Kavya Gowda Case: Police Probe Stabbing Claims & Evidence ನಟಿ ಕಾವ್ಯಾ ಗೌಡ ಮತ್ತು ಅವರ ಪತಿ ಸೋಮಶೇಖರ್ ಮೇಲಿನ ಹಲ್ಲೆ ಪ್ರಕರಣದ ತನಿಖೆ ಈಗ ಹೊಸ ಹಂತಕ್ಕೆ ತಲುಪಿದ್ದು, ಚಾಕು ಇರಿತದ ಸತ್ಯಾಸತ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. 

ಬೆಂಗಳೂರು (ಜ.28): ಆಸ್ತಿಗಾಗಿ ಸೀರಿಯಲ್‌ ನಟಿ ಕಾವ್ಯಾ ಗೌಡ ಅವರ ಕೌಟುಂಬಿಕ ಕಲಹ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಇದರ ನಡುವೆ ಪ್ರಕರಣದ ತನಿಖೆಯನ್ನು ರಾಮಮೂರ್ತಿ ನಗರ ಪೊಲೀಸರು ಚುರುಕುಗೊಳಿಸಿದ್ದಾರೆ. ಸೀರಿಯಲ್‌ ನಟಿಯ ಸಂಸಾರದ ಗಲಾಟೆ ಪೊಲೀಸರಿಗೆ ತಲೆನೋವು ತಂದಿದೆ. ಇಡೀ ಪ್ರಕರಣದಲ್ಲಿ ಎಷ್ಟೇ ಆರೋಪ-ಪ್ರತ್ಯಾರೋಪಗಳಿದ್ದರೂ, ಕಾವ್ಯಾ ನೀಡಿರುವ ಒಂದು ದೂರಿನ ನಿಟ್ಟಿನಲ್ಲಿ ಅಪರಾಧ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ.

ಚಾಕುವಿನಿಂದ ಗಂಡನ ಭುಜಕ್ಕೆ ಇರಿಯಲಾಗಿದೆ ಎಂದು ಕಾವ್ಯಾ ಗೌಡ ದೂರು ನೀಡಿದ್ದಾರೆ. ಚಾಕು ಇರಿದಿರೋದು ನಿಜಾನಾ? ಸುಳ್ಳಾ? ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದಲ್ಲದೆ, ಐಸಿಯುಗೆ ದಾಖಲಾಗುವಷ್ಟು ತೀವ್ರತೆಯಲ್ಲಿ ಚಾಕು ಇರಿತ ಆಗಿದ್ಯಾ? ಅನ್ನೋದರ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ. ಚಾಕು ಇರಿತ ಆಗಿರೋದಕ್ಕೆ ಪೂರಕ ಸಾಕ್ಷ್ಯಗಳು ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. ಇರಿಯಲಾಗಿದೆ ಎನ್ನಲಾದ ಚಾಕು ಕೂಡ ಪೊಲೀಸರಿಗೆ ಸಿಕ್ಕಿಲ್ಲ. ಅಲ್ಲದೇ ಗಲಾಟೆ, ಹೊಡೆದಾಟ, ಅವಾಚ್ಯ ಶಬ್ದಗಳಿಂದ ಬೈಗುಳ ಎನ್ನುವ ಆರೋಪಗಳೇ ಹೆಚ್ಚಾಗಿ ಬಂದಿವೆ. ಆದರೆ, ಅದಕ್ಕೆ ತಕ್ಕ ಸಾಕ್ಷ್ಯವನ್ನು ಕಾವ್ಯಾ ಗೌಡ ಇನ್ನೂ ನೀಡಿಲ್ಲ. ಅವರು ಮಾಡಿರುವ ಆರೋಪಗಳಿಗೆ ತಕ್ಕಂತೆ ಸಾಕ್ಷಿ ನೀಡುವಂತೆ ಪೊಲೀಸರು ಹೇಳಿದ್ದಾರೆ.

ಕಾವ್ಯಾ ಗೌಡ-ಸೋಮಶೇಖರ್‌ಗೆ ಎದುರಾಗುತ್ತಾ ಸಂಕಷ್ಟ!

ಇದರ ನಡುವೆ ಸೀರಿಯಲ್‌ ನಟಿ ಕಾವ್ಯಾ ಹಾಗೂ ಪತಿ ಸೋಮಶೇಖರ್‌ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಏಕೆಂದರೆ, ಕಾವ್ಯಾ ಹಾಗೂ ಸೋಮಶೇಖರ್ ನ ವರ್ತನೆಯ ವಿಡಿಯೋವನ್ನು ಪ್ರೇಮಾ ಪೊಲೀಸರಿಗೆ ಸಲ್ಲಿಸಿದ್ದಾರೆ. ಸೋಮಶೇಖರ್ ಹಾಗೂ ಕಾವ್ಯಾ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕಾವ್ಯಾ ದೂರು ನೀಡಿದ್ದಾರೆ. ಇದಕ್ಕೆ ಪೂರಕವಾಗಿದೆ ವಿಡಿಯೋ, ಫೋಟೋಗಳನ್ನ ಕೂಡ ನೀಡಲಾಗಿದೆ. ಸದ್ಯ ಕಾವ್ಯಾ ಹಾಗೂ ಸೋಮಶೇಖರ್ ವಿರುದ್ಧ ಸಾಕ್ಷ್ಯಗಳು ಸಿಕ್ಕಿವೆ. ಇನ್ನೊಂದು ಕಡೆ ಪ್ರಾಥಮಿಕ ತನಿಖೆ ವೇಳೆ ಕಾವ್ಯಾ ವಿರುದ್ಧವೇ ಹೆಚ್ಚು ಸಾಕ್ಷ್ಯಗಳು ದೊರೆತಿವೆ. ಸದ್ಯ ಎಲ್ಲರನ್ನೂ ಪ್ರಾಥಮಿಕವಾಗಿ ವಿಚಾರಣೆಗಾಗಿ ಪೊಲೀಸರು ಕರೆಸಿದ್ದಾರೆ. ಸೋಮಶೇಖರ್ ಆಸ್ಪತ್ರೆಯಲ್ಲಿ ಇರೋ ಕಾರಣ, ಚೇತರಿಕೆ ನಂತರ ಅವರ ವಿಚಾರಣೆ ಮಾಡಲಿದ್ದಾರೆ.

ದೂರಿನಲ್ಲಿರೋ ಆರೋಪ-ಪ್ರತ್ಯಾರೋಪಗಳನ್ನೇ ಪ್ರೇಮಾ ಹಾಗೂ ಕಾವ್ಯಾ ಮಾಡುತ್ತಿದ್ದಾರೆ. ವಿಚಾರಣೆ ವೇಳೆ ಎರಡೂ ಕಡೆಯವರು ಅವರದ್ದೇ ವರ್ಷನ್‌ನಲ್ಲಿ ಆರೋಪ ಮಾಡುತ್ತಿರುವ ಕಾರಣ, ಈ ಸಂಸಾರದ ಗಲಾಟೆ ಪೊಲೀಸರಿಗೆ ತಲೆನೋವಾಗಿದೆ. ಇದರಿಂದಾಗಿ ಮನೆಗೆ ಹೋಗಿ ಸ್ಥಳ‌ ಮಹಜರು ನಡೆಸಲು ಪೊಲೀಸರು ಪ್ಲ್ಯಾನ್‌ ಮಾಡಿದ್ದಾರೆ.

ಮನೆಯಲ್ಲಿರೋ ಸಿಸಿಟಿವಿಗಳ ಪರಿಶೀಲನೆ ನಡೆಸಲಿದ್ದು, ಮನೆಯ ಕೆಲಸದವರನ್ನ ಕೂಡ ವಿಚಾರಣೆ ಮಾಡಲಿದ್ದಾರೆ. ಅವರ ಹೇಳಿಕೆಯನ್ನೂ ಪೊಲೀಸರು ದಾಖಲಿಸಲಿದ್ದಾರೆ.