ಕನ್ನಡದ ಖ್ಯಾತ ಕಿರುತೆರೆ ನಟಿ ಐಶ್ವರ್ಯಾ ಪಿಸ್ಸೆ ಅವರು ತಮ್ಮ ಪತಿಯಿಂದ ವಿಚ್ಛೇದನ ಪಡೆದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ. ವೀಕ್ಷಣೆಗಾಗಿ ಸುಳ್ಳು ವದಂತಿಗಳನ್ನು ಹರಡಬಾರದು ಎಂದು ಮನವಿ ಮಾಡಿರುವ ಅವರು, ತಮ್ಮ ಖಾಸಗಿತನಕ್ಕೆ ಧಕ್ಕೆ ತಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕನ್ನಡದ ಕಿರುತೆರೆ ನಟಿ (Kannada serial actress) ಐಶ್ವರ್ಯಾ ಪಿಸ್ಸೆ (Aishwarya Pisse) ತಮ್ಮ ಪತಿಯಿಂದ (husband) ಡಿವೋರ್ಸ್‌ (divorce) ಪಡೆದುಕೊಂಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಅನುರೂಪ, ಸರ್ವಮಂಗಳ ಮಾಂಗಲ್ಯೇ, ಸುಂದರಿ ಮಾಂಗಲ್ಯ, ಪುನರ್ ವಿವಾಹ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿ ಐಶ್ವರ್ಯಾ ಪಿಸ್ಸೆ ಅವರು ಮನೆ ಮಗಳಾಗಿ, ಸೊಸೆಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ, ಅವರ ವೈಯಕ್ತಿಕ ಜೀವನದಲ್ಲಿ ಮಾತ್ರ ಮಾಂಗಲ್ಯ ಹಾಗೂ ವೈವಾಹಿಕ ಜೀವನ ಮಾತ್ರ ಸುಖದ ಹಾದಿಯಲ್ಲಿರಲಿಲ್ಲ. ಹೀಗಾಗಿ, ತಮ್ಮ ಗಂಡನಿಗೆ ಡಿವೋರ್ಸ್ ನೀಡಿದ ಮಾಹಿತಿಯನ್ನು ತಾವೇ ಖುದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಜೀವನ ಮತ್ತು ಧಾರಾವಾಹಿ ನಟನೆ ಎರಡೂ ಭಿನ್ನವಾಗಿವೆ. ನಮ್ಮ ವೈಯಕ್ತಿಕ ಜೀವನದ ನಿರ್ಧಾರವನ್ನು ಗೌರವಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಅಭಿಮಾನಿಗಳಿಗೆ ಸಂದೇಶವಲ್ಲ, ಎಚ್ಚರಿಕೆ ಕೊಟ್ಟ ನಟಿ

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನನ್ನೆಲ್ಲಾ ಪ್ರೀತಿಯ ಅಭಿಮಾನಿಗಳಿಗೆ, ಫಾಲೋವರ್ಸ್‌ಗಳಿಗೆ ಹಾಗೂ ಹಿತೈಷಿಗಳಿಗೆ, ನನ್ನ ವೈಯಕ್ತಿಕ ಜೀವನದ ಸುತ್ತ ಹರಡುತ್ತಿರುವ ಅನಗತ್ಯ ವದಂತಿಗಳು ಮತ್ತು ಊಹಾಪೋಹಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡುವುದು ಅಗತ್ಯವೆಂದು ಭಾವಿಸಿದ್ದೇನೆ.

ನಾನು ಮತ್ತು ನನ್ನ ಪತಿ ಕಳೆದ ಒಂದೂವರೆ ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಸಾಕಷ್ಟು ಯೋಚನೆ ಮತ್ತು ಪರಸ್ಪರ ಒಪ್ಪಿಗೆಯೊಂದಿಗೆ, ನಾವು ಪರಸ್ಪರ ಒಪ್ಪಿಗೆಯ ವಿಚ್ಛೇದನ ಪಡೆದಿದ್ದೇವೆ . ಇದು ನಮ್ಮಿಬ್ಬರ ವೈಯಕ್ತಿಕ ನಿರ್ಧಾರವಾಗಿದ್ದು, ಈ ಹಂತದಲ್ಲಿ ನಮಗೆ ಅಗತ್ಯವಿರುವ ಖಾಸಗಿತನ ಮತ್ತು ನೆಮ್ಮದಿಯನ್ನು ಗೌರವಿಸಿ, ನಮ್ಮ ಆಯ್ಕೆಯನ್ನು ಎಲ್ಲರೂ ಮಾನ್ಯ ಮಾಡಬೇಕೆಂದು ವಿನಂತಿಸುತ್ತೇನೆ.

ವೀಕ್ಷಣೆಗಳು, ಫಾಲೋವರ್ಸ್, ಲೈಕ್ಸ್ ಅಥವಾ ಎಂಗೇಜ್‌ಮೆಂಟ್ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಸುಳ್ಳು ಕಥೆಗಳನ್ನು ಸೃಷ್ಟಿಸುವುದು, ದಾರಿ ತಪ್ಪಿಸುವ ವಿಡಿಯೋಗಳನ್ನು ಪ್ರಕಟಿಸುವುದು, ಆಧಾರರಹಿತ ಆರೋಪಗಳನ್ನು ಮಾಡುವುದು, ನನ್ನ ಧಾರಾವಾಹಿಯ ದೃಶ್ಯಗಳನ್ನು ಸಂದರ್ಭಕ್ಕೆ ಸಂಬಂಧವಿಲ್ಲದ ರೀತಿಯಲ್ಲಿ ಬಳಸುವುದು ಅಥವಾ ನನ್ನ ವೈಯಕ್ತಿಕ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವುದು ಕಾನೂನಿನ ದೃಷ್ಟಿಯಿಂದ ಸ್ವೀಕಾರಾರ್ಹವಲ್ಲ.

ವದಂತಿಗಳನ್ನು ಹರಡಿಸಿದರೆ ಕ್ರಮ

ದಯವಿಟ್ಟು ತೆರೆಯ ಮೇಲಿನ ಜೀವನಕ್ಕೂ ನಿಜ ಜೀವನಕ್ಕೂ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ. ವದಂತಿಗಳನ್ನು ಹರಡುವುದನ್ನು ನಿಲ್ಲಿಸಿ. ಈ ಹೇಳಿಕೆಯನ್ನು ನೀಡುತ್ತಿರುವುದು ಸ್ಪಷ್ಟವಾದ ಮಿತಿಗಳನ್ನು ತಿಳಿಸುವುದಕ್ಕಾಗಿ ಮಾತ್ರವೇ ಹೊರತು, ಮತ್ತಷ್ಟು ಚರ್ಚೆಗಳಿಗೆ ಅಥವಾ ಊಹಾಪೋಹಗಳಿಗೆ ಆಹ್ವಾನ ನೀಡುವುದಕ್ಕಾಗಿ ಅಲ್ಲ. ಎಲ್ಲರೂ ನನ್ನ ಖಾಸಗಿತನವನ್ನು ಗೌರವಿಸಿ, ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸುತ್ತೇನೆ.

ನನ್ನ ಕೆಲಸವೇ ನನ್ನ ವೃತ್ತಿ. ನನ್ನ ವೈಯಕ್ತಿಕ ಜೀವನ ನನ್ನ ಖಾಸಗಿ ವಿಚಾರ. ಸುಳ್ಳು ಹಾಗೂ ಮಾನಹಾನಿಕರ ವಿಷಯಗಳನ್ನು ಸೂಕ್ತ ಕಾನೂನು ಮಾರ್ಗಗಳ ಮೂಲಕ ಎದುರಿಸಲಾಗುವುದು. ಇಂತಹ ಕೃತ್ಯಗಳು ಮುಂದುವರಿದರೆ, ಸಂಬಂಧಪಟ್ಟವರ ವಿರುದ್ಧ ಗಂಭೀರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

View post on Instagram