ಹಿಟ್ಲರ್ ಕಲ್ಯಾಣ: ಕೆಲಸಗಾರರಿಗೆ ಹೊಡೆಯೋ ಏಜೆ ಮೇಲೆ ವೀಕ್ಷಕರಿಗೆ ಸಿಟ್ಟು
ಮಹಾನ್ ಸಿಟ್ಟುಗಾರ, ಸದಾ ಶಿಸ್ತನ್ನು ಬಯಸೋ ಏಜೆಯ ಕೆಲವು ಅತಿರೇಕದ ವರ್ತನೆಗಳು ವೀಕ್ಷಕರಿಗೆ ಸಿಟ್ಟು ತರಿಸುತ್ತಿವೆ. ಅದರಲ್ಲೂ ಮುಖ್ಯವಾಗಿ ಆತ ಸದಾ ತನ್ನ ಕೆಲಸಗಾರರಿಗೆ ಹೊಡೆಯೋದು, ಬಡಿಯೋದು ವೀಕ್ಷಕರಿಗೆ ಇರಿಟೇಟ್ ಅನಿಸುತ್ತಿದೆ. ಯಾವ್ ಸೀಮೆ ಹೀರೋನಯ್ಯಾ ನೀನು ಅಂತ ಜನ ಹಿಟ್ಲರ್ ಕಲ್ಯಾಣ ಸೀರಿಯಲ್ ಹೀರೋಗೆ ಕ್ಲಾಸ್ ತಗೊಳ್ತಿದ್ದಾರೆ.
ಹಿಟ್ಲರ್ ಕಲ್ಯಾಣ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್. ಇದರ ಕಥೆಯಲ್ಲೊಂದು ಹೊಸತನ ಇರುವ ಕಾರಣ ಜನ ಈ ಸೀರಿಯಲ್‌ಅನ್ನು ಬಹಳ ಇಷ್ಟಪಡುತ್ತಾ ಬಂದರು. ಆದರೆ ಜನರಿಗೆ ಬಹಳ ಇರಿಸುಮುರಿಸು ತರಿಸ್ತಿರೋದು ಈ ಸೀರಿಯಲ್ ಹೀರೋ ಏಜೆಯ ವರ್ತನೆ. ತಾನು ಪರ್ಫೆಕ್ಷನಿಸ್ಟ್, ಮಹಾ ಶಿಸ್ತುಗಾರ, ತಪ್ಪನ್ನು ಸಹಿಸೋದಿಲ್ಲ ಅಂತ ಹೇಳ್ತನೇ ಬಂದಿರೋ ಏಜೆ ಆ ಶಿಸ್ತಿಗೋಸ್ಕರ ಇನ್ನೊಬ್ಬ ವ್ಯಕ್ತಿಗೆ ಹೊಡೆದು ಬಡಿದು ಮಾಡೋದು ಮಾನವೀಯತೆಯ ಲೋಪ ಅನಿಸುತ್ತೆ. ಹಿಂದೆಲ್ಲ ಪಾಳೆಗಾರರ ಕಾಲದಲ್ಲಿ ಯಜಮಾನ, ಆಳು ಅನ್ನೋ ಕಾಂಸೆಪ್ಟ್ ಇತ್ತು. ಆದರೆ ಈಗ ಪ್ರತಿಯೊಬ್ಬ ವ್ಯಕ್ತಿಯ ಆತ್ಮಗೌರವಕ್ಕೂ ಬೆಲೆ ಇದೆ. ಕೆಲಸ ಯಾವುದು ಅನ್ನೋದು ಮುಖ್ಯವಲ್ಲ, ವ್ಯಕ್ತಿಗೆ ಗೌರವ ಕೊಡೋದು ಮುಖ್ಯ ಆಗುತ್ತೆ. ಆದರೆ ಏಜೆ ತನ್ನ ಕೆಲಸಗಾರರು ತಪ್ಪು ಮಾಡಿದರೆ ಕಪಾಳ ಮೋಕ್ಷ ಮಾಡ್ತಾನೆ. ತಾನು ಮಹಾ ಒಳ್ಳೆಯವನ ಹಾಗೆ ಪೋಸು ಕೊಡ್ತಾನೆ, ಸಿಟ್ಟನ್ನೇ ಕಂಟ್ರೋಲ್ ಮಾಡಲಿಕ್ಕಾಗದ ಈತ ಯಾವ ಸೀಮೆ ಯಜಮಾನ ಅಂತ ಈ ಸೀರಿಯಲ್ ನೋಡಿದ ಜನ ಮಾತಾಡಿಕೊಳ್ತಿದ್ದಾರೆ. ಇದು ಸೀರಿಯಲ್ ವೀಕ್ಷಣೆಯ ಮೇಲೂ ಪರಿಣಾಮ ಬೀರ್ತಿದೆ.
ಹಿಟ್ಲರ್ ಕಲ್ಯಾಣ ಸೀರಿಯಲ್‌ನ ಹೆಸರೇ ಹೇಳುವಂತೆ ಈ ಸೀರಿಯಲ್ ಹೀರೋ ಏಜೆ ಅಂದರೆ ಅಭಿರಾಮ್‌ದು ಹಿಟ್ಲರ್‌ನಂಥಾ ಸರ್ವಾಧಿಕಾರದ ವ್ಯಕ್ತಿತ್ವ. ಆದರೆ ಹಿಟ್ಲರ್ ಮಹಾ ನೀಚ, ಕ್ರೂರಿ, ಧರ್ಮಾಂಧನಾಗಿದ್ರೆ ಈತ ಕೊಂಚ ಭಿನ್ನ. ಒಂದು ಕಾಲದಲ್ಲಿ ತನ್ನ ಪತ್ನಿ ಅಂತರಾಳನ್ನು ಬಹಳ ಪ್ರೀತಿಸುತ್ತಿದ್ದ ಅನುರಾಗಿ. ಈಗ ತಾಯಿಯನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಾ ಆಕೆಗಾಗಿ ಏನು ಮಾಡಲೂ ಸಿದ್ಧನಿರುವ ಒಳ್ಳೆಯ ಮನಸ್ಸಿರುವಾತ. ಅಮ್ಮನ ಬಲವಂತಕ್ಕೆ ತನಗಿಂತ ಅರ್ಧ ವಯಸ್ಸಿನ ಲೀಲಾಳನ್ನು ಏಜೆ ಮದುವೆ ಆಗಿದ್ದಾನೆ. ಮದುವೆ ಆಗಿ ಮನೆಗೆ ಕರ್ಕೊಂಡು ಬಂದಿದ್ದಾನೆ, ಆದರೆ ಅವರಿಬ್ಬರ ನಡುವೆ ನಿಜವಾದ ಪ್ರೀತಿ ಇನ್ನೂ ಶುರುವಾಗಿಲ್ಲ.
ಏಜೆ ತಾಯಿ ಅಜ್ಜಿ ಒಬ್ಬಳನ್ನು ಬಿಟ್ಟು ಉಳಿದ ಎಲ್ಲರೂ ಲೀಲಾ ಏಜೆ ಪ್ರೀತಿಯ ವಿರುದ್ಧ ಇದ್ದಾರೆ. ಏಜೆ ಮತ್ತು ಲೀಲಾರನ್ನು ಹೇಗಾದರೂ ಬೇರೆ ಮಾಡಿ ಈ ಮನೆಯಲ್ಲಿ ತಾವು ರಾಣಿಯರ ಹಾಗೆ ಮೆರೆಯಬೇಕು ಅನ್ನೋ ಮನಸ್ಥಿತಿ ಅವರದು. ಪವಿತ್ರಾ ಅನ್ನೋ ಏಜೆ ತಂಗಿ ಆಕೆಯ ಗಂಡ ದೇವ್ ಮಾಡಿರೋ ಕ್ರೌರ್ಯದಿಂದ ಹಾಸಿಗೆ ಬಿಟ್ಟೇಳುವ ಸ್ಥಿತಿಯಲ್ಲಿಲ್ಲ. ಅವಳಿಗೆ ಲೀಲಾ ಕಂಡರೆ ಪ್ರೀತಿ ಇದೆ. ಲೀಲಾ ಜೊತೆಗೆ ಅವಳು ತಕ್ಕಮಟ್ಟಿಗೆ ನೆಮ್ಮದಿ ಆಗಿರುತ್ತಾಳೆ. ಲೀಲಾ ಮನೆ ಬಿಟ್ಟು ಹೊರಡ್ತೀನಿ ಅಂದರೆ ವಿಲವಿಲ ಅಂತ ಒದ್ದಾಡ್ತಾಳೆ. ಅವಳ ಒದ್ದಾಟ ನೋಡಿ ಲೀಲಾ ಮನೆ ಬಿಟ್ಟು ಹೋಗೋ ನಿರ್ಧಾರದಿಂದ ಹಿಂದೆ ಸರಿಯುತ್ತಾಳೆ.
ಇದನ್ನೂ ಓದಿ: ಹಿಟ್ಲರ್ ಕಲ್ಯಾಣ: ಹುಟ್ಟೋ ಮೊದಲೇ ಏಜೆ ಲೀಲಾ ಮಗೂಗೆ ಅಜ್ಜಿ ಹೆಸರಿಟ್ಟಾಯ್ತು!
ಇನ್ನೊಂದೆಡೆ ಏಜೆ ಎಷ್ಟೇ ಒಳ್ಳೆಯವನಾಗಿದ್ದರೂ, ಹಿಟ್ಲರ್ ಅಂತ ಅಡ್ಡ ಹೆಸರು ಇಟ್ಟುಕೊಂಡಿದ್ದರೂ ಆತ ಈ ಸೀರಿಯಲ್‌ನ ಒಬ್ಬ ಪವರ್‌ಫುಲ್ ಹೀರೋ. ಒಬ್ಬ ಹೀರೋ ಬಹಳ ಜನರನ್ನು ಪ್ರಭಾವಿಸುತ್ತಾನೆ. ಆತನನ್ನು ಬಹಳ ಜನ ಫಾಲೋ ಮಾಡ್ತಾರೆ. ಆತನ ವರ್ತನೆಯಿಂದ ಪ್ರಭಾವಿತರಾಗುತ್ತಾರೆ. ಆತನನ್ನು ಮಾದರಿಯಾಗಿಟ್ಟುಕೊಂಡು ಆತನಂತೇ ಬಿಹೇವ್ ಮಾಡಲು ಶುರು ಮಾಡ್ತಾರೆ. ಹೀರೋಯಿನ್ ಹೇಗೆ ಒಳ್ಳೆಯವಳಾಗಿರ್ತಾಳೋ ಹಾಗೇ ಹೀರೋನೂ ಒಳ್ಳೆಯನಾಗಿರಬೇಕು ಅನ್ನೋದು ಅನ್‌ಟೋಲ್ಡ್ ವಿಚಾರ. ಬೈಯ್ಯೋದು, ಗೊಣಗೋದು ಮಾಡಿದರಾದ್ರೂ ಆತ ಹಿಟ್ಲರ್ ಅಂತ ಕರೆಸಿಕೊಂಡಿದ್ದಕ್ಕೆ ಅದನ್ನ ಸಹಿಸಬಹುದು. ಆದರೆ ಇನ್ನೊಬ್ಬ ವ್ಯಕ್ತಿಯ ಮೇಲೆ ಆತ ತನ್ನ ಕೈ ಕೆಳಗೆ ದುಡಿಯುತ್ತಾನೆ ಅನ್ನೋ ಒಂದೇ ಕಾರಣಕ್ಕೆ ಹೊಡೆಯೋದು ತಪ್ಪು ಅನ್ನೋದು ವೀಕ್ಷಕರ ಅಭಿಪ್ರಾಯ.ಎಜೆ ಪಾತ್ರದಲ್ಲಿ ದಿಲೀಪ್ ರಾಜ್, ಲೀಲಾ ಪಾತ್ರದಲ್ಲಿ ಮಲೈಕಾ ವಸುಪಾಲ್ ನಟಿಸಿದ್ದಾರೆ.
'ಇವ್ನು ಯಾವ ಸೀಮೆ ಯಜಮಾನ, ಎಲ್ರಿಗೂ ಬರೀ ಹೊಡೆದಿದ್ದೇ ಆಯ್ತು', 'ಯಾವನಪ್ಪಾ ಈ ... ಹೀರೋ', 'ಓವರ್ ಆಯ್ತು, ಬಹಳ ಅತಿಯಾಯ್ತು, ಯಾವಾಗ ನೋಡಿದ್ರೂ ಕಪಾಳಕ್ಕೆ ಹೊಡೆಯೋದು', 'ಬರೀ ಇದನ್ನೇ ನೋಡಿ ನೋಡಿ ಬೇಜಾರಾಯ್ತು. ಈ ಸೀರಿಯಲ್ ಟೈಮಿಂಗ್ಸ್ ಆದ್ರೂ ಚೇಂಜ್ ಮಾಡಿ'.. ಹೀಗೆಲ್ಲ ಜನ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡ್ತಿದ್ದಾರೆ. ಇದನ್ನು ನೋಡಿಯಾದರೂ ಈ ಹಿಂಸೆಯನ್ನು ಸೀರಿಯಲ್ ಟೀಮ್‌ನವರು ನಿಲ್ಲಿಸಬೇಕಿದೆ.
ಇದನ್ನೂ ಓದಿ: ಸತ್ಯ ಮಾಡಿದ ಪ್ರಸಾದದಲ್ಲಿ ಹಾಕಿದ ಉಪ್ಪು ಮಂಗಮಾಯ! ಸತ್ಯ ಕುತಂತ್ರ ಮೆಟ್ಟಿನಿಂತದ್ದು ಹೇಗೆ?