ಪ್ರತಾಪ್ ನಿಜಕ್ಕೂ ಆತ್ಮಹತ್ಯೆಗೆ ಯತ್ನಿಸಿದ್ರಾ? ಅಂದು ಏನಾಗಿತ್ತೆಂದು ಸಂಪೂರ್ಣ ಮಾಹಿತಿ ನೀಡಿದ ಡ್ರೋನ್
ಡ್ರೋನ್ ಪ್ರತಾಪ್ ಅಸ್ವಸ್ಥರಾಗಲು ನಿಜವಾದ ಕಾರಣವೇನು? ಈ ಕುರಿತು ಖುದ್ದು ಪ್ರತಾಪ್ ಅವರೇ ಎಲ್ಲರ ಎದುರು ಹೇಳಿದ್ದಾರೆ. ಅವರು ಹೇಳಿದ್ದೇನು?
ಬಿಗ್ಬಾಸ್ ಮನೆಯಲ್ಲಿ ಇರುವ ಹಾಲಿ ಸ್ಪರ್ಧಿಗಳ ಪೈಕಿ ಪ್ರಬಲ ಸ್ಪರ್ಧಿ ಎಂದೇ ಬಿಂಬಿಸಲಾಗುತ್ತಿರುವ ಡ್ರೋನ್ ಪ್ರತಾಪ್ ಮೊನ್ನೆ ಇದ್ದಕ್ಕಿದ್ದಂತೆಯೇ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದು ಆತ್ಮಹತ್ಯೆಗೆ ಪ್ರಯತ್ನ ಎಂದೂ ಭಾರಿ ಸದ್ದು ಮಾಡಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿನ ವೈದ್ಯರು ಅನಾರೋಗ್ಯದ ಕಾರಣ ಕೊಟ್ಟು, ಇದು ಆತ್ಮಹತ್ಯೆಗೆ ಪ್ರಯತ್ನವೇನೂ ಅಲ್ಲ, ಆಹಾರದಲ್ಲಿ ವ್ಯತ್ಯಾಸವಾಗಿ ಫುಡ್ ಪಾಯ್ಸನ್ ಆಗಿದೆ ಅಷ್ಟೇ ಎಂದು ಸ್ಪಷ್ಟನೆ ಕೊಟ್ಟರು. ಆದರೂ ಇವರಿಗೆ ಏನಾಯಿತು ಎನ್ನುವ ಬಗ್ಗೆ ಅಭಿಮಾನಿಗಳಿಗೆ ಇನ್ನೂ ಗೊಂದಲವಿದ್ದೇ ಇದೆ. ಕೆಲವರು ಆತ್ಮಹತ್ಯೆ ಎಂದರು, ಇನ್ನು ಕೆಲವರು ಫುಡ್ ಪಾಯಿಸನ್ ಎಂದರು, ಮತ್ತೆ ಕೆಲವರು ಉಳಿದ ಸ್ಪರ್ಧಿಗಳು ಇವರನ್ನು ಕಡೆಗಣಿಸಿದ್ದಕ್ಕೆ ಬೇಸರವಾಗಿತ್ತು ಎಂದರೆ, ಇನ್ನೂ ಕೆಲವರು ಪಾಲಕರಿಂದ ದೂರ ಇರುವಂತೆ ಸ್ವಾಮೀಜಿ ಹೇಳಿದ ಕಾರಣ ಮನನೊಂದುಕೊಂಡಿದ್ದರೆ ಪ್ರತಾಪ್ ಅಸ್ವಸ್ಥಗೊಂಡರು ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳೂ ಶುರುವಾದವು.
ಹಾಗಿದ್ದರೆ ಅಸಲಿಗೆ ಪ್ರತಾಪ್ಗೆ ಆಗಿದ್ದೇನು? ನಿನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಬಿಗ್ಬಾಸ್ ಮನೆಗೆ ಮರಳಿರುವ ಪ್ರತಾಪ್ ಅವರು ಖುದ್ದು ಈ ಬಗ್ಗೆ ವಿವರಿಸಿದ್ದಾರೆ. ಅವರು ಹೇಳಿದ್ದೇನೆಂದರೆ, ನನ್ನ ಮನಸ್ಸಿಗೆ ಕೆಲವು ಕಾರಣಗಳಿಂದ ಸ್ವಲ್ಪ ಬೇಸರ ಆಗಿತ್ತು. ಅದಕ್ಕೆ ಕಾರಣ, ಮನೆಯೊಳಗೆ ಕೆಲವು ದಿನಗಳಿಂದ ನಡೆದ ಘಟನೆಗಳೂ ಸೇರಿವೆ. ಮನಸ್ಸಿಗೆ ಯಾಕೋ ನೋವಾಗಿದ್ದ ಕಾರಣ, ಹೊಸ ವರ್ಷದ ರಾತ್ರಿ ಏನೂ ಸೇವನೆ ಮಾಡಿರಲಿಲ್ಲ. ಮಾರನೆಯ ದಿನವೂ ಪೂರ್ತೀ ದಿನ ಏನೂ ತಿಂದಿರಲಿಲ್ಲ. ಉಳಿದವರು ಊಟ ತಿನ್ನಿಸಲು ಬಂದರೂ, ಒತ್ತಾಯ ಮಾಡಿದರೂ ನಾನು ತಿನ್ನಲು ಹೋಗಲಿಲ್ಲ ಎಂದಿದ್ದಾರೆ.
ಆಸ್ಪತ್ರೆಯಿಂದ ಬಿಗ್ಬಾಸ್ ಮನೆಗೆ ಮರಳಿದ ಪ್ರತಾಪ್ಗೆ ಅದ್ಧೂರಿ ಸ್ವಾಗತ: ಡ್ರೋನ್ ಮೊಗದಲ್ಲಿ ನೋವು!
ನಂತರ ಏನಾಯಿತು ಎಂಬ ಬಗ್ಗೆ ವಿವರಣೆ ನೀಡಿರುವ ಪ್ರತಾಪ್, ಉಳಿದ ಸ್ಪರ್ಧಿಗಳು ಒತ್ತಾಯ ಮಾಡಿದಾಗ ನಾನು ಊಟ ಆಗಿದೆ ಎಂದೆ, ಚಪಾತಿ ಕೊಟ್ಟಾಗ ಅವರಿಗೆ ತಿಳಿಯದಂತೆ ಒಳಗೆ ಎತ್ತಿಟ್ಟಿದ್ದೆ. ಮನಸ್ಸಿಗೆ ನೋವಾಗಿದ್ದರಿಂದ ಎರಡು ದಿನ ಹಾಗೇ ಇದ್ದ. ಇದೇ ಕಾರಣಕ್ಕೆ ತುಂಬಾ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಯಿತು. ಇದು ಫುಡ್ ಪಾಯ್ಸನ್ ತರಹ ಕನ್ವರ್ಟ್ ಆಗಿ ಸಮಸ್ಯೆ ಆಯಿತು. ಇದೇ ಕಾರಣದಿಂದ ತುಂಬಾ ಸಮಸ್ಯೆ ಉಂಟಾಯಿತೇ ವಿನಾ ಇನ್ನೇನೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುಮ್ಮನೇ ಬೇರೆ ಏನೋ ಊಹಿಸಬೇಡಿ ಎಂದರು.
ಇದೇ ಮಾತನ್ನು ಡ್ರೋನ್ ಪ್ರತಾಪ್ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರೂ ಹೇಳಿದ್ದರು. ಪ್ರತಾಪ್ ಅವರನ್ನು ಕರೆತಂದಾಗ ಅವರ ಬಿಪಿ ಕಡಿಮೆಯಿತ್ತು, ಅವರಿಗೆ ಏಳೆಂಟುಬಾರಿ ಲೂಸ್ ಮೋಷನ್ ಆಗಿತ್ತು. ಒಂದೆರಡು ಬಾರಿ ವಾಂತಿ ಆಗಿತ್ತು. ಒಂದು ದಿನ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಯಾವುದೇ ಸುಳಿವಿಲ್ಲ. ಅವರು ವಾಂತಿ ಮಾಡಿದಾಗ ಯಾವುದೇ ರೀತಿಯ ಮೆಡಿಸಿನ್ ತೆಗೆದುಕೊಂಡಿದ್ದ ಬಗ್ಗೆ ಲಕ್ಷಣಗಳು ಇರಲಿಲ್ಲ. ಆತ್ಮಹತ್ಯೆಗೆ ಯತ್ನ, ಟ್ಯಾಬ್ಲೆಟ್ ನುಂಗಿರುವ ಬಗ್ಗೆ ಯಾವುದೇ ಪ್ರಯತ್ನವೂ ಆಗಿಲ್ಲ, ಅವರಿಗೆ ಗ್ಯಾಸ್ಟ್ರರೈಟಿಸ್ ಹಾಗೂ ಡಿಹೈಡ್ರೇಷನ್‌ನಿಂದ ಈ ರೀತಿ ಅನಾರೋಗ್ಯ ಕಾಣಿಸಿಕೊಂಡಿದೆ ಎಂದು ಸಂಜೀವಿನಿ ಆಸ್ಪತ್ರೆ ವೈದ್ಯ ಪ್ರತಾಪ್ ಹಾಗೂ ಡಾ.ಪೂರ್ವಜ್ ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿದ್ದರು. ಒಟ್ಟಿನಲ್ಲಿ ಡ್ರೋನ್ ಮತ್ತೆ ಆರೋಗ್ಯವಂತರಾಗಿ ವಾಪಸಾಗಿ ಈಗ ಎಲ್ಲಾ ಸುದ್ದಿಗಳಿಗೂ ಫುಲ್ಸ್ಟಾಪ್ ಇಟ್ಟಿದ್ದಾರೆ.
ಬಿಗ್ಬಾಸ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್: ದೊಡ್ಮನೆಯಲ್ಲಿ ಉಳಿದುಕೊಳ್ಳಲು ಫ್ಯಾನ್ಸ್ಗೂ ಅವಕಾಶ!