ಕೆಟ್ಟ ಗಾಯನ: ಕೆನ್ನೆಗೆ ಬಲವಾಗಿ ಹೊಡೆದುಕೊಂಡ ಜಡ್ಜ್ ಅನು ಮಲಿಕ್!
ಇಂಡಿಯನ್ ಐಡಲ್ ಶೋನಲ್ಲಿ ಹಳ್ಳಿ ಹುಡುಗನ ಹಾಡು ಕೇಳಿ ಜಡ್ಜ್ ಅನು ಮಲಿಕ್ ಕೆನ್ನೆಗೆ ಹೊಡೆದುಕೊಂಡಿದ್ದಾರೆ.
ಇಂಡಿಯನ್ ಐಡಲ್ ಪ್ರತೀ ಸೀಸನ್‌ನಲ್ಲೂ ಏನಾದರೂ ಒಂದು ವಿಶೇಷತೆ ಇದ್ದೇ ಇರುತ್ತದೆ. ಗಾಯಕರ ಧ್ವನಿಯಿಂದ, ಜಡ್ಜ್‌ಗಳ ಕಾಮೆಂಟ್‌ನಿಂದ ಸೀಸನ್‌ಗಳ ಕೆಲವೊಂದು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಇದೀಗ ಸೀಸನ್ 11ರ ಹಳೆ ವಿಡಿಯೋ ವೈರಲ್ ಆಗುತ್ತಿದೆ.
ಹೌದು! ಸೀಸನ್ 11ರ ಆಡಿಷನ್‌ನಲ್ಲಿ ಪವನ್ ಎಂಬ ಸ್ಪರ್ಧಿ 'ಯೇ ದಿಲ್ ಹೈ ಮುಷ್ಕಿಲ್' ಚಿತ್ರದ 'ಬುಲ್ಲೆಯಾ' ಹಾಡನ್ನು ಕೀರಲು ಧ್ವನಿಯಲ್ಲಿ ಹಾಡಿದ್ದಾರೆ. ಇದನ್ನು ಕೇಳಲಾಗದೇ ಅನು ಮಲಿಕ್ ತಮ್ಮ ಕೆನ್ನೆಗೆ ಬಲವಾಗಿ ಮೂರು ನಾಲ್ಕು ಬಾರಿ ಹೊಡೆದುಕೊಂಡಿದ್ದಾರೆ. ಪಕ್ಕದಲ್ಲಿ ಕುಳಿತಿದ್ದ ಗಾಯಕಿ ನೇಹಾ ಕಕ್ಕರ್ ಮಲ್ಲಿಕ್ ನಡೆಗೆ ಗಾಬರಿ ಅಗಿದ್ದಾರೆ.
ಹಾಡುವಾಗ ಪವನ್ ಗಂಟಲು ಕೆಟ್ಟಿತ್ತು, ತಕ್ಷಣವೇ ನೀರು ಕುಡಿಯುವಂತೆ ನೇಹಾ ಸೂಚಿಸಿದ್ದಾರೆ. ಆದರೂ ಸುಮ್ಮನಿರದೇ ಒಂದೇ ಸಮನ ಕೀರಲು ಧ್ವನಿಯಲ್ಲಿ ಪವನ್ ಹಾಡಿದ್ದಕ್ಕೆ ಜಡ್ಜ್‌ಗಳು ನಾನ್ ಸ್ಟಾಪ್ ನಕ್ಕಿದ್ದಾರೆ. ಜಡ್ಜ್‌ಗಳು ವರ್ತಿಸಿದ ರೀತಿಗೆ ಪವನ್ ಮುಜುಗರಕ್ಕೆ ಒಳಗಾಗಿದ್ದಾರೆ.
ಸೀಸನ್ 6 ನಂತರ ಇಂಡಿಯನ್ ಐಡಲ್ ಬಗ್ಗೆ ವೀಕ್ಷಕರು ಅಸಮಾಧಾನ ಹೊರ ಹಾಕಿದ್ದಾರೆ. ಗಾಯಕಿ ಸುನಿಧಿ ಚೌಹಾಣ್ ಜಡ್ಜ್ ಸ್ಥಾನದಲ್ಲಿದಾಗ ಮಾತ್ರ ಶೋ ಸೂಪರ್ ಆಗಿತ್ತು, ಈಗ ಟಿಆರ್‌ಪಿಗಾಗಿ ಹಾಳು ಮಾಡುತ್ತಿದ್ದಾರೆ ಎಂದು ವಾಹಿನಿಯ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.