ಎರಡೇ ವಾರಗಳಲ್ಲಿ ಅತೀ ಹೆಚ್ಚು ಹೆಸರು ಮಾಡಿದ ವ್ಯಕ್ತಿ ಶಮಂತ್ ಅಲಿಯಾಸ್ ಬ್ರೋ ಗೌಡ. ಕ್ಯಾಪ್ಟನ್ ಆದರು. ಪ್ರೀತಿ ಕಳೆದುಕೊಂಡರು ಇದೀಗ ಕಳಪೆ ಬೋರ್ಡ್‌ ಹಿಡಿದು ಜೈಲು ಸೇರಿದ್ದಾರೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಮನೆ ಮಂದಿಗೆಲ್ಲಾ ಅಡುಗೆ ಮಾಡುವ ಟಾಸ್ಕ್‌ನಲ್ಲಿ ಶಮಂತ್ ತಮ್ಮ ಕನಸಿನ ರಾಣಿ ಬಗ್ಗೆ ಮಾತನಾಡಿದ್ದಾರೆ.

ದಿವ್ಯಾ ಸುರೇಶ್‌ ಹಾಗೂ ಶಮಂತ್‌ಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ಮನೆಯಲ್ಲಿ ಅಡುಗೆ ಮಾಡಲು ಬಿಗ್‌ಬಾಸ್ ಆದೇಶ ನೀಡಿದ್ದರು. ಇಷ್ಟು ದಿನ ಮನೆಯಲ್ಲಿ ಮಾಡಲಾಗಿದ್ದ ಅಡುಗೆ ಬಿಟ್ಟು ಬೇರೆ ವೆರೈಟಿ ಮಾಡುವಂತೆ ಹೇಳಿದ್ದರು. ಕೋಸಂಬರಿ, ಚಪಾತಿ, ಬೀಟ್‌ರೂಟ್‌ ಪಲ್ಯ ಹಾಗೂ ಅವಲಕ್ಕಿ ಪಾಯಿಸ ಮಾಡಿ ಮನೆ ಮಂದಿಗೆ ತಮ್ಮ ಕೈಯಾರೆ ಬಡಸಿ, ನಂತರ ಇಬ್ಬರೂ ಊಟ ಮಾಡಬೇಕಿತ್ತು. ಈ ಚಟುವಟಿಯಲ್ಲಿ ಶಮಂತ್ ಹಾಗೂ ದಿವ್ಯಾ ಮತ್ತು ವೈಷ್ಣವಿ ಸಲಹೆ ಮಾತ್ರ ಪಡೆಯಬಹುದಿತ್ತು. 

ಅಡುಗೆ ಮಾಡುತ್ತಾ ವೈಷ್ಣವಿ ಶಮಂತ್‌ ಕನಸಿನ ಹುಡುಗಿ ಬಗ್ಗೆ ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಶಮಂತ್ 'ನನ್ನ ಹುಡುಗಿ ಕುಳ್ಳಗಿರಬೇಕು, ಅಮೇಲೆ ಚೆನ್ನಾಗಿರೋರು ಬೇಡವೇ ಬೇಡ. ಸುಮ್ಮನೆ ಯಾರಾದರೂ ಪಟಾಯಿಸಿಕೊಂಡು ಹೋದರೆ ಕಷ್ಟ. ನಾನು ಮಾತ್ರ ಇಷ್ಟ ಪಡುವಂತೆ ಹುಡುಗಿ ಇರಬೇಕು. ಆಮೇಲೆ ಕೆಲಸಕ್ಕೆ ಹೋಗೋದು ಏನೂ ಬೇಡ ನಾನು ದುಡಿದು, ತಂದು ಹಾಕುತ್ತೇನೆ. ಆರಾಮ್ ಅಗಿ ಇರಲಿ. ಅಡುಗೆ ಚೆನ್ನಾಗಿ ಮಾಡೋಕೆ ಬರಬೇಕು. ಅದರಲ್ಲೂ ಚಪಾತಿ ಮತ್ತೆ ಚಿಕನ್ ಬಿರಿಯಾನಿ. ದಿನ ಮಾಡಿದರೂ ಅದನ್ನೇ ತಿನ್ನುತ್ತೀನಿ. ನನಗೆ ಬರೋ ಫೋನ್ ಕಾಲ್ ಹಾಗೂ ಮೆಸೇಜ್‌ಗಳನ್ನು ಮ್ಯಾನೇಜ್ ಮಾಡಿಕೊಂಡು ಇದ್ದರೆ ಸಾಕು. ಅವಳ ದಿನ ಅಲ್ಲಿಯೇ ಹೋಗುತ್ತೆ,' ಎಂದು ಉತ್ತರಿಸಿದ್ದಾರೆ.

'ಈಗಾಗಲೇ ಹುಡುಗಿ ಸಿಕ್ಕಿದ್ದಾಳಾ?' ಎಂದು ರಘು ಗೌಡ ಮರು ಪ್ರಶ್ನೆ ಮಾಡಿದ್ದಾರೆ. 'ಸಿಕ್ಕಿದ್ದಾಳೆ, ಸಿಕ್ಕಿಲ್ಲ. ಎರಡೂ ಹೌದು. ಏನೋ ಗೊತ್ತಿಲ್ಲ ನೋಡಬೇಕು. ಹೊರಗೆ ಹೋದಮೇಲೆ,' ಎಂದು ಕ್ಯಾಮೆರಾ ಕಡೆ ತಿರುಗಿ ನಕ್ಕಿದ್ದಾರೆ.