ಹಿಂದಿ ಕಿರುತೆರೆ ನಟಿ ಡಾಲಿ ಸೋಹಿ ಗರ್ಭಕಂಠದ ಕ್ಯಾನ್ಸರ್‌ಗೆ ಬಲಿಯಾಗಿದ್ದು, ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಕೇವಲ 47 ವರ್ಷ ವಯಸ್ಸಾಗಿತ್ತು. ನಿನ್ನೆಯಷ್ಟೇ ಡೋಲಿ ಅವರ ಸೋದರಿ ಅಮನ್‌ದೀಪ್ ಸೋನಿ ಜಾಂಡೀಸ್‌ಗೆ ಬಲಿಯಾಗಿದ್ದರು. 

ಹಿಂದಿ ಕಿರುತೆರೆ ನಟಿ ಡಾಲಿ ಸೋಹಿ ಗರ್ಭಕಂಠದ ಕ್ಯಾನ್ಸರ್‌ಗೆ ಬಲಿಯಾಗಿದ್ದು, ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಕೇವಲ 47 ವರ್ಷ ವಯಸ್ಸಾಗಿತ್ತು. ನಿನ್ನೆಯಷ್ಟೇ ಡೋಲಿ ಅವರ ಸೋದರಿ ಅಮನ್‌ದೀಪ್ ಸೋನಿ ಜಾಂಡೀಸ್‌ಗೆ ಬಲಿಯಾಗಿದ್ದರು. ಒಬ್ಬರಾದ ಮೇಲೆ ಒಬ್ಬರಂತೆ ಅಕ್ಕತಂಗಿ ಇಬ್ಬರೂ ಒಂದೇ ದಿನದ ಅಂತರದಲ್ಲಿ ಸಾವಿನ ಮನೆ ಸೇರಿದ್ದು, ಅವರ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಇಬ್ಬರನ್ನು ಚಿಕಿತ್ಸೆಗಾಗಿ ಮುಂಬೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಅಮನ್ದೀಪ್ ಸೋಹಿ ಮೃತಪಟ್ಟರೆ, ಇದು ಡೋಲಿ ಸೋಹಿ ಕೂಡ ಅಕ್ಕನ ಹಾದಿ ಹಿಡಿದಿದ್ದಾರೆ. ಇವರ ಕುಟುಂಬಕ್ಕೆ ಜೊತೆ ಜೊತೆಯೇ ಎದುರಾದ ದಿಢೀರ್ ಸಾವಿನಿಂದ ಅಭಿಮಾನಿಗಳು ಕೂಡ ಆಘಾತಕ್ಕೀಡಾಗಿದ್ದಾರೆ. 

ಡೋಲಿ ಸೋಹಿ ಅವರ ಸೋದರ ಮನ್ನು ಸೋಹಿ ಈ ಆಘಾತಕಾರಿ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಡೋಲಿ ಸೋಹಿ ದೀರ್ಘಕಾಲದಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರೂ ಸೋದರಿಯರನ್ನು ಕಳೆದುಕೊಂಡಿರುವುದರಿಂದ ತಮ್ಮ ಕುಟುಂಬ ಆಘಾತಕ್ಕೀಡಾಗಿದೆ. ಡೋಲಿ ಅಂತ್ಯಸಂಸ್ಕಾರ ಮಧ್ಯಾಹ್ನದ ನಂತರ ನಡೆಯಲಿದೆ ಎಂದು ಮನ್ನು ಸೋಹಿ ಹೇಳಿದ್ದಾರೆ. 

ಡೋಲಿ ಇಂದು ಮುಂಜಾನೆ 4 ಗಂಟೆಗೆ ಇಹಲೋಕ ತ್ಯಜಿಸಿದರು. ಡೋಲಿ ಹಾಗೂ ಅಮನ್‌ದೀಪ್ ಇಬ್ಬರನ್ನು ನವಿ ಮುಂಬೈನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಮನ್‌ದೀಪ್ ನಿನ್ನೆ ಹೊರಟು ಹೋದಳು, ಈಗ ಡೋಲಿ, ನಾವು ಸಂಪೂರ್ಣ ಅಘಾತಕ್ಕೀಡಾಗಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.

ಗರ್ಭಕಂಠದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಡೋಲಿ ಅವರು ಕಿಮೋಥೆರಪಿ ಮಾಡಿಸಿಕೊಳ್ಳುತ್ತಿದ್ದರು. ಕಳೆದ ವರ್ಷ ಅವರು ತಮ್ಮ ಕಿಮೋಥೆರಪಿ ಸೆಷನ್‌ನ ಫೋಟೋ ಹಂಚಿಕೊಂಡು ತನ್ನ ಈ ಕಷ್ಟದ ಪ್ರಯಾಣದಲ್ಲಿ ಜೊತೆಯಾದವರಿಗೆ ಧನ್ಯವಾದ ತಿಳಿಸಿದ್ದರು. ಅನೇಕ ಟಿವಿ ಸೀರಿಯಲ್‌ಗಳಲ್ಲಿ ಡೋಲಿ ಸೋಹಿ ನಟಿಸಿದ್ದಾರೆ. ಜನಕ್, ಕುಮ್‌ಕುಮ್ ಭಾಗ್ಯ, ಮೇರಿ ಆಶಿಕಿ ತುಮ್ ಸೇ ಹಿ, ಖುಬ್ ಲಡಿ ಮರ್ದಾನಿ, ಜಾನ್ಸಿ ಕೀ ರಾನಿ, ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದ ಅವರಿಗೆ ತಮ್ಮದೇ ಅದ ಭಾರೀ ಅಭಿಮಾನಿ ವರ್ಗವಿತ್ತು. ಗರ್ಭ ಕಂಠದ ಕ್ಯಾನ್ಸರ್‌ಗೆ ಬಲಿಯಾಗಿರುವ ಡೋಲಿ ಓರ್ವ ಮಗಳನ್ನು ಅಗಲಿದ್ದಾರೆ.