ಹದಿನಾಲ್ಕು ದಿನಗಳ ಲಾಕ್‌ಡೌನ್‌ ಶುರುವಾಗಿದೆ. ಅದಕ್ಕೂ ಮೊದಲೇ ಚಿತ್ರಮಂದಿರ ಬಂದ್‌ ಆಗಿದೆ. ಸಿನಿಮಾ, ಸೀರಿಯಲ್‌ ಶೂಟಿಂಗ್‌ಗೂ ನಿರ್ಬಂಧ ವಿಧಿಸಲಾಗಿದೆ. ಇದರಿಂದ ನಿತ್ಯ ಪ್ರಸಾರವಾಗೋ ಸೀರಿಯಲ್‌ಗಳು, ಬಿಗ್‌ ಬಾಸ್‌ನಂಥಾ ರಿಯಾಲಿಟಿ ಶೋಗಳ ಕತೆ ಏನಾಗಬಹುದು ಅನ್ನುವುದು ಸದ್ಯದ ಕುತೂಹಲ

ಕೊರೋನಾ ಲಾಕ್‌ಡೌನ್‌ನಿಂದ ಸಿನಿಮಾ ರಂಗಕ್ಕೆ ಬಹುದೊಡ್ಡ ಹೊಡೆತ ಬಿದ್ದರೂ, ತಕ್ಷಣಕ್ಕೆ ಅಡಕತ್ತರಿಯಲ್ಲಿ ಸಿಕ್ಕಿದ್ದು ಕಿರುತೆರೆ. ನಿತ್ಯ ಪ್ರಸಾರವಾಗುವ ಧಾರಾವಾಹಿಗಳು, ರಿಯಾಲಿಟಿ ಶೋಗಳನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡುತ್ತಾರಾ ಅನ್ನುವುದು ಸದ್ಯ ನಮ್ಮ ಮುಂದಿರುವ ಪ್ರಶ್ನೆ.

ಆದರೆ ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ ಈಗಾಗಲೇ ಚಾನಲ್‌ನವರು ಅನೇಕ ಸೀರಿಯಲ್‌ಗಳ ಎಪಿಸೋಡ್‌ಗಳನ್ನು ಬ್ಯಾಂಕಿಂಗ್‌ ಮಾಡಿಟ್ಟುಕೊಂಡಿದ್ದಾರೆ. ಎರಡು ವಾರ ತೊಂದರೆ ಇಲ್ಲ. ಲಾಕ್‌ಡೌನ್‌ ದೀರ್ಘಕಾಲ ಮುಂದುವರೆದರೆ ಹಳೆಯ ಎಪಿಸೋಡ್‌ಗಳನ್ನೇ ಪ್ರಸಾರ ಮಾಡುವ ಸಾಧ್ಯತೆ ಇದೆ.

ಕಳೆದ ಬಾರಿಯೂ ಇದೇ ಹೊತ್ತಿಗೆ ಲಾಕ್‌ಡೌನ್‌ ಆಗಿತ್ತು. ಆಗ ಸೀರಿಯಲ್‌ ಪ್ರಸಾರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಹಳೆಯ ಸಂಚಿಕೆಗಳನ್ನೇ ಪ್ರಸಾರ ಮಾಡಲಾಗಿತ್ತು. ಆದರೆ ಈ ಬಾರಿ ಕೊರೋನಾ ಕಾಟ ಹೆಚ್ಚಾಗುತ್ತಿರುವಾಗಲೇ ಸೀರಿಯಲ್‌ ತಂಡಗಳಿಗೆ ಸಾಧ್ಯವಾದಷ್ಟುಎಪಿಸೋಡ್‌ಗಳನ್ನು ಬ್ಯಾಂಕಿಂಗ್‌ ಮಾಡಿಕೊಳ್ಳುವಂತೆ ಚಾನೆಲ್‌ಗಳಿಂದ ಸೂಚನೆ ಹೋಗಿದೆ. ಹೀಗಾಗಿ ಇಂಥಾ ಪರಿಸ್ಥಿತಿ ಎದುರಿಸಲು ಸೀರಿಯಲ್‌ ತಂಡಗಳು ಮೊದಲೇ ರೆಡಿಯಾಗಿವೆ.

ಅದ್ಧೂರಿ ಮದುವೆಗೆ ಬ್ರೇಕ್; ಮೇ 13ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಕಾವ್ಯ ಗೌಡ!

ಕಲರ್ಸ್‌ ಕನ್ನಡದ ಎಲ್ಲಾ ಸೀರಿಯಲ್‌ಗಳೂ ಮುಂದಿನ ಎರಡು ವಾರಕ್ಕಾಗುವಷ್ಟುಬ್ಯಾಂಕಿಂಗ್‌ ಇದೆ. ಹೀಗಾಗಿ ಸದ್ಯದ ಮಟ್ಟಿಗೆ ಟೆನ್ಶನ್‌ ಇಲ್ಲ. ನಿನ್ನೆ ರಾತ್ರಿಯವರೆಗೂ ಸೀರಿಯಲ್‌ ತಂಡಗಳು ಸಾಧ್ಯವಾದಷ್ಟುಎಪಿಸೋಡ್‌ ಬ್ಯಾಂಕಿಂಗ್‌ ಮಾಡಲು ಶಕ್ತಿಮೀರಿ ಪ್ರಯತ್ನಿಸಿವೆ. ಕಲರ್ಸ್‌ ಕನ್ನಡದ ಕನ್ನಡತಿ, ನನ್ನರಸಿ ರಾಧೆ, ಹೂ ಮಳೆ, ಗಿಣಿರಾಮ ಇತ್ಯಾದಿ ಜನಪ್ರಿಯ ಸೀರಿಯಲ್‌ಗಳ ಪ್ರಸಾರ ಯಾವುದೇ ಅಡೆತಡೆಯಿಲ್ಲದೇ ನಡೆಯಲಿದೆ. ಮಜಾ ಟಾಕೀಸ್‌ನಂಥಾ ರಿಯಾಲಿಟಿ ಶೋಗಳ ಎಪಿಸೋಡ್‌ ಬ್ಯಾಂಕಿಂಗ್‌ ಇದೆ.

ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳಾದ ಜೊತೆ ಜೊತೆಯಲಿ, ಗಟ್ಟಿಮೇಳ, ಸತ್ಯ ಇತ್ಯಾದಿಗಳು, ರಿಯಾಲಿಟಿ ಶೋಗಳು ಬ್ಯಾಂಕಿಂಗ್‌ ಇದೆ. ಹೀಗಾಗಿ ಜೀ ಕನ್ನಡದ ಎಲ್ಲ ಕಾರ್ಯಕ್ರಮಗಳೂ ನಿರಾತಂಕವಾಗಿ ಲಾಕ್‌ಡೌನ್‌ ನಡುವೆಯೂ ನಿರಾತಂಕವಾಗಿ ನಡೆಯಲಿವೆ.

ಉದಯ ಟಿವಿಯಲ್ಲಿ ಬೆಳಗ್ಗಿನ ಗುರೂಜಿ ಕಾರ್ಯಕ್ರಮ ಬಿಟ್ಟರೆ ಉಳಿದಂತೆ ಸೀರಿಯಲ್‌ಗಳ ಪ್ರಸಾರವಿದೆ. ಈಗಾಗಲೇ ಸಾಕಷ್ಟುಸಂಚಿಕೆಗಳು ಬ್ಯಾಂಕಿಂಗ್‌ ಇರುವ ಕಾರಣ ಇವುಗಳ ಪ್ರಸಾರಕ್ಕೆ ಅಡೆತಡೆ ಉಂಟಾಗದು.

ಬಿಗ್‌ಬಾಸ್‌ ಇದ್ರೂ ಸುದೀಪ್‌ ಇರಲ್ಲ!

ಸೀರಿಯಲ್‌ಗಳನ್ನಾದ್ರೂ ಬ್ಯಾಂಕಿಂಗ್‌ ಇಟ್ಟುಕೊಳ್ಳಬಹುದು. ಆದರೆ ಬಿಗ್‌ಬಾಸ್‌ನಂಥ ಶೋವನ್ನು ಆ ಥರ ಮಾಡಲಾಗದು. ದಿನ ದಿನದ ಎಪಿಸೋಡ್‌ ಅನ್ನೇ ಪ್ರಸಾರ ಮಾಡುವುದು ಅನಿವಾರ್ಯ. ಸರ್ಕಾರದ ನಿಯಮಕ್ಕನುಸಾರವಾಗಿ ಈ ಶೋ ನಿಲ್ಲಿಸಿದರೆ ಕೋಟ್ಯಂತರ ರುಪಾಯಿ ನಷ್ಟವಾಗುವ ಭೀತಿ ಇದೆ. ಈ ಬಗ್ಗೆ ವಿವರ ನೀಡುವ ಕಲರ್ಸ್‌ ಕನ್ನಡದ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌, ‘ಬಿಗ್‌ಬಾಸ್‌ ಮನೆಯೊಳಗೆ ಬಯೋ ಬಬಲ್‌ ಥರದ ಸನ್ನಿವೇಶ ಇದೆ. ಅಲ್ಲಿ ಕೊರೋನಾ ಬರುವ, ಹರಡುವ ಸಾಧ್ಯತೆ ಇಲ್ಲ. ಹೀಗಾಗಿ ಬಿಗ್‌ಬಾಸ್‌ ಶೋಗೆ ತಡೆ ಆಗೋದಿಲ್ಲ. ಆದರೆ ಕಿಚ್ಚ ಸುದೀಪ್‌ ನಡೆಸಿಕೊಡುವ ವೀಕೆಂಡ್‌ ಕಾರ್ಯಕ್ರಮ ನಡೆಸೋದು ಕಷ್ಟವಿದೆ’ ಎನ್ನುತ್ತಾರೆ. ಅಲ್ಲಿಗೆ ಕಳೆದ ಎರಡು ವಾರಗಳಿಂದ ಸುದೀಪ್‌ ಇಲ್ಲದೇ ಬಿಕೋ ಅನ್ನುತ್ತಿದ್ದ ಬಿಗ್‌ಬಾಸ್‌ನಲ್ಲಿ ಮುಂದಿನ ಕೆಲವು ವಾರಗಳವರೆಗೂ ಅದೇ ಸ್ಥಿತಿ ಮುಂದುವರಿಯಬಹುದು.

ಅಕ್ಷತಾ ಮಗಳಿಗೆ 100 ದಿನದ ಸಂಭ್ರಮ; 'ನಮ್ಮ ಮಕ್ಕಳ ಕಾಲಕ್ಕೆ ಸ್ನೇಹದ definition ಏನಿರುತ್ತೋ?'

ಬಿಗ್‌ಬಾಸ್‌ ಶೋ ಪ್ರಸಾರ ಮುಂದುವರಿಯಲಿದೆ. ವೀಕೆಂಡ್‌ ಸುದೀಪ್‌ ಶೋ ನಡೆಯೋದು ಅನುಮಾನ. ಸದ್ಯಕ್ಕೆ ಧಾರಾವಾಹಿ, ರಿಯಾಲಿಟಿ ಶೋ ಎಪಿಸೋಡ್‌ಗಳು ಬ್ಯಾಂಕಿಂಗ್‌ ಇವೆ. ಆದರೆ 14 ದಿನಗಳ ಲಾಕ್‌ಡೌನ್‌ ಮುಂದುವರಿದರೆ ಕಳೆದ ವರ್ಷದಂತೆ ಹಳೆಯ ಎಪಿಸೋಡ್‌ಗಳನ್ನೇ ಪ್ರಸಾರ ಮಾಡಬೇಕಾಗಬಹುದು. ಪ್ಲಾನ್‌ ಬಿ ಅಂತ ಏನೂ ಮಾಡಲಾಗದು ಎಂದಿದ್ದಾರೆ ಕಲರ್ಸ್‌ ಕನ್ನಡ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌.