ಜೀವನದ ಬಗ್ಗೆ ಸದಾ ಪಾಸಿಟಿವ್ ಆಗಿದ್ದು ನಗುತ್ತಿರುವ ಸಂಪತ್ ಜಯರಾಮ್ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ವೈಷ್ಣವಿ ಗೌಡ ಮಾತನಾಡಿದ್ದಾರೆ.
ಕೆಲವು ದಿನಗಳ ಹಿಂದೆ ಕನ್ನಡ ಕಿರುತೆರೆ ಜನಪ್ರಿಯ ನಟ ಸಂಪತ್ ಜಯರಾಮ್ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ದೊಡ್ಡ ಸುದ್ದಿಯಾಗಿತ್ತು. ಸದಾ ನಗುತ್ತಿರುವ ಸಂಪತ್ 11 ವರ್ಷಗಳ ಕಾಲ ಪ್ರೀತಿಸುತ್ತಿದ್ದ ಹುಡುಗಿಯನ್ನು ಮದುವೆಯಾಗಿ ಒಂದು ವರ್ಷ ಕೂಡ ಆಗಿರಲ್ಲ. ಅಲ್ಲದೆ ತಂದೆಯಾಗುತ್ತಿರುವ ಗುಡ್ ನ್ಯೂಸ್ ಕೂಡ ಇತ್ತು. ಪತ್ನಿ 5 ತಿಂಗಳ ಗರ್ಭಿಣಿ ಎಂದು ಸಂಭ್ರಮಿಸುತ್ತಿದ್ದರು ಆದರೆ ಅಷ್ಟರಲ್ಲಿ ಕೆಟ್ಟ ಸುದ್ದಿಗೆ ಕಿವಿಗೆ ಬಿದ್ದಿದೆ.
ಸಂಪತ್ ಇನ್ನಿಲ್ಲ ಅನ್ನೋ ವಿಚಾರ ಕೇಳಿ ಚಿತ್ರರಂಗವೇ ಶಾಕ್ ಅಗಿದೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸಂಪತ್ ಜೊತೆ ಅಭಿನಯಿಸುತ್ತಿದ್ದ ಬಿಗ್ ಬಾಸ್ ವೈಷ್ಣವಿ ಕೂಡ ಬೇಸರ ಮಾಡಿಕೊಂಡಿದ್ದಾರೆ.
'ಸಂಪತ್ ಸೆಟ್‌ನಲ್ಲಿ ಯಾವಾಗಲೂ ನಗುತ್ತಿದ್ದರು ಮತ್ತು ಇತರರನ್ನು ನಗಿಸುತ್ತಿದ್ದರು. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅವರು ನನ್ನ ಸಹೋದರನ ಪಾತ್ರ ಮಾಡುತ್ತಿದ್ದರು. ನಮ್ಮಿಬ್ಬರ ಕಾಂಬಿನೇಷನ್ ದಿನಾಲೂ ಇರುತ್ತಿರಲಿಲ್ಲ ಆದರೆ ಇದ್ದಾಗೆಲ್ಲಾ ಅವರು ಖುಷಿಯಿಂದ ಮಾತನಾಡುತ್ತಿದ್ದರು. ಜೀವನ ಬಗ್ಗೆ ಅವರು ಎಂದಿಗೂ ದೂರಿಲ್ಲ. ಸೆಟ್‌ನಲ್ಲಿ ಅವರು ಯಾವಾಗಲೂ ಬೇಸರದಲ್ಲಿ ಇದ್ದದ್ದನ್ನು ನಾನು ನೋಡಿಲ್ಲ' ಎಂದು ಬಿಗ್ ಬಾಸ್ ವೈಷ್ಣವಿ ಗೌಡ ಖಾಸಗಿ ವೆಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ಅಗ್ನಿಸಾಕ್ಷಿ ಕೊನೆಗೊಂಡ ನಂತರ ನಾನು ಸಂಪತ್ ಅವರನ್ನು ಭೇಟಿ ಮಾಡಿಲ್ಲ ಆದರೆ ಅವರು ನನ್ನನ್ನು ಪಾರ್ಟಿ ಮತ್ತು ಅವರ ಮದುವೆಗೆ ಕರೆದಿದ್ದರು. ಆದರೆ ಬ್ಯಾಕ್ ಟು ಬ್ಯಾಕ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಕಾರಣ ನಾನು ಮದುವೆಗೆ ಹೋಗಲು ಸಾಧ್ಯವಾಗಿರಲಿಲ್ಲ. ನಾನು ಕಾಲ್‌ನಲ್ಲಿ ಮಾತನಾಡಿ ಅವರಿಗೆ ಶುಭಾಶಯ ತಿಳಿಸಿದ್ದೆ ಕೊನೆ. ಸಂಪತ್‌ಗೆ ಮದುವೆಯಾಗಿ ಒಂದು ವರ್ಷ ಕೂಡ ಆಗಿರಲಿಲ್ಲ. ನನಗೆ ತಿಳಿದಿರುವ ಪ್ರಕಾರ ಸಂಪತ್ ಅವರ ಪತ್ನಿ ಈಗ 5 ತಿಂಗಳ ಗರ್ಭಿಣಿ. ಹೀಗಿರುವಾಗ ಅವರಿಗೆ ಯಾವ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡರು ಗೊತ್ತಿಲ್ಲ' ಎಂದು ವೈಷ್ಣವಿ ಹೇಳಿದ್ದಾರೆ.
ಸತ್ಯ ಬಿಚ್ಚಿಟ್ಟ ರಾಜೇಶ್:
' ರಾತ್ರಿ 2 ಗಂಟೆಗೆ ರವಿ ಅವರಿಂದ ಕರೆ ಬರುತ್ತೆ ನಾನು ಕೂಡ ನಿದ್ರೆಯಲ್ಲಿದ್ದೆ...ಫೋನ್ ಸೈಲೆಂಟ್‌ನಲ್ಲಿ ಇರಲಿಲ್ಲ ರಿಂಗ್ ಆಗಿದಕ್ಕೆ ಪಿಕ್ ಮಾಡಿ ಮಾತನಾಡಿದೆ. ಸಂಪತ್‌ಗೆ ತುಂಬಾ ಸೀರಿಯಸ್ ಅಂತ ಹೇಳಿದರು ಎದ್ದೋ ಬಿದ್ನೋ ಅಂತ ಓಡಿ ಹೋದೆ ಅಷ್ಟರಲ್ಲಿ ಸಂಪತ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಯಾಕೆ ಸಂಪತ್ ಈ ರೀತಿ ಮಾಡಿಕೊಂಡರು ಅಂತ ವಿಚಾರಿಸಿದಾಗ ಅಲ್ಲಿ ಬಂದಂತ ಕಾಮನ್ ಉತ್ತರ ಇತ್ತೀಚಿಗೆ ಮದುವೆ ಮಾಡಿಕೊಂಡಿದ್ದ ಒಂದು ವರ್ಷ ಕೂಡ ಆಗಿರಲಿಲ್ಲ ಪತ್ನಿ ಚೈತನ್ಯ 5 ತಿಂಗಳ ಗರ್ಭಿಣಿ. 11 ಅಥವಾ 12 ವರ್ಷಗಳ ಕಾಲ ಪ್ರೀತಿಸಿ ಇಬ್ಬರೂ ಮನೆಯಲ್ಲಿ ಒಪ್ಪಿಸಿ ಇಂಟರ್ ಕಾಸ್ಟ್ ಮದುವೆ ಮಾಡಿಕೊಂಡಿದ್ದರು. ತುಂಬಾ ಚೆನ್ನಾಗಿ ಜೀವನ ಲೀಡ್ ಮಾಡುತ್ತಿದ್ದರು. ಅವರಿಬ್ಬರ ಜೀವನದಲ್ಲಿ ಒಂದು ಹುಳುಕು ಇರಲಿಲ್ಲ. ಅವರ ಮದುವೆ ಪ್ರೀ-ವೆಡ್ಡಿಂಗ್ ಶೂಟ್‌ನ ನಾನೇ ಮಾಡಿಕೊಟ್ಟಿದ್ದು. ಮದುವೆಯಲ್ಲಿ ಭಾಗಿಯಾಗಿರುವೆ...ಅವರ ಲವ್ ಸ್ಟೋರಿ ಪ್ರತಿಯೊಂದು ನಮಗೆ ಗೊತ್ತು' ಎಂದಿದ್ದಾರೆ ರಾಜೇಶ್.
