾನೆ ಎಂದು ತಿಳಿದುಕೊಂಡಿರೋ ಜಾಹ್ನವಿಗೆ ಈಗ ತಾನೇ ತನ್ನ ಗಂಡನ ನಿಜವಾದ ಮುಖ ಗೊತ್ತಾಗುತ್ತಿದೆ. ತನ್ನನ್ನು ಪ್ರೀತಿಸಲು ಆತ ಯಾವ ಮಟ್ಟಿಗೆ ಇಳಿಯುತ್ತಿದ್ದಾನೆ ಎನ್ನುವ ವಿಷಯ ಈಗಷ್ಟೇ ಈ ಪೆದ್ದು ಪತ್ನಿಗೆ ಗೊತ್ತಾಗುತ್ತಿದೆ. ತಾನು ಊಟ ಕೊಟ್ಟೆ ಎನ್ನುವ ಕಾರಣಕ್ಕೆ ಸೆಕ್ಯುರಿಟಿ ಗಾರ್ಡ್ ಅನ್ನು ಥಳಿಸಿರುವುದರಿಂದ ಹಿಡಿದು, ತನ್ನ ಪ್ರೀತಿಯ ಮೊಲವನ್ನು ಬಿಟ್ಟು ಬಂದಿದ್ದು ಅಷ್ಟೇ ಅಲ್ಲದೇ ತಮ್ಮ ಸ್ವಂತ ಮನೆಯವರ ಮೇಲೂ ಕಾಳಜಿ ಮಾಡಿದರೆ ಗಂಡನಿಗೆ ವಿಪರೀತ ಕೋಪ ಬರುತ್ತದೆ ಎಂಬೆಲ್ಲಾ ವಿಷಯ ಈಗ ಅರಿವಿಗೆ ಬರುತ್ತಿದೆ. ಸೀರಿಯಲ್ ಟ್ವಿಸ್ಟ್ ಪಡೆದುಕೊಳ್ಳುತ್ತಿರುವ ನಡುವೆಯೇ ನಿಜ ಜೀವನದಲ್ಲಿಯೂ ಹಸೆಮಣೆ ಏರಿದ್ದಾಳೆ ಚಿನ್ನುಮರಿ. ಈ ಚಿನ್ನುಮರಿಯ ರಿಯಲ್ ಹೆಸರು ಚಂದನಾ ಅನಂತಕೃಷ್ಣ. ಈಚೆಗಷ್ಟೇ ಇವರ ಮದುವೆ ನಡೆದಿದೆ. ಉದ್ಯಮಿ ಆಗಿರುವ ಪ್ರತ್ಯಕ್ಷ್ ಅವರ ಜೊತೆ ಚಂದನಾ ಮದುವೆ ನಡೆದಿದೆ.
ಇದೀಗ ಈ ಜೋಡಿ ಮದುವೆಯಾಗಿ ಒಂದು ತಿಂಗಳಾಗಿದೆಯಷ್ಟೇ. ಅರೆಂಜ್ಡ್ ಮ್ಯಾರೇಜ್ ಇವರದ್ದು. ಪತಿ ಪ್ರತ್ಯಕ್ಷ್ ಜೊತೆ ಚಂದನಾ ಅವರು, ಮೊದಲ ಬಾರಿಗೆ ಸಂದರ್ಶನವೊಂದನ್ನು ನೀಡಿದ್ದಾರೆ. ಕೀರ್ತಿ ಎಂಟರ್ಟೇನ್ಮೆಂಟ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಕೆಲವೊಂದು ವಿಷಯಗಳನ್ನು ಈ ಜೋಡಿ ತೆರೆದಿಟ್ಟಿದೆ. ಇವರದ್ದು ಹಿರಿಯರು ನೋಡಿ ಆಗಿರುವ ಮದುವೆಯಾಗಿರುವ ಕಾರಣ, ಮದುವೆಯ ಬಗ್ಗೆ ಕೀರ್ತಿ ಅವರು ಕೇಳಿದಾಗ, ಈ ಜೋಡಿ ಸಕತ್ ತಮಾಷೆಯಾಗಿ ಉತ್ತರ ಕೊಟ್ಟಿದೆ. ಪ್ರತ್ಯಕ್ಷ್ ಅವರು ಹೇಳಿದ್ದೇನೆಂದರೆ, ಹೀಗೆ ಒಂದು ದಿನ ಆಫೀಸ್ನಲ್ಲಿ ಕೆಲಸ ಮಾಡುತ್ತಿರುವಾಗ, ಅಮ್ಮ ಮದುವೆಯ ಬಗ್ಗೆ ಹೇಳಿದ್ರು. ಅದು ಇದು ಮಾತೆಲ್ಲಾ ಆದ ಬಳಿಕ ಫೋಟೋ ನೋಡಿದೆ. ಫೋಟೋ ನೋಡಿದ ತಕ್ಷಣ ಈಕೆಯನ್ನು ನಾನು ಮದುವೆಯಾಗುವುದಿಲ್ಲ ಎಂದು ಹೇಳಿದೆ ಎಂದಿದ್ದಾರೆ!
ರಿಯಲ್ ಮದ್ವೆ ಮುಗಿಸಿದ ಚಿನ್ನುಮರಿ ಶೂಟಿಂಗ್ ಸೆಟ್‌ನಲ್ಲಿ ರೀಲ್ ಪತಿ ಜೊತೆ ಹೇಗಿದ್ಲು? ವಿಡಿಯೋ ವೈರಲ್
ಅದಕ್ಕೆ ಕಾರಣಕ್ಕೂ ಕೊಟ್ಟ ಪ್ರತ್ಯಕ್ಷ್ ಅವರು, ಕಾರಣ ಇಷ್ಟೇ. ಈ ಫೋಟೋದಲ್ಲಿ ಇವಳು ಒಳ್ಳೆ ಮಗು ಥರ ಕಾಣಿಸ್ತಾ ಇದ್ಲು. ಬಾಲ್ಯ ವಿವಾಹ ಆಗತ್ತೆ, ಬೇಡಪ್ಪಾ ಇವಳು ನನಗೆ ಎಂದೆ ಎಂದು ಹಾಸ್ಯದ ರೂಪದಲ್ಲಿ ಹೇಳಿದ್ದಾರೆ. ಅದಕ್ಕೆ ಚಂದನಾ ಪತಿಗೆ ಹೊಡೆದು ಮತ್ತಷ್ಟು ತಮಾಷೆ ಮಾಡಿದ್ದಾರೆ. ಮದುವೆಯ ಮಾತುಕತೆ ನಡೆಯುತ್ತಿದ್ದಾಗ ಧನುರ್ಮಾಸ ಆಗಿತ್ತು. ಅದಕ್ಕೆ ಸ್ವಲ್ಪ ಲೇಟಾಗಿ ಹುಡುಗಿ ನೋಡಿದ್ರೆ ಆಯಿತು ಎಂದುಕೊಂಡು. ಹೇಳಿ ಕೇಳಿ ಅರೇಂಜ್ಡ್ ಮ್ಯಾರೇಜು. ಆಗುತ್ತೋ, ಇಲ್ವೋ ಅಂತನೂ ಗೊತ್ತಿರಲಿಲ್ಲ, ಆದರೆ ಇವಳು ಸಿಕ್ಕಾಪಟ್ಟೆ ಫಾಸ್ಟ್, ಕೂಡಲೇ ಮೀಟ್ ಆಗೋಣ ಎಂದಳು ಎಂದಾಗ, ಚಂದನಾ ಅವರು ಮಧ್ಯೆ ಪ್ರವೇಶಿಸಿ, ಒಹೊಹೊ ನಾನಲ್ಲ ಫಾಸ್ಟು, ನಿಮ್ಮಮ್ಮ ಬೇಗ ಮೀಟ್ ಆಗಿ ಅಂದದ್ದು ಎನ್ನುವ ಮೂಲಕ ದಂಪತಿ ಅಲ್ಲಿಯೇ ವಾಗ್ವಿವಾದಕ್ಕೆ ತೊಡಗಿದರು. ಕೊನೆಗೆ ಪ್ರತ್ಯಕ್ಷ್ ಅವರ ಅಮ್ಮನನ್ನು ಕರೆಸಿ ಈ ಸಮಸ್ಯೆಯನ್ನು ಬಗೆಹರಿಸಲಾಯಿತು. ಈ ವಿಡಿಯೋ ನೋಡಿದರೆ ಇವರದ್ದು ಆದರ್ಶ ಕುಟುಂಬ. ಆದರ್ಶ ಅತ್ತೆ- ಸೊಸೆ ಜೋಡಿ ಎನ್ನಿಸದೇ ಇರಲಾರದು.