Asianet Suvarna News Asianet Suvarna News

ನೋಡುಗರ ಮನಕದಡಿದ ರಂಗ ಪ್ರಯೋಗ ’ಕದಡಿದ ನೀರು’

ಸ್ವಾತಂತ್ರ್ಯೋತ್ತರ ಗ್ರಾಮೀಣ ಭಾರತದ ಬದುಕು- ಬವಣೆ, ತವಕ-ತಲ್ಲಣಗಳು, ಬಡತನದ ಅಸಹಾಯಕತೆ, ಸ್ತ್ರೀ ಶೋಷಣೆ, ಮುಂತಾದವುಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಜಿ.ಬಿ.ಜೋಷಿಯವರ ಕದಡಿದ ನೀರು ರಂಗಶಾಲೆಗಳ ರಂಗ ಪ್ರಯೋಗಗಳಿಗೆ ಹೇಳಿ ಮಾಡಿಸಿದ ನಾಟಕ. 

Drama review of Kadadida Neeru Penned by G B Joshi
Author
Bengaluru, First Published Apr 17, 2019, 6:15 PM IST

ಸ್ವಾತಂತ್ರ್ಯೋತ್ತರ ಗ್ರಾಮೀಣ ಭಾರತದ ಬದುಕು- ಬವಣೆ, ತವಕ-ತಲ್ಲಣಗಳು, ಬಡತನದ ಅಸಹಾಯಕತೆ, ಸ್ತ್ರೀ ಶೋಷಣೆ, ಮುಂತಾದವುಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಜಿ.ಬಿ.ಜೋಷಿಯವರ ಕದಡಿದ ನೀರು ರಂಗಶಾಲೆಗಳ ರಂಗ ಪ್ರಯೋಗಗಳಿಗೆ ಹೇಳಿ ಮಾಡಿಸಿದ ನಾಟಕ.

ನಾಟಕ ನಿರ್ಮಾಣದ ಎಲ್ಲಾ ಆಯಾಮಗಳಿಗೆ ಒತ್ತು ಕೊಡುವ ಸಾಧ್ಯತೆ ಈ ನಾಟಕಕ್ಕೆ ಇದೆ. ಈ ನಿಟ್ಟಿನಲ್ಲಿ ಸಾಣೇಹಳ್ಳಿಯ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ಕದಡಿದ ನೀರು ನಾಟಕ ಪ್ರೇಕ್ಷಕರ ಮನ ಕದಡುವಲ್ಲಿ ಯಶಸ್ವಿಯಾಯಿತು.

Drama review of Kadadida Neeru Penned by G B Joshi

ಹಳ್ಳಿಯ ಗಾಂಧೀವಾದೀ ರೈತ ಶಿವಪ್ಪನ ಮನೆಯ ಅಂಗಳದಲ್ಲಿ ನಡೆಯುವ ಈ ಎರಡು ತಾಸಿನ ಪ್ರಹಸನಕ್ಕೆ ಸಾಕ್ಷಿಯಾಗುವುದು ಮನೆಯ ಗೋಡೆಗೆ ತೂಗು ಹಾಕಿದ ಮಹಾತ್ಮರ ಭಾವ ಚಿತ್ರ. ಅನಾರೋಗ್ಯ ಪೀಡಿತ ಶಿವಪ್ಪ, ಸಾಲದ ಶೂಲಕ್ಕೆ ಸಿಲುಕಿರುವ ಅಸಹಾಯಕ ಆದರ್ಶವಾದಿ. ನಿರ್ದಯಿ ಜಮೀನ್ದಾರ ಗೂಳಪ್ಪನ ಕ್ರೌರ್ಯಕ್ಕೆ ನಲುಗಿ, ಮನೆ-ತೋಟ ಕಳೆದುಕೊಳ್ಳಬೇಕಾದ ಸ್ಥಿತಿ ತಲುಪಿದ ಶಿವಪ್ಪನ ಕುಟುಂಬ, ಅಸಹಾಯಕತೆಯಿಂದ ಮಗಳು ಮಲ್ಲವ್ವನ ಮದುವೆಯನ್ನು ಅವಳ ಮನಸ್ಸಿಗೆ ವಿರುದ್ಧವಾಗಿ ಬಂಗಾರಶೆಟ್ಟಿಯ ಜೊತೆ ಮಾಡಲು ಸಿದ್ಧವಾಗುತ್ತದೆ.

ಇಲ್ಲಿ ಹೆಣ್ಣು ವ್ಯವಹಾರದ, ಲೀಲಾವಿನ ಸರಕಾಗಿ ಬಿಡುವ ನಮ್ಮ ದೇಶದ ಕಟುವಾಸ್ತವ ಕಣ್ಣಮುಂದೆ ನಿಲ್ಲುತ್ತದೆ. ಈ ಹಂತದಲ್ಲಿ ಮಲ್ಲವ್ವನ ಮೇಲೆ ಕೈ ಹಾಕಿದ ಗೂಳಪ್ಪನ ಹತ್ಯೆಯಾಗುತ್ತದೆ. ಎಲ್ಲರ ಅನುಮಾನ ಬಂಗಾರಶೆಟ್ಟಿಯ ಮೇಲಿದ್ದರೆ, ನಿಜವಾದ ಕೊಲೆಗಾರ ಶಿವಪ್ಪನ ಮಗ ಶಂಕರನೇ ಆಗಿರುತ್ತಾನೆ. ಮನೋತಳಮಳ ತಾಳಲಾರದೇ ಶಂಕರ ತಾನೇ ಕೊಲೆಗಾರನೆಂದು ಒಪ್ಪಿಕೊಂಡಾಗ ಗಾಂಧೀವಾದಿಯಾದರೂ ಮಮಕಾರ, ವ್ಯಾಮೋಹದ ಬಲೆಗೆ ಸಿಲುಕಿದ ಶಿವಪ್ಪ
ಸತ್ಯವನ್ನು ಮರೆಮಾಚು ಎನ್ನುವುದು, ಹಾಗೆ ಮಾಡಿದರೆ ನಾನು ಇನ್ನೊಬ್ಬ ಗೂಳಪ್ಪನೇ ಆದೇನು ಎನ್ನುವ ಶಂಕರ ಪ್ರಾಯಶ್ಚಿತ್ತಾಕ್ಕಾಗಿ ಪೋಲೀಸರಿಗೆ ಶರಣಾಗುವುದು ಮನೋವ್ಯಾಪಾರದ ಏರಿಳಿತಗಳಿಗೆ ಸಾಕ್ಷಿಯಾಗುತ್ತದೆ.

ಇಡೀ ನಾಟಕಕ್ಕೆ ಸಾಕ್ಷಿಯಾಗುವ ಹುಚ್ಚ ರಾಚಪ್ಪ ವ್ಯಾಧಿಗ್ರಸ್ಥ ಸಮಾಜದ ಅಂತರಂಗದ ವಾಸ್ತವವಾಗಿ ಕಾಣಿಸಿಕೊಳ್ಳುತ್ತಾನೆ. ಇಂತಹ ಗಟ್ಟಿವಸ್ತುವಿನ ನಾಟಕ ಯಶಸ್ವಿಯಾಗ ಬೇಕಾದರೆ, ನಟರ ಪಕ್ವ ಅಭಿನಯ, ಬಿಗಿಯಾದ ನಿರ್ದೇಶನ ಅತ್ಯಗತ್ಯ. ಇನ್ನೂ ಕಲಿಕೆಯ ಹಂತದಲ್ಲಿರುವ ರಂಗಶಾಲಾ ವಿದ್ಯಾರ್ಥಿಗಳ ಅಭಿನಯದಲ್ಲಿ ಪಕ್ವತೆಯ ಅಗತ್ಯ ಇನ್ನೂ ಇತ್ತು ಎಂದೆನಿಸಿದರೂ ಅವರ ಪ್ರಾಮಾಣಿಕ ಪ್ರಯತ್ನ ಪ್ರಶಂಸನಾರ್ಹ. ಶಿವಪ್ಪ, ಅವನ ಪತ್ನಿ ಪಾರವ್ವ,
ಮಗಳು ಮಲ್ಲವ್ವ, ಮಗ ಶಂಕರ, ಬಂಗಾರಶೆಟ್ಟಿ, ಹುಚ್ಚ, ಗೂಳಪ್ಪ ಮುಂತಾದ ಪಾತ್ರಧಾರಿಗಳ ನಟನಾನಿಷ್ಠೆಯಿಂದ ನಾಟಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಂತೂ ನಿಜ.

ಹಳ್ಳಿಯ ಪರಿಸರವನ್ನೇ ಹುಣಸೇ ಮರದಡಿಯ ವೇದಿಕೆ ಮೇಲೆ ಸೃಷ್ಟಿಸಿದ ರಿಯಲಿಸ್ಟಿಕ್ ರಂಗಸಜ್ಜಿಕೆ ನಾಟಕದ ಹೈಲೈಟ್ ಹಾಗೂ ನಿರ್ದೇಶಕರ ಸೃಜನಶೀಲತೆಗೆ ಹಿಡಿದ ಕನ್ನಡಿ. ನಾಡಹಂಚಿನ ಮನೆ, ಮಣ್ಣಿನ ಗೋಡೆ, ಬಚ್ಚಲು, ಕೊಟ್ಟಿಗೆ, ಎತ್ತಿನ ಬಂಡಿ, ಅಂಚೆಯಣ್ಣನ ಸೈಕಲ್ ಸವಾರಿ, ಎಲ್ಲವೂ ರಂಗದ ಮೇಲೆ ಕಾಣಿಸಿಕೊಂಡು, ನಾಟಕದ ಪಾತ್ರಗಳಾಗಿ, ನಾಟಕಕ್ಕೆ ಜೀವ ತುಂಬಿ ಆಪ್ಯಾಯಮಾನವಾಗಿಸಿದವು. ನಾಟಕಕ್ಕೆ ಸಂಗೀತ ನೀಡಿ, ನಿರ್ದೇಶಿಸಿದ ಎನ್.ಎಸ್.ಡಿ ಪದವೀಧರ ಹಾಗೂ ರಂಗಶಾಲೆಯ ಪ್ರಾಂಶುಪಾಲರಾದ ಆರ್.ಜಗದೀಶ್ ಹಾಗೂ ಪಾತ್ರೀಕರಣ ಮಾಡಿದ್ದಾರೆ. 

ಸಹನಿರ್ದೇಶನ ನೀಡಿದ ನೀನಾಸಂ ವಿನೋದ್ ರವರ ಒಟ್ಟಾರೆ ಪರಿಶ್ರಮ ರಂಗದ ಮೇಲೆ ಒಳ್ಳೆಯ ನಾಟಕವಾಗಿ ಪ್ರಸ್ತತಗೊಂಡಿತು. ಎಲ್ಲಡೆ, ಯಾಂತ್ರಿಕತೆ, ವೈಭವೀಕರಣಗಳೇ ಹೆಚ್ಚಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ, ಸೂಕ್ಷ್ಮ ಭಾವನೆಗಳಿಗೆ, ಒತ್ತುಕೊಡುವ, ಜೀವಸೆಲೆಯುಳ್ಳ ಇಂತಹ ನಾಟಕಗಳು ಹೆಚ್ಚು ಹೆಚ್ಚು ಮೂಡಿಬರಲಿ ಎಂಬುದು ರಂಗಾಸಕ್ತರ ಆಶಯ.

- ಎಚ್.ಎಸ್.ನವೀನ್‌ಕುಮಾರ್, ಹೊಸದುರ್ಗ

Follow Us:
Download App:
  • android
  • ios