ಬಿಗ್‌ಬಾಸ್ ವೇದಿಕೆಯಲ್ಲಿ ಡ್ರೋಣ್ ಪ್ರತಾಪ್ ಪ್ರತ್ಯಕ್ಷ! ಕಾಗೆ ಹಾರಿಸೋಕೆ ರೆಡಿನಾ ಅಂತಿದ್ದಾರೆ ನೆಟ್ಟಿಗರು
ಇಂದು ಬಿಗ್‌ಬಾಸ್ ಸೀಸನ್ 10 ಶುರುವಾಗಲಿದ್ದು, ವೇದಿಕೆಯ ಮೇಲೆ ಮೂವರು ಆಕಾಂಕ್ಷಿಗಳನ್ನು ಪರಿಚಯಿಸಲಾಗಿದೆ. ಅವರ ಪೈಕಿ ಡ್ರೋಣ್ ಪ್ರತಾಪ್ ಒಬ್ಬರು.
ಡ್ರೋಣ್ ಪ್ರತಾಪ್... ಬಹುಶಃ ಈ ಹೆಸರು ಕೇಳದವರೇ ಇಲ್ಲವೇನೋ. ಕೆಲ ವರ್ಷಗಳ ಹಿಂದೆ ಈ ಯುವಕನ ಹೆಸರು ಹೇಳಿಕೊಂಡು ತಮ್ಮ ಮನೆಯ ಮಕ್ಕಳನ್ನು ಬೈದವರು ಅದೆಷ್ಟೋ ಮಂದಿ. ಇವನನ್ನು ನೋಡಿ ಸ್ವಲ್ಪನಾದರೂ ಬುದ್ಧಿ ಕಲಿ ಎಂದು ಹೇಳಿಸಿಕೊಂಡ ಮಕ್ಕಳು ಇನ್ನೆಷ್ಟೋ. ಹೋದಲ್ಲಿ, ಬಂದಲ್ಲಿ ಈ ಯುವಕನ ಮಾತೇ ಮಾತು. ಪ್ರತಾಪ್ ಅವರ ಮಾತಿನ ಪ್ರತಾಪಕ್ಕೆ ಮೋಡಿಯಾಗದವೇ ಇಲ್ಲ. ವಿಭಿನ್ನ ಕ್ಷೇತ್ರಗಳ ನುರಿತರು, ಮೇಧಾವಿಗಳು ಎನಿಸಿಕೊಂಡವರೂ ಪ್ರತಾಪ್ ಮಾತಿಗೆ ತಲೆದೂಗಿದರು. ಎಷ್ಟೋ ವೇದಿಕೆಗಳಲ್ಲಿ ಇವರು ಮಾಡುತ್ತಿದ್ದ ಪ್ರೇರಣಾತ್ಮಕ ಭಾಷಣಕ್ಕೆ ತಲೆದೂಗಿದರು. ಕೇಳುವ ಪ್ರಶ್ನೆಗಳಿಗೆ ಅಷ್ಟೇ ಚೆನ್ನಾಗಿ ಉತ್ತರಿಸುವ ಮೇಧಾವಿ ಎನಿಸಿಕೊಂಡವರು ಡ್ರೋಣ್. ಡ್ರೋಣ್ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋಣ್ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್ಗಳು ದಾಖಲಾದವು. ಸ್ವಲ್ಪ ಸಮಯ ತಲೆ ಮರೆಸಿಕೊಂಡು ಮತ್ತೆ ಈಗ ಕಾಣಿಸಿಕೊಂಡಿದ್ದಾರೆ ಪ್ರತಾಪ್. ಇವರೀಗ ಬಿಗ್‌ಬಾಸ್ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದಾರೆ.
ಇವರ ಜೊತೆ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಹಾಗೂ ವರ್ತೂರ್ (ಹಳ್ಳಿಕಾರ್) ಅವರನ್ನೂ ವೇದಿಕೆಯ ಮೇಲೆ ತೋರಿಸಲಾಗಿದ್ದು, ಇವರಿಗೆ ಕಿಚ್ಚ ಸುದೀಪ್ ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ಬೇರೆ ಬೇರೆ ಕ್ಷೇತ್ರಗಳಿಂದ ಇಲ್ಲಿಗೆ ಆಯ್ಕೆ ಮಾಡಲಾಗುತ್ತದೆ. ನಿಮ್ಮನ್ನು ಯಾವ ಕ್ಷೇತ್ರದಿಂದ ಆಯ್ಕೆ ಮಾಡಬೇಕು ಎಂದು ಕೇಳಿದ್ದಾರೆ. ಅದೇ ರೀತಿ ಡ್ರೋಣ್ ಪ್ರತಾಪ್ಗೆ ನಿಮ್ಮ ಮೇಲೆ ಇಡೀ ಕರ್ನಾಟಕ ನಂಬಿತು. ನಿಮ್ಮನ್ನೇ ಉದಾಹರಣೆಯಾಗಿಟ್ಟುಕೊಂಡಿತ್ತು. ನಿಜಕ್ಕೂ ನೀವು ಮೋಸ ಮಾಡ್ರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ಏನು ಉತ್ತರ ಕೊಟ್ಟಿದ್ದಾರೆ ಎನ್ನುವುದು ಇಂದು ಸಂಜೆಯೇ ತಿಳಿದುಬರಲಿದೆ. ಈ ಮೂವರನ್ನು ಮನೆಯೊಳಕ್ಕೆ ಕಳುಹಿಸುವುದು, ಬಿಡುವುದನ್ನು ಪ್ರೇಕ್ಷಕರಿಗೆ ಬಿಟ್ಟಿದ್ದಾರೆ ಸುದೀಪ್. 40 ಪರ್ಸೆಂಟ್ಗಿಂತ ಕಡಿಮೆ ವೋಟ್ ಬಂದರೆ ಅವರನ್ನು ವೇದಿಕೆಯಿಂದಲೇ ಮನೆಗೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಪ್ರೇಕ್ಷಕರು ಈ ಮೂವರ ಪೈಕಿ ಯಾರನ್ನು ಆಯ್ಕೆ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಯಾರ ಕತೆ ಶುರು? ಯಾವ ಕತೆ ಫಿನಿಷ್? ಎನ್ನುವ ಶೀರ್ಷಿಕೆ ಜೊತೆ ಪ್ರೊಮೋ ಶೇರ್ ಮಾಡಿದೆ ಕಲರ್ಸ್ ಕನ್ನಡ.
BIGG BOSS 10 ಟ್ವಿಸ್ಟ್ ಟ್ವಿಸ್ಟ್... ಯಾರು ಒಳಗೆ? ಯಾರು ಹೊರಗೆ? ಪ್ರೇಕ್ಷಕರಿಂದ ವೋಟಿಂಗ್!
ಅಂದಹಾಗೆ ಹಾಗೆ, ಬಿಗ್‌ಬಾಸ್ ಕಲರ್ಸ್ ಕನ್ನಡ ಚಾನೆಲ್ನಲ್ಲಿ ಇಂದು ಸಂಜೆ 6.30ಕ್ಕೆ ಗ್ರ್ಯಾಂಡ್ ಓಪನಿಂಗ್ ಕಾಣಲಿದೆ. ಎಲ್ಲಾ ಸೀಸನ್‌ಗಳಲ್ಲಿ ಕಾಣದ ಹೊಸ ಮನೆಯ ಜೊತೆಗೆ ಹಲವಾರು ಟ್ವಿಸ್ಟ್ಗಳ ಜೊತೆ ಈ ಬಾರಿ ಬಿಗ್‌ಬಾಸ್ ಶುರುವಾಗಲಿದೆ ಎಂದು ಷೋ ಹೋಸ್ಟ್ ಮಾಡುವ ಕಿಚ್ಚ ಸುದೀಪ್ ಹಾಗೂ ಬಿಗ್‌ಬಾಸ್ ತಂಡ ಇದಾಗಲೇ ಹೇಳಿದೆ. ಈ ಮೊದಲು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಿಸಲಾಗಿದ್ದ ಮನೆಗಿಂತ ಈಗ ದೊಡ್ಡ ಆಲದ ಮರದ ಸಮೀಪ, ಬೆಂಗಳೂರು ಹೊರವಲಯದಲ್ಲಿ ನಿರ್ಮಾಣವಾಗಿದೆ ದೊಡ್ಮನೆ. 12 ಸಾವಿರ ಚದರ ಅಡಿ ಅಳತೆಯಲ್ಲಿ ನಿರ್ಮಾಣವಾಗಿರುವ ಈ ಮನೆ, ಉಳಿದ ಭಾಷೆಗಳ ಬಿಗ್ ಬಾಸ್ ಮನೆಗಿಂತಲೂ ವಿಸ್ತೀರ್ಣದಲ್ಲಿ ಬಹಳಷ್ಟು ದೊಡ್ಡದಾಗಿದೆ ಎಂದು ಕಲರ್ಸ್ ಕನ್ನಡ ಅಧಿಕೃತವಾಗಿ ಹೇಳಿಕೊಂಡಿದೆ. 16 ಮಂದಿ ಸ್ಪರ್ಧಿಗಳು ಇದರಲ್ಲಿ ಆಡಲಿದ್ದು, ಅವರ ಬಗ್ಗೆ ಬಿಗ್‌ಬಾಸ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಪ್ರತಿ ರಾತ್ರಿ 9.30ರಿಂದ ಬಿಗ್‌ಬಾಸ್ ಷೋ ನಡೆಯಲಿದೆ. ಟಿ.ವಿಯಲ್ಲಿ ಬಿಗ್‌ಬಾಸ್ ಅನ್ನು ಕೇವಲ ಒಂದು ಗಂಟೆಯಷ್ಟೇ ವೀಕ್ಷಿಸಬಹುದಾಗಿದೆ. ಆದರೆ ಇದೇ ಮೊದಲ ಬಾರಿಗೆ 'ಬಿಗ್‌ಬಾಸ್ ಕನ್ನಡ' jio cinema ದಲ್ಲಿಯೂ ಪ್ರಸಾರವಾಗಲಿದ್ದು, ದಿನದ ಇಪ್ಪತ್ತನಾಲ್ಕು ಗಂಟೆಯೂ ಮನೆಯಲ್ಲಿ ಏನಾಗುತ್ತಿದೆ ಎಂಬುದರ ನೇರಪ್ರಸಾರವನ್ನು ವೀಕ್ಷಕರು 24 ಗಂಟೆ ಲೈವ್ ಚಾನಲ್‌ನಲ್ಲಿ ನೋಡಬಹುದಾಗಿದೆ! ಇಂಥದ್ದೊಂದು ಹೊಸತನಕ್ಕೆ ಬಿಗ್‌ಬಾಸ್ ಕೈ ಹಾಕಿದೆ. ದೈನಂದಿನ ಸಂಚಿಕೆಗಳು ಮರುದಿನದಿಂದ ಪ್ರತಿ ದಿನ ರಾತ್ರಿ 9.30ರಿಂದ ಪ್ರಸಾರವಾದರೆ, ದಿನವೂ ಏನಾಗುತ್ತಿದೆ ಎನ್ನುವುದನ್ನು ಜಿಯೋ ಸಿನಿಮಾದ ಮೂಲಕ ನೋಡಬಹುದಾಗಿದೆ.
BIGGBOSS ಮನೆಯಲ್ಲಿ 73 ಕ್ಯಾಮೆರಾ: 24 ಗಂಟೆಗಳ ಕ್ಷಣ ಕ್ಷಣದ ದೃಶ್ಯ ವಿಕ್ಷಣೆಗೆ ಈ ಬಾರಿ ಅವಕಾಶ!