ದೇಶದ ಗಮನ ಸೆಳೆಯುತ್ತಿರುವ 'ಇಂಡಿಯನ್ ಐಡಲ್ 14'ನಲ್ಲಿ ಈಗ ಬೀದರ್ ಹುಡುಗಿ ಶಿವಾನಿಯದೇ ಸುದ್ದಿ. ಶಿವಭಕ್ತೆಯಾಗಿರುವ ಈ ಹುಡುಗಿ ಅಲ್ಲಾ ಮೇಲಿನ ಹಾಡನ್ನು ಭಕ್ತಿ ತುಂಬಿ ಹಾಡಿದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

ಶಿವಾನಿ ಶಿವದಾಸ್ ಸ್ವಾಮಿ. ವಯಸ್ಸು ಇನ್ನೂ ಹದಿನೇಳು ವರ್ಷ. ಆದರೆ ಸಂಸ್ಕಾರ ದೊಡ್ಡದು. ಇಂಡಿಯನ್ ಐಡಲ್ ಸ್ಪರ್ಧೆಯ ವೇದಿಕೆ ಸಖತ್ ಐಷಾರಾಮಿ. ಥಳಕು ಬಳಕಿನ ಬಟ್ಟೆ ಧರಿಸಿ ಅದಕ್ಕೊಪ್ಪುವ ಸ್ಯಾಂಡಲ್ ತೊಟ್ಟು ತಮ್ಮ ಪ್ರತಿಭೆ ಜೊತೆಗೆ ಲುಕ್ ಗೆ ಸಹ ಸಾಕಷ್ಟು ಮಹತ್ವ ನೀಡಿ ಅಲ್ಲಿಗೆ ಬರುವವರು ಪ್ರದರ್ಶನ ನೀಡುತ್ತಾರೆ. ಏಕೆಂದರೆ ಈ ವೇದಿಕೆಯಲ್ಲಿ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಗುವುದೇ ಬಹಳ ಅಪರೂಪ. ಅವಕಾಶ ಸಿಕ್ಕಿದರೆ ಅದರ ಸಂಪೂರ್ಣ ಉಪಯೋಗ ಪಡೆಯಬೇಕು ಅನ್ನುವುದು ಹೆಚ್ಚಿನ ಸ್ಪರ್ಧಿಗಳ ನಿಲುವಾಗಿರುತ್ತದೆ. ಆದರೆ ಈ ವೇದಿಕೆಗೆ ಬಂದ ಶಿವಾನಿ ಅಪೀಯರೆನ್ಸ್ ಬೇರೆ ಥರವೇ ಇತ್ತು. ಹಾಡುವ ಮೊದಲು ಚಪ್ಪಲಿ ಕಳಚಿ ಬಂದದ್ದು ಜಡ್ಜಸ್ ಹುಬ್ಬೇರುವಂತೆ ಮಾಡಿತು. ಹಾಡು ಅಂದರೆ ಆಕೆಗೆ ಆಕೆ ನಂಬಿರುವ ಶಿವ. ಆ ಶಿವನನ್ನು ಹಾಡಿನ ಮೂಲಕ ಆರಾಧಿಸುವಾಗ ಚಪ್ಪಲಿ ಹಾಕ್ಕೊಂಡಿರುವುದು ಸಮಂಜಸ ಅಲ್ಲ ಅನ್ನುವುದು ಅವಳ ಭಾವನೆ.

'ನೀನೊಬ್ಬಳೇ ಬಂದೆಯಾ? ನಿನ್ನ ಜೊತೆ ಬೇರೆ ಯಾರು ಬಂದಿದ್ದಾರೆ?' ಅಂತ ಜಡ್ಜಸ್ ಕೇಳಿದ್ದಾರೆ. ಆಕೆ ತನ್ನ ಕೊರಳ ಹಾರ ತೋರಿಸಿ 'ಶಿವ ಸದಾ ನನ್ನ ಜೊತೆಗಿರುವಾಗ ನಾನು ಒಬ್ಬಳೇ ಬರಲು ಹೇಗೆ ಸಾಧ್ಯ ಅಲ್ಲ ಮಾರುತ್ತರ ನೀಡಿದ್ದಾಳೆ. ಆಕೆಯ ಪ್ರತೀ ನಡೆ, ನುಡಿ, ಅಲ್ಲಿದ್ದ ನಯ ವಿನಯ ಎಲ್ಲವೂ ಜಡ್ಜಸ್ ಮನ ಗೆದ್ದಿದೆ. ಅಂದಹಾಗೆ ಈ ಶಿವಭಕ್ತೆ ಭಕ್ತಿ ಪರವಶೆಯಾಗಿ ಹಾಡಿದ್ದು ಅಲ್ಲಾ ಮೇಲಿನ ಹಾಡು. ಆ ಹಾಡಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಶಿವ ಅನ್ನುವುದು ನಿಜ ಭಕ್ತರಿಗೆ ಹೇಗೆ ಸಂಕುಚಿತತೆಯನ್ನು ಮೀರಿದ್ದು ಅನ್ನೋದನ್ನು ಆಕೆ ಈ ಮೂಲಕ ತೋರಿಸಿಕೊಟ್ಟಿದ್ದಾಳೆ. ಸದ್ಯಕ್ಕೀಗ ಶಿವಾನಿ ಹಾಡು ಎಲ್ಲೆಡೆ ವೈರಲ್ ಆಗಿದೆ.

ಬಿಗ್‌ಬಾಸ್‌ ಸ್ಪರ್ಧಿ ನೈಜೀರಿಯನ್ ಕನ್ನಡಿಗ ಮೈಕಲ್‌ ಅಂತರಾಷ್ಟ್ರೀಯ ಮಾಡೆಲ್‌, ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ

ಬೀದರ್‌ನ ಶಿವಾನಿ ಶಿವದಾಸ ಸ್ವಾಮಿ ಕುಟುಂಬಸ್ಥರೆಲ್ಲರು ಸಂಗೀತ ಕಲಾವಿದರು. ಸಂಗೀತ ಕಲಿಕೆಯಿಂದ ಉತ್ತಮ ಸಂಸ್ಕಾರಯುತ ಮೌಲ್ಯಗಳನ್ನು ಕಲಿಯಲು ಸಾಧ್ಯವಿದೆ. ಸಂಗೀತ ಸ್ಪರ್ಧೆಗಳಲ್ಲಿ (compition) ಭಾಗವಹಿಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಎನ್ನುವುದನ್ನು ಶಿವಾನಿ ಸಾಬೀತು ಪಡಿಸಿದ್ದಾರೆ. ಇವರ ಇಡೀ ಕುಟುಂಬ (family) ಸಂಗೀತದಿಂದ ಜೀವನ ನಡೆಸುತ್ತಿದೆ. ಶಿವಾನಿಗೆ ತಂದೆ ತಾಯಿ ಮೊದಲ ಗುರು. 3ನೇ ವರ್ಷದಲ್ಲಿದ್ದಾಗಲೇ ಶಿವಾನಿ ಹಾಡು ಹಾಡೋದನ್ನು ಕಲಿಯಲು ಆರಂಭಿಸಿದ್ದರು. ಸಂಗೀತ ಕಲಾವಿದರಾದ ಕವಿತಾ ಸ್ವಾಮಿ, ಪಂ. ಶಿವದಾಸ ಸ್ವಾಮಿ ಅವರ ಮಗಳಾಗಿ 2006ರ ಡಿಸೆಂಬರ್‌ ತಿಂಗಳಲ್ಲಿ ಜನಿಸಿರುವ ಶಿವಾನಿ ಸ್ವಾಮಿ ಮೂರು ವರ್ಷದ ಚಿಕ್ಕ ವಯಸ್ಸಿನಿಂದಲೇ ತಂದೆಯನ್ನೆ ಗುರುವಾಗಿಸಿಕೊಂಡು ಸಂಗೀತ ಅಭ್ಯಾಸ ಮಾಡಿ ಇದೀಗ ಸಂಗೀತ ಕ್ಷೇತ್ರದಲ್ಲಿ ತಮ್ಮದೆಯಾದ ಛಾಪು ಮೂಡಿಸುತ್ತಿದ್ದಾರೆ.

13 ಸಾವಿರ ಸ್ಪರ್ಧಿಗಳು 'ಇಂಡಿಯನ್‌ ಐಡಲ್‌' (Indian idol) ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅವರಲ್ಲಿ 25 ಜನರನ್ನು ಟಿವಿಯ ಮೆಗಾ ಆಡಿಷನ್‌ಗೆ(adition) ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಕರ್ನಾಟಕ ರಾಜ್ಯದ ಏಕೈಕ ಕಲಾವಿದೆ ಶಿವಾನಿ ಕೂಡ ಒಬ್ಬರು. ಈ ಮೂಲಕ ಸಂಗೀತ ಲೋಕದಲ್ಲಿ ಬೀದರ್‌ನ ಮೆರಗು ಮತ್ತಷ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾಳೆ ಶಿವಾನಿ ಸ್ವಾಮಿ. ಇದಕ್ಕೂ ಮೊದಲು 2020ರಲ್ಲಿ ನಡೆದ ಝೀ ಟಿವಿಯ 'ಸರಿಗಮಪ' ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ, ಬೆಳ್ಳಿ ಪದಕ ಗೆದ್ದಿದ್ದಲ್ಲದೆ ಹೈದ್ರಾಬಾದ್‌ನಲ್ಲಿ ನಡೆದ 'ಪ್ರೈಡ್‌ ಆಫ್‌ ತೆಲಂಗಾಣ' ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ (first prize) ಪಡೆದಿದ್ದಾರೆ. 2022ರಲ್ಲಿ ನಡೆದ ರಾಜ್ಯ ಮಟ್ಟದ ಕಾಲೇಜು ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಮಹಾರಾಷ್ಟ್ರ ಚಾ ಆವಾಜ್‌ ಸಂಗೀತ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಪಡೆದು ಬೀದರ್‌ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ್ದಾರೆ. ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟವು ಶಿವಾನಿ ಶಿವದಾಸ ಸ್ವಾಮಿಯವರ ಸಂಗೀತ ಸೇವೆ ಗುರುತಿಸಿ ಕಳೆದ ವರ್ಷ ಬೀದರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲ್ಯಾಣ ಕಲಾ ರತ್ನ ಪ್ರಶಸ್ತಿ (award) ನೀಡಿ, ಗೌರವಿಸಿದೆ. ಅಲ್ಲದೆ ಬಿದರಿ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಬಿದರಿ ಜನಪದ ಗಾಯನ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದಿರುವುದು ವಿಶೇಷ. ಅಂದಹಾಗೆ ಈ ಹುಡುಗಿ ಸಿಂಪಲ್ ಸುನಿ ನಿರ್ದೇಶನದ ವಿನಯ್ ರಾಜ್‌ಕುಮಾರ್ ನಟನೆಯ 'ಒಂದು ಸರಳ ಪ್ರೇಮಕಥೆ' ಸಿನಿಮಾಕ್ಕೆ ಒಂದು ಹಾಡು ಹಾಡಿದ್ದಾರೆ.

ಸದ್ಯಕ್ಕೆ ದೇಶಾದ್ಯಂತ ಕನ್ನಡದ ಹುಡುಗಿ ಶಿವಾನಿಯದ್ದೇ ಹವಾ. ಆಕೆಯ ಹಾಡು, ಸಂಸ್ಕಾರ ಎರಡೂ ದೇಶದ ಜನರ ಮನ ಗೆದ್ದಿದೆ.

ಒಂದು ವರ್ಷ ಪೂರೈಸಿದ ಭಾಗ್ಯಲಕ್ಷ್ಮಿ, ಕೇಕ್ ಕತ್ತರಿಸಿ ಸಂಭ್ರಮಿಸಿದ ಸೀರಿಯರ್ ತಂಡ