ಬಿಗ್ಬಾಸ್ ಖ್ಯಾತಿ ಬೆನ್ನಲ್ಲೇ ಗಿಚ್ಚಿ-ಗಿಲಿಗಿಲಿಗೆ ಡ್ರೋನ್ ಭರ್ಜರಿ ಎಂಟ್ರಿ: ಡ್ಯಾನ್ಸ್ನಿಂದ ಮೋಡಿ ಮಾಡಿದ ಪ್ರತಾಪ್
ಬಿಗ್ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಗಿಚ್ಚಿ-ಗಿಲಿಗಿಲಿ ರಿಯಾಲಿಟಿ ಷೋಗೆ ಭರ್ಜರಿ ಎಂಟ್ರಿ ಕೊಟ್ಟಿದ್ದು, ಅದರ ಪ್ರೊಮೋ ಬಿಡುಗಡೆಯಾಗಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರೋ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ ಈಗಾಗಲೇ ಎರಡು ಸೀಸನ್‌ಗಳನ್ನು ಮುಗಿಸಿದ್ದು ಮೂರನೆಯ ಸೀಸನ್ ಶುರುವಾಗುತ್ತಿದೆ. ಇದಾಗಲೇ ಹಲವಾರು ಕಾಮಿಡಿ ಸ್ಟಾರ್‌ಗಳನ್ನು ಚಲನಚಿತ್ರ ರಂಗಕ್ಕೆ ಈ ಷೋ ನೀಡಿದೆ. ಸಾಮಾನ್ಯವಾಗಿ ರಿಯಾಲಿಟಿ ಷೋಗಳಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಒಳ್ಳೆಯ ಅವಕಾಶವೇ ಸಿಗುತ್ತದೆ. ಅದೇ ರೀತಿಯ ಕಾರ್ಯಕ್ರಮದಲ್ಲಿ ಒಂದು ಗಿಚ್ಚಿ ಗಿಲಿಗಿಲಿ. ಈ ರಿಯಾಲಿಟಿ ಷೋನ ಸೀಸನ್ ಒಂದರಲ್ಲಿ ವಂಶಿಕಾ ಅಂಜನಿ ಕಶ್ಯಪ ಹಾಗೂ ಶಿವು ವಿಜೇತರಾಗಿದ್ದರು. ವಿನೋದ್ ಗೊಬ್ರಗಾಲ್, ನಿವೇದಿತಾ ರನ್ನರ್ ಆಪ್ ಆಗಿದ್ದರು. ಸೀಸನ್-2ರ ವಿಜೇತರಾಗಿ ಚಂದ್ರಪ್ರಭಾ ಗೆದ್ದಿದ್ದರು. ಇದೀಗ ಗಿಚ್ಚಿ ಗಿಲಿ ಗಿಲಿ ಸೀಸನ್-3 ಶುರುವಿಗೆ ಕ್ಷಣ ಗಣನೆ ಆರಂಭವಾಗಿದೆ. ನಾಳೆ ಅಂದರೆ ಫೆಬ್ರವರಿ 3 ರಂದು ಇದು ಪ್ರಸಾರವಾಗಲಿದೆ.
ಈ ಹಿಂದಿನ ಸೀಸನ್ಗಳಲ್ಲಿ ಸ್ಯಾಂಡಲ್ವುಡ್ ಸ್ಟಾರ್ ಶ್ರುತಿ, ನಟರಾದ ಸಾಧು ಕೋಕಿಲ ಮತ್ತು ಸೃಜನ್ ಲೋಕೇಶ್ ತೀರ್ಪುಗಾರರಾಗಿದ್ದರು. ಆದರೆ ಈ ಬಾರಿ ಸೃಜನ್ ಲೋಕೇಶ್ ಅವರ ಜಾಗದಲ್ಲಿ ಕೋಮಲ್ ಇದ್ದಾರೆ. ಉಳಿದಂತೆ ಇಬ್ಬರೂ ಜಡ್ಜ್ ಇರಲಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3ನಲ್ಲಿ ಸೃಜನ್ ಅವರು ತೀರ್ಪುಗಾರರಾಗಿರುವ ಕಾರಣ, ಈ ಒಂದು ಚಿಕ್ಕ ಬದಲಾವಣೆ ಮಾಡಲಾಗಿದೆ. ನಿರಂಜನ್ ದೇಶಪಾಂಡೆ ಅವರ ನಿರೂಪಣೆಯಲ್ಲಿ ಷೋ ಮೂಡಿ ಬರಲಿದೆ. ಈ ರಿಯಾಲಿಟಿ ಷೋ ಕುರಿತು ಇದಾಗಲೇ ಹಲವಾರು ಪ್ರೊಮೋಗಳನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.
ಎಲ್ಲೋ ಗೋಜಪ್ಪಾ ಸಾಕಪ್ಪಾ ಎಂದ ಇಶಾನಿ: ಶಿವಣ್ಣ ಕ್ಷಮಿಸಿಬಿಡಿ ಎನ್ನುತ್ತಲೇ ಮತ್ತೊಮ್ಮೆ ಹಾಡಿದ್ರು ಕೇಳಿ...
ಈ ಸೀಸನ್ ವಿಶೇಷ ಏನೆಂದ್ರೆ ಈ ಬಾರಿಯ ಕೆಲವು ಬಿಗ್ಬಾಸ್ ಸ್ಪರ್ಧಿಗಳೂ ಇದರಲ್ಲಿ ಭಾಗವಹಿಸುತ್ತಿದ್ದಾರೆ. ಅದರಲ್ಲಿ ಈಗ ಹೈಲೈಟ್ ಆಗಿರುವುದು ಡ್ರೋನ್ ಪ್ರತಾಪ್. ಡ್ರೋನ್ ಪ್ರತಾಪ್ ಬಗ್ಗೆ ಇದಾಗಲೇ ಪರ-ವಿರೋಧ ನಿಲುವು ವ್ಯಕ್ತವಾಗುತ್ತಲೇ ಇದೆ. ಡ್ರೋನ್ ನೀಡುವುದಾಗಿ ಹಲವರಿಗೆ ಮೋಸ ಮಾಡಿರುವ ಗಂಭೀರ ಆರೋಪವೂ ಇದೆ. ಇದೇ ಹಿನ್ನೆಲೆಯಲ್ಲಿ ಇವರ ವಿರುದ್ಧ ಸಾಕಷ್ಟು ಕೇಸ್ಗಳೂ ದಾಖಲಾಗಿವೆ. ಬಿಗ್ಬಾಸ್ ಮನೆಯಲ್ಲಿ ಅನುಕಂಪ ಗಿಟ್ಟಿಸುವ ಹಿನ್ನೆಲೆಯಲ್ಲಿ ಕೋವಿಡ್ ಸಮಯದಲ್ಲಿ ಬಿಬಿಎಂಪಿ ಅಧಿಕಾರಿಗಳು ಚಿತ್ರಹಿಂಸೆ ಕೊಟ್ಟಿರುವುದಾಗಿ ಹೇಳಿ ಫಜೀತಿಗೆ ಸಿಲುಕಿದ್ದಾರೆ. ಅದೇ ಇನ್ನೊಂದೆಡೆ ಫುಡ್ ಪಾಯ್ಸನ್ ಆದ ಬಗ್ಗೆ ಬಿಗ್ಬಾಸ್ ಮನೆಯಲ್ಲಿ ಒಂದು ಹೇಳಿಕೆ, ಹೊರಗಡೆ ಬಂದ ಮೇಲೆ ಇನ್ನೊಂದು ಹೇಳಿಕೆ ನೀಡುವ ಮೂಲಕ ಜನರನ್ನು ಯಾಮಾರಿಸುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳೂ ಇವೆ.
ಕಾಂಟ್ರವರ್ಸಿಯಿಂದಾಗಿಯೇ ಬಿಗ್ಬಾಸ್ ಮನೆಯೊಳಕ್ಕೆ ಎಂಟ್ರಿ ಪಡೆದಿದ್ದ ಡ್ರೋನ್ ಪ್ರತಾಪ್ ಮೊದಲ ರನ್ನರ್ ಅಪ್ ಆಗಿ ಬಿಗ್ಬಾಸ್ನಲ್ಲಿ ಹೊರಹೊಮ್ಮಿದ್ದಾರೆ. ಅಸಂಖ್ಯ ಅಭಿಮಾನಿಗಳನ್ನು ಗಳಿಸಿದ್ದಾರೆ. ಇವರ ಮೇಲೆ ಯಾರು ಎಷ್ಟೇ ಆರೋಪ ಮಾಡಿದರೂ ಪ್ರತಾಪ್ ತಲೆ ಕೆಡಿಸಿಕೊಳ್ಳದೇ ತಮ್ಮ ಎಂದಿನ ಮಾತಿನ ಮೋಡಿಯಲ್ಲಿ ನಿರತರಾಗಿದ್ದಾರೆ. ಇದೀಗ ಗಿಚ್ಚಿ ಗಿಲಿಗಿಲಿಯಲ್ಲಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಸೂಪರ್ ಆಗಿ ಡ್ಯಾನ್ಸ್ಗೆ ಸ್ಟೆಪ್ ಹಾಕಿ ಒಳ್ಳೆಯ ನೃತ್ಯಗಾರ ಎನಿಸಿಕೊಂಡಿದ್ದಾರೆ. ಇದಾಗಲೇ ಬಿಗ್ಬಾಸ್ ಸ್ಪರ್ಧಿ ವಿನಯ್ ಕೂಡ ಡ್ರೋನ್ ಪ್ರತಾಪ್ ಒಳ್ಳೆಯ ನಟ ಎಂದು ಹೇಳಿದ್ದು, ಅದನ್ನೀಗ ಡ್ರೋನ್ ಸಾಬೀತು ಮಾಡುತ್ತಿದ್ದಾರೆ.
ತಮ್ಮ ಜೀವನದ ಅಪರೂಪದ ವ್ಯಕ್ತಿಯನ್ನು ಪರಿಚಯಿಸಿದ ಬಿಗ್ಬಾಸ್ ಸಂಗೀತಾ ಶೃಂಗೇರಿ