ಬೆಂಗಳೂರು(ಮೇ.09): ರಾಜ್ಯ ಸರ್ಕಾರ ಮೇ 10 ರಿಂದ ಘೋಷಣೆ ಮಾಡಿರುವ ಸೆಮಿ ಲಾಕ್‌ಡೌನ್‌ಗೆ ಕನ್ನಡ ಕಿರುತೆರೆ ಕ್ಷೇತ್ರ ಬೆಂಬಲ ಸೂಚಿಸಿದೆ. ಈ ನಿಟ್ಟಿನಲ್ಲಿ ಧಾರಾವಾಹಿ, ರಿಯಾಲಿಟಿ ಶೋ ಸೇರಿದಂತೆ ಕಿರುತೆರೆಯ ಎಲ್ಲ ಚಟುವಟಿಕೆಗಳನ್ನು ಸಂಪೂರ್ಣವಾಗಿ ಬಂದ್‌ ಮಾಡಲು ನಿರ್ಧರಿಸಲಾಗಿದೆ.

ಒಂದು ವೇಳೆ ಯಾರಾದರೂ ಕದ್ದು ಮುಚ್ಚಿ ಚಿತ್ರೀಕರಣ ಮಾಡಿದರೆ ಅಂಥ ಧಾರಾವಾಹಿ ತಂಡ ಹಾಗೂ ವಾಹಿನಿ ವಿರುದ್ಧ ಸರ್ಕಾರದ ಕೋವಿಡ್‌ ನಿಯಮಗಳ ಪ್ರಕಾರ ಕಠಿಣ ಕ್ರಮ ಜರುಗಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಕರ್ನಾಟಕ ಟೆಲಿವಿಷನ್‌ ಅಸೋಸಿಯೇಷನ್‌ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಆ ಮೂಲಕ ಕನ್ನಡ ಕಿರುತೆರೆ ಕ್ಷೇತ್ರದ ಎಲ್ಲ ರೀತಿಯ ಚಟುವಟಿಕೆಗಳು ಮೇ 24ರವರೆಗೂ ಪ್ಯಾಕಪ್‌ ಆಗಲಿವೆ.
 

"

ಈ ಬಗ್ಗೆ  ಜತೆ ಮಾತನಾಡಿದ ಟೆಲಿವಿಷನ್‌ ಅಸೋಸಿಯೇಷನ್‌ ಅಧ್ಯಕ್ಷ ಎಸ್‌.ವಿ. ಶಿವಕುಮಾರ್‌, ‘ಈಗಾಗಲೇ ಸ್ಟುಡಿಯೋಗಳು ಬಂದ್‌ ಆಗಿವೆ. ಶೂಟಿಂಗ್‌ ಕೂಡ ಬಂದ್‌ ಮಾಡುವುದಕ್ಕೆ ನಿರ್ಧರಿಸಿದ್ದು, ಇದಕ್ಕೆ ಎಲ್ಲ ವಾಹಿನಿಗಳ ಮುಖ್ಯಸ್ಥರ ಒಪ್ಪಿಗೆಯನ್ನು ಪಡೆದುಕೊಂಡೇ ಟೆಲಿವಿಷನ್‌ ಅಸೋಸಿಯೇಷನ್‌ ಈ ತೀರ್ಮಾನ ಕೈಗೊಂಡಿದೆ’ ಎಂದಿದ್ದಾರೆ. ‘ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಶೂಟಿಂಗ್‌ ಎಂದರೆ ಹೆಚ್ಚಿನ ಜನ ಸೇರುವ ಚಟುವಟಿಕೆ. ಹೀಗಾಗಿ ಕೋವಿಡ್‌ ಹರಡದಂತೆ ತಡೆಯುವ ಜವಾಬ್ದಾರಿ ಕೂಡ ನಮ್ಮದು. ಮನರಂಜನೆಗಿಂತ ಈಗ ಆರೋಗ್ಯ ಹಾಗೂ ಪ್ರಾಣ ಮುಖ್ಯ. ಈಗಾಗಲೇ ಮನರಂಜನಾ ಕ್ಷೇತ್ರ ಕೂಡ ಕೊರೋನಾದಿಂದ ಹಲವರನ್ನು ಕಳೆದುಕೊಂಡಿದೆ. ಹೆಚ್ಚಿನ ಅನಾಹುತ ಆಗುವುದು ಬೇಡ ಅಂತಲೇ ಸೆಮಿ ಲಾಕ್‌ಡೌನ್‌ ಬೆಂಬಲಿಸಿ ಚಿತ್ರೀಕರಣ, ಸ್ಟುಡಿಯೋ ಕೆಲಸಗಳನ್ನು ಮೇ 24ರವರೆಗೂ ಸಂಪೂರ್ಣವಾಗಿ ಬಂದ್‌ ಮಾಡಲಾಗುತ್ತಿದೆ. ಮೇ.24ರ ನಂತರ ಪರಿಸ್ಥಿತಿಗಳನ್ನು ಅವಲೋಕಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಪ್ರಸ್ತುತ ಕನ್ನಡದಲ್ಲಿ ಸುಮಾರು 60 ರಿಂದ 65 ಧಾರಾವಾಹಿಗಳು, ಎರಡು-ಮೂರು ರಿಯಾಲಿಟಿ ಶೋಗಳ ಚಿತ್ರೀಕರಣ ಚಾಲ್ತಿಯಲ್ಲಿದೆ. ಪ್ರತಿ ಧಾರಾವಾಹಿ ಶೂಟಿಂಗ್‌ ಸೆಟ್‌ನಲ್ಲಿ 50 ರಿಂದ 60 ಜನ ಕೆಲಸ ಮಾಡುತ್ತಾರೆ. ರಿಯಾಲಿಟಿ ಶೋ ಸೆಟ್‌ನಲ್ಲಿ 20 ರಿಂದ 30 ಮಂದಿ ಕೆಲಸ ಮಾಡುತ್ತಾರೆ.

ಹಳೆಯ ಎಪಿಸೋಡ್‌ಗಳ ಮರು ಪ್ರಸಾರ

ಹೆಚ್ಚೂಕಡಿಮೆ ಎರಡು ವಾರಗಳ ಚಿತ್ರೀಕರಣ ಬಂದ್‌ ಮಾಡುತ್ತಿರುವ ಹಿನ್ನೆಲೆಯಲ್ಲಿ ಆಯಾ ಧಾರಾವಾಹಿಗಳು ಹಳೆಯ ಎಪಿಸೋಡ್‌ಗಳನ್ನೇ ಮರು ಪ್ರಸಾರ ಮಾಡಲು ಮುಂದಾಗಲಿವೆ. ಈಗಾಗಲೇ ಶೂಟಿಂಗ್‌ ಮಾಡಿಕೊಂಡು ಬ್ಯಾಂಕಿಂಗ್‌ ಮಾಡಿಕೊಂಡಿರುವ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಎಪಿಸೋಡ್‌ಗಳು ಮುಗಿದ ಮೇಲೆ ಹಳೆಯ ಎಪಿಸೋಡ್‌ಗಳೇ ಪ್ರೇಕ್ಷಕರ ಮುಂದೆ ಮತ್ತೆ ಪ್ರದರ್ಶನಗೊಳ್ಳಲಿವೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona