ಕನ್ನಡ ಸೀರಿಯಲ್ ನಟಿಗೆ ಅಶ್ಲೀಲ ಮೆಸೇಜ್, ಖಾಸಗಿ ಅಂಗದ ಫೋಟೋ ಕಳುಹಿಸದಾತ ಅರೆಸ್ಟ್ , ಕಳೆದ ಮೂರು ತಿಂಗಳಿನಿಂದ ಕಿರುಕುಳ ನೀಡುತ್ತಿದ್ದವನ ವಿರುದ್ದ ಕಿರುತೆರೆ ನಟಿ ದೂರು ನೀಡಿದ್ದರು. ಇದೀಗ ಆರೋಪಿ ಪತ್ತೆ ಹಚ್ಚಿದ ಅಣ್ಣಪೂರ್ಣೇಶ್ವರಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು (ನ.04) ಅಶ್ಲೀಲ ಮೆಸೇಜ್ ಪ್ರಕರಣ ಸಂಬಂಧ ಕರ್ನಾಟಕದಲ್ಲಿ ಕೋಲಾಹಲವೇ ನಡೆದು ಹೋಗಿದೆ. ಆತ್ಮೀಯರಿಗೆ ಅಶ್ಲೀಲ ಮೆಸೇಜ್ ಮಾಡಿದವನ ಕಿಡ್ನಾಪ್ ಮಾಡಿ ಕೊಲೆ ಮಾಡಿದ ಪ್ರಕರಣ ಸಂಬಂಧ ಸ್ಟಾರ್ ನಟ ಜೈಲು ಸೇರಿದ ಘಟನೆ ಸೇರಿದಂತೆ ಹಲವು ಘಟನೆಗಳಿವೆ. ಇಷ್ಟೇ ಅಲ್ಲ ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣವೂ ಮುಂದಿದೆ. ಆದರೆ ಅಶ್ಲೀಲ ಸಂದೇಶ ಕಳುಹಿಸುವವರಿಗೇನು ಕಡಿಮೆ ಇಲ್ಲ. ಇಂತಹ ಪ್ರಕರಣ ಸಂಖ್ಯೆ ಕಡಿಮೆ ಏನೂ ಆಗಿಲ್ಲ. ಇದೀಗ ಕನ್ನಡ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದಿರುವ ಕಿರುತೆರೆ ನಟಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿದ ಪ್ರಕರಣ ವರದಿಯಾಗಿದೆ. ನಟಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಭಿಮಾನಿ ಎಂದು ಮೆಸೇಜ್
ಕನ್ನಡ ಸೇರಿದಂತೆ ಇತರ ಕೆಲ ಭಾಷೆಗಳ ಧಾರವಾಹಿ ಮೂಲಕ ಕಿರುತೆರೆ ನಟಿ ಭಾರಿ ಜನಪ್ರತೆಯ ಪಡೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕವೂ ಸಕ್ರಿಯವಾಗಿದ್ದಾರೆ. ಇದರ ನಡುವೆ ಅಭಿಮಾನಿ ಎಂದು ವ್ಯಕ್ತಿಯೊಬ್ಬ ಸೋಶಿಯಲ್ ಮೀಡಿಯಾ ಮೂಲಕ ಸಂದೇಶ ಕಳುಹಿಸಲು ಆರಂಭಿಸಿದ್ದಾನೆ. ಅಭಿಮಾನಿಗಳ ಸಂದೇಶ, ಲೈಕ್ಸ್‌ಗೆ ಪ್ರತಿಕ್ರಿಯೆ ನೀಡುವ ಈ ನಟಿ, ಎಲ್ಲಾ ಅಭಿಮಾನಿಗಳಂತೆ ಮತ್ತೊಬ್ಬ ಅಭಿಮಾನಿಯನ್ನು ಕಿರುತೆರೆ ನಟಿ ಗೌರವದಿಂದ ಕಂಡಿದ್ದಾರೆ. ಆದರೆ ಆತನ ಉದ್ದೇಶ ಬೇರೆಯೇ ಇತ್ತು.
ಖಾಸಗಿ ಅಂಗದ ಫೋಟೋ ಕಳುಹಿಸಿ ವಿಕೃತಿ
ಪ್ರತಿ ದಿನ ಅಭಿಮಾನಿ ಎಂದು ಮೆಸೇಜ್ ಮಾಡುತ್ತಿದ್ದ ಈತ , ಕಿರುತೆರೆ ನಟಿಯ ವಿಶ್ವಾಸ ಸಂಪಾದಿಸಿದ್ದು. ಆದರೆ ಕೆಲ ತಿಂಗಳಿನಿಂದ ಈತ ನಟಿಗೆ ಅಶ್ಲೀಲ ಸಂದೇಶ ರವಾನಿಸಲು ಆರಂಭಿಸಿದ್ದಾನೆ. ಖಾಸಗಿ ಅಂಗದ ಫೋಟೋ ಸೇರಿದಂತೆ ಅಶ್ಲೀಲ ಸಂದೇಶಗಳನ್ನು ರವಾನಿಸಲು ಆರಂಭಿಸಿದ್ದಾನೆ. ಈತನ ಕಿರುಕುಳ ಹೆಚ್ಚಾಗುತ್ತಿದ್ದಂತೆ ನಟಿ ಆತಂಕಗೊಂಡಿದ್ದಾರೆ.
ಪಶ್ಚಿಮ ವಿಭಾಗ ಪೊಲೀಸ್ ಠಾಣೆಗೆ ದೂರು
ಕಿರುಕುಳ ಹೆಚ್ಚಾಗುತ್ತಿದ್ದಂತೆ ಕಿರುತೆರೆ ನಟಿ ಪಶ್ಚಿಮ ವಿಭಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ತಮಗೆ ಕಳುಹಿಸಿರುವ ಫೋಟೋ, ಮೆಸೇಜ್ ಸೇರಿದಂತೆ ಇತರ ದಾಖಲೆಗಳನ್ನು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಸೈಬರ್ ಸೆಲ್ ಮೂಲಕ ಆರೋಪಿ ಐಪಿ ಅಡ್ರೆಸ್ ಸೇರಿದಂತೆ ಇತರ ಮಾಹಿತಿಗಳನ್ನು ಪಡೆದ ಪೊಲೀಸರು ನೇರವಾಗಿ ಆರೋಪಿಯನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲು
ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಈತ ಹಲವು ಮಹಿಳೆಯರ ಜೊತೆ, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಯುವತಿಯರನ್ನು ಟಾರ್ಗೆಟ್ ಮಾಡಿ ಸಂದೇಶ ಕಳುಹಿಸುತ್ತಿರುವುದು ಬಹಿರಂಗವಾಗಿದೆ. ಇದೇ ರೀತಿಯ ಹಲವರಿಗೆ ಅಶ್ಲೀಲ ಸಂದೇಶ ಕಳುಹಿಸಿರುವುದು ಪತ್ತೆಯಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಹೇಳಿದ್ದಾರೆ.
