ಕಿರುತೆರೆ ಉದ್ಯಮ ಲಾಕ್‌ಡೌನ್‌ ಸಂಕಷ್ಟದಿಂದ ಪಾರಾಗಿದೆ. ಕೊರೋನಾದಿಂದ ಮನೆ ಸೇರಿಕೊಂಡಿದ್ದ ಧಾರಾವಾಹಿ ತಂಡಗಳು ಈಗ ಶೂಟಿಂಗ್‌ ಮೈದಾನಕ್ಕೆ ಇಳಿಯುವ ತಯಾರಿ ಮಾಡಿಕೊಳ್ಳುತ್ತಿವೆ. ಮೇ 11 ರಿಂದ ಧಾರಾವಾಹಿಗಳ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ಕೊಟ್ಟಿದ್ದು, ಕಿರುತೆರೆ ಮಂದಿ ಶೂಟಿಂಗ್‌ಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಶೀಘ್ರವೇ ಧಾರಾವಾಹಿ ಪ್ರಿಯರು ಹೊಸ ಎಪಿಸೋಡುಗಳನ್ನು ನೋಡಬಹುದಾಗಿದೆ.

ಕಿರುತೆರೆ ಉದ್ಯಮ ಲಾಕ್‌ಡೌನ್‌ ಸಂಕಷ್ಟದಿಂದ ಪಾರಾಗಿದೆ. ಕೊರೋನಾದಿಂದ ಮನೆ ಸೇರಿಕೊಂಡಿದ್ದ ಧಾರಾವಾಹಿ ತಂಡಗಳು ಈಗ ಶೂಟಿಂಗ್‌ ಮೈದಾನಕ್ಕೆ ಇಳಿಯುವ ತಯಾರಿ ಮಾಡಿಕೊಳ್ಳುತ್ತಿವೆ. ಮೇ 11 ರಿಂದ ಧಾರಾವಾಹಿಗಳ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಕೆಲವು ವಾಹಿನಿಗಳು, ನಿರ್ಮಾಪಕರು, ತಂತ್ರಜ್ಞರ ಜೊತೆ ಚರ್ಚಿಸಿ ಧಾರಾವಾಹಿಗಳ ಚಿತ್ರೀಕರಣವನ್ನು ಮೇ 25 ರಿಂದ ಪುನಾರಾಂಭಿಸುವ ನಿರ್ಧಾರ ತೆಗೆದುಕೊಂಡಿದೆ. ಈಗಾಗಲೇ ಸಾಕಷ್ಟು ಸಮಸ್ಯೆಗಳಿದ್ದು ಬಹುತೇಕ ಕಾರ್ಮಿಕರು ತಂತ್ರಜ್ಞರು ಒಂದೆಡೆ ಇಲ್ಲದಿರುವ ಕಾರಣ ಹಾಗೂ ಎಲ್ಲರ ಆರೋಗ್ಯದ ದೃಷ್ಟಿಯಿಂದ ಹಾಗೂ ಸಾಮಾಜಿಕ ಕಳಕಳಿಯಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. 

ಇಷ್ಟೆಲ್ಲಾ ಸಂಗತಿಗಳಿವೆ

1. ಮೇ 11ರ ವರೆಗೂ ಯಾವುದೇ ಧಾರಾವಾಹಿ ಶೂಟಿಂಗ್‌ ಮಾಡಲ್ಲ. ಆ ನಂತರ ಕನಿಷ್ಠ ಕಾರ್ಮಿಕರನ್ನು ಒಳಗೊಂಡು ಶೂಟಿಂಗ್‌ ನಡೆಯಲಿದೆ.

2. ಪ್ರತಿ ಧಾರಾವಾಹಿ ತಂಡದಲ್ಲಿ 18 ರಿಂದ 20 ಜನ ಕೆಲಸಗಾರರಿಗೆ ಮಾತ್ರ ಅವಕಾಶ ಇದೆ. ಈ ನಿಯಮವನ್ನು ಎಲ್ಲರು ಪಾಲಿಸಬೇಕು.

3. ಪ್ರತಿ ವಾಹಿನಿಯಿಂದಲೂ 10 ರಿಂದ 12 ಧಾರಾವಾಹಿ ತಂಡಗಳು ಚಿತ್ರೀಕರಣಕ್ಕೆ ಹೊರಡಲಿದ್ದು, ಕನ್ನಡದಲ್ಲೇ ಸುಮಾರು 100ಕ್ಕೂ ಹೆಚ್ಚು ಧಾರಾವಾಹಿಗಳು ಶೂಟಿಂಗ್‌ ಸಂಭ್ರಮ ಆಚರಿಸಲಿವೆ.

4. ಬಹುತೇಕ ಎಲ್ಲ ವಾಹಿಗಳ ಧಾರಾವಾಹಿಗಳ ಚಿತ್ರೀಕರಣ ಆಗಲಿದ್ದು, ಇದರಿಂದ ಪ್ರತಿ ದಿನ 1800 ರಿಂದ 2000 ಮಂದಿಗೆ ಕಿರುತೆರೆಯಲ್ಲಿ ಕೆಲಸ ಸಿಗಲಿದೆ.

5. ಐದು ದಿನಗಳ ಮಾತ್ರ ಶೂಟಿಂಗ್‌ಗೆ ಬಾಕಿ ಇದ್ದು, ಶೂಟಿಂಗ್‌ ಸ್ಥಳದಲ್ಲಿ ಕೆಲಸ ಮಾಡುವವರಿಗೆ ಮಾಸ್ಕ್‌, ಸ್ಯಾನಿಟೈಸರ್‌ ಇಡುವುದು ಕಡ್ಡಾಯ.

6. ಕೇವಲ ಒಳಾಂಗಣ ಚಿತ್ರೀಕರಣಕ್ಕೆ ಮಾತ್ರ ಅವಕಾಶ ಇದ್ದು, ಯಾವುದೇ ಕಾರಣಕ್ಕೂ ಹೊರಾಂಗಣದಲ್ಲಿ ಚಿತ್ರೀಕರಣ ಮಾಡುವಂತಿಲ್ಲ.

7. ಧಾರಾವಾಹಿಗಳ ಹೊರತಾಗಿ ರಿಯಾಲಿಟಿ ಶೋ ಸೇರಿದಂತೆ ಇತರೆ ಯಾವುದೇ ರೀತಿಯ ಕಿರುತೆರೆಯ ಮನರಂಜನೆ ಕಾರ್ಯಕ್ರಮಗಳ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿಲ್ಲ.

8. ರಿಯಾಲಿಟಿ ಶೋ ಅಥವಾ ಬೇರೆ ಯಾವುದೇ ವೇದಿಕೆ ಕಾರ್ಯಕ್ರಮಗಳ ಚಿತ್ರೀಕರಣಕ್ಕೆ ಜನ ಸೇರಲೇಬೇಕು. ಹೀಗಾಗಿ ಅವುಗಳ ಚಿತ್ರೀಕರಣಕ್ಕೆ ಸದ್ಯಕ್ಕೆ ಅವಕಾಶ ಇಲ್ಲ.

9. ಮೇ 11ರಿಂದ ಶೂಟಿಂಗ್‌ ಆರಂಭಗೊಂಡರೇ ಅಲ್ಲಿಂದ ಒಂದು ವಾರದ ನಂತರ ಎಲ್ಲ ವಾಹಿನಿಗಳ ಧಾರಾವಾಹಿಗಳಲ್ಲೂ ಹೊಸ ಎಪಿಸೋಡ್‌ಗಳು ಪ್ರಸಾರ ಆಗಲಿವೆ.

ರೊಮ್ಯಾಂಟಿಕ್‌ ದೃಶ್ಯಗಳಿಗೆ ಕತ್ತರಿ!

ಚಿತ್ರೀಕರಣಕ್ಕೆ ಅವಕಾಶ ಇದ್ದರೂ ಕೊರೋನಾ ಪರಿಣಾಮದಿಂದ ರೊಮ್ಯಾಂಟಿಕ್‌ ಹಾಗೂ ಕಿಸ್ಸಿಂಗ್‌ ದೃಶ್ಯಗಳಿಗೆ ಕತ್ತರಿ ಹಾಕಿಕೊಳ್ಳಲು ಎಲ್ಲ ಧಾರಾವಾಹಿಗಳ ನಿರ್ದೇಶಕರು ನಿರ್ಧರಿಸಿದ್ದಾರೆ. ಈಗಾಗಲೇ ಸ್ಕ್ರೀನ್‌ ಪ್ಲೇ ರೈಟರ್ಸ್‌ಗಳಿಗೂ ಇಂಥದ್ದೊಂದು ಸೂಚನೆ ನೀಡಲಾಗಿದ್ದು, ಪ್ರೀತಿ-ಪ್ರೇಮ ಹಾಗೂ ನಾಯಕಿ, ನಾಯಕಿ ಸನಿಹ ಬಂದು ಮಾತನಾಡುವಂತಹ ದೃಶ್ಯಗಳು ಇಲ್ಲದಂತೆ ಚಿತ್ರಕಥೆ ಬರೆಯಲು ಹೇಳಲಾಗಿದೆಯಂತೆ.

ಸರ್ಕಾರ ಒಳಗಾಂಣ ಚಿತ್ರೀಕರಣಕ್ಕೆ ಅನುಮತಿ ನೀಡಿದೆ. ನಮ್ಮ ಮನವಿಗೆ ಸ್ಪಂದಿಸಿದ ಸರ್ಕಾರಕ್ಕೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಮೇ.11ರಿಂದ ಎಲ್ಲರು ಚಿತ್ರೀಕರಣಕ್ಕೆ ಹೋಗಲು ನಿರ್ಧರಿಸಿದ್ದೇವೆ. ಶೂಟಿಂಗ್‌ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಕಡ್ಡಾಯ. ಹೆಚ್ಚಿನ ಜನ ಸೇರದಂತೆ ನೋಡಿಕೊಳ್ಳಬೇಕು.

-ಶಿವಕುಮಾರ್‌

ಅಧ್ಯಕ್ಷರು, ಕರ್ನಾಟಕ ಟೆಲಿವಿಷನ್‌ ಅಸೋಸಿಯೇಷನ್‌

ಸರ್ಕಾರದ ಅನುಮತಿ ಮೇರೆಗೆ ಒಳಗಾಂಣ ಚಿತ್ರೀಕರಣಕ್ಕೆ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಬಹುತೇಕ ಧಾರಾವಾಹಿಗಳು ಮರು ಪ್ರಸಾರ ಮಾಡುತಿದ್ವಿ. ಮೇ 11ರ ನಂತರ ಹೊಸ ಎಪಿಸೋಡ್‌ ಗಳನ್ನು ನೋಡಬಹುದು.

-ರಾಘವೇಂದ್ರ ಹುಣಸೂರು, ಜೀ ಕನ್ನಡ ವಾಹಿನಿ ಮುಖ್ಯಸ್ಥ

ನಮ್ಮ ಸಂಸ್ಥೆಯಿಂದ ಅಮ್ನೋರು, ಯಾರೇ ನೀ ಮೋಹಿನಿ ಹಾಗೂ ಬ್ರಹ್ಮಗಂಟು ಧಾರಾವಾಹಿಗಳು ಶೂಟಿಂಗ್‌ಗೆ ಹೋಗಬೇಕಿದೆ. ನೂರಾರು ಮಂದಿಗೆ ಅನ್ನ ಹಾಕುವ ಉದ್ಯಮ 40 ದಿನಗಳಿಂದ ಬಂದ್‌ ಆಗಿತ್ತು. ಎಲ್ಲ ಷರತ್ತುಗಳನ್ನುಪಾಲಿಸಿಕೊಂಡೇ ಒಂದು ತಿಂಗಳ ಮಟ್ಟಿಗೆ ನಾವು ಚಿತ್ರೀಕರಣ ಮಾಡಲೇ ಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬಹಳಷ್ಟುಜನ ಲಾಕ್‌ಡೌನ್‌ನಿಂದ ಊರುಗಳಿಗೆ ಹೋಗಿದ್ದಾರೆ. ಅವರನ್ನು ಮತ್ತೆ ಕರೆಸಿಕೊಳ್ಳಬೇಕು. ಹೊರಗಡೆಯಿಂದ ಬಂದವರ ಆರೋಗ್ಯ ನೋಡಿಕೊಳ್ಳಬೇಕು. ನಿರ್ಮಾಣ ಸಂಸ್ಥೆಗಳಿಗೆ ಇದೊಂದು ಸವಾಲು.

-ಶ್ರುತಿ ನಾಯ್ಡು, ನಿರ್ಮಾಪಕಿ

ಸಾಕಷ್ಟುಸವಾಲುಗಳ ನಡುವೆ ಶೂಟಿಂಗ್‌ ಹೊರಡಬೇಕಿದೆ. ನಮಗೆ ಇನ್ನೂ ಅಧಿಕೃತವಾಗಿ ಸರ್ಕಾರದ ಅನುಮತಿ ಪ್ರತಿ ಹಾಗೂ ಟೆಲಿವಿಷನ್‌ ಅಸೋಸಿಯೇಷನ್‌ ಪತ್ರ ಸಿಕ್ಕಿಲ್ಲ. ಅದು ನಮಗೆ ಸಿಕ್ಕ ಮೇಲೆ ಮುಂದಿನ ತಯಾರಿಗಳು ಮಾಡಿಕೊಳ್ಳುತ್ತೇವೆ.

-ರಮೇಶ್‌ ಇಂದಿರಾ, ನಿರ್ದೇಶಕ

ನನ್ನ ನಟನೆಯ ಜೊತೆ ಜೊತೆಯಲಿ ಧಾರಾವಾಹಿ ಒಂದು ತಿಂಗಳಿಂದ ಹಳೆಯ ಕಂತುಗಳನ್ನೇ ಮರು ಪ್ರಸಾರ ಮಾಡಲಾಗುತ್ತಿತ್ತು. ಈಗ ಚಿತ್ರೀಕರಣಕ್ಕೆ ಅವಕಾಶ ಸಿಕ್ಕಿರುವುದರಿಂದ ಹೊಸ ಕತೆಗಳನ್ನು ಪ್ರೇಕ್ಷಕರು ನೋಡಬಹುದು. ಸದ್ಯಕ್ಕೆ ಶೂಟಿಂಗ್‌ ಸಂಭ್ರಮಕ್ಕೆ ಕಾಯುತ್ತಿದ್ದೇವೆ.

-ಅನಿರುದ್ಧ್, ನಟ