ಗೋಲ್ಡ್ ಸುರೇಶ್ ಕುಟುಂಬದಲ್ಲಿ ತುರ್ತು ಪರಿಸ್ಥಿತಿ: ಬಿಗ್ ಬಾಸ್ ಮನೆ ಬಿಟ್ಟು ಹೋದ ಸುರೇಶ್ ವಾಪಸ್ ಬರ್ತಾರಾ?

ಬಿಗ್ ಬಾಸ್ ಸೀಸನ್ 11ರಲ್ಲಿ ಅನಿರೀಕ್ಷಿತ ತಿರುವು! ತುರ್ತು ಪರಿಸ್ಥಿತಿಯಿಂದಾಗಿ ಗೋಲ್ಡ್ ಸುರೇಶ್ ಮನೆಯಿಂದ ಹೊರಕ್ಕೆ. ಮತ್ತೆ ವಾಪಸ್ ಬರುತ್ತಾರಾ ಎಂಬುದು ಕುತೂಹಲ.

Gold Suresh leaves Bigg Boss house due to family emergency Will he return sat

ಬೆಂಗಳೂರು (ಡಿ.15): ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 11ರಲ್ಲಿ ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಲ್ಲಿದ್ದ ಒಬ್ಬ ಸ್ಪರ್ಧಿಗೆ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮನೆಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಎಲಿಮಿನೆಟ್ ಆಗದೆಯೂ ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಿಂದ ತುರ್ತಾಗಿ ಹೊರಗೆ ಹೋಗಿದ್ದಾರೆ. ಆದರೆ, ಪುನಃ ವಾಪಸ್ ಮನೆಯೊಳಗೆ ಬರುತ್ತಾರಾ? ಎಂಬ ಚರ್ಚೆಗಳು ಶರುವಾಗಿವೆ.

ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋಗೆ ಕರ್ನಾಟಕದ ಜನತೆ ಊಹಿಸಲೂ ಸಾಧ್ಯವಾಗದ ಒಬ್ಬ ಜನಸಾಮಾನ್ಯ ವ್ಯಕ್ತಿಯಾಗಿದ್ದ ಗೋಲ್ಡ್ ಸುರೇಶ್ ಅವರು ಆಗಮಿಸಿದ್ದರು. ಇವರು ಎಲ್ಲ ಸೆಲೆಬ್ರಿಟಿಗಳ ನಡುವೆ ತನ್ನದೇ ಛಾಪು ಮುಡಿಸಿಕೊಂಡು ಸುಮಾರು 11 ವಾರಗಳನ್ನು ಪೂರ್ಣಗೊಳಿಸಿದ್ದಾರೆ. ಇನ್ನು 33 ದಿನಗಳು ಕಳೆದರೆ ಇಡೀ ಬಿಗ್ ಬಾಸ್ ಸೀಸನ್ ಮುಕ್ತಾಯವಾಗುತ್ತಿತ್ತು. ಆದರೆ, ಇದೀಗ ಅವರ ಮನೆಯಲ್ಲಿ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ಸ್ವತಃ ಬಿಗ್ ಬಾಸ್ ಮಾಹಿತಿ ನೀಡಿದ್ದಾರೆ. ಹೀಗಾಗಿ, ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಅವರನ್ನು ತುರ್ತಾಗಿ ಅವರ ಮನೆಗೆ ಕಳುಹಿಸಲಾಗಿದೆ.

ಈ ಕುರಿತು ವಿಡಿಯೋ ಪ್ರೋಮೋ ಹಂಚಿಕೊಂಡಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಬಿಗ್ ಬಾಸ್ ಮನೆಯ ಸದಸ್ಯರೊಬ್ಬರ ನಿಕಟ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಅವರ ಅವಶ್ಯಕತೆ ಬಿಗ್ ಬಾಸ್ ಮನೆಗಿಂತ ಅವರ ಕುಟುಂಬಕ್ಕೆ ಹೆಚ್ಚಾಗಿದೆ. ಗೋಲ್ಡ್ ಸುರೇಶ್ ಅವರೇ ಹೆಚ್ಚು ತಡ ಮಾಡದೇ ನಿಮ್ಮ ವಸ್ತುಗಳನ್ನು ಪ್ಯಾಕ್ ಮಾಡಿಟ್ಟು ಬಿಗ್ ಬಾಸ್ ಮನೆಯಿಂದ ತಡಮಾಡದೇ ಹೊರಡಬೇಕಿದೆ' ಎಂದು ಹೇಳುತ್ತಾರೆ.

ಈ ವಿಚಾರವನ್ನು ಕೇಳುತ್ತಿದ್ದಂತೆಯೇ ಗೋಲ್ಡ್ ಸುರೇಶ್ ಅವರ ಮುಖದಲ್ಲಿ ಆತಂಕದ ಛಾಯೆ ಮೂಡಿದೆ. ಕಣ್ಣೀರು ಕಣ್ತುಂಬಿಕೊಂಡು ಭಾವುಕರಾಗಿದ್ದಾರೆ. ಭಾರದ ಮನಸ್ಸಿನಲ್ಲಿಯೇ ಮನೆಯಿಂದ ಹೊರಗೆ ಹೋಗುತ್ತಿದ್ದು, ಅದರಲ್ಲಿಯೂ ನಾನು ಬಿಗ್ ಬಾಸ್ ಮನೆಗೆ ಹೇಗೆ ಬಂದಿದ್ದೇನೆಯೋ ಹಾಗೆಯೇ ಹೊರಗೆ ಹೋಗುವುದಾಗಿ ತನ್ನೆಲ್ಲಾ ಆಭರಣಗಳನ್ನು ಮೈಮೇಲೆ ಹಾಕಿಕೊಂಡು ಹೊರಗೆ ಹೋಗಲು ಮುಂದಾಗಿದ್ದಾರೆ. ಈ ವೇಳೆ ಉಗ್ರಂ ಮಂಜು ಅವರು ತಾಯಿ ಒಳ್ಳೆಯದನ್ನು ಮಾಡುತ್ತಾಳೆ ಹೋಗು ಸುರೇಶ್, ಯಾವುದಕ್ಕೂ ಭಯಪಡಬೇಡ ಎಂದು ಧೈರ್ಯವನ್ನು ತುಂಬಿ ಕಳಿಸುತ್ತಾರೆ.

ಇದನ್ನೂ ಓದಿ: ಬಿಗ್ ಬಾಸ್‌ನಿಂದ ಶಿಶಿರ್ ಶಾಸ್ತ್ರಿ-ಗೋಲ್ಡ್‌ ಸುರೇಶ್ ಔಟ್; ಇಬ್ಬರ ಕಥೆಯೂ ಬೇರೆ ಬೇರೆ!

ಬಿಗ್ ಬಾಸ್ ಸೀಸನ್ 11ರ ಮುಕ್ತಾಯಕ್ಕೆ ಇನ್ನು ಒಂದು ತಿಂಗಳು ಮಾತ್ರ ಬಾಕಿಯಿದೆ. ಅಂದರೆ ಶೇ.75 ಶೋ ಪೂರ್ಣಗೊಂಡಿದ್ದು, ಇದೀಗ ಬಹುತೇಕ ಕಳಪೆ ಆಟಗಾರರನ್ನು ಹೊರಗೆ ಹಾಕಿ ಫೈನಲಿಸ್ಟ್‌ಗಳಿಗೆ ಮಾತ್ರ ವೇದಿಕೆ ಕಲ್ಪಿಸಿಕೊಡಲು ಬಿಗ್ ಬಾಸ್ ತಂಡವೂ ಹರಸಾಹಸ ಮಾಡುತ್ತಿದೆ. ಇಷ್ಟು ದಿನ ಜನರ ನಂಬಿಕೆ, ವಿಶ್ವಾಸ ಹಾಗೂ ಅಭಿಮಾನವನ್ನು ಗಳಿಸಿಕೊಂಡು ಆಟವಾಡುತ್ತಿದ್ದ ಗೋಲ್ಡ್ ಸುರೇಶ್ ಅವರು ಇದೀಗ ಎಲಿಮಿನೇಟ್ ಆಗದೇ ಕುಟುಂಬದ ತುರ್ತು ಪರಿಸ್ಥಿತಿಯಿಂದಾಗಿ ಮನೆಯಿಂದ ಹೊರಗೆ ಹೋಗಿದ್ದಾರೆ. ಆದರೆ, ರಿಯಾಲಿಟಿ ಶೋಗೆ ಇನ್ನೂ ಕೆಲವೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಒಂದು ವಾರ ತಡವಾದರೂ ಗೋಲ್ಡ್ ಸುರೇಶ್ ವಾಪಸ್ ಬರುತ್ತಾರೋ ಇಲ್ಲವೋ ಎಂಬ ನಂಬಿಕೆ ಇಲ್ಲದಂತಾಗಿದೆ. ಹೀಗಾಗಿ, ಬಿಗ್ ಬಾಸ್ ಮನೆಯಿಂದ ಇದೀಗ ಹೊರಗೆ ಹೋಗಿರುವ ಗೋಲ್ಡ್ ಸುರೇಶ್ ಅವರು ವಾಪಸ್ ಬರುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಬಹುದು. 

ಇದನ್ನೂ ಓದಿ: ತುಮಕೂರು ಫಾರ್ಮ್‌ಹೌಸ್ ಸ್ಪೋಟ ಪ್ರಕರಣ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್‌ನ ಇಬ್ಬರು ಸ್ನೇಹಿತರ ಬಂಧನ!

ಗೋಲ್ಡ್ ಸುರೇಶ್ ಕುಟುಂಬದಲ್ಲಿ ತಲೆ ದೋರಿರುವ ತುರ್ತು ಪರಿಸ್ಥಿತಿಯು ಮೂರ್ನಾಲ್ಕು ದಿನಗಳಲ್ಲಿ ಪರಿಹಾರವಾದಲ್ಲಿ ವಾಪಸ್ ಬರುವ ಸಾಧ್ಯತೆಯೂ ಹೆಚ್ಚಾಗಿದೆ. ಈ ಬಗ್ಗೆ ಬಿಗ್ ಬಾಸ್ ತಂಡದಿಂದಲೇ ಖಚಿತ ಮಾಹಿತಿ ಹೊರಬರಬೇಕಿದೆ. ಅಲ್ಲಿವರೆಗೂ ನಾವು, ನೀವೆಲ್ಲರೂ ಪ್ರೇಕ್ಷಕರಾಗಿ ಅವರ ಬಿಗ್ ಬಾಸ್ ಶೋ ವೀಕ್ಷಣೆ ಮಾಡಬೇಕಿದೆ. ಇನ್ನು ಈ ಹಿಂದೆ ಮನೆಯಿಂದ ಹೊರಗೆ ಹೋಗಿದ್ದ ವರ್ತೂರು ಸಂತೋಷ್ ಕೂಡ ವಾಪಸ್ ಮನೆಗೆ ಬಂದಿದ್ದರು. ಆದರೆ, ಅದು ಬಿಗ್ ಬಾಸ್ ಆರಂಭದ ಕೆಲವು ವಾರಗಳಲ್ಲಿ ನಡೆದಿತ್ತು. ಇದು ಮುಕ್ತಾಯದ ಹಂತದಲ್ಲಿ ಘಟನೆ ಸಂಭವಿಸುತ್ತಿದ್ದು, ಏನಾಗುತ್ತದೆ ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios