ಬೆಂಗಳೂರಿಗರಿಂದ ಮೂಡಿಬಂದ 'ಕಪ್ಪೆ ರಾಗ'ಕ್ಕೆ ಗ್ರೀನ್ ಆಸ್ಕರ್ ಅವಾರ್ಡ್: ಏನಿದರ ಕಥೆ?
ಬೆಂಗಳೂರಿನ ಯುವಕರು ನಿರ್ಮಿಸಿರುವ ಕಪ್ಪೆರಾಗ-ಕುಂಬಾರನ ಹಾಡು ಸಾಕ್ಷ್ಯಚಿತ್ರಕ್ಕೆ ಪ್ರತಿಷ್ಠಿತ ಗ್ರೀನ್ ಆಸ್ಕರ್ ಅವಾರ್ಡ್ ಲಭಿಸಿದೆ. ಈ ಸಾಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.
ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಕುಂಬಾರ ಕಪ್ಪೆ ಎಂಬ ನಿಶಾಚರಿ ಕಪ್ಪೆಯ ಕುರಿತು ಕನ್ನಡಿಗರು ನಿರ್ಮಿಸಿರುವ ಕಪ್ಪೆರಾಗ-ಕುಂಬಾರನ ಹಾಡು ಸಾಕ್ಷ್ಯಚಿತ್ರ, ಗ್ರೀನ್ ಆಸ್ಕರ್ ಎಂದೇ ಹೆಸರಾದ ಪ್ರತಿಷ್ಠಿತ ಜ್ಯಾಕ್ಸನ್ ವೈಲ್ಡ್ ಮೀಡಿಯಾ ಪ್ರಶಸ್ತಿಗೆ ಭಾಜನವಾಗಿದೆ. ಇದು ಕನ್ನಡದ ಮೊದಲ ವೈಲ್ಡ್ ಲೈಫ್ ಮ್ಯೂಸಿಕಲ್ ಡಾಕ್ಯುಮೆಂಟರಿ ಫಿಲಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಶಾಂತ್ ನಾಯಕ ನಿರ್ದೇಶನ ಮತ್ತು ಛಾಯಾಗ್ರಹಣದಲ್ಲಿ ಮೂಡಿಬಂದಿರುವ ಈ ಸಾಕ್ಷ್ಯಚಿತ್ರ ಮಲೆನಾಡ ಭಾಗದಲ್ಲಿ ಕಾಣಸಿಗುವ ಅಪರೂಪದ ಕಪ್ಪೆಯೊಂದರ ಹಿನ್ನೆಲೆಯಲ್ಲಿ ಸಾಗುತ್ತದೆ. ಸಾಮಾನ್ಯವಾಗಿ ಕುಂಬಾರ ರಾತ್ರಿ ಕಪ್ಪೆ ಎಂದು ಕರೆಯಲ್ಪಡುವ Nyctibatrachus, ಪಶ್ಚಿಮ ಘಟ್ಟಗಳ ಶರಾವತಿ ನದಿಯ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಅವು ಹಿಂಗಾಲುಗಳ ಮೇಲೆ ನಿಲ್ಲಲು ಸಾಧ್ಯವಿಲ್ಲ, ಆದರೆ ಅವು ಮನುಷ್ಯರಂತೆ ಪರಸ್ಪರ ಅಪ್ಪಿಕೊಳ್ಳಬಲ್ಲವು. ಈ ಜಾತಿಯನ್ನು ಸಂಗೀತ ವನ್ಯಜೀವಿ ಸಾಕ್ಷ್ಯಚಿತ್ರದಲ್ಲಿ ಸೆರೆಹಿಡಿಯಲಾಗಿದೆ ಮತ್ತು ಪ್ರದರ್ಶಿಸಲಾಗಿದೆ.
ಪ್ರಶಾಂತ್ ಅವರು ಮಳೆ ಕಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಒಂದು ಅಪರೂಪದ ಕಪ್ಪೆಯ ಬಗ್ಗೆ ತಿಳಿಯಿತು. ಇಲ್ಲಿನ ಕಪ್ಪೆಯ ಬಗ್ಗೆ ಡಾ. ಗಿರೀಶ್ ಜನ್ನೇ ಎಂಬುವವರಿಂದ ಪ್ರಶಾಂತ್ ಮಾಹಿತಿ ಪಡೆದುಕೊಂಡಿದ್ದರು. ಆಗ ಹುಟ್ಟಿದ್ದೇ ಕಪ್ಪೆ ರಾಗ. ಹೀಗಾಗಿ ಮ್ಯೂಸಿಕ್ ಮೂಲಕ ಈ ವಿಚಾರವನ್ನು ಹೇಳಲು ಪ್ರಶಾಂತ್ ನಿರ್ಧರಿಸಿದರು. ಗೌತಮ್ ಸಿನಿಮಾ ನಿರ್ಮಾಣದಲ್ಲಿ ಸಹಾಯ ಮಾಡಿದ್ದಾರೆ.
GHOST: ಸಾಮಾನ್ಯವಾಗಿ ಯಾರ್ ತಂಟೆಗೂ ಹೋಗಲ್ಲ, ಹೋದ್ರೆ ರುದ್ರಭೂಮಿಯಾಗತ್ತೆ: ಶಿವಣ್ಣ ಸಕತ್ ಪಂಚ್
ಮಾನ್ಸೂನ್ನಲ್ಲಿ ಈ ಸಿನಿಮಾನ ಶೂಟ್ ಮಾಡೋದು ಒಂದು ಚಾಲೆಂಜ್ ಆದರೆ, ಈ ಕಪ್ಪೆಯನ್ನು ಗುರುತಿಸೋದು ಮತ್ತೊಂದು ಸವಾಲು. ಈ ಎಲ್ಲಾ ಚಾಲೆಂಜ್ನ ಸ್ವೀಕರಿಸಿ ಅವರು ಈ ಮ್ಯೂಸಿಕ್ ಡಾಕ್ಯುಮೆಂಟರಿ ಮಾಡಲಾಗಿದೆ. ಈ ಬಗ್ಗೆ ವಿನೋದ್ ಕುಮಾರ್ ನಾಯ್ಕ್ ಎಂಬುವವರೂ ಈ ಸಾಕ್ಷ್ಯಚಿತ್ರದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಕುಂಬಾರ ಕಪ್ಪೆ ಎನ್ನುವ ನಿಶಾಚರಿ ಕಪ್ಪೆ ಪಶ್ಚಿಮ ಘಟ್ಟದ ನಿರ್ದಿಷ್ಟ ತೊರೆಗಳಲ್ಲಿ ಮಾತ್ರ ವಾಸ ಮಾಡುತ್ತದೆ. ಅತ್ಯಂತ ಸೂಕ್ಷ್ಮ ಹಾಗೂ ಸಂಪೂರ್ಣ ನಿಶಾಚರಿ ಕಪ್ಪೆ ಇದು. ನಮ್ಮ ಹೆಬ್ಬೆರಳಿನ ಗಾತ್ರದ ಈ ಕಪ್ಪೆ ಅತ್ಯಂತ ವಿಶಿಷ್ಟ ಸ್ವಭಾವ, ನಡವಳಿಕೆ ಹೊಂದಿದೆ. ಅದರ ಆವಾಸಸ್ಥಾನ, ಸಂತಾನೋತ್ಪತ್ತಿ ಪ್ರಕ್ರಿಯೆ ಹೀಗೆ ಎಲ್ಲವೂ ತೊರೆಯಲ್ಲೇ ನಡೆಯುತ್ತದೆ. ಈ ಕಪ್ಪೆಯನ್ನು ನೋಡುವುದೇ ಬಹಳ ಕಷ್ಟ. ಅಂತಹದ್ದರಲ್ಲಿ ಅದರ ನಡವಳಿಕೆಯನ್ನು ವಿಡಿಯೋ ರೂಪದಲ್ಲಿ ದಾಖಲಿಸಿ ಕನ್ನಡದ ಹಾಡಿನ ರೂಪದಲ್ಲಿ ಮಾಡಿದ್ದ ಸಾಕ್ಷ್ಯಚಿತ್ರ ಕಪ್ಪೆ ರಾಗ - ಕುಂಬಾರನ ಹಾಡು ಇದೀಗ ಗ್ರೀನ್ ಆಸ್ಕರ್ ಎಂದೇ ಜಗತ್ತಿನಲ್ಲಿ ಹೆಸರಾಗಿರುವ ಜ್ಯಾಕ್ಸನ್ ವೈಲ್ಡ್ ಮೀಡಿಯಾ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ಈ ಸಾಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿನಂದನೆ ಸಲ್ಲಿಸಿದ್ದಾರೆ. ಎಕ್ಸ್ ಮೂಲಕ ಶುಭಾಶಯ ಕೋರಿರುವ ಅವರು, "ಪ್ರತಿಷ್ಠಿತ ಜಾಕ್ಸನ್ ವೈಲ್ಡ್ ಅವಾರ್ಡ್‌ಗೆ ಭಾಜನವಾಗಿರುವ ಕನ್ನಡದ ಮೊದಲ 'ವೈಲ್ಡ್ ಲೈಫ್ ಮ್ಯೂಸಿಕಲ್ ಡಾಕ್ಯು ಫಿಲಂ' ಕಪ್ಪೆರಾಗ ಚಿತ್ರತಂಡಕ್ಕೆ ಅಭಿನಂದನೆಗಳು. ಕರುನಾಡಿನ ಪ್ರತಿಭೆಗಳ ಪರಿಶ್ರಮದ ಚಿತ್ರಕ್ಕೆ ಗ್ರೀನ್ ಆಸ್ಕರ್ ಎಂದೇ ಹೆಸರುವಾಸಿಯಾಗಿರುವ ಜಾಕ್ಸನ್ ವೈಲ್ಡ್ ಅವಾರ್ಡ್ ನಂತಹ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ದೊರೆತದ್ದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ಸಂಗತಿ. ಚಿತ್ರದ ನಿರ್ದೇಶಕ ಪ್ರಶಾಂತ್ ಎಸ್. ನಾಯ್ಕ ಮತ್ತವರ ತಂಡದ ಸಾಧನೆ ನಾಡಿನ ಯುವ ನಿರ್ದೇಶಕರಿಗೆ ಪ್ರೇರಣೆಯಾಗಲಿ. ಇಂಥ ಇನ್ನಷ್ಟು ಚಿತ್ರಗಳು ನಮ್ಮಲ್ಲಿ ಮೂಡಿಬಂದು, ಕನ್ನಡದ ಕಲರವ ಜಗದಗಲ ಮೊಳಗಲಿ ಎಂದು ಹಾರೈಸುತ್ತೇನೆ" ಎಂದಿದ್ದಾರೆ.
ಮನೇಲಿದ್ದ ತಟ್ಟೆ, ಚಂಬು, ಬಟ್ಲು ಕದೀತಿದ್ದೆ, 2ನೇ ಕ್ಲಾಸ್ನಲ್ಲೇ ಪೊಲೀಸ್ ಠಾಣೆಗೂ ಹೋಗಿದ್ದೆ ಎಂದ ಸರ್‌ದೇಶಪಾಂಡೆ
ಕನ್ನಡ ಭಾಷೆಯ ಸಾಕ್ಷ್ಯಚಿತ್ರಕ್ಕೆ ಗ್ರೀನ್ ಆಸ್ಕರ್ ಸಿಕ್ಕಿರುವುದು ಇದೆ ಮೊದಲು. ಬೆಂಗಳೂರಿನ ವನ್ಯಜೀವಿ ಚಿತ್ರ ನಿರ್ಮಾಪಕರಾದ ಪ್ರಶಾಂತ್ ನಾಯಕ, ಗೌತಮ್ ಶಂಕರ್, ಪ್ರದೀಪ್ ಶಾಸ್ತ್ರಿ ಮತ್ತು ಅಶ್ವಿನ್ ಕುಮಾರ್ ಈ ಚಿತ್ರಕ್ಕಾಗಿ ಎರಡು ವರ್ಷ ಪರಿಶ್ರಮ ಹಾಕಿದ್ದಾರೆ. ಅಂದಹಾಗೆ ಈ ಸಾಕ್ಷ್ಯಚಿತ್ರವು 13 ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕಥೆ ಮತ್ತು ಕಲಾತ್ಮಕ ಶ್ರೇಷ್ಠತೆಗಾಗಿ ಗುರುತಿಸಲ್ಪಟ್ಟಿದೆ ಮತ್ತು ಅತ್ಯುತ್ತಮ ಸಂಗೀತ ವೀಡಿಯೊಗಾಗಿ ಲಾಸ್ ಏಂಜಲೀಸ್‌ನ ಸ್ವತಂತ್ರ ಕಿರುಚಿತ್ರಗಳ ಪ್ರಶಸ್ತಿಗಾಗಿ ಚಿನ್ನದ ಪದಕ ಗೆದ್ದುಕೊಂಡಿತು.