Asianet Suvarna News Asianet Suvarna News

ಕನ್ನಡ ಬಿಗ್ ಬಾಸ್ ಒಂದೇ ವಾರಕ್ಕೆ ಸ್ಥಗಿತ? ಮಾನವ ಹಕ್ಕು ಉಲ್ಲಂಘನೆಗಾಗಿ ಶೋ ನಿಲ್ಲಿಸುವಂತೆ ದೂರು!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಆರೋಪಿಸಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿದೆ. ವಕೀಲೆ ರಕ್ಷಿತಾ ಸಿಂಗ್ ಅವರು ನೀಡಿರುವ ದೂರಿನಲ್ಲಿ, ರಿಯಾಲಿಟಿ ಶೋ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ.

Bigg Boss Kannada shutdown on week Complaint to stop reality show for human rights violation sat
Author
First Published Oct 4, 2024, 7:18 PM IST | Last Updated Oct 4, 2024, 7:37 PM IST

ಬೆಂಗಳೂರು (ಅ.04): ರಾಜ್ಯದ ದೂರದರ್ಶನ ವೀಕ್ಷಕರಿಗೆ ಭರಪೂರ ಮನರಂಜನೆ ನೀಡುವ ನಿಟ್ಟಿನಲ್ಲಿ ಆರಂಭವಾಗಿರುವ ರಿಯಾಲಿಟಿ ಶೋ ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ವಿರುದ್ಧ ಇದೀಗ ದೂರು ದಾಖಲಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದ್ದು, ಕೂಡಲೇ ಈ ರಿಯಾಲಿಟಿ ಶೋ ಸ್ಥಗಿತ ಮಾಡುವಂತೆ ರಾಜ್ಯ ಮಹಿಳಾ ಆಯೋಗಕ್ಕೆ ರಕ್ಷಿತಾ ಸಿಂಗ್ ಎನ್ನುವವರು ದೂರು ನೀಡಿದ್ದಾರೆ.

ಮಹಿಳಾ ಆಯೋಗಕ್ಕೆ ದೂರು ನೀಡಿರುವ ರಕ್ಷಿತಾ ಸಿಂಗ್ ಅವರು ಸ್ವತಃ ವಕೀಲರಾಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋನಲ್ಲಿ ಮಹಿಳೆಯರ ಸಾಂವಿಧಾನಿಕ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಇದನ್ನು ಸಾರ್ವಜನಿಕರಿಗೆ ತೋರಿಸುವ ಮೂಲಕ ಮಹಿಳಾ ಸ್ವಾತಂತ್ರ್ಯ ಹರಣ ಮತ್ತು ಹಕ್ಕುಗಳನ್ನು ಮೊಟಕು ಮಾಡಲಾಗುತ್ತಿದೆ. ಸಾರ್ವಜನಿಕವಾಗಿ ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತಿದೆ. ಮುಖ್ಯವಾಗಿ ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ಬರುತ್ತಿದೆ ಎಂದು ವಕೀಲೆ ರಕ್ಷಿತಾ ಸಿಂಗ್ ನೀಡಿರುವ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಇದನ್ನೂ ಓದಿ: ಅಲ್ಲಿ ಬಿಗ್ ಬಾಸ್‌ಗೇ ಬೆದರಿಸಿದ ಲಾಯರ್ ಜಗದೀಶ: ಇಲ್ಲಿ ವಕೀಲಿಕೆ ಲೈಸೆನ್ಸ್ ರದ್ದುಗೊಳಿಸಿದ ಬಾರ್ ಕೌನ್ಸಿಲ್!

ದೂರಿನ ಪ್ರತಿಯಲ್ಲಿ ಏನಿದೆ? 
ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಎಂಬ ಹೆಸರಿನ ರಿಯಾಲಿಟಿ ಶೋನ 11ನೇ ಆವೃತ್ತಿ ದಿನಾಂಕ 29-9-2024ರಿಂದ ಆರಂಭವಾಗಿರುತ್ತದೆ. ಬಿಗ್ ಬಾಸ್ ಶೋನಲ್ಲಿ ಮನರಂಜನಾ ಕ್ಷೇತ್ರದಲ್ಲಿ ಮತ್ತು ಇತರ ಕ್ಷೇತ್ರಗಳಲ್ಲಿ ಹೆಸರು ಮಾಡಿದ ವ್ಯಕ್ತಿಗಳನ್ನು ಒಂದು ಮನೆಯಲ್ಲಿ ಕೂಡಿಹಾಕಿ ಆಡಿಸುವ ಸೈಕಾಲಾಜಿಕಲ್ ಗೇಮ್ ಶೋ ಆಗಿದೆ. ಬಿಗ್ ಬಾಸ್ ನಲ್ಲಿ ಹಲವು ರೀತಿಯ ಮಾನಸಿಕ, ದೈಹಿಕ ಟಾಸ್ಕ್ ಗಳನ್ನು ಕಂಟೆಸ್ಟೆಂಟ್ ಗಳಿಗೆ ನೀಡಲಾಗುತ್ತದೆ. ತಮ್ಮನ್ನು ತಾವು ಉಳಿಸಿಕೊಳ್ಳಲು ಇನ್ನೊಬ್ಬರ ಮೇಲೆ ಹಲವು ರೀತಿಯಲ್ಲಿ ಅಕ್ರಮಣ ಮಾಡುವ ಅನಿವಾರ್ಯತೆಯನ್ನು ಸೃಷ್ಟಿಸಲಾಗುತ್ತದೆ. ಹೀಗೆ ಪರಸ್ಪರ ಸೆಣೆಸುತ್ತ ನೂರು ದಿನಗಳ ಕಾಲ ಮನೆಯಲ್ಲಿ ಉಳಿದು ಅಂತಿಮವಾಗಿ ಗೆಲ್ಲುವ ಅಭ್ಯರ್ಥಿಗೆ 50 ಲಕ್ಷ ರೂ.ಗಳ ಬಹುಮಾನ ನೀಡಲಾಗುತ್ತದೆ. ಬಿಗ್ ಬಾಸ್ ಶೋ ಪ್ರತಿದಿನ ರಾತ್ರಿ 9-30ರಿಂದ 11 ಗಂಟೆಯವರೆಗೆ ಪ್ರಸಾರವಾಗುತ್ತದೆ. ಕಲರ್ಸ್ ಕನ್ನಡ ಮತ್ತು ಅದರ ಸೋದರಿ ಚಾನಲ್ ಕಲರ್ಸ್ ಸೂಪರ್ ನಲ್ಲಿ ಈ ಶೋ ಹಲವಾರು ಬಾರಿ ಮರುಪ್ರಸಾರಗೊಳ್ಳುತ್ತದೆ. ಈ ಕಾರ್ಯಕ್ರಮವನ್ನು ಕರ್ನಾಟಕ ಮಾತ್ರವಲ್ಲದೆ, ದೇಶದ-ಹೊರದೇಶಗಳ ಲಕ್ಷಾಂತರ ಕನ್ನಡಿಗರು ವೀಕ್ಷಿಸುತ್ತಾರೆ.

ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದ ಆರಂಭದಲ್ಲಿಯೇ ಸ್ವರ್ಗ ಮತ್ತು ನರಕ ಎಂಬ ಎರಡು ಮನೆಗಳನ್ನು ಸೃಷ್ಟಿಸಲಾಗಿತ್ತು. ಒಟ್ಟು ಹದಿನೇಳು ಸ್ಪರ್ಧಿಗಳ ಪೈಕಿ 10 ಮಂದಿಯನ್ನು ಸ್ವರ್ಗಕ್ಕೂ, 7 ಮಂದಿಯನ್ನು ನರಕದಲ್ಲೂ ಇರಿಸಲಾಗಿದೆ. ಸ್ವರ್ಗ ನಿವಾಸಿಗಳಿಗೆ ಉತ್ತಮ ಊಟ, ಮಲಗಲು ಮಂಚ ಸೇರಿದಂತೆ ಐಶಾರಾಮಿ ಸೌಲಭ್ಯಗಳನ್ನು ಒದಗಿಸಲಾಗಿದೆ. ನರಕ ನಿವಾಸಿಗಳನ್ನು ಜೈಲಿನ ಖೈದಿಗಳ ಹಾಗೆ ಒಂದು ಬ್ಯಾರಾಕ್ ನಲ್ಲಿ ಬಂಧಿ ಮಾಡಿ ಇಡಲಾಗಿದೆ. ಅವರಿಗೆ ಶೋ ಆರಂಭಗೊಂಡ ದಿನದಿಂದ ಕೇವಲ ಗಂಜಿ ಊಟ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಅವರಿಗೆ ಪ್ರತ್ಯೇಕ ಶೌಚಾಲಯದ ಅವಕಾಶವೂ ಇಲ್ಲ. ಸ್ವರ್ಗ ನಿವಾಸಿಗಳನ್ನು ವಿನಂತಿಸಿ ಅವರು ಬೀಗ ತೆಗೆದರಷ್ಟೇ ಅವರು ಶೌಚಾಲಯಕ್ಕೆ ಹೋಗಲು ಸಾಧ್ಯ.

ಬಿಗ್ ಬಾಸ್ ನಲ್ಲಿ ಹೀಗೆ ಜನರನ್ನು ಕೂಡಿಡುವುದೇ ಒಂದು ಅಪರಾಧವಾಗುತ್ತವೆ. ಯಾಕೆಂದರೆ ಯಾವ ಮನುಷ್ಯನನ್ನೂ ಅವನ ಒಪ್ಪಿಗೆ ಇರಲಿ, ಇಲ್ಲದೇ ಇರಲಿ ಕೂಡಿ ಹಾಕುವುದು ಅಪರಾಧವಾಗುತ್ತದೆ. ಬಿಗ್ ಬಾಸ್ ನಿರ್ಮಾಪಕರು ಮುಂದೆ ಕಾನೂನು ತೊಡಕು ಬಾರದೇ ಇರಲಿ ಎಂದು ಹಲವಾರು ನಿಬಂಧನೆಗಳು ಇರುವ ಕಾಗದಪತ್ರಗಳಿಗೆ ಸ್ಪರ್ಧಿಗಳ ಬಳಿ ಸಹಿ ಹಾಕಿಸಿಕೊಂಡಿರುತ್ತಾರೆ.ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮೇಲ್ಕಂಡ ರೀತಿಯಲ್ಲಿ ನಡೆಯುತ್ತಿರುವ ಎಲ್ಲ ಅಮಾನವೀಯ ಚಿತ್ರ ಹಿಂಸೆ, ಕ್ರೌರ್ಯಗಳನ್ನು ದೃಶ್ಯ ಮಾಧ್ಯಮದ ಮೂಲಕ ಭಿತ್ತರಿಸುವುದೂ ಕೂಡ ಘೋರ ಅಪರಾಧವಾಗಿರುತ್ತದೆ. ಈ ಕಾರ್ಯಕ್ರಮವನ್ನು ಜಗತ್ತಿನಾದ್ಯಂತ ಜನರು ನೋಡುತ್ತಿರುವುದರಿಂದ ಅವರ ಮಾನಸಿಕತೆಯ ಮೇಲೂ ಗಂಭೀರ ಪರಿಣಾಮಗಳನ್ನು ಬೀರುತ್ತಿದೆ. ಈ ಕಾರ್ಯಕ್ರಮದ ಪ್ರೇರಣೆಯಿಂದ ಇಂಥದ್ದೇ ಕ್ರೌರ್ಯ, ಹಿಂಸೆಗಳು ಸಮಾಜದಲ್ಲೂ ಘಟಿಸುವ ಎಲ್ಲ ಸಾಧ್ಯತೆಗಳೂ ಇರುತ್ತವೆ. ಈ ಕಾರಣದಿಂದ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವುದು ಬಹಳ ತುರ್ತು ಅಗತ್ಯವಾಗಿರುತ್ತದೆ.

ಇದನ್ನೂ ಓದಿ: ಮಾನಸಾಗೆ ನೀಚ ಪದ ಬಳಸಿದ ಜಗದೀಶ್‌, ತಿರುಗಿಬಿದ್ದ ಮನೆ, ಶೋ ನಡೆಸಲು ಬಿಡಲ್ಲವೆಂದು ಬಿಗ್‌ಬಾಸ್‌ಗೆ ವಕೀಲನ ಚಾಲೆಂಜ್!

ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದಾಗ ಶೋಷಿತರೇ ದೂರು ನೀಡಬೇಕೆಂದಿಲ್ಲ. THE PROTECTION OF HUMAN RIGHTS ACT, 1993 ರ Article 12 (A) ಪ್ರಕಾರ ಯಾರು ಬೇಕಾದರೂ ದೂರು ನೀಡಬಹುದಾಗಿದೆ. ಈ ಎಲ್ಲ ಹಿನ್ನೆಲೆಗಳನ್ನು ಗಮನಿಸಿ, ತಾವು ದಯಮಾಡಿ ಕೂಡಲೇ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ. ಅಕ್ರಮವಾಗಿ ಬಂಧನಕ್ಕೆ ಒಳಗಾಗಿರುವ ಎಲ್ಲ ಸ್ಪರ್ಧಿಗಳನ್ನು ಹೊರಗೆ ತರಬೇಕೆಂದು ವಿನಂತಿಸುತ್ತೇನೆ. ಹಾಗೆಯೇ ಕಳೆದ ಐದು ದಿನಗಳಿಂದ ಶೂಟ್ ಮಾಡಲಾದ ಎಲ್ಲ ಪುಟೇಜ್ ಗಳನ್ನೂ, ಹಾರ್ಡ್ ಡಿಸ್ಕ್ ಗಳನ್ನೂ ವಶಪಡಿಸಿಕೊಂಡು ಸಾಕ್ಷ್ಯನಾಶವಾಗದಂತೆ ಕಾಪಾಡಬೇಕೆಂದು ವಿನಂತಿಸುತ್ತೇನೆ. ಅದೇ ರೀತಿ ಮೇಲೆ ಉಲ್ಲೇಖಿಸಿದ ಸಂಸ್ಥೆ ಮತ್ತು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ತನಿಖಾ ಏಜೆನ್ಸಿಗೆ ತನಿಖೆ ನಡೆಸಲು ಆದೇಶಿಸಬೇಕೆಂದು ವಿನಂತಿಸುತ್ತೇನೆ.

 

Latest Videos
Follow Us:
Download App:
  • android
  • ios